ಪ್ರಾರಂಭದ ಕೆಲವು ಲೀಲೆಗಳು

Print Friendly, PDF & Email
ಪ್ರಾರಂಭದ ಕೆಲವು ಲೀಲೆಗಳು
Food Multiplies

ಉರವಕೊಂಡದಲ್ಲಿ ತಾನು ಸಾಯಿಬಾಬಾ ಎಂದು ಘೋಷಿಸಿದ ಸತ್ಯ, ಪುಟ್ಟಪರ್ತಿಗೆ ಹಿಂತಿರುಗಿದಾಗ ಪ್ರಾರಂಭದ ದಿನಗಳಲ್ಲಿ, ಸುಬ್ಬಮ್ಮನವರ ಮನೆಯಲ್ಲಿ ತಂಗಿದ್ದರು. ಸುಬ್ಬಮ್ಮ ಸತ್ಯನನ್ನು ಪ್ರೀತಿಯಿಂದ ಕಾಣುತ್ತಿದ್ದಳು ಮತ್ತು ಅಲ್ಲಿಗೆ ಬರುತ್ತಿದ್ದ ಎಲ್ಲಾ ಭಕ್ತರನ್ನು ಅವಳ ವಿಶಾಲವಾದ ಮನೆಗೆ ಸ್ವಾಗತಿಸುತ್ತಿದ್ದಳು. ಭಕ್ತರ ಸಂಖ್ಯೆ ಹೆಚ್ಚಾದಂತೆ, ಹತ್ತಿರದಲ್ಲಿ ಒಂದು ಶೆಡ್ ನ್ನು ನಿರ್ಮಿಸಲಾಯಿತು. ಅದನ್ನು ಕಾಲ ಕಾಲಕ್ಕೆ ಅಗತ್ಯಕ್ಕೆ ತಕ್ಕಂತೆ ವಿಸ್ತರಿಸಲಾಯಿತು. ಅದೇನೇ ಇದ್ದರೂ, ಸಾಯಿಬಾಬಾ ತಮ್ಮನ್ನು ನೋಡಲು ಬಂದ ಎಲ್ಲರಿಗೂ ಆಹಾರವನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದರು.

ಸುಬ್ಬಮ್ಮನ ಮನೆಯಲ್ಲಿ ಇದ್ದ ಒಬ್ಬ ವಯಸ್ಸಾದ ಮಹಿಳೆ ಅದ್ಭುತ ಅನುಭವವನ್ನು ನಿರೂಪಿಸುತ್ತಾಳೆ. ಆಗಾಗ್ಗೆ ಯಾತ್ರಿಕರಿಗೆ ಬೇಯಿಸಿದ ಅಡುಗೆ ಸಾಕಾಗುವುದಿಲ್ಲ ಎಂದು ಕಂಡಾಗ, ಬಾಬಾ ಎರಡು ತೆಂಗಿನಕಾಯಿಗಳನ್ನು ತರಲು ಹೇಳುತ್ತಿದ್ದರು. ಅದನ್ನು ಒಂದಕ್ಕೆ ಒಂದು ಹೊಡೆದು ಒಡೆಯುವ ಮೂಲಕ ನಿಖರವಾಗಿ ಎರಡು ಭಾಗಗಳಾಗಿ ಮಾಡಿ, ಬೇಯಿಸಿದ ಅನ್ನ ಮತ್ತು ಇತರ ಭಕ್ಷ್ಯಗಳ ಮೇಲೆ ತೆಂಗಿನ ನೀರನ್ನು ಸಿಂಪಡಿಸಿ ಆಹಾರದ ವಸ್ತುಗಳು, ಆ ದಿನ ಬಂದ ಎಲ್ಲರಿಗೂ ಸಾಕಾಗುವಂತೆ ಮಾಡುತ್ತಿದ್ದರು.

ಕಲ್ಪವೃಕ್ಷ

ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಂತೆ, ಅದಾಗಲೇ ಇದ್ದ ಶೆಡ್ ಪ್ರಾರ್ಥನೆ ಮತ್ತು ಭಜನೆಗಾಗಿ ತುಂಬಾ ಚಿಕ್ಕದಾಯಿತು. ಬಾಬಾ ಭಕ್ತರನ್ನು ಪ್ರತಿದಿನ ಸಂಜೆ ಚಿತ್ರಾವತಿ ನದಿಯ ಮರಳಿಗೆ ಭಜನೆಗೆ ಕರೆದೊಯ್ಯುತ್ತಿದ್ದರು. ಆಗ ಚಿತ್ರಾವತಿಯ ಎಡದಂಡೆಯಲ್ಲಿರುವ ಬೆಟ್ಟದ ಮೇಲೆ ಇದ್ದ ಒಂಟಿ ಹುಣಿಸೆ ಮರವು “ಇಷ್ಟ ಪೂರೈಸುವ ಮರ” ಎಂಬ ಖ್ಯಾತಿಯನ್ನು ಪಡೆಯಿತು. ಬಾಬಾ ಭಕ್ತರನ್ನು ಮರಕ್ಕೆ ಕರೆದೊಯ್ಯುತ್ತಿದ್ದರು ಮತ್ತು ಅದರಿಂದ ಅನೇಕ ವಿಧದ ಹಣ್ಣುಗಳನ್ನು, ಒಂದು ಶಾಖೆಯಿಂದ ಸೇಬು, ಇನ್ನೊಂದು ಶಾಖೆಯಿಂದ ಮಾವು, ಕಿತ್ತಳೆ ಮೂರನೆಯದರಿಂದ, ನಾಲ್ಕನೇ ಪೇರಳೆ ಮತ್ತು ಐದನೆಯದರಿಂದ ಅಂಜೂರದ ಹಣ್ಣುಗಳು ಹೀಗೆ ಇತ್ಯಾದಿ ತೆಗೆದು ಕೊಡುತ್ತಿದ್ದರು. ಸಾಯಿಬಾಬಾ ಹೇಳಿದಂತೆ, ಅವರು ಯಾವುದೇ ಮರವನ್ನು ಯಾವುದೇ ಸಮಯದಲ್ಲಿ “ಇಷ್ಟ ಪೂರೈಸುವ ಮರ”ವಾಗಿ ಮಾಡಬಲ್ಲರು, ಏಕೆಂದರೆ ಅವರೇ ನಿಜವಾಗಿ “ಇಷ್ಟ ಪೂರೈಸುವವರು”.

ಬೆಟ್ಟದ ಮೇಲೆ ಈ ದಿವಸಕ್ಕೂ ಕಾಣಬಹುದಾದ ಹುಣಸೆ ಮರಕ್ಕೆ, ಬಾಬಾ ಆ ಅದೃಷ್ಟವನ್ನು ನೀಡಿದರು. ಭಕ್ತರು ಅನೇಕ ಅದ್ಭುತ ದರ್ಶನಗಳ ಅನುಭವವನ್ನು ಪಡೆದಿದ್ದಾರೆ. ಕೆಲವರು ಬಾಬಾ ಅವರ ತಲೆಯ ಸುತ್ತ ಸುತ್ತುವ ಬೆಳಕಿನ ಚಕ್ರವನ್ನು ನೋಡಿದ್ದಾರೆ. ಅವರ ಹಣೆಯಿಂದ ಹೊರಹೊಮ್ಮುವ ಕಣ್ಣು ಕುರುಡಾಗಿಸುವ ಬೆಳಕಿನ ಪುಂಜವನ್ನು ಮತ್ತೆ ಕೆಲವರು. ತೇಜಸ್ಸಿನ ಶಿರಡಿ ಸಾಯಿಬಾಬಾರವರ ಬೃಹತ್ ರೂಪವನ್ನು ನೋಡಿದ್ದಾರೆ. ಪೂರ್ಣ ವೃತ್ತಾಕಾರದ ಚಂದ್ರನೊಳಗೆ ಸತ್ಯಸಾಯಿ ಬಾಬಾ ಅವರ ಮುಖ, ಮತ್ತು ಬೆಂಕಿಯ ಸ್ತಂಭವನ್ನು ನೋಡಿದ್ದಾರೆ. ವಿವಿಧ ಭಕ್ತರಿಗೆ ‘ದಶಾವತಾರ’ ದರ್ಶನವನ್ನು ಬಾಬಾ ನೀಡಿದ್ದಾರೆ.

ಶ್ರೀ ಕೃಷ್ಣನಾಗಿ ಶ್ರೀ ಸತ್ಯ ಸಾಯಿ ಬಾಬಾ

ಒಂದು ದಿನ, ಬಾಬಾ ಮರದ ಶಾಖೆಗೆ ಉಯ್ಯಾಲೆಯನ್ನು ಕಟ್ಟಿ ಅದನ್ನು ಜೀಕುತ್ತಿದ್ದರು. ಎಲ್ಲರ ಸಂತೋಷಕ್ಕೆ ವೇಗವಾಗಿ ಮೇಲೆ ಕೆಳಗೆ ಜೀಕುತ್ತಿದ್ದರು. ಇದ್ದಕ್ಕಿದ್ದಂತೆ ಅವರು ನೆಲದ ಮೇಲೆ ಕುಳಿತ ಭಕ್ತರಿಗೆ, “ಇಲ್ಲಿ ನೋಡಿ!” ಎಂದು ಹೇಳಿದರು. ಅವರು ಮೇಲಕ್ಕೆ ನೋಡಿದಾಗ ಹೂ-ಹಾಸಿಗೆಯ ಮೇಲೆ ಕುಳಿತ ಸುಂದರ ಗೋಪಾಲಕನಾದ ಬೃಂದಾವನದ ಕೃಷ್ಣನನ್ನು ನೋಡಿದರು. ಕೆಲವರು ಆ ಭುವನ ಮೋಹನ ರೂಪವನ್ನು ಕಂಡು ಪ್ರಜ್ಞೆ ಕಳೆದುಕೊಂಡರು. ಬಾಬಾ, ತಮ್ಮ ಕೈಯಾಡಿಸಿ ಅಕ್ಷತೆಯನ್ನು ಸೃಷ್ಟಿಸಿ (ಅಕ್ಕಿ ಕಾಳು), ಅವರ ಮೇಲೆ ಅದನ್ನು ಪ್ರೋಕ್ಷಿಸಿ ಅವರನ್ನು ಎಬ್ಬಿಸಿದರು. ಮತ್ತೊಂದು ಬಾರಿ, ಬಾಬಾ ಅವರು, ಕೃಷ್ಣನ ಕಟ್ಟಾ ಭಕ್ತನನ್ನು ಕೃಷ್ಣನ ಕೊಳಲಿನ ನಾದವನ್ನು ಕೇಳಲು ಬಯಸುತ್ತೀರಾ ಎಂದು ಕೇಳಿದರು. ಭಕ್ತನಿಗೆ ಅವರ ಎದೆ ಮೇಲೆ ಕಿವಿ ಇಡುವಂತೆ ಹೇಳಿದರು. ಇಗೋ! ಅವರು ಕೃಷ್ಣನ ಕೊಳಲಿನ ಮೋಡಿ ಮಾಡುವ ಮಧುರ ನಾದವನ್ನು ಕೇಳಿದರು. ಸ್ವಾಮಿ ಹೇಳುತ್ತಾರೆ “ನಾವು ಕೊಳಲಿನಂತೆ ನೇರ ಮತ್ತು ಟೊಳ್ಳಾಗಿರಬೇಕು ಅರಿ-ಷಡ್ವರ್ಗದ ವಕ್ರತೆಯಿಂದ ಮುಕ್ತವಾಗಿರಬೇಕು. ಆಗ ಮಾತ್ರ ನಾವು ಆತನ ಕೈಯಲ್ಲಿ ಕೊಳಲಾಗಬಹುದು”.

ವೆಂಕಮ್ಮನ ಚಿತ್ರ

ಸತ್ಯನ ಸಹೋದರಿ (ಅಕ್ಕ) ವೆಂಕಮ್ಮ ಅವರು ಶಿರಡಿ ಸಾಯಿಬಾಬಾರವರ ಚಿತ್ರಕ್ಕಾಗಿ ಅವನನ್ನು ಬೇಡಿಕೊಳ್ಳುತ್ತಿದ್ದರು. ಶಿರಡಿ ಸಾಯಿಬಾಬಾರವರ ಕುರಿತು ಬಾಬಾ ಅನೇಕ ಭಜನೆಗಳನ್ನು ರಚಿಸಿದ್ದಾರೆ. ಬಾಬಾ ಅವಳಿಗೆ ಒಂದು ನಿರ್ದಿಷ್ಟ ಗುರುವಾರದಂದು ಕೊಡುವೆನು ಎಂದು ಆಶ್ವಾಸನೆ ನೀಡಿದರು. ಆದರೆ ಅವರು ಆ ನಿಗದಿತ ಗುರುವಾರದ ದಿನ ಉರವಕೊಂಡಕ್ಕೆ ಹೋದರು. ಅವಳು ಅದನ್ನು ಮರೆತಿದ್ದಳು, ಏಕೆಂದರೆ ಅವಳಿಗೆ ಬಾಬಾ ಅದನ್ನು ಎಂದಾದರೂ ಕೊಡುತ್ತಾರೆ ಎಂದು ಖಚಿತವಾಗಿ ನಂಬಿದ್ದಳು. ಆ ರಾತ್ರಿ ಪುಟ್ಟಪರ್ತಿಯಲ್ಲಿ ಎಲ್ಲರೂ ನಿದ್ದೆ ಮಾಡುತ್ತಿದ್ದರು. ಯಾರೋ ಮುಂಭಾಗದ ಬಾಗಿಲಿನ ಹೊರಗೆ, “ಅಮ್ಮಾಯಿ, ಅಮ್ಮಾಯಿ”ಎಂದು ಕರೆದರು. ಅವಳು ಹೋಗಿ ಬಾಗಿಲು ತೆರೆಯಲಿಲ್ಲ. ಕರೆಯುವುದು ಮುಂದುವರಿದ ಕಾರಣ ನೆರೆಯವರನ್ನು ಕರೆಯುತ್ತಿದ್ದಿರಬೇಕು ಎಂದು ಅವಳು ಭಾವಿಸಿದಳು. ಅವಳು ಹಾಸಿಗೆಯಲ್ಲಿ ಮಲಗಿದ್ದಾಗ, ಕಾಳಿನ ಚೀಲದ ಬದಿಯಲ್ಲಿ ತುರಿಯುವ ತರಹದ ಶಬ್ದ ಕೇಳಿಸಿತು. ಅವಳು ಅದನ್ನು ಇಲಿ ಅಥವಾ ಹಾವು ಎಂದು ಊಹಿಸಿದ್ದಳು. ಅವಳು ದೀಪವನ್ನು ಬೆಳಗಿಸಿ ಹುಡುಕಲಾಗಿ, ಶಿರಡಿ ಸಾಯಿಬಾಬಾರ ಚಿತ್ರವನ್ನು ಕಂಡುಕೊಂಡಳು. ಇದು ಅವಳಿಗೆ ನಿಗೂಢವಾಗಿತ್ತು. ಆ ಸಮಯದಲ್ಲಿ ಉರವಕೊಂಡದಲ್ಲಿದ್ದ ಬಾಬಾ ಅವಳಿಗೆ ಚಿತ್ರವನ್ನು ಈ ವಿಧವಾಗಿ ನೀಡಿದರು. ಈ ಚಿತ್ರವನ್ನು ಇನ್ನೂ ಹಾಗೆಯೇ ಸಂರಕ್ಷಿಸಲಾಗಿದೆ.

ಯಾರೂ ಬಾಬಾಗೆ ಹಾನಿಮಾಡಲಾಗುವುದಿಲ್ಲ

ಸ್ವಾಮಿಯ ಬಗ್ಗೆ ಅಸೂಯೆ ಪಟ್ಟ ಕೆಲವು ಜನರು ಅವರು ಮಲಗಿದ್ದಾಗ ಗುಡಿಸಲಿಗೆ ಬೆಂಕಿ ಹಚ್ಚಿದರು. ಆರರಿಂದ ಒಂಬತ್ತು ವರ್ಷ ವಯಸ್ಸಿನ ಸುಮಾರು ಹತ್ತು ಮಕ್ಕಳು ಹೊರಗೆ ಅಂಗಳದಲ್ಲಿ ಮಲಗಿದ್ದರು. ದುಷ್ಕರ್ಮಿಗಳು ಸತ್ಯನ ಕೋಣೆಯನ್ನು ಹೊರಗಿನಿಂದ ಚಿಲಕ ಹಾಕಿ ಛಾವಣಿಗೆ ಬೆಂಕಿ ಇಟ್ಟರು. ಮಕ್ಕಳು ಜೋರಾಗಿ “ರಾಜು! ರಾಜು!” ಎಂದು ಕೂಗುತ್ತಿದ್ದರು. ಸತ್ಯ ಸಣ್ಣ ಕಿಟಕಿಯ ಮೂಲಕ ಇಣುಕಿ ನೋಡಿ “ಭಯಪಡಬೇಡಿ” ಎಂದು ನಗುತ್ತಾ ಹೇಳಿದನು.

ಮಕ್ಕಳು ಕಣ್ಣು ಮುಚ್ಚಿ, “ರಾಜು! ರಾಜು!” ಎಂದು ಮಂತ್ರದಂತೆ ಕೂಗಿದರು. ಮೇಲ್ಛಾವಣಿ ಒಣಹುಲ್ಲಿನಿಂದ ಮಾಡಲಾಗಿರುವುದರಿಂದ, ಭಾರಿ ಬೆಂಕಿ ಕಾಣಿಸಿಕೊಂಡಿತು. ಇದ್ದಕ್ಕಿದ್ದಂತೆ ಒಂದು ಮೋಡದ ಸ್ಪೋಟದಿಂದ ಮಳೆಯಾಗಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು. ಸುರಿಯುವ ಮಳೆ ಕೇವಲ ಗುಡಿಸಲು ಇರುವ ಜಾಗದಲ್ಲಿ ಮಾತ್ರ ಆಗಿ ಬೇರೆಲ್ಲಿಯೂ ಆಗಲಿಲ್ಲ. ಮಕ್ಕಳ ಸಂತೋಷವು ವರ್ಣನಾತೀತವಾಗಿತ್ತು, “ರಾಜು, ರಾಜು, ಏನು ದೊಡ್ಡ ಪವಾಡವಾಯಿತು! ನೀನು ಇಲ್ಲದೆ ನಾವು ಬದುಕಲು ಸಾಧ್ಯವಿರಲಿಲ್ಲ”, ಎಂದು ಅವರು ಕೂಗಿದರು. ಸ್ವಾಮಿ ಹೇಳುತ್ತಾರೆ “ನಂಬಿಕೆ ಇಡಿ ‘ಧರ್ಮ ಏವ ಹತೋ ಹಂತಿ, ಧರ್ಮೋ ರಕ್ಷತಿ ರಕ್ಷಿತಃ,’ ಅಂದರೆ, ನೀವು ಧರ್ಮವನ್ನು ನಾಶಮಾಡಿದರೆ, ನೀವು ಧರ್ಮದಿಂದ ನಾಶವಾಗುತ್ತೀರಿ; ನೀವು ಧರ್ಮವನ್ನು ರಕ್ಷಿಸಿದರೆ, ಧರ್ಮವು ನಿಮ್ಮನ್ನು ರಕ್ಷಿಸುತ್ತದೆ.

ಈ ಘಟನೆ ಪಂಚಭೂತಗಳ ಮೇಲೆ ಸ್ವಾಮಿಯ ನಿಯಂತ್ರಣ ಮತ್ತು ಅವರ ಸರ್ವಶಕ್ತಿಯ ಒಂದು ನೋಟವನ್ನು ನಮಗೆ ನೀಡುತ್ತದೆ. ಈ ಘಟನೆ, ಮರುದಿನ ಸುಬ್ಬಮ್ಮನಿಗೆ ತಿಳಿಯಿತು. ಅವಳು ಕೂಲಂಕುಷವಾಗಿ ಶೋಧಿಸಿ ಅಪರಾಧಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದಳು. ಸುಬ್ಬಮ್ಮ ಬಹಳ ಶ್ರೀಮಂತಳು. ಗ್ರಾಮದ ಎಲ್ಲ ಜಮೀನುಗಳು ಅವಳಿಗೆ ಸೇರಿತ್ತು. ಆದ್ದರಿಂದ ಅಪರಾಧಿಗಳನ್ನು ಗ್ರಾಮದಿಂದ ಬಹಿಷ್ಕರಿಸುವಂತೆ ಅವಳು ಆದೇಶಿಸಿದಳು. ಆಗ ಸತ್ಯ ಅವಳ ಕೈಗಳನ್ನು ಹಿಡಿದು, “ನನ್ನ ಸಲುವಾಗಿ, ಅವರನ್ನು ದಯವಿಟ್ಟು ಶಿಕ್ಷಿಸಬೇಡಿ. ದಯವಿಟ್ಟು ಅವರನ್ನು ಕ್ಷಮಿಸಿ. ದಯವಿಟ್ಟು ಅವರನ್ನು ಓಡಿಸಬೇಡಿ” ಎಂದು ಹೇಳಿದನು. ಸಾಯಿಯ ಪ್ರೀತಿ ಮತ್ತು ಕ್ಷಮಿಸುವ ಸ್ವಭಾವ ಅಂತಹದಾಗಿತ್ತು.

ವಿಷಪೂರಿತ ವಡೆ

ಕೆಲವರು ಮೂರ್ಖತನದಲ್ಲಿ ಸ್ವಾಮಿಗೆ ವಿಷ ನೀಡಲು ಪ್ರಯತ್ನಿಸಿದರು. ಒಂದು ಹಬ್ಬದ ದಿನ ಇಬ್ಬರು ಭಕ್ತರೊಂದಿಗೆ ಸ್ವಾಮಿ ಗ್ರಾಮದ ಕೆಲವು ಮನೆಗಳಿಗೆ ಭೇಟಿ ನೀಡಿದರು. ಪ್ರತಿ ಮನೆಯಲ್ಲಿ ಆ ಮನೆಯವರು ನೀಡಿದ ಏನಾದರೂ ಆಹಾರ ಪದಾರ್ಥ ಸ್ವೀಕರಿಸುತ್ತಿದ್ದರು. ಆದರೆ ವಿಷಪೂರಿತ ಆಹಾರ ಇದ್ದ ಮನೆಗೆ ಪ್ರವೇಶಿಸಿದಾಗ, ಅವರು ಹೆಚ್ಚುವರಿ ಉತ್ಸಾಹವನ್ನು ತೋರಿಸಿ, ಹೆಚ್ಚಿನ ಖಾದ್ಯವನ್ನು ಕೇಳಿದರು. ಆದರೆ ಬಾಬಾ, ಅವರ ಸಹಚರರು ಆ ವಿಷಪೂರಿತ ಮಿಶ್ರಣವನ್ನು ಸೇವಿಸದಂತೆ ಎಚ್ಚರಿಕೆ ವಹಿಸಿದರು. ಆ ಮನೆಯಲ್ಲಿ ತಿಂದ ನಂತರ ಸ್ವಾಮಿ ಸುಬ್ಬಮ್ಮ ಅವರ ಮನೆಗೆ ಮರಳಿದಾಗ, ಅಲ್ಲಿದ್ದ ಹಲವಾರು ಜನರಿಗೆ ಈ ರಹಸ್ಯವನ್ನು ತಿಳಿಸಿದರು. ಆ ನಿರ್ದಿಷ್ಟ ಮನೆಯಿಂದ ಬಂದ ಆಹ್ವಾನ, ಕೊಲ್ಲುವ ಸಂಚಿನ ಸಂಪೂರ್ಣ ನಿರರ್ಥಕತೆ ಮತ್ತು ಮೂರ್ಖತನದ ಬಗ್ಗೆ ಮಾತನಾಡಿ ನಕ್ಕರು.

ಸ್ವಲ್ಪ ಸಮಯದ ನಂತರ, ಅವರು ಅಲ್ಲಿ ತಿಂದ ವಡೆಯನ್ನು ಇಡೀಯಾಗಿ ಸಂಪೂರ್ಣ ವಾಂತಿ ಮಾಡಿದರು!!. ಸುತ್ತಮುತ್ತಲಿನ ಜನರು ಇದನ್ನು ರಹಸ್ಯವಾಗಿ ಸ್ವಾಮಿ ಅಲ್ಲಿ ತಿಂದದ್ದು ಪರಿಣಾಮ ಬೀರಿದೆಯೇ ಎಂದು ನೋಡುತ್ತಿದ್ದರು.

ಸ್ವಾಮಿ ಇದನ್ನು “ತಮಗೆ ಜೀವಹಾನಿ ಮಾಡುವ ಪ್ರಯತ್ನವಲ್ಲ, ತಮ್ಮನ್ನು ಪರೀಕ್ಷಿಸುವ ಒಂದು ಪ್ರಯತ್ನ” ಎಂದು ಉಲ್ಲೇಖಿಸಿದ್ದಾರೆ. ಅವರು ಈ ವಿಷದಿಂದ ಸ್ವಾಮಿ ಬದುಕುಳಿಯಬಹುದೇ ಎಂದು ಪರೀಕ್ಷಿಸಿ ನೋಡುವ ಉದ್ದೇಶವಾಗಿತ್ತು. ಸ್ವಾಮಿ, ವಿಷ ಕೊಟ್ಟ ಮಹಿಳೆಯನ್ನು ಕ್ಷಮಿಸಿದ್ದಲ್ಲದೆ, ಕೆಲ ದಿನಗಳ ನಂತರ, ಅವಳಿಗೆ ಕಾರ್ತಿಕೇಯನ ವಿಗ್ರಹವನ್ನು ಕೊಟ್ಟರು. ಕೆಟ್ಟದ್ದನ್ನು ಮಾಡಿದವರಿಗೆ ಒಳ್ಳೆಯದನ್ನು ಹಿಂದಿರುಗಿಸುವ ದೊಡ್ಡ ಉದಾಹರಣೆ ಇದಕ್ಕಿಂತ ಬೇರೆ ಇದೆಯೇ?.

ಅದೇ ಶಿರಡಿಯ ಬಾಬಾ

ಸತ್ಯ ತನ್ನ ಮುಂದೆ ಕಾಣಿಸಿಕೊಂಡಾಗ ತನಗೆ ವಯಸ್ಸಾದ ಗಡ್ಡದ ಮನುಷ್ಯನಂತೆ ಕಂಡ ದಿವ್ಯ ದರ್ಶನವನ್ನು ಈಶ್ವರಮ್ಮ ಸುಬ್ಬಮ್ಮನಿಗೆ ಹೇಳಿದಳು. ಬಾಬಾ ಅವರು ಮತ್ತೊಂದು ರೋಮಾಂಚಕ ಅನುಭವವನ್ನು ತೋರಿಸುತ್ತಾ “ಇಲ್ಲಿ ಕೇಳಿ, ಶಿರಡಿಯು ಇಲ್ಲಿದೆ” ಎಂದು ಹೇಳಿದರು. ಅವಳು ಮತ್ತು ಕೋಣೆಯಲ್ಲಿದ್ದ ಎಲ್ಲರಿಗೂ ಭಾರವಾದ ಮರದ ಪಾದರಕ್ಷೆಯಿಂದ ನಡೆದಂತೆ ಹೆಜ್ಜೆಯ ಶಬ್ದ ಕೇಳಿಸಿತು. ಯಾವಾಗ ಹೆಜ್ಜೆ ಶಬ್ದ ನಿಂತುಹೋಯಿತೋ, ಅವರು ಶಿರಡಿ ಬಾಬಾ ಕುಳಿತಿದ್ದ ಸ್ಥಳವನ್ನು ತಲುಪಿದರು!. ಮೊದಲು ಮರದ ಪಾದರಕ್ಷೆ ಧ್ವನಿ ಕೇಳಿದಾಗ, ತಾಯಿ ಈಶ್ವರಮ್ಮ ಸ್ವಲ್ಪ ಕೋಪದಿಂದ ಕೇಳಿದರು, “ಯಾರು ಪಾದರಕ್ಷೆಗಳೊಂದಿಗೆ ಒಳಗೆ ಬರುತ್ತಿರುವುದು?”ಎಂದು. ಆ ದರ್ಶನ ಅಷ್ಟು ನೈಜವಾಗಿತ್ತು.

ಇದು ತಾಯಿಯ ಅನುಭವವಾಗಿದ್ದರೆ, ತಂದೆ ಶ್ರೀ ಪೆದ್ದ ವೆಂಕಪ್ಪ ರಾಜು ನಿರೂಪಿಸಿದ ಮತ್ತೊಂದು ಘಟನೆ ಇದೆ. ಒಂದು ಸಂಜೆ ಪೆನುಕೊಂಡದಿಂದ ಕೆಲವು ಸಂದರ್ಶಕರು (ಅವರಲ್ಲಿ ವಕೀಲ ಕೃಷ್ಣಮಾಚಾರಿ ಒಬ್ಬರು), ‘ವೆಂಕಪ್ಪ ರಾಜು ಅವರು ಮೋಸಗಾರ’ ಎಂದು ಆರೋಪಿಸಿ, ‘ಬಣ್ಣ ಬಣ್ಣದ ಕಥೆಗಳೊಂದಿಗೆ ಮುಗ್ಧ ಹಳ್ಳಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ’ ಎಂದರು. ವೆಂಕಪ್ಪ ರಾಜು ಅವರು ಬಹಳ ಅಸಮಾಧಾನಗೊಂಡರು ಮತ್ತು ಸವಾಲು ಸತ್ಯನಿಗೆ ಹಾಕಿದರು. ಸುಬ್ಬಮ್ಮ ಈ ಸಂದೇಹಕಾರರೊಂದಿಗೆ ಪೆದ್ದ ವೆಂಕಪ್ಪ ರಾಜು ಅವರ ಮನೆಗೆ ಬಂದರು. ಸತ್ಯ ಆ ಸಮಯದಲ್ಲಿ ವೆಂಕಪ್ಪ ರಾಜು ಮನೆಯಲ್ಲಿ ತಂಗಿದ್ದನು. ನಂತರ ಮನೆಯ ಒಳ ಕೋಣೆಯಲ್ಲಿ, ಸತ್ಯ ಸುಬ್ಬಮ್ಮ ಮತ್ತು ಪೆನುಕೊಂಡದಿಂದ ಬಂದ ಜನರಿಗೆ ಶಿರಡಿ ಸಾಯಿಬಾಬಾರವರ ಸಮಾಧಿಯ ವಿಹಂಗಮ ನೋಟ ತೋರಿಸಿದರು. ಅವರು ನೋಡುತ್ತಿರುವ ಶಿರಡಿಯಲ್ಲಿನ ಆ ದೃಶ್ಯ ವಿಶಾಲವಾದ ತೆರೆದ ಜಾಗದಲ್ಲಿದ್ದಂತೆ ಕಾಣಿಸಿಕೊಂಡಿತು. ಇಡೀ ದೃಶ್ಯವು ಅವರ ಮುಂದೆ ಮೈಲಿ ಮೈಲಿಗಳಷ್ಟು ಹರಡಿತು.

ಅವರೆಲ್ಲ ಪರಿಮಳಯುಕ್ತ ಹೂವುಗಳು, ಅಗರಬತ್ತಿ ಮತ್ತು ಧೂಪದ ಹೊಗೆಯೊಂದಿಗೆ ಸಮಾಧಿಯನ್ನು ನೋಡಿದರು ಮತ್ತು ಒಬ್ಬ ಸೇವಕನು ಮೂಲೆಯಲ್ಲಿ ಕುಳಿತು ತನ್ನಷ್ಟಕ್ಕೆ ತಾನೇ ಜಪಿಸುತ್ತಿರುವುದು ಕಂಡರು. ಬಾಬಾ ಹನುಮಾನ್ ದೇವಸ್ಥಾನ ಮತ್ತು ದೂರದ ಬೇವಿನ ಮರವನ್ನು ತೋರಿಸಿದರು. ಶ್ರೀ ಪೆದ್ದ ವೆಂಕಪ್ಪ ರಾಜು ಅವರನ್ನು ಕೊನೆಯದಾಗಿ ಒಳಗೆ ಕರೆದೊಯ್ಯಲಾಯಿತು. ಕೊನೆಗೆ ಅವರು ಕೂಡ ಬದಲಾದ ಮನುಷ್ಯರಾಗಿ ಹೊರಬಂದರು. ಅನುಮಾನದಿಂದ ಬಂದ ಪೆನುಕೊಂಡದ ಜನ ಕ್ಷಮೆಯಾಚಿಸಿದರು. ಈ ದಿನ ಈಶ್ವರಮ್ಮ ಮತ್ತು ಪೆದ್ದ ವೆಂಕಪ್ಪ ರಾಜು ಅವರಿಗೆ ಹದಿನಾರು ವರ್ಷದ ಯುವಕ ನಿಜವಾಗಿಯೂ ಶಿರಡಿಯ ಸಾಯಿಬಾಬಾರ ಅವತಾರ ಎಂದು ಮನವರಿಕೆಯಾಯಿತು.

ಒಮ್ಮೆ ಮದ್ರಾಸ್‌ನ ಮಹಿಳೆಯೊಬ್ಬಳ ಮಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ. ಅವಳು ಅವನನ್ನು ಶಿರಡಿ ಸಾಯಿ ಬಾಬಾ ಅವರ ಭಾವಚಿತ್ರದ ಮುಂದೆ ಇರಿಸಿದಳು. ವರ್ಷಗಳ ನಂತರ ಅವಳು ಸತ್ಯ ಸಾಯಿಬಾಬಾ ಬಗ್ಗೆ ಕೇಳಿ ತಿಳಿದುಕೊಂಡಳು.

ಅವಳು ತನ್ನ ಮಗನೊಂದಿಗೆ ಪರ್ತಿಗೆ ಬಂದಳು, ಆಗ ಅವಳ ಆ ಮಗ ಎತ್ತರದ ಯುವಕ. ಬಾಬಾ, ಅವರನ್ನು ನೋಡಿದ ಕೂಡಲೇ ತಾಯಿಯನ್ನು, “ನೀವು ಈ ಹುಡುಗನನ್ನು ಹದಿನೈದು ವರ್ಷಗಳ ಹಿಂದೆ ನನ್ನ ಆರೈಕೆಯಲ್ಲಿ ಇರಿಸಿದ್ದೀರಿ, ನೀವು ಹಾಗೆ ಮಾಡಲಿಲ್ಲವೇ? ”ಎಂದು ಕೇಳಿದರು. ಖಂಡಿತವಾಗಿಯೂ ಅದೇ ಶಿರಡಿ ಬಾಬಾ ಮತ್ತೆ ಬಂದಿದ್ದಾರೆ. ಎರಡೂ ಅವತಾರಗಳಲ್ಲಿ ಇಬ್ಬರ ಒಂದೇ ರೀತಿಯ ಸರಳತೆ, ಜ್ಞಾನ, ಪ್ರೇಮ ಮತ್ತು ಅದೇ ಸರ್ವಶಕ್ತಿ, ಸರ್ವವ್ಯಾಪಿ ಮತ್ತು ಸರ್ವಜ್ಞತ್ವ ಕಾಣಬಹುದು.

Leave a Reply

Your email address will not be published. Required fields are marked *