ಚಮ್ಮಾರನಿಗೆ ಒಲಿದ ಸಾಯಿ

Print Friendly, PDF & Email
ಚಮ್ಮಾರನಿಗೆ ಒಲಿದ ಸಾಯಿ

ಇದು ಸ್ವಾಮಿ ತಮ್ಮ ಹದಿಹರೆಯದ ವಯಸ್ಸಿನಲ್ಲಿದ್ದಾಗ ನಡೆದ ಒಂದು ಘಟನೆಯಾಗಿದೆ- ಇದು ಅವರ ಪ್ರೀತಿ ಮತ್ತು ಸಹಾನುಭೂತಿಯ ಮತ್ತೊಂದು ಮುಖವನ್ನು ನಮಗೆ ತೋರಿಸುತ್ತದೆ. ಬೆಂಗಳೂರಿನ ಬೀದಿಯ ಮೂಲೆಯೊಂದರಲ್ಲಿ ಒಬ್ಬ ಚಮ್ಮಾರ ತನ್ನ ಕೆಲಸವನ್ನು ನಡೆಸುತ್ತಿದ್ದ. ಅವನು ಕುಳಿತ ಸ್ಥಳದ ಎದುರಿನ ಬಂಗಲೆಯಲ್ಲಿ ಬಾಬಾರವರನ್ನು ನೋಡಿದನು. ಬಂಗಲೆಗೆ ಅನೇಕ ಕಾರುಗಳು ಓಡಾಡುವುದು ಮತ್ತು ಜನರ ಹಿಂಡು ಒಳಗೆ ಮತ್ತು ಹೊರಗೆ ಬರುತ್ತಿರುವುದನ್ನು ನೋಡಿದನು. ಅಲ್ಲಿಂದ ಹೊರ ಬಂದವರ ಮುಖಗಳು ಸಂತೋಷದಿಂದ ಕೂಡಿರುವುದನ್ನು ಅವನು ಗಮನಿಸಿದನು. ಅವರು ಶ್ರೀ ಕೃಷ್ಣ ಮತ್ತು ಸಾಯಿಬಾಬಾರವರ ಅವತಾರದ ಬಗ್ಗೆ ಮಾತನಾಡುತ್ತಿದ್ದರು. ಚಮ್ಮಾರ ಕೂಡ ಭಯದಿಂದ ಗೇಟ್ ಪ್ರವೇಶಿಸುವ ಸಾಹಸ ಮಾಡಿ, ಒಳಗೆ ಇಣುಕಿ ನೋಡಿದನು. ಬಾಬಾ ಸಭಾಂಗಣದಲ್ಲಿ ಒಂದು ವಿಶೇಷ ಕುರ್ಚಿಯ ಮೇಲೆ ವಿರಾಜಮಾನರಾಗಿದ್ದು, ಒಂದು ಬದಿ ಪುರುಷರು ಮತ್ತು ಇನ್ನೊಂದು ಬದಿ ಮಹಿಳೆಯರು ಕುಳಿತಿದ್ದರು. ಚಮ್ಮಾರ ಬಾಬಾರತ್ತ ನೋಡುತ್ತಿದ್ದಂತೆಯೇ ಅವರ ಕಣ್ಣುಗಳೂ ಸಹ ಇವನ ಮೇಲೆ ಬಿದ್ದವು. ಬಾಬಾ ತಕ್ಷಣ ಎದ್ದು ಚಮ್ಮಾರ ನಿಂತ ಬಾಗಿಲಿನ ಬಳಿ ಬಂದರು. ಚಮ್ಮಾರ ತನ್ನ ಕೈಯಲ್ಲಿ ಹಿಡಿದಿದ್ದ ಸ್ವಲ್ಪ ಒಣಗಿದ ಹೂವಿನ ಹಾರವನ್ನು ಅವನು ಅರ್ಪಿಸುವ ಮೊದಲೇ ತೆಗೆದುಕೊಂಡು, “ನನ್ನಿಂದ ನಿನಗೆ ಏನು ಬೇಕು?” ಎಂದು ತಮಿಳಿನಲ್ಲಿ ಕೇಳಿದರು. ಚಮ್ಮಾರನಿಗೆ ತಿಳಿದಿರುವ ಭಾಷೆ ಅದೊಂದೇ ಆಗಿತ್ತು. ಅವನ ಮನದಾಳದ ಆಸೆಯನ್ನು ಪದಗಳಲ್ಲಿ ವ್ಯಕ್ತಪಡಿಸುವ ಧೈರ್ಯವನ್ನು ಬಾಬಾ ಅವರೇ ಸ್ವತಃ ಆ ಚಮ್ಮಾರನಿಗೆ ನೀಡಿರಬೇಕು, ಏಕೆಂದರೆ ಆತನು ಯಾವುದೇ ಸಂಕೋಚವಿಲ್ಲದೆ, “ದಯವಿಟ್ಟು ನನ್ನ ಮನೆಗೆ ಬಂದು ಏನನ್ನಾದರೂ ಸ್ವೀಕರಿಸಿ” ಎಂದು ಕೇಳಿದಾಗ ಅಲ್ಲಿರುವ ಎಲ್ಲರೂ ಆಶ್ಚರ್ಯಕ್ಕೊಳಗಾದರು. .ಬಾಬಾ ಪ್ರೀತಿಯಿಂದ, “ಸರಿ, ನಾನು ಬರುತ್ತೇನೆ” ಎಂದು ಹೇಳಿ ಸಭಾಂಗಣಕ್ಕೆ ಹೋದರು.

ಚಮ್ಮಾರನು ಬಾಬಾಗೆ ತನ್ನ ಮನೆ ಎಲ್ಲಿದೆ ಎಂದು ಹೇಳಲು ಮತ್ತು ಬಾಬಾ ಯಾವಾಗ ಭೇಟಿ ನೀಡಬಹುದೆಂದು ತಿಳಿಯಲು ಬಯಸಿದ್ದನು. ಏಕೆಂದರೆ ತನ್ನ ಮನೆಯನ್ನು ಸ್ವಚ್ಛಗೊಳಿಸಿ ಬಾಬಾರವರನ್ನು ಬರಮಾಡಿಕೊಳ್ಳಲು ಸಿದ್ಧನಾಗಿರಲು ಬಯಸಿದ್ದನು. ಆದರೆ ತನ್ನ ಕೆಲಸದ ಜಾಗದಲ್ಲಿ ಚರ್ಮದ ತುಂಡುಗಳು ಮತ್ತು ಹಳೆಯ ಬೂಟುಗಳ ರಾಶಿಯನ್ನು ಹಾಗೆಯೇ ಬಿಟ್ಟು ಬಂದ ಹಿನ್ನೆಲೆಯಲ್ಲಿ, ಮತ್ತೆ ಅಲ್ಲಿಗೆ ಹಿಂತಿರುಗಬೇಕಾಯಿತು. ಸಂದರ್ಶಕರ ವಿಪರೀತ ನೂಕು ನುಗ್ಗಲಿನಿಂದ ಅವನನ್ನು ಆಚೆ ತಳ್ಳಲಾಯಿತು ಮತ್ತು ತಮಾಷೆ ಮಾಡಲಾಯಿತು. ಬಾಬಾ ತನ್ನ ಗುಡಿಸಲಿಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದಾಗ ಯಾರೂ ಅವನ ಮಾತನ್ನು ನಂಬಲಿಲ್ಲ. ಬಾಬಾ ಅವರು ಯಾವಾಗ ಬರುತ್ತಿದ್ದಾರೆಂದು ತಿಳಿದುಕೊಳ್ಳಬೇಕೆಂದು ಚಮ್ಮಾರನು ಬಯಸಿದನು. ಕೆಲವರು ಅವನನ್ನು ನೋಡಿ ನಕ್ಕರು. ಕೆಲವರು ಕುಡುಕ ಅಥವಾ ಹುಚ್ಚನಾಗಿದ್ದಾನೆ ಎಂದು ಹೇಳಿದರು. ದಿನಗಳು ಕಳೆದವು ಮತ್ತು ಚಮ್ಮಾರನು ಮತ್ತೆ ಪುನಃ ಬಾಬಾರವರನ್ನು ಭೇಟಿಯಾಗುವ ಎಲ್ಲಾ ಭರವಸೆಯನ್ನು ಬಿಟ್ಟನು.

ಇದ್ದಕ್ಕಿದ್ದಂತೆ ಒಂದು ದಿನ ವಯಸ್ಸಾದ ಚಮ್ಮಾರನ ಕೆಲಸ ಮಾಡುವ ಜಾಗದ ಮುಂದೆ ಒಂದು ಕಾರು ಬಂದು ನಿಂತಿತು. ಪಾದಚಾರಿ ಮಾರ್ಗದಲ್ಲಿ ತನ್ನ ವ್ಯಾಪಾರವನ್ನು ನಡೆಸಿದ್ದಕ್ಕಾಗಿ ಆತನನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಅಥವಾ ಯಾವುದೋ ಅಧಿಕಾರಿಗಳು ಇರಬಹುದು ಎಂಬ ಭಯದಿಂದ ನಡುಗಿದನು. ಆದರೆ ಅದು ಸಾಯಿಬಾಬಾ!. ಅವರು ಚಮ್ಮಾರನನ್ನು ತಮ್ಮ ಕಾರ್ ಹತ್ತಲು ಹೇಳಿದರು. ಚಮ್ಮಾರನು ತುಂಬಾ ಗೊಂದಲಕ್ಕೊಳಗಾಗಿದ್ದನು, ಚಾಲಕನನ್ನು ತನ್ನ ಗುಡಿಸಲಿಗೆ ದಾರಿ ತೋರಿಸಲು ಸಹ ಬಾಯಿ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಬಾಬಾ ಅವರಿಗೆ ಅವನ ಮನೆಯ ವಿಳಾಸ ತಿಳಿದಿದೆ ಎನ್ನುವಂತೆ, ಮುಂದೆ ಸಾಗುತ್ತಾ ರಸ್ತೆಯ ಬದಿಯಲ್ಲಿ ಕಾರನ್ನು ನಿಲ್ಲಿಸಿ, ಕೆಳಗಿಳಿದು ಕೊಳಗೇರಿಯ ಕಾಲು ದಾರಿಯನ್ನು ಬಳಸಿ ಆ ಚಮ್ಮಾರನ ಗುಡಿಸಲಿಗೆ ಹೋದರು!. ಚಮ್ಮಾರನು ತನ್ನ ಕುಟುಂಬದವರಿಗೆ ಬಾಬಾ ಅವರ ಆಗಮನವನ್ನು ತಿಳಿಸಲು ಓಡಿದನು. ಬಾಬಾ ಕೆಲವು ಸಿಹಿತಿಂಡಿಗಳು ಮತ್ತು ಹಣ್ಣುಗಳನ್ನು ತಮ್ಮ ಕೈಯಿಂದ ಸೃಷ್ಟಿಸಿ ಕುಟುಂಬದ ಸದಸ್ಯರಿಗೆ ಉಡುಗೊರೆಯಾಗಿ ನೀಡಿದರು, ನಂತರ ಬಾಬಾ ಗೋಡೆಯ ಬಳಿ ಇರುವ ಹಲಗೆಯ ಮೇಲೆ ಕುಳಿತರು. ಅವರು ಆನಂದ ಬಾಷ್ಪ ಸುರಿಸುತ್ತಾ ನಿಂತಿದ್ದ ಚಮ್ಮಾರನನ್ನು ಆಶೀರ್ವದಿಸಿದರು ಮತ್ತು ಅವನನ್ನು ಅನುಗ್ರಹಿಸಲು ಅವನು ಹತ್ತಿರದ ಅಂಗಡಿಯಿಂದ ತಂದ ಕೆಲವು ಬಾಳೆಹಣ್ಣುಗಳನ್ನು ಸ್ವೀಕರಿಸಿದರು. ಬಾಬಾ ನಂತರ ಗುಡಿಸಲಿನಿಂದ ಹೊರಟರು. ಇದರಿಂದ ಅವನ ಮನೆ ಇಡೀ ನೆರೆಹೊರೆಯವರಿಗೆ ತೀರ್ಥಯಾತ್ರೆಯ ಸ್ಥಳವಾಯಿತು!.

Leave a Reply

Your email address will not be published. Required fields are marked *