ಅರಣ್ಯ

Print Friendly, PDF & Email

ಅರಣ್ಯದಲ್ಲಿ ಸುತ್ತಾಟ

ಮಕ್ಕಳೇ! ಆರಾಮವೆನಿಸುವ ರೀತಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ತಲೆಯಿಂದ ಹಿಡಿದು, ಕೈ ಕಾಲುಗಳವರೆಗೆ ಆರಾಮವೆನಿಸುವಂತಿರಲಿ. ನೀವೀಗ ಶಾಂತಿ ಮತ್ತು ಆನಂದದ ಅನುಭವವನ್ನು ಪಡೆಯುತ್ತಿರುವಿರಿ. ಈಗ ನಾವು ಅರಣ್ಯದೊಳಗೆ ಹೋಗಿ, ಸುತ್ತಾಡಿಕೊಂಡು ಬರೋಣ.

ನಡೆಯಲು ಹಿತವಾಗಿರುವಂತಹ ಶೂ ಗಳನ್ನು ನಾವು ಹಾಕಿಕೊಳ್ಳೋಣ. ಮರಗಳಿಂದ ಬೀಸುತ್ತಿರುವ ತಂಪಾದ, ಶುದ್ಧವಾದ ಗಾಳಿಯನ್ನು ನಾವೀಗ ಉಸಿರಾಡುತ್ತಿದ್ದೇವೆ. ಇಲ್ಲಿ ಬಹು ಎತ್ತರಕ್ಕೆ ಬೆಳೆದಿರುವ ಮರಗಳು ಆಕಾಶವನ್ನೇ ಮುಟ್ಟುತ್ತಿವೆಯೇನೋ ಎನಿಸುವಂತಿದೆ. ನೆಲದ ಮೇಲೆ ಉದುರಿರುವ ಎಲೆಗಳಿಂದಾಗಿ ದಾರಿಯು ಮೆತ್ತಗೆ, ಮೃದುವಾಗಿದೆ. ಎತ್ತರದ ಮರಗಳ ಕೊಂಬೆಗಳ ಎಲೆಗಳು ಗಾಳಿಯಿಂದಾಗಿ ಅಲುಗಾಡುತ್ತಿವೆ. ಅದರಿಂದ ಬರುತ್ತಿರುವ ಮೆದುವಾದ, ಮರ್ಮರ ಶಬ್ದ, ಹಕ್ಕಿಗಳು ಚಿಲಿಪಿಲಿ ಗುಟ್ಟುತ್ತಿರುವ ಶಬ್ದ – ಇವು ಕೇಳಿಬರುತ್ತಿದೆಯಲ್ಲವೇ? ಹೊಸ ದಿನದ ಆಗಮನವನ್ನು ಅವು ಹಾಡಿ ಹೊಗಳುವಂತಿದೆ. ಉದಯ ಸೂರ್ಯನ ಎಳೆಯ ಕಿರಣಗಳು ಮರಗಳ ಮೂಲಕ ಹಾದು ಬಂದು, ನೆಲದ ಮೇಲೆ ಬೆಳಕಿನ ವಿವಿಧ ಚಿತ್ತಾರಗಳನ್ನು ಮೂಡಿಸಿದೆ, ವಜ್ರಗಳಂತೆ ಹೊಳೆದು ಕಂಗೊಳಿಸುತ್ತಿದೆ.

ಇಲ್ಲಿ ಅರಳಿರುವ ಬಣ್ಣ ಬಣ್ಣದ ಹೂಗಳು ಅದೆಷ್ಟು ಸುಂದರವಾಗಿವೆ! ಆ ಹೂಗಳಿಂದ ಹೊರಹೊಮ್ಮುತ್ತಿರುವ ಸುಗಂಧ, ಎಲೆಗಳಿಂದ ಬರುತ್ತಿರುವ ಸುವಾಸನ – ಇವು ನಮ್ಮ ದಣಿವಾರಿಸಿ, ಹೊಸಚೈತನ್ಯವನ್ನು ನೀಡುತ್ತಿವೆ. ಆ! ಇಲ್ಲಿ ರುವ ಅಳಿಲುಗಳು, ಮೊಲಗಳು ಮತ್ತು ಹಕ್ಕಿಗಳನ್ನು ಗಮನಿಸಿದಿರಾ? ಅವೆಲ್ಲಾ ಅರಣ್ಯನೀಡಿರುವ ಈ ಶಾಂತಿ, ನೆಮ್ಮದಿ ಗಳನ್ನು ಅನುಭವಿಸುತ್ತಾ, ಆನಂದವಾಗಿವೆ. ಓ! ಇಲ್ಲೇ ಹತ್ತಿರದಲ್ಲಿ ಹರಿಯುತ್ತಿರುವ ತೊರೆಯ ಶಬ್ದವು ಕೇಳಿಬರುತ್ತಿದೆ, ಆಲಿಸಿ. ಅದೋ ನೋಡಿ! ಸ್ಫಟಿಕದಂತೆ ಹೊಳೆಯುತ್ತಾ, ಪರಿಶುದ್ಧ ನೀರು ತೊರೆಯಾಗಿ ಕೆಳಗಿಳಿದು ಬರುತ್ತಿದೆ. ಪಶು, ಪಕ್ಷಿಗಳನ್ನು ಆಮಂತ್ರಿಸಿ, ಬಂದು ನೀರು ಕುಡಿಯಿರೆಂದು ಹಾಡಿ ಕರೆಯುವಂತಿದೆ! ಇದು ನಿಜಕ್ಕೂ ಸ್ವರ್ಗ! ಇಲ್ಲಿ ಸ್ವಲ್ಪ ಸಮಯ ವಿಶ್ರಮಿಸೋಣ. ಬನ್ನಿ, ಕುಳಿತು ನಿಧಾನವಾಗಿ ಉಸಿರಾಡಿ.

ಓ! ಸಮಯವಾಗುತ್ತಾ ಬಂತು. ನಾವಿನ್ನು ಹಿಂತಿರುಗಬೇಕಾಗಿದೆ. ನಮ್ಮ ಈ ಹೊಸ ಸ್ನೇಹಿತರಾದ ಪ್ರಾಣಿ, ಪಕ್ಷಿಗಳನ್ನು ಮತ್ತೊಮ್ಮೆ ಬಂದು ಭೇಟಿಯಾಗೋಣ. ನಾವೀಗ ನಮ್ಮ ತರಗತಿಯೊಳಗೆ ಬಂದೇ ಬಿಟ್ಟೆವು. ಈಗ ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ. ಅರಣ್ಯದಲ್ಲಿ ಅನುಭವಿಸಿದ ನಿಶ್ಶಬ್ಧತೆ ಮತ್ತು ಚೈತನ್ಯದ ಅನುಭವವು ಇಡೀ ದಿನ ನಿಮ್ಮೊಡನೆ ಇರುವಂತೆ ನೋಡಿಕೊಳ್ಳಿ.

ಚಟುವಟಿಕೆ:

ನೀವು ಕಂಡ ಅರಣ್ಯದ ಚಿತ್ರವನ್ನು ಬಿಡಿಸಿ.

[Source : Silence to Sai-lens – A Handbook for Children, Parents and Teachers by Chithra Narayan & Gayeetree Ramchurn Samboo MSK – A Institute of Sathya Sai Education – Mauritius Publications]

Leave a Reply

Your email address will not be published. Required fields are marked *

error: