ದೇವರ ಅನುಗ್ರಹ

Print Friendly, PDF & Email
ದೇವರ ಅನುಗ್ರಹ

ಬಹಳ ಹಿಂದೆ ಪ್ಯಾರಿಸ್ ನಲ್ಲಿ ಫ್ರಾನ್ಸಿಸ್ ಎಂಬ ಜಾದೂಗಾರ ವಾಸಿಸುತ್ತಿದ್ದನು. ಅವನ ಕಣ್ಣು ಕಟ್ಟಿಸುವ ಜಾದೂ ವಿದ್ಯೆಗಳು, ತಂತ್ರಗಳು ಮಕ್ಕಳನ್ನು ಮಾತ್ರವಲ್ಲದೆ, ಯುವಕರು ಮತ್ತು ಹಿರಿಯರನ್ನು ಕೂಡ ಸಮಾನವಾಗಿ ಸಂತೋಷ ಪಡಿಸುತ್ತಿದ್ದವು. ಆ ಜಾದೂಗಾರ ಪ್ರದರ್ಶನದ ಕೊನೆಯಲ್ಲಿ ತನ್ನ ಟೋಪಿಯನ್ನು ಸೇರಿದ ಜನರ ಸುತ್ತ ಹಿಡಿದುಕೊಂಡು ಹೋದಾಗ ಅವನನ್ನು ಸಂತೋಷ ಪಡಿಸುವುದಕ್ಕಾಗಿ ಅವರು ಅದನ್ನು ನಾಣ್ಯಗಳಿಂದ ತುಂಬುತ್ತಿದ್ದರು. ಪ್ರದರ್ಶನದ ನಂತರ ಫ್ರಾನ್ಸಿಸ್, ಪ್ರತಿ ದಿನವೂ ಮೇರಿ ಮಾತೆಯ ಇಗರ್ಜಿ (ಚರ್ಚ್) ಗೆ ಹೋಗಿ, ಅವನಿಗೆ ದೈನಂದಿನ ಆಹಾರ ನೀಡಿದ್ದಕ್ಕಾಗಿ ಧನ್ಯವಾದವನ್ನು ಅರ್ಪಿಸುತ್ತಿದ್ದನು.

ಒಂದು ದಿನ ಸಂಜೆ, ಇಗರ್ಜಿಯಲ್ಲಿ (ಚರ್ಚ್ನಲ್ಲಿ), ಕೆಲವು ಪಾದ್ರಿಗಳು ಮಂಡಿಯೂರಿ ವರ್ಜಿನ್ ಮೇರಿ ಮಾತೆಗೆ ಜೋರಾಗಿ ಪ್ರಾರ್ಥನೆ ಸಲ್ಲಿಸುವುದನ್ನು ಫ್ರಾನ್ಸಿಸ್ ನೋಡಿದನು. ಆ ಪವಿತ್ರವಾದ ದೃಶ್ಯವು, ಅವನ ಸರಳ ಮತ್ತು ಪರಿಶುದ್ಧವಾದ ಹೃದಯದಲ್ಲಿ ಮೇರಿಮಾತೆಯ ಮೇಲಿನ ಪ್ರೀತಿಯು ಉಕ್ಕಿ ಹರಿಯುವಂತೆ ಮಾಡಿತು. ಅವನು ಮುಖವನ್ನು ಮೇಲಕ್ಕೆತ್ತಿ ದುಃಖದ ಸ್ವರದಲ್ಲಿ, “ಅಯ್ಯೋ! ನನಗೆ ಆ ಪ್ರಾರ್ಥನೆಗಳು ತಿಳಿದಿಲ್ಲ. ಓ ಮಾತೇ, ನಾನು ನಿನ್ನನ್ನು ಹೇಗೆ ಮೆಚ್ಚಿಸಬಹುದು?” ಎಂದು ಭಾವುಕನಾಗಿ ಪ್ರಾರ್ಥಿಸಿದನು. ಶೀಘ್ರದಲ್ಲೇ ಅವನ ನಿರ್ಮಲ ಹೃದಯಕ್ಕೆ ಒಂದು ದಾರಿ ತೋರಿದಂತಾಯಿತು. ಎಲ್ಲಾ ಪಾದ್ರಿಗಳು (ಸನ್ಯಾಸಿಗಳು) ಇಗರ್ಜಿಯಿಂದ ಹೊರಗೆ ಹೋಗುವ ತನಕ ಅವನು ತಾಳ್ಮೆಯಿಂದ ಕಾದು ನಿಂತನು. ಎಲ್ಲರೂ ತೆರಳಿದ ನಂತರ ಆ ಪ್ರಶಾಂತವಾದ ವಾತಾವರಣದಲ್ಲಿ ಅವನು ನಿಧಾನವಾಗಿ ಇಗರ್ಜಿಯ ಒಳಗೆ ಪ್ರವೇಶಿಸಿ, ಯಾರೂ ಅವನನ್ನು ತೊಂದರೆಗೊಳಿಸದಂತೆ ಅದರ ದೊಡ್ಡ ಬಾಗಿಲನ್ನು ಮುಚ್ಚಿದನು.

ಫ್ರಾನ್ಸಿಸ್ ತನ್ನ ಚೀಲ, ಚಾಕುಗಳು, ಗಾಜಿನ ಫಲಕಗಳು, ಸೀಸದ ಚೆಂಡುಗಳು ಮತ್ತು ಇತರ ಅನೇಕ ವಸ್ತುಗಳನ್ನು ತೆಗೆದುಕೊಂಡು ತನ್ನ ಪ್ರದರ್ಶನವನ್ನು ಮೇರಿ ಮಾತೆಯ ಮುಂದೆ ಪ್ರದರ್ಶಿಸಲು ಪ್ರಾರಂಭಿಸಿದನು. ನಡುನಡುವೆ ಅವನು ಸಂತೋಷದಿಂದ ಗಟ್ಟಿಯಾಗಿ, “ಓ ಮೇರಿ ಮಾತೇ, ನನ್ನ ಈ ಕುಶಲತೆಯು, ನಿಮ್ಮನ್ನು ಮೆಚ್ಚಿಸುತ್ತಿದೆಯೇ?” ಎಂದು ಕೇಳುತ್ತಿದ್ದನು.

Francis performance with lead ball for Mary

ಅಲ್ಲಿಯೇ ಹತ್ತಿರದಲ್ಲಿ ವಾಸಿಸುತ್ತಿದ್ದ ಓರ್ವ ಪಾದ್ರಿಯವರು (ಸನ್ಯಾಸಿಗಳಲ್ಲಿ ಒಬ್ಬರು) ಈ ವಿಚಿತ್ರ ಸ್ವರವನ್ನು ಕೇಳಿ ಇಗರ್ಜಿ (ಚರ್ಚ್‌) ಗೆ ಓಡಿ ಬಂದರು. ಆದರೆ ದೊಡ್ಡ ಬಾಗಿಲು ಮುಚ್ಚಿರುವುದನ್ನು ನೋಡಿ ಬಾಗಿಲಿನ ಬೀಗದ ಕೈ ಹಾಕುವ ರಂಧ್ರದ ಮೂಲಕ ಅವರು ನೋಡಿದಾಗ, ಫ್ರಾನ್ಸಿಸ್ ತನ್ನ ತಲೆಯನ್ನು ನೆಲದ ಮೇಲೆ ಮತ್ತು ಕಾಲುಗಳನ್ನು ಮೇಲಕ್ಕೆ ಎತ್ತಿ ಹಿಡಿದು, ಅವನ ಎರಡೂ ಕಾಲುಗಳಿಂದ ಒಂದರ ನಂತರ ಒಂದರಂತೆ ಎರಡು ದೊಡ್ಡ ಸೀಸದ ಚೆಂಡುಗಳನ್ನು ಎಸೆಯುವುದು ಮತ್ತು ತಿರುಗಿಸುವುದು ಕಾಣಿಸಿತು. ಅಷ್ಟಲ್ಲದೇ ಅವನು ಸಂತೋಷದಿಂದ, “ಮೇರಿ ಮಾತೇ, ನೀವು ಇದನ್ನು ಹೇಗೆ ಇಷ್ಟಪಡುತ್ತಿದ್ದೀರಿ?” ಎಂದು ಕೇಳುತ್ತಿದ್ದನು. ಸ್ವಲ್ಪ ಸಮಯದ ನಂತರ, ಭಾರವಾದ ಸೀಸದ ಚೆಂಡು ಅವನ ಕಾಲುಗಳಿಂದ ಜಾರಿ ಕೆಳಗೆ ಬಿದ್ದು, ಅವನ ಹಣೆಗೆ ಬಲವಾಗಿ ಬಡಿಯಿತು. ಕೂಡಲೇ, ನೆಲದ ಮೇಲೆ ಮಲಗಿದಲ್ಲಿಯೇ ಫ್ರಾನ್ಸಿಸ್ ಮೂರ್ಛೆ ಹೋದನು.

Francis wins the Grace of God

ಬಾಗಿಲಿನ ಬೀಗದ ಕೈ ಹಾಕುವ ರಂಧ್ರದ ಮೂಲಕ ಪಾದ್ರಿಯವರು ಇದನ್ನೆಲ್ಲ ನೋಡುತ್ತಿದ್ದರು. ಆದರೆ ಅವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅದೇ ಸಮಯದಲ್ಲಿ ಒಳಗೆ ಒಂದು ದೊಡ್ಡ ಮಿಂಚಿನ ಬೆಳಕನ್ನು ಅವರು ನೋಡಿದರು. ಆ ಬೆಳಕಿನಿಂದ, ವರ್ಜಿನ್ ಮೇರಿ ಮಾತೆ ಕಾಣಿಸಿಕೊಂಡಳು. ಅವಳು ಪೂಜಾಸ್ಥಳದ ಮೆಟ್ಟಿಲುಗಳನ್ನು ಇಳಿದು ಫ್ರಾನ್ಸಿಸ್ನ ಹತ್ತಿರಬಂದು, ಮಂಡಿಯೂರಿ ಅವನ ಹಣೆಯ ಬೆವರುವಿಕೆಯನ್ನು ಅವಳ ರೇಷ್ಮೆ ನಿಲುವಂಗಿಯ ಅಂಚಿನಿಂದ ಒರೆಸುವುದನ್ನು ನೋಡಿದರು. ಪಾದ್ರಿಯವರು ಬಾಗಿಲು ತೆರೆಯುವ ಹೊತ್ತಿಗೆ, ವರ್ಜಿನ್ ಮೇರಿ ಮಾತೆ ಕಣ್ಮರೆಯಾದಳು. ಪಾದ್ರಿಯವರು “ಪರಿಶುದ್ಧ ಹೃದಯ ಉಳ್ಳವರು ಧನ್ಯರು ಅವರು ದೇವರ ಅನುಗ್ರಹವನ್ನು ಪಡೆದವರಾಗಿರುತ್ತಾರೆ” ಎಂದು ಹೇಳಿದರು.

ಪ್ರಶ್ನೆಗಳು:
  1. ಪಾದ್ರಿಯವರು ಫ್ರಾನ್ಸಿಸ್‌ನಿಂದ ಏನನ್ನು ಕಲಿತರು?
  2. ‘ಹೃದಯದ ಪರಿಶುದ್ಧತೆ’ ಎಂದರೆ ಏನು ಎಂಬುವುದನ್ನು ನಿಮ್ಮ ಸ್ವಂತ ಮಾತುಗಳಲ್ಲಿ ವಿವರಿಸಿರಿ.
  3. ದೇವರನ್ನು ಮೆಚ್ಚಿಸಬೇಕೆಂದು ನೀವು ಬಯಸುತ್ತೀರಿ ಎಂದು ಭಾವಿಸೋಣ. ಅದಕ್ಕಾಗಿ ನೀವು ಏನು ಮಾಡುತ್ತೀರಿ?

Leave a Reply

Your email address will not be published. Required fields are marked *