ಹೊಳೆವ ಹೊನ್ನಿನ ಮೋಹ
೬. ಹೊಳೆವ ಹೊನ್ನಿನ ಮೋಹ
ರಾಮ ಲಕ್ಷ್ಮಣ ಸೀತೆಯರು ತಮ್ಮ ಆಶ್ರಮದ ಪರ್ಣಶಾಲೆಯಲ್ಲಿ ಆನಂದದಿಂದ ಕಾಲ ಕಳೆಯುತ್ತಿದ್ದರು. ಆಗ ವಸಂತಕಾಲದ ಪ್ರಾರಂಭ ಮರಗಳ ಕೊಂಬೆಗಳಲ್ಲಿ ಎಳೆತಳಿರು ಚಿಗುರುತ್ತಿತ್ತು. ಸೃಷ್ಟಿಯು ಶೃಂಗಾರಮಯವೂ ರಮಣೀಯವೂ ಆಗಿ ಶೋಭಿಸುತ್ತಿತ್ತು.
ಒಂದು ಮುಂಜಾವು ಸೀತೆ ಗಿಡ ಬಳ್ಳಿಗಳ ಮಧ್ಯದಲ್ಲಿ ಹೂಗಳನ್ನು ಕೊಯ್ಯುತ್ತಿರುವಾಗ ಚಿನ್ನದ ರೇಖೆಯ ಮಿಂಚೊಂದನ್ನು ಗಿಡಗಳ ಮಧ್ಯೆ ಕಂಡಳು. ಚಿನ್ನದ ಮೈಯಲ್ಲಿ ಬೆಳ್ಳಿಯ ಚುಕ್ಕೆಯಿಂದೊಡಗೂಡಿದ ಜಿಂಕೆಯೊಂದರ ಕಣ್ಣುಗಳು ರತ್ನಗಳಂತೆ ಹೊಳೆಯುತ್ತಿದ್ದವು. ಸೀತೆಯ ಕಾಲುಗಳು ಅಲ್ಲಿಂದ ಕದಲದಾದವು. ಆಕೆಯ ಹೃದಯ ಆನಂದದಿಂದ ತುಂಬಿ ಬಂತು. ರಾಮನನ್ನು ಕೂಗಿ ಕರೆದಳು. “ನಲ್ಲಾ, ಬಾ ಇಲ್ಲಿ. ಆ ಜಿಂಕೆಯನ್ನು ನೋಡು, ನಾವು ಅಯೋಧ್ಯೆಗೆ ಹಿಂತಿರುಗಿದಾಗ ಅಲ್ಲಿಯ ಪ್ರಜೆಗಳಿಗೆಲ್ಲಾ ತೋರಿಸಲು ಇದೊಂದು ಅಮೂಲ್ಯವಾದ ಕಾಣಿಕೆಯಾಗುವುದು. ಆದ್ದರಿಂದ ನನಗಾಗಿ ಅದನ್ನು ಹಿಡಿದು ನಮ್ಮ ಆಶ್ರಮಕ್ಕೆ ತರಲಾರೆಯಾ?” ಎಂದಳು.
ಹತ್ತಿರದಲ್ಲಿ ನಿಂತ ಲಕ್ಷ್ಮಣನು ಇದೆಲ್ಲವನ್ನೂ ಆಲಿಸಿದನು. ಆಳವಾಗಿ ಯೋಚಿಸಿದ ನಂತರ ಹೇಳಿದನು. ಅಣ್ಣಾ ಇದು ನಿಜವಾದ ಜಿಂಕೆಯೆಂದು ನನಗನಿಸುವುದಿಲ್ಲ. ಶೂರ್ಪಣಖಿಯನ್ನು ಅವಮಾನಿತಳನ್ನಾಗಿ ಮಾಡಿದಂದಿನಿಂದಲೂ ರಾಕ್ಷಸರು ಏನಾದರೊಂದು ಯುಕ್ತಿಯುತವಾದ ಹಂಚಿಕೆಯನ್ನು ಹಾಕುತ್ತಲೇ ಇದ್ದಾರೆ. ಅವುಗಳಲ್ಲಿ ಬಹುಶಃ ಇದು ಒಂದಾಗಿರಬಹುದು. ಜಾಗ್ರತೆ ಅದನ್ನು ಅದರ ಪಾಡಿಗೆ ನೀನು ಬಿಡುವುದೇ ಉತ್ತಮವೆಂದು ನನ್ನ ಸಲಹೆ.
ಒಂದು ಕಡೆ ಸೀತೆಯ ಪ್ರತಿಪಾದನೆ, ಇನ್ನೊಂದು ಕಡೆ ಲಕ್ಷ್ಮಣನ ಎಚ್ಚರಿಕೆ. ಇವೆರಡರ ಮಧ್ಯೆ ಸಿಕ್ಕಿ ಹಾಕಿಕೊಂಡ ರಾಮ ಸ್ವಲ್ಪ ಹೊತ್ತಿನ ತರುವಾಯ ಲಕ್ಷಣನಿಗೆ ಹೇಳಿದನು. “ನೀನು ಹೇಳಿದ್ದು ಸರಿ ಇರಬಹುದು. ಆದರೂ ನಾನು ಅದನ್ನು ಬೆನ್ನಟ್ಟಿ ಹೋಗುವುದರಲ್ಲಿ ತಪ್ಪೇನೂ ಇಲ್ಲ. ಅದು ರಾಕ್ಷಸರ ಕುಯುಕ್ತಿಯೇ ಆಗಿದ್ದ ಪಕ್ಷದಲ್ಲಿ ನಾನು ಅದನ್ನು ತಕ್ಷಣ ಕೊಂದು ಇಲ್ಲಿಗೆ ತಂದುಬಿಡುವೆ. ಅದರ ತೊಗಲನ್ನು ಸುಲಿದು ಆಕರ್ಷಕ ಚರ್ಮವನ್ನು ಜ್ಞಾಪಕಾರ್ಥವಾಗಿ ಕಾಯ್ದಿರಿಸಿಕೊಳ್ಳೋಣ.”
ಅನಂತರ ರಾಮನು ತನ್ನ ಧನುಸ್ಸು ಬಾಣಗಳನ್ನು ತೆಗೆದುಕೊಂಡು ಕಾಡಿನ ಕಡೆಗೆ ಹೊರಟನು. ಹೊರಡುವ ಮುನ್ನ ಸೀತೆಯ ಕಾವಲಿಗಾಗಿ ಇಲ್ಲಿಯೇ ನಿಲ್ಲಬೇಕೆಂದೂ, ಎಂಥ ಪ್ರಸಂಗದಲ್ಲಿಯೂ ಅವಳನ್ನು ಒಬ್ಬಂಟಿಗಳನ್ನಾಗಿ ಬಿಟ್ಟು ಹೋಗಕೂಡದೆಂದೂ ಲಕ್ಷ್ಮಣನಿಗೆ ಆಜ್ಞೆ ಮಾಡಿದನು.
ಲಕ್ಷ್ಮಣನು ಸೀತೆಗೆ ಕಾವಲುಗಾರನಾಗಿ ನಿಂತ ಮೇಲೆ ರಾಮನು ಜಿಂಕೆಯ ಬೆನ್ನಟ್ಟಿ ಹೋದನು. ರಾಮನ ಚಲನವಲನಗಳನ್ನು ಆಸೆ ಕಂಗಳಿಂದ ಸೀತೆ ಗಮನಿಸುತ್ತಿದ್ದಳು. ಜಿಂಕೆ ವೇಗವಾಗಿ ಓಡುತ್ತಿತ್ತು. ರಾಮನು ಅದನ್ನು ಹಿಂಬಾಲಿಸುತ್ತಾ ಇದ್ದನು. ರಾಮನು ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ ಆ ಜಿಂಕೆ ಮತ್ತು ಛಂಗನೆ ಕುಣಿದಾಡುತ್ತಾ ಯುಕ್ತಿಯಿಂದ ತಪ್ಪಿಸಿಕೊಳ್ಳುತ್ತಿತ್ತು.
ಈ ರೀತಿ ಮತ್ತೆ ಮತ್ತೆ ನಡೆದು ರಾಮನು ಆಶ್ರಮದಿಂದ ಅತಿ ದೂರ ಹೊರಟು ದಟ್ಟಡವಿಯ ಮಧ್ಯದಲ್ಲಿ ಒಯ್ಯಲ್ಪಟ್ಟನು. ಇನ್ನು ಹೆಚ್ಚು ಕಾಲ ರಾಮನಿಗೆ ಸಹಿಸಲಾಗಲಿಲ್ಲ. ಅದನ್ನು ಕೊಲ್ಲುವುದೆಂದು ಮನದಲ್ಲಿ ನಿಶ್ಚಯಿಸಿ ಬಾಣ ಪ್ರಯೋಗ ಮಾಡಿದನು. ಆ ಬಾಣವು ಜಿಂಕೆಯನ್ನು ಇರಿಯಿತು. ಅಯ್ಯೋ! ಆ ಜಿಂಕೆ ಮಾರೀಚ ರಾಕ್ಷಸ ರೂಪವನ್ನು ತಾಳಿತು! ಸತ್ತು ಬೀಳುವ ಮುನ್ನ ಅವನು ರಾಮನಂತೆ ತಾರ ಸ್ವರದಲ್ಲಿ “ಹಾ! ಲಕ್ಷ್ಮಣ, ಹಾ! ಸೀತೆ,” ಎಂದು ಕೂಗಿದನು. ಈ ದೃಶ್ಯವನ್ನು ಕಂಡು ರಾಮನಿಗೆ ಅತ್ಯಾಶ್ಚಯವಾಯಿತು.
ಸೀತೆ ಈ ಆರ್ತನಾದನವನ್ನು ಕೇಳಿ ರಾಮನೇ ಎಂದು ಬಗೆದು ಲಕ್ಷ್ಮಣನಿಗೆ ಹೇಳಿದಳು, “ನೀನು ಕೇಳುತ್ತಿಲ್ಲವೇ? ನಿನ್ನ ಅಣ್ಣ ತೊಂದರೆಗೊಳಗಾಗಿದ್ದಾನೆ. ಕೂಡಲೇ ಅವನತ್ತ ಧಾವಿಸು.”
ಇದೆಲ್ಲವೂ ರಾಕ್ಷಸನ ಮಾಯೆಯಲ್ಲದೇ ಬೇರೆಯಲ್ಲವೆಂಬುದು ಲಕ್ಷ್ಮಣನಿಗೆ ಚೆನ್ನಾಗಿ ಮನವರಿಕೆಯಾಯಿತು. ಅವನು ಗಾಬರಿಗೊಳ್ಳದೆ ಸೀತೆಗೆ ಧೈಯ ಹೇಳಿದನು. ”ತಾಯೇ, ಈ ರಾಕ್ಷಸನಿಂದ ರಾಮನಿಗೆ ಯಾವ ತೊಂದರೆಯಾಗುವುದೂ ಸಾಧ್ಯವಿಲ್ಲ. ಅವನು ಅಜೇಯನು. ನಾನು ನಿನ್ನನ್ನು ಒಂಟಿಯಾಗಿ ಬಿಟ್ಟು ಹೋಗಲಾರೆ.” ಸೀತೆಗೆ ತೂಕ ತಪ್ಪಿ ಹೋದಂತಾಯಿತು. ಅವಳು ಎದುರುತ್ತರ ಕೊಡುತ್ತಾ ಹೇಳಿದಳು. ಲಕ್ಷ್ಮಣಾ, ಈಗ ನಿನ್ನ ನಿಜವಾದ ಬಣ್ಣ ಬಯಲಾಗುತ್ತಿದೆ. ನನ್ನ ಪತಿಯ ಅಂತ್ಯವಾದಲ್ಲಿ ನನ್ನನ್ನು ವಶಪಡಿಸಿಕೊಳ್ಳುವ ಇಂಥ ಅವಕಾಶವನ್ನೇ ನೀನು ಎದುರುನೋಡುತ್ತಿದ್ದೆ ಅಲ್ಲವೇ? ಆದರೆ ನೆನಪಿರಲಿ, ರಾಮನ ಹೊರತು ಈ ಸೀತೆ ಬೇರಾವ ಪುರುಷರಿಗೂ ದಕ್ಕಲು ಸಾಧ್ಯವಿಲ್ಲ. ಈಗಿಂದೀಗಲೇ ಈ ಸ್ಥಳವನ್ನು ಬಿಟ್ಟು ನೀನು ತೊಲಗದಿದ್ದರೆ ನಾನಿಲ್ಲಿ ಚಿತೆಯನ್ನು ರಚಿಸಿ ಅದರಲ್ಲಿ ನನ್ನನ್ನು ನಾನು ಬಲಿಕೊಡುವೆ.”
ಈ ಬಗೆಯ ಕಠೋರ ನುಡಿಗಳನ್ನು ಕೇಳಿದ ಲಕ್ಷ್ಮಣನು ಹೊರಡಲು ಸಿದ್ಧನಾದನು. ಆದರೂ ಹೊರಡುವ ಮುನ್ನ, ರಾಕ್ಷಸರು ಅಲ್ಲಿ ಸಂಚಾರ ಮಾಡುತ್ತಿರುವುದರಿಂದ ಯಾವುದೇ ಕಾರಣಕ್ಕಾಗಲಿ ಬಾಗಿಲಿಂದಾಚೆಗೆ ಹೋಗಕೂಡದೆಂದು ಸೀತೆಯನ್ನು ಲಕ್ಷ್ಮಣನು ಪ್ರಾರ್ಥಿಸಿದನು.
ಸೀತೆ ಏಕಾಕಿಯಾದಳು. ತಕ್ಷಣ ಭಿಕ್ಷುಕನೋರ್ವನು ಗುಡಿಸಲನ್ನು ಸಮೀಪಿಸುತ್ತಿರುವುದನ್ನು ಕಂಡಳು. ಆತನೇ ರಾವಣನಾಗಿದ್ದ. ಆ ರಾಕ್ಷಸಾಧಿಪತಿ ಸೀತೆಯನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಾ ಆಕೆಯ ಮೋಹಕತೆಗೆ ಮುಗ್ಧನಾದನು. ಸೀತೆಗೆ ಅವನ ನೋಟ ಅಹಿತವೆಂದೆನಿಸಿತು. ಅಂತಲೇ ಇನ್ನೇನು ಅವಳು ಗುಡಿಸಿಲು ಒಳಗೆ ಹೊರಡಬೇಕೆನ್ನುವಷ್ಟರಲ್ಲಿ ರಾವಣನು ಆಕೆಯ ಮುಂಗೈಯನ್ನು ಹಿಡಿದು ಹೊರಗೆ ಎಳೆದನು. ಬಿಡಿಸಿಕೊಳ್ಳಲು ಸೆಣಸಾಡುತ್ತಿದ್ದ ಸೀತೆಯನ್ನು ಎತ್ತಿಕೊಂಡು ಹತ್ತಿರದಲ್ಲಿ ಕಾಯುತ್ತಿದ್ದ ಪುಷ್ಪಕವಿಮಾನದಲ್ಲಿರಿಸಿ ಆಕಾಶಕ್ಕೆ ನೆಗೆದು ದಕ್ಷಿಣ ದಿಕ್ಕಿಗೆ ಪ್ರಯಾಣ ಬೆಳೆಸಿದನು.
ಅರಣ್ಯವಾಸಿಗಳೆಲ್ಲರಿಗೂ ಸಹಾಯಕ್ಕೆ ಬರಲು ಪ್ರಾರ್ಥಿಸಿಕೊಳ್ಳುವ ರೀತಿಯಲ್ಲಿ ಸೀತೆಯು ಎತ್ತರದ ಧ್ವನಿಯಲ್ಲಿ ರೋದಿಸುತ್ತಿದ್ದಳು. ಸೀತೆಯ ಈ ಆರ್ತನಾದವನ್ನು ಕೇಳಿ ಗೃಧ್ರರಾಜನಾದ ಜಟಾಯುವು ಮರದ ಶಿರೋಭಾಗದಲ್ಲಿ ವಿಶ್ರಮಿಸಿಕೊಂಡಿದ್ದವನು, ತನ್ನ ಬಲಿಷ್ಠವಾದ ರೆಕ್ಕೆಗಳನ್ನು ಬಡಿದು, ವೇಗವಾಗಿ ಆಕಾಶಕ್ಕೆ ನೆಗೆದು ರಾವಣನನ್ನು ಅಡ್ಡಗಟ್ಟಿದನು. ರಾಮನು ಭೂಲೋಕದಲ್ಲಿ ಅತ್ಯಂತ ಬಲಿಷ್ಠನಾದ ವ್ಯಕ್ತಿಯೆಂದೂ ಖಂಡಿತವಾಗಿಯೂ ಆತನು ರಾವಣನನ್ನು ಕೊಲ್ಲುವುದಾಗಿಯೂ ಹೇಳಿ ಸೀತೆಯನ್ನು ತೊಂದರೆಗೀಡು ಮಾಡದೇ ಮೊದಲು ಬಿಟ್ಟುಕೊಡಬೇಕೆಂದು ರಾವಣನನ್ನು ಅವನು ಪ್ರಾರ್ಥಿಸಿಕೊಂಡನು. ಆದರೆ ರಾವಣನು ಆತನ ಕಡೆಗೆ ಅಲಕ್ಷ್ಯ ಮಾಡಿದನು. ಜಟಾಯು ತನ್ನ ಸಮಸ್ತ ಸಾಹಸಗಳಿಂದ ರಾವಣನನ್ನು ಎದುರಿಸಿದನು. ರಾವಣನ ರಥವನ್ನು ವಿರೂಪಗೊಳಿಸಿ ರಾವಣನ ದೇಹದಲ್ಲಿ ವೇದನಾ ಪೂರ್ಣವಾದ ಗಾಯಗಳನ್ನು ಮಾಡಿದನು. ಆದರೆ ರಾವಣನ ಪರಾಕ್ರಮಕ್ಕೆ ಅವನು ಸಾಟಿಯಿಲ್ಲ. ಕೊನೆಗೆ ಸೋತು ಸುಣ್ಣವಾದನು. ತೀವ್ರವಾದ ಈ ಹೋರಾಟದ ತಿರುವೊಂದರಲ್ಲಿ ರಾವಣನು ತನ್ನ ಖಡ್ಗದಿಂದ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಹಾಕಿದನು. ಆಗ ಜಟಾಯು ಅಸಹಾಯಕ ಸ್ಥಿತಿಯಲ್ಲಿ ದೊಪ್ಪನೆ ಕೆಳಕ್ಕೆ ಬಿದ್ದನು. ರಾವಣನು ಲಂಕೆಗೆ ತನ್ನ ಪ್ರಯಾಣವನ್ನು ಮುಂದುವರಿಸಿದನು.
ಪ್ರಶ್ನೆಗಳು
- ಸೀತೆ ಚಿನ್ನದ ಜಿಂಕೆಗೆ ಹೇಗೆ ಮರಳಾದಳು?
- ಆ ಜಿಂಕೆಯ ಬಗ್ಗೆ ಲಕ್ಷ್ಮಣನ ಅಭಿಪ್ರಾಯವೇನು?
- ಸೀತೆಯು ರಾಮನನ್ನು ಹೇಗೆ ಕಳೆದುಕೊಂಡಳು?