ಸ್ವಾಮಿಯ ಪ್ರೇಮದ ಪರಿಮಾಣ
ಸ್ವಾಮಿಯ ಪ್ರೇಮದ ಪರಿಮಾಣ
ಸ್ವಾಮಿ ಕಾರುಣ್ಯಾನಂದ ಅವರು ಭಗವಾನ್ ಬಾಬಾ ಅವರ ಅತ್ಯಂತ ಪೂಜ್ಯ ಭಕ್ತರಾಗಿದ್ದರು. ಅವರು ನಿರ್ಗತಿಕರು ಮತ್ತು ಅಂಗವಿಕಲರಿಗಾಗಿ ಕುಷ್ಠರೋಗದ ಸಣ್ಣ ಆಸ್ಪತ್ರೆ ಮತ್ತು ನೆಲೆಯನ್ನು ನಡೆಸುತ್ತಿದ್ದರು. ಒಂದು ದಿನ, ಯಾರೋ ಒಬ್ಬರು, ಇನ್ನು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿರುವ ಒಬ್ಬ ಬಡ ಮಹಿಳೆಯನ್ನು ಅವಳ ಮೇಲಿನ ಕರುಣೆಯಿಂದ ಈ ಆಸ್ಪತ್ರೆಗೆ ಕರೆತಂದರು. ಇಲ್ಲಿ ಕನಿಷ್ಠ ಪಕ್ಷ ಆಶ್ರಯ ಮತ್ತು ಸಹಾಯ ಸಿಗುತ್ತದೆ ಎಂದು ಭಾವಿಸಿದರು. ಈ ಗರ್ಭಿಣಿ ಮಹಿಳೆ ತನ್ನ ತೋಳುಗಳಲ್ಲಿ ಎರಡು ವರ್ಷದ ಮಗುವನ್ನು ಹೊತ್ತುಕೊಂಡಿದ್ದಳು. ಸ್ವಾಮಿ ಕಾರುಣ್ಯಾನಂದ ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಗುವನ್ನು ಇನ್ನೊಬ್ಬ ಮಹಿಳೆಯ ಆರೈಕೆಯಲ್ಲಿ ಇರಿಸಿದರು.
ಒಂದು ಸಂಜೆ ಆಸ್ಪತ್ರೆಯಲ್ಲಿ ಕೆಲಸ ಮಾಡುವವರೆಲ್ಲರೂ ಚಲನಚಿತ್ರ ನೋಡಲು ಹೋಗಿದ್ದರು. ಅವರು ಮಧ್ಯರಾತ್ರಿಯ ಹೊತ್ತಿಗೆ ಹಿಂತಿರುಗಿದಾಗ, ಆಗ ತಾನೇ ಹುಟ್ಟಿದ ಮಗುವಿನ ಅಳುವಿನ ಕೂಗು ಕೇಳಿ ಬೆಚ್ಚಿಬಿದ್ದರು. ಆ ಸಣ್ಣ ಆಸ್ಪತ್ರೆಯಲ್ಲಿ ಒಬ್ಬ ವೈದ್ಯ ಮತ್ತು ಒಬ್ಬ ನರ್ಸ್ ಮಾತ್ರ ಇದ್ದರು (ಮಗು ಜನಿಸಲು ಇನ್ನೂ ಸಾಕಷ್ಟು ಸಮಯವಿದೆ ಎಂದು ಅವರು ಭಾವಿಸಿದ್ದರು!). ಈ ಮಹಿಳೆ ಅದಾಗಲೇ ಗಂಡು ಮಗುವಿಗೆ ಜನ್ಮ ನೀಡಿದ್ದನ್ನು ಕಂಡು ಅವರಿಬ್ಬರೂ ಧಾವಿಸಿದರು. ಮಗುವನ್ನು ತೊಳೆದು, ಬಿಳಿ ಟವಲ್‌ನಲ್ಲಿ ಸುತ್ತಿ ತೊಟ್ಟಿಲಲ್ಲಿ ಇಡಲಾಗಿತ್ತು. ತಾಯಿಯ ಆರೈಕೆ ಕೂಡ ಸರಿಯಾಗಿ ಮಾಡಲಾಗಿತ್ತು. ಅವರು ತುಂಬಾ ಆಶ್ಚರ್ಯ ಚಕಿತರಾದರು ಮತ್ತು ಅವಳನ್ನು ನೋಡಿಕೊಂಡ ಮಹಿಳೆಯ ಬಗ್ಗೆ ಕೇಳಿದರು. ಆ ಮಹಿಳೆ, “ನಾನು ಹೆರಿಗೆ ನೋವು ತಾಳಲಾರದೆ ಪ್ರಾರ್ಥಿಸಿದೆ. ಅದೃಷ್ಟವಶಾತ್ ಇನ್ನೊಬ್ಬ ನರ್ಸ್ ನನ್ನ ಮಾತು ಕೇಳಿ ಬಂದರು.” “ಏನು…ಯಾವ ನರ್ಸ್?” “ಇಲ್ಲಿ ಬೇರೆ ದಾದಿಯರು ಯಾರೂ ಇಲ್ಲ.” ಎಂದು ಅನುಮಾನದಿಂದ ಕೇಳಿದರು, “ಅದು ನೋಡಿ ಅಲ್ಲಿ. ಆ ಫೋಟೋದಲ್ಲಿ ಇರುವ ಮಹಿಳೆ” ಎಂದು ಗೋಡೆಯ ಮೇಲಿನ ಬಾಬಾ ಚಿತ್ರವನ್ನು ತೋರಿಸುತ್ತಾ ಹೇಳಿದಳು. “ಅವರು ಕೆಲವು ನಿಮಿಷಗಳ ಹಿಂದೆ ಇಲ್ಲಿದ್ದರು, ಈಗ ಅವರು ಇನ್ನೊಬ್ಬ ರೋಗಿಯನ್ನು ನೋಡಲು ಹೋಗಿದ್ದಾರೆ” ಎಂದಳು.
ಸ್ವಾಮಿ ಕಾರುಣ್ಯಾನಂದ ಪುಟ್ಟಪರ್ತಿಗೆ ಹೋದಾಗ ಅವರು ಹೇಳುವ ಮೊದಲೇ ಸ್ವಾಮಿಯು, “ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಳಸುವ ಸಾಮಾಗ್ರಿಯನ್ನು ಹೆಚ್ಚು ಕ್ರಮಬದ್ಧವಾಗಿ ಇರುವಂತೆ ನೋಡಿಕೊಳ್ಳಿ, ನನಗೆ ಬೇಕಾದುದನ್ನು ತೆಗೆದುಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು!” ಎಂದು ಸಹಜವಾಗಿ ಹೇಳಿದರು.