ವಿನಾಶಕ್ಕೆ ದಾರಿ

Print Friendly, PDF & Email
೫. ವಿನಾಶಕ್ಕೆ ದಾರಿ

The Path of Ruin

ದಾನವೇಂದ್ರನಾದ ಲಂಕಾಧಿಪತಿ ರಾವಣನ ಓಲಗವು ಅನುಪಮವಾಗಿತ್ತು. ಅವನು ಇಂದ್ರಾದಿ ದೇವತೆಗಳನ್ನೆಲ್ಲಾ ಜಯಿಸಿದ್ದನು. ಅಷ್ಟ ದಿಕ್ಪಾಲಕರೆಲ್ಲರೂ ಆತನ ಅರಮನೆಯ ದ್ವಾರಪಾಲಕರಾಗಿದ್ದರು. ಆಗ ಆಕಂಪನವೆಂಬ ರಾಕ್ಷಸನೊಬ್ಬನು ಭಯದಿಂದ ಕಂಪಿಸುತ್ತಾ ಆಹ್ವಾನವನ್ನು ಪ್ರವೇಶಿಸಿದನು. ರಾವಣನನ್ನು ಭಕ್ತಿ ಗೌರವಗಳಿಂದ ನಮಿಸುತ್ತಾ ನಿಂತುಕೊಂಡನು. ಆಗ ರಾವಣನು ಗರ್ಜಿಸಿದನು. “ನೀನೇಕೆ ಭಯಪಟ್ಟಿರುವೆ? ಮುಂದೆ ಬಾ. ನನಗೆ ಏನು ಹೇಳಬೇಕಾಗಿದೆ? ನಿರ್ಭಯವಾಗಿ ಹೇಳು.” ಆಕಂಪನನು ನಡುಗುವ ಧ್ವನಿಯಲ್ಲಿ, ರಾಮನು ದಂಡಕಾರಣ್ಯಕ್ಕೆ ಬಂದುದನ್ನೂ, ಅವರು ಶೂರ್ಪಣಖಿಯನ್ನು ವಿರೂಪಗೊಳಿಸಿದ್ದನ್ನೂ, ಖರದೂಷಣ ಮತ್ತು ತ್ರಿಶಿರಸರನ್ನು ನಾಶಪಡಿಸಿದ್ದನ್ನೂ ಹಾಗೂ ಅಲ್ಲಿಯ ಸಮಸ್ತ ರಾಕ್ಷಸ ಬಲವನ್ನು ನಿರ್ಮೂಲಗೊಳಿಸಿದ್ದನ್ನೂ ವಿವರಿಸಿದನು.

ಇದನ್ನು ಕೇಳಿ ರಾವಣನು ಕೋಪದಿಂದ ಕೆಂಡವಾದನು. ತಕ್ಷಣ ಸಿಂಹಾಸನದಿಂದೆದ್ದವನೇ ಘೋಷಿಸಿ ದನು. “ಆ ಕ್ಷುಲ್ಲಕ ಹುಳುವಾದ ರಾಮನನ್ನು ನಾನು ಈ ಕ್ಷಣವೇ ಕೊಲ್ಲುತ್ತೇನೆ.” ಆದರೆ ಆಕಂಪನನು ಆತನನ್ನು ತಡೆದನು. “ಒಡೆಯಾ, ಅದು ಅಷ್ಟು ಸುಲಭವಲ್ಲ. ಪೌರುಷದಲ್ಲಿ ನೀನು ಅವನಿಗೆ ಸಾಟಿಯಾಗಲಾರೆ. ಹಾಗೆ ಹೇಳುತ್ತೇನೆಂದು ಕೋಪಿಸಿಕೊಳ್ಳಬೇಡ, ನನ್ನನ್ನು ಕ್ಷಮಿಸು, ಆದರೆ ಒಂದು ಮಾರ್ಗವಿದೆ. ರಾಮನ ಹೆಂಡತಿ ಸೀತೆ ಅತ್ಯಂತ ರೂಪವತಿಯಾಗಿದ್ದಾಳೆ. ಆ ರೂಪವು ನನ್ನಿಂದ ವರ್ಣಿಸಲಿಕ್ಕೂ ಸಾಧ್ಯವಿಲ್ಲ. ಹೇಗಾದರೂ ಮಾಡಿ ನೀನು ಅವಳನ್ನು ಪಡೆಯಬೇಕೆಂಬುದೇ ನನ್ನ ಸಲಹೆ. ಆಕೆಗಾಗಿ ಅಳುತ್ತಾ ರಾಮನು ಸಾಯುವನು.” ಯೋಚನೆಯಲ್ಲಿ ಮುಳುಗಿದ ರಾವಣನು ಈ ಸಲಹೆಯನ್ನು ಕೇಳಿ ಶಾಂತನಾದನು.

ಮರುದಿನ ಬೆಳಗ್ಗೆ ರಾವಣನು ಮಾರೀಚಾಶ್ರಮಕ್ಕೆ ಹೋದನು. ತನ್ನ ಯೋಚನೆಯ ರೂಪುರೇಖೆಗಳನ್ನು ವಿವರಿಸಿ, ಸೀತೆಯನ್ನು ಕದ್ದೊಯ್ಯುವ ಕಾವ್ಯದಲ್ಲಿ ಸಹಕರಿಸಲು ಮಾರೀಚನನ್ನು ಪ್ರಾರ್ಥಿಸಿದನು.

ಅತ್ಯಂತ ಪ್ರಾಜ್ಞನಾದ ಮಾರೀಚನು ರಾಮನೊಡನೆ ಎದುರಿಸುವುದರಿಂದ ರಾವಣನ ಮನಸ್ಸನ್ನು ತಿರುಗಿಸಲು ಪ್ರಯತ್ನಿಸಿದನು. ಆತನು ಹೇಳಿದನು, “ನನ್ನ ದೊರೆಯೇ, ರಾಮನನ್ನು ನೆನೆಯಬೇಡ, ನೀನು ಆತನೊಡನೆ ಜಗಳ ತೆಗೆದರೆ ಅದೇ ನಿನ್ನ ವಂಶದ ಕೊನೆಯಾಗುತ್ತದೆ. ನಿನ್ನ ವಿವೇಕಕ್ಕೆ ಹಮ್ಮು ಬಿಮ್ಮುಗಳ ಮಬ್ಬು ಮುಸುಕಲು ಅವಕಾಶವೀಯದಿರು. ರಾಮನಾರೆಂಬುದನ್ನು ನಾನು ಬಲ್ಲೆ. ಕೇವಲ ಹದಿನಾರು ವರ್ಷದ ಬಾಲಕನು ನನ್ನ ದೇಹದ ಮೇಲೆ ಮಾಡಿದ ಘಾಯದ ಗುರುತುಗಳನ್ನು ನೋಡು. ನಿನ್ನ ಮತ್ತು ನಿನ್ನ ವಂಶದ ಅಭಿವೃದ್ಧಿಯಾಗಬೇಕೆಂಬುದೇ ನನ್ನ ಆಸೆ. ರಾಕ್ಷಸ ಕುಲದ ನಾಶಕ್ಕಾಗಿ ಮಾಡುವ ಹಂಚಿಕೆಯಲ್ಲಿ ನಾನು ಜೊತೆಗೂಡಲಾರೆ.” ಈ ಮಾತಿಗೆ ಒಡಂಬಟ್ಟು ರಾವಣನು ಲಂಕೆಗೆ ಹಿಂತಿರುಗಿದನು.

ಮಾರನೆಯ ದಿನ ಲಕ್ಷ್ಮಣನಿಂದ ಮುಕ್ಕಾದ ಮೂಗು ಮತ್ತು ಕಿವಿಗಳಿಂದೊಡಗೂಡಿದ ತಂಗಿ ಶೂರ್ಪಣಖಿ ಆತನ ಓಲಗವನ್ನು ಪ್ರವೇಶಿಸಿದಳು. ಮಾನವರಾದ ರಾಮ ಲಕ್ಷ್ಮಣರಿಂದ ತನಗಾದ ಮಾನಭಂಗವನ್ನು ತೋಡಿಕೊಂಡಳಲ್ಲದೆ ಆ ಸಂದರ್ಭದಲ್ಲಿ ಸುಂದರ ತರುಣಿಯಾದ ಸೀತೆಯು ತನ್ನ ದುರವಸ್ಥೆಯನ್ನು ಕಂಡು ಹಾಸ್ಯ ಮಾಡಿ ನಕ್ಕದ್ದನ್ನು ವರ್ಣಿಸಿದಳು.

ಅವಳು ಒಂದೇ ಸಮನೆ ಅತ್ತಳು. ರಾವಣನು ಆಕೆಯನ್ನು ಸಮಾಧಾನಪಡಿಸಲೆಳಸಿದನು. “ನಿನ್ನ ನಷ್ಟವನ್ನು ತುಂಬಿಕೊಡಲು ನಾನೇನು ಮಾಡಬಲ್ಲೆ ಎಂಬುದನ್ನು ನನಗೆ ಹೇಳು.” ಎಂದನು. ಆಕೆ “ಅಣ್ಣಾ ಆ ತರುಣಿ ಸೀತೆಗೆ ಮಾನಭಂಗ ಮಾಡುವ ತನಕ ನಾನು ಊಟ ನಿದ್ರೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಆಕೆಯ ಸೌಂದರ್ಯವನ್ನು ನೋಡಿದೆನೋ ಅಂದೇ ನಾನು ನಿರ್ಧಾರ ಮಾಡಿದೆ. ಆಕೆ ನಿನ್ನ ಅಂತಃಪುರದಲ್ಲಿಯೇ ಇರಬೇಕಾದವಳೆಂದು, ಅವಳನ್ನು ಪಡೆಯಲು ಯೋಗ್ಯನಾದ ವ್ಯಕ್ತಿ ನೀನೇ. ಅಷ್ಟು ಲಾವಣ್ಯವತಿ ಆಕೆ ಆಕೆಯ ಶಬ್ದಗಳು ರಾವಣನು ದುರ್ಬದ್ಧಿಯ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿದವು. ಅವನು ತನ್ನ ತಂಗಿಗೆ, ತಾನು ತಕ್ಷಣವೇ ದಂಡಕಾರಣ್ಯಕ್ಕೆ ಹೋಗಿ ಸೀತೆಯನ್ನು ಲಂಕೆಗೆ ಕದ್ದು ತರುವುದಾಗಿ ಆಶ್ವಾಸನೆಯನ್ನು ನೀಡಿದನು. “ಪ್ರೀತಿಯ ಸೋದರಿಯೇ, ನಾನು ನಿನ್ನನ್ನು ಸಂತೋಷಪಡಿಸುತ್ತೇನೆ. ಹಾಗೆ ಮಾಡದಿದ್ದರೆ ನಾನು ನನ್ನ ಹೆಸರಿಗೂ ಕೀರ್ತಿಗೂ ಯೋಗ್ಯನೆಂದೆನಿಸಿಕೊಳ್ಳಲಾರೆ,” ಎಂದು ಘೋಷಿಸಿದನು.

ಈ ನಿರ್ಧಾರದೊಂದಿಗೆ ಅವನು ಪುನಃ ಮಾರೀಚನ ಸಮೀಪಕ್ಕೆ ತೆರಳಿದನು. ಮಾರೀಚನಿಗೆ ಯಾವುದೋ ಅಶುಭ ಸೂಚನೆ ಕಂಡಿತು. ಆದರೆ ರಾವಣನು ತನ್ನ ಯೋಜನೆಯನ್ನು ಆತನ ಮುಂದೆ ಪ್ರಕಟಿಸಿದನು. ಅದೇನೆಂದರೆ ಮಾರೀಚನು ಸುವರ್ಣ ಜಿಂಕೆಯ ರೂಪವನ್ನು ತಾಳಿ ರಾಮನನ್ನು ಸೀತೆಯ ಸಾನ್ನಿಧ್ಯದಿಂದ ದೂರ ಕರೆದೊಯ್ಯಬೇಕು. ಕಾಡಿನ ಮಧ್ಯದಲ್ಲಿ ರಾಮನು ಬಹುದೂರ ಆತನನ್ನು ಹಿಂಬಾಲಿಸಿ ಬಂದ ಮೇಲೆ ರಾಮನಂತೆ ಸ್ವರವನ್ನು ಮಾಡುತ್ತಾ, ಕೂಗುತ್ತಾ ಲಕ್ಷ್ಮಣನನ್ನು ಸಹ ಆಶ್ರಮದಿಂದ ದೂರ ಹೊರಟು ಹೋಗುವಂತೆ ಮಾಡಬೇಕು. ಸೀತೆ ಆಶ್ರಮದಲ್ಲಿ ಒಬ್ಬಂಟಿಗಳಾಗಿ ಉಳಿಯುವಳು. ಆಗ ಅವಳನ್ನು ರಾವಣನು ಕದ್ದುಕೊಂಡು ಹೋಗುವನು.

ಮಾರೀಚನು ಇದನ್ನು ಕೇಳಿ ಮೂಕವಿಸ್ಮಿತನಾದನು. ಮುಗಿದ ಕೈಗಳಿಂದ ಅವನು ರಾವಣನಿಗೆ ಪ್ರಾರ್ಥಿಸಿಕೊಂಡನು. “ನನ್ನ ದೊರೆಯೇ, ರಾಮಸೀತೆಯರಿಗೆ ಕೇಡು ಬಗೆವ ವಿಚಾರವನ್ನು ದಯವಿಟ್ಟು ಬಿಟ್ಟುಬಿಡು. ನಾನು ಖಚಿತವಾಗಿ ಹೇಳುವೆ. ಅವನು ನಿನ್ನನ್ನು ಸುಮ್ಮನೆ ಬಿಡಲಾರ. ನಿನ್ನನ್ನಲ್ಲದೆ ಸಮಸ್ತ ರಾಕ್ಷಸ ಕುಲವನ್ನೇ ನಾಶ ಮಾಡಿ ಬಿಡುವನು. ನೀನು ರಾಕ್ಷಸ ಕುಲಕ್ಕೆ ಕೀರ್ತಿಯನ್ನು ಸಂಪದವನ್ನೂ ತಂದುಕೊಟ್ಟಿದ್ದೀಯೆ. ಈ ಮೂರ್ಖತನದ ಕಾರ್ಯದಿಂದ ನಿನ್ನನ್ನು ನೀನೇ ಯಾಕೆ ಹಾಳುಮಾಡಿಕೊಳ್ಳುವೆ.”

ಈ ಸಲ ರಾವಣನು ದೃಢನಿರ್ಧಾರದಿಂದಲೇ ಮಾರೀಚನಲ್ಲಿಗೆ ಬಂದಿದ್ದನು. ಯಾರಿಂದಲೂ ಅವನ ಮನಸ್ಸನ್ನು ತಿರುಗಿಸಲು ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲದೆ ಆತನು ಸೀತಾ ವ್ಯಾಮೋಹಕ್ಕೆ ಒಳಗಾಗಿದ್ದನು. ಎಷ್ಟೇ ಪ್ರಮಾಣದಲ್ಲಿ ಯಾವ ಬಗೆಯ ಉಪದೇಶಗಳಿಂದಲೂ ಅವನನ್ನು ಒಪ್ಪಿಸುವಂತಿರಲಿಲ್ಲ. ಅವನು ಮಾರೀಚನ ಕಡೆಗೆ ತಿರುಗಿ ಆಕ್ರೋಶದಿಂದ ಹೇಳಿದನು – “ನಿನ್ನಿಂದ ಉಪದೇಶ ಕೇಳಲು ನಾನಿಲ್ಲಿಗೆ ಬಂದಿಲ್ಲ. ರಾಜನಾಗಿ ನಿನಗೆ ಆಜ್ಞಾಪಿಸಲು ಬಂದಿದ್ದೇನೆ.” ಆಗ ಮಾರೀಚನಿಗೆ ಬೇರೆ ಮಾರ್ಗವೇ ಇಲ್ಲದಾಯಿತು. ರಾವಣನು ವಿನಾಶದ ಪಥವನ್ನು ಆರಿಸಿರುವನೆಂದು ಆತನು ಮನಗಂಡನು. ಅಲ್ಲಿಂದ ಅವನನ್ನು ದೂರ ಸರಿಸಲು ಸಾಧ್ಯವಾದಷ್ಟು ಪ್ರಯತ್ನಿಸಿ ಕೊನೆಗೆ ಮಾರೀಚನು ಹತಾಶನಾದನು. ರಾಜಾಜ್ಞೆಯನ್ನು ಮೀರಿ ರಾವಣನಿಂದ ಮರಣಕ್ಕೆ ಈಡಾಗುವ ಬದಲು ಆತನ ಆಜ್ಞೆಯನ್ನು ಪಾಲಿಸಿ, ದೈವಾಂಶ ಸಂಭೂತನಾದ ರಾಮನಿಂದ ಹತನಾಗುವುದೇ ಮೇಲೆಂದು ಅವನು ನಿಶ್ಚಯಿಸಿದನು.

ಹೀಗೆ ರಾವಣ ಮಾರೀಚರು ತಮ್ಮ ದುಷ್ಟ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ದಂಡಕಾರಣ್ಯದ ಕಡೆಗೆ ತೆರಳಿದರು.

ಪ್ರಶ್ನೆಗಳು
  1. ರಾಮನೊಂದಿಗೆ ಕದನವನ್ನು ಕೈಕೊಳ್ಳಲು ರಾವಣನಿಗೆ ದೊರೆತ ದುರ್ಬೋಧನೆ ಯಾವುದು?
  2. ಮಾರೀಚನು ನೀಡಿದ ಉಪದೇಶವೇನು?

Leave a Reply

Your email address will not be published. Required fields are marked *