ಸಂತರ ಉಪದೇಶ

Print Friendly, PDF & Email
ಸಂತರ ಉಪದೇಶ

ರಮಣ ಮಹರ್ಷಿಗಳು ದಕ್ಷಿಣ ಭಾರತದ ಮಹಾ ಸಂತರಲ್ಲಿ ಒಬ್ಬರಾಗಿದ್ದರು. ಭಾರತದ ಎಲ್ಲಾ ಭಾಗಗಳಿಂದಲೂ, ಅಷ್ಟೇಕೆ ಪರದೇಶಗಳಿಂದಲೂ ಅವರನ್ನು ಕಾಣಲು ಅನೇಕ ಭಕ್ತರು ಬರುತ್ತಿದ್ದರು. ಅವರ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದರು.

ಒಂದು ದಿನ ರಮಣ ಮಹರ್ಷಿಗಳು ಆಶ್ರಮವಾಸಿಗಳ ರಾತ್ರಿ ಊಟಕ್ಕಾಗಿ ಪತ್ರಾವಳಿ ಮಾಡಲು ಒಣಗಿದ ಎಲೆಗಳನ್ನು ಆರಿಸಿ ಜೋಡಿಸುತ್ತಿದ್ದರು. ಅದನ್ನು ನೋಡಿದ ತರುಣ ಭಕ್ತನೊಬ್ಬನು ಆಶ್ಚಯ೵ದಿಂದ ಕೇಳಿದನು, “ಭಗವಾನ್, ತಾವು ಎಲೆ ಹಚ್ಚುತ್ತೀರಾ? ಇದು ಅನಗತ್ಯವಾದ ಕೆಲಸವಲ್ಲವೆ? ತಮ್ಮ ಅಮೂಲ್ಯವಾದ ವೇಳೆ ಹಾಳಲ್ಲವೆ?” ಭಗವಾನರು ಮುಗುಳ್ನಗೆಯಿಂದ ಉತ್ತರಿಸಿದರು. “ಮಗು ಒಳ್ಳೆಯ ಉದ್ದೇಶದಿಂದ ಸರಿಯಾದ ರೀತಿಯಲ್ಲಿ ಮಾಡುವ ಯಾವ ಕೆಲಸವೂ ವೇಳೆಯನ್ನು ಹಾಳು ಮಾಡುವುದಿಲ್ಲ, ಈ ಎಲೆ ಹಚ್ಚುವ ಕೆಲಸವನ್ನೇ ಉದಾಹರಣೆಗೆ ತೆಗೆದುಕೋ. ಹಸಿದವರಿಗೆ ಅನ್ನ ನೀಡಲು ಇವು ಮಹತ್ವದವಾಗುತ್ತವೆ, ಊಟವಾದ ಮೇಲೆ ಅವು ಮಹತ್ವ ಕಳೆದುಕೊಳ್ಳುತ್ತವೆ, ಅವುಗಳನ್ನು ಎಸೆದು ಬಿಡುತ್ತಾರೆ. ಹಾಗೆಯೇ ನಮ್ಮ ಶರೀರವನ್ನೂ, ನಾವು ಒಳ್ಳೆಯ ಜೀವನ ನಡೆಸಲು ಬಳಸಿಕೊಂಡರೆ, ಅಗತ್ಯವಿದ್ದವರ ಸೇವೆಗಾಗಿ ಉಪಯೋಗಿಸಿಕೊಂಡರೆ ಅದು ಮಹತ್ವದ್ದಾಗುತ್ತದೆ. ಸ್ವಾರ್ಥಿಯಾದ ಮನುಷ್ಯನು ತನಗಾಗಿ ಮಾತ್ರ ಬದುಕುತ್ತಾನೆ. ಅಂಥವನು ನೂರು ವರ್ಷ ಬದುಕಿದರೂ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ಕುರಿ, ಆಡುಗಳಿಗಿಂತ ಅವನು ಯಾವ ರೀತಿಯಲ್ಲೂ ಹೆಚ್ಚಿನವನಲ್ಲ. ಏಕೆಂದರೆ ಅವು ತಿನ್ನುತ್ತವೆ, ಬೆಳೆಯುತ್ತವೆ, ಬದುಕುತ್ತವೆ.

ಇನ್ನೊಂದು ಸಲ ರಮಣಮಹರ್ಷಿಗಳು ಅಡಿಗೆ ಮನೆಯಲ್ಲಿ ನೆಲದ ಮೇಲೆ ಕೆಲವು ಅಕ್ಕಿ ಕಾಳು ಬಿದ್ದಿರುವುದನ್ನು ಕಂಡರು. ಅವರು ತಕ್ಷಣವೆ ಕುಳಿತುಕೊಂಡು ಒಂದೊಂದೇ ಅಕ್ಕಿಕಾಳನ್ನು ಆರಿಸಹತ್ತಿದರು. ಮಹರ್ಷಿಗಳು ಏನು ಮಾಡುವರೆಂದು ನೋಡಲು ಅನೇಕ ಭಕ್ತರು ನೆರೆದರು. ಪರಮಾತ್ಮನಿಗಾಗಿ ಮನೆ ಮಾರನ್ನೆಲ್ಲ ತೊರೆದು ಬಂದ ಭಗವಾನರಂಥ ಮಹಾಸಂತರು ಕೆಲವು ಅಕ್ಕಿಕಾಳುಗಳಿಗೆ ಇಷ್ಟೊಂದು ಮಹತ್ವ ಕೊಡುವರೆಂಬುದನ್ನು ಅವರಿಗೆ ನಂಬುವುದೇ ಕಠಿಣವಾಯಿತು.

ಆ ಭಕ್ತರಲ್ಲೊಬ್ಬನು ಕೇಳಿಯೇ ಬಿಟ್ಟನು. “ಭಗವಾನ್, ಅಡಿಗೆ ಮನೆಯಲ್ಲಿ ಬೇಕಾದಷ್ಟು ಅಕ್ಕಿಯ ಮೂಟೆಗಳಿವೆ. ಈ ಕೆಲವು ಅಕ್ಕಿ ಕಾಳುಗಳಿಗಾಗಿ ಇಷ್ಟೊಂದು ತೊಂದರೆಯನ್ನೇಕೆ ತಾವು ತೆಗೆದುಕೊಳ್ಳುವಿರಿ?” ಮಹರ್ಷಿಗಳು ಮುಖ ಮೇಲಕ್ಕೆತ್ತಿ ನೋಡಿ ಹೇಳಿದರು. “ನೀನು ಕೆಲವು ಅಕ್ಕಿಕಾಳುಗಳನ್ನು ಮಾತ್ರ ಇಲ್ಲಿ ನೋಡುತ್ತಿದ್ದೀಯೆ. ಈ ಕಾಳುಗಳಲ್ಲೇನಿದೆ ಎಂಬುದನ್ನು ನೋಡಲು ಪ್ರಯತ್ನಿಸು. ಹೊಲವನ್ನು ಉತ್ತಿ, ಬಿತ್ತಿ, ಬೆಳೆದ ರೈತನ ಕಷ್ಟದ ದುಡಿಮೆ ಅಲ್ಲಿದೆ. ಸಾಗರದ ನೀರು, ಸೂರ್ಯನ ಕಾವು, ಮೋಡದ ಮಳೆ, ತಂಪುಗಾಳಿ, ಎಳೆ ಬಿಸಿಲು, ಭತ್ತದ ಪೈರಿನ ಜೀವನ ಎಲ್ಲವೂ ಈ ಕಾಳುಗಳಲ್ಲಿ ಉಂಟು. ಇದೆಲ್ಲವನ್ನೂ ನೀನು ಸಂಪೂರ್ಣವಾಗಿ ತಿಳಿದುಕೊಂಡರೆ ಇಲ್ಲಿಯ ಒಂದೊಂದು ಕಾಳಿನಲ್ಲಿಯೂ ಪರಮಾತ್ಮನ ಕೈವಾಡವನ್ನು ಕಾಣುತ್ತೀ. ಆದ್ದರಿಂದ ಅವುಗಳನ್ನು ತುಳಿದು ಹಾಳು ಮಾಡಬೇಡ. ನಿನಗೆ ತಿನ್ನಲು ಆಗದಿದ್ದರೆ ಪಕ್ಷಿಗಳಿಗಾದರೂ ನೀಡು.”

(ಪತ್ರಾವಳಿ – ಊಟ ಮಾಡಲು ಒಣಗಿದ ಮುತ್ತುಗ, ಹಲಸು ಮೊದಲಾದ ಎಲೆಗಳನ್ನು ಒಂದಕ್ಕೊಂದು ಜೋಡಿಸಿ, ಕಡ್ಡಿ ಚುಚ್ಚಿ, ಅಗಲವಾಗಿ ಹೊಲಿದು ಮಾಡುವ ಊಟದೆಲೆ.)

ಪ್ರಶ್ನೆಗಳು:
  1. ಸಂತರು ಇತರರಿಗಿಂತ ಹೇಗೆ ಭಿನ್ನವಾಗಿರುತ್ತಾರೆ?
  2. ಸಂತರನ್ನು ಎಲ್ಲರೂ ಏಕೆ ಗೌರವಿಸುತ್ತಾರೆ?
  3. ನೀವು ನೋಡಿದ ಅಥವಾ ಕೇಳಿದ ಅಥವಾ ಓದಿದ ಯಾವುದಾದರೂ ಒಬ್ಬ ಸಂತರ ಬಗ್ಗೆ ಬರೆಯಿರಿ. ನೀವು ಅವರಿಂದ ಏನು ಕಲಿತಿರಿ?
  4. ರಮಣ ಮಹಷಿ೵ಯ ಪ್ರಕಾರ ಯಾವಾಗ ಜೀವನ ಮಹತ್ವದ್ದಾಗುತ್ತದೆ? ಯಾವಾಗ ಜೀವನ ಹಾಳಾಗುತ್ತದೆ?
  5. ಪ್ರತಿಯೊಂದು ಕಾಳಿನಲ್ಲೂ ಪರಮಾತ್ಮನ ಕೈವಾಡವನ್ನು ಹೇಗೆ ಕಾಣಬಹುದು?

Leave a Reply

Your email address will not be published. Required fields are marked *