ವೃಕ್ಷ (ಮರ)

Print Friendly, PDF & Email

ವೃಕ್ಷ (ಮರ)

ಮಕ್ಕಳೇ! ನಿಮ್ಮ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿಕೊಂಡು, ‘ಹೂ’ ಮತ್ತು ‘ಹ’ ಎಂಬ ಶಬ್ದಗಳನ್ನು ಮೂರು ಬಾರಿ ಉಚ್ಚರಿಸಿ. ನೀವೀಗ ಲವಲವಿಕೆಯಿಂದ ಕೂಡಿ ಉಲ್ಲಾಸ ಭರಿತರಾಗಿರುವಿರಿ.

ನೀವು ಒಂದು ಉದ್ಯಾನವನಕ್ಕೆ ಬಂದಿರುವಂತೆ ಮನಸ್ಸಿನಲ್ಲಿ ಊಹಿಸಿಕೊಳ್ಳಿ. ನಿಮ್ಮ ಸುತ್ತಲೂ ಕಾಣಬರುತ್ತಿರುವ ವಿವಿಧ ಬಣ್ಣಗಳ ಸುಂದರವಾದ ಹೂವುಗಳನ್ನೂ ಅವುಗಳ ಸುತ್ತಲೂ ಹಾರಾಡುತ್ತಿರುವ ಚಿಟ್ಟೆಗಳನ್ನೂ ಗಮನಿಸಿ. ನಿಮ್ಮ ಸುತ್ತಲೂ ಎಲ್ಲೆಲ್ಲೂ ಹಸಿರೇ ಹಸಿರು. ಬನ್ನಿ! ನಾವೆಲ್ಲರೂ ಆ ದೊಡ್ಡ ವೃಕ್ಷದ ನೆರಳಿನಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳೋಣ.

ಈ ವೃಕ್ಷದ ದೊಡ್ಡದಾದ, ದಪ್ಪ ಬೇರುಗಳನ್ನು ಗಮನಿಸಿ. ಈ ಬೇರುಗಳೇ ಮರಕ್ಕೆ ಅಗತ್ಯವಾಗಿ ಬೇಕಾದ ನೀರು ಮತ್ತು ಖನಿಜಾಂಶಗಳನ್ನು ಪೂರೈಸುತ್ತವೆ. ಆಹಾ! ಎಲೆಗಳು ತುಂಬಿರುವ ಇದರ ಕೊಂಬೆಗಳನ್ನೂ ಅಲ್ಲಿ ಬೆಳೆದಿರುವ ಹೂವು, ಹಣ್ಣು ಗಳನ್ನೂ ಗಮನಿಸಿ. ಮರವು ತನ್ನ ನೆರಳನ್ನು ಕೊಟ್ಟು ಉರಿಬಿಸಿಲಿನಿಂದ ನಮ್ಮನ್ನು ರಕ್ಷಿಸುತ್ತಿದೆ! ಇದರಲ್ಲಿ ಗೂಡುಕಟ್ಟಿಕೊಂಡಿರುವ ಹಕ್ಕಿಗಳು ಆನಂದದಿಂದ ಚಿಲಿಪಿಲಿಗುಟ್ಟುತ್ತಿವೆ. ಬೀಸುತ್ತಿರುವ ಮಂದ ಮಾರುತದಲ್ಲಿ, ಎಲೆಗಳು ಆನಂದದಿಂದ ತೂಗುತ್ತಾ ನರ್ತಿಸುವಂತಿದೆ. ಓ! ಮರದಿಂದ ಕೆಳಗೆ ಬಿದ್ದಿರುವ ಹಣ್ಣುಗಳನ್ನು ಗಮನಿಸಿ. ಹಕ್ಕಿಗಳು ಮತ್ತು ಅಳಿಲುಗಳು ಅದೆಷ್ಟು ಸಂತೋಷವಾಗಿ ಅವುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ! ಈ ವೃಕ್ಷವು ಅದೆಷ್ಟು ಬಲಿಷ್ಠವಾಗಿದೆ! ಆದರೆ ಇದಕ್ಕೆ ಅದೆಷ್ಟು ವಿನಯ! ಇದು ನಮ್ಮ ಆಪ್ತ ಸ್ನೇಹಿತ. ಇದನ್ನು ಪ್ರೀತಿಯಿಂದ ಅಪ್ಪಿಕೊಳ್ಳೋಣ, ಬನ್ನಿ!

ಮರಗಳನ್ನು ನೋಡಿದಾಗಲೆಲ್ಲಾ ನಾವು ‘ಪ್ರೇಮ’ ಎಂಬ ಮೌಲ್ಯವನ್ನು ನೆನಪಿಸಿಕೊಳ್ಳಬೇಕು ,ಅದನ್ನು ಬೆಳೆಸಿಕೊಳ್ಳಲೂ ಬೇಕು. ಈ ಮರಗಳನ್ನು ಕಡಿದೇ ನಿಮಗೆ ಅಗತ್ಯವಾದ ಕಾಗದ, ಪೆನ್ಸಿಲ್ ಮೊದಲಾದ ಉಪಯೋಗಕರ ವಸ್ತುಗಳನ್ನು ತಯಾರಿಸುವರು. ವಿದ್ಯಾರ್ಥಿಗಳಾದ ನೀವು ನಿಮಗೆ ಅಗತ್ಯವೆನಿಸುವಷ್ಟು ಕಾಗದ ಮತ್ತು ಪೆನ್ಸಿಲ್ ಗಳನ್ನು ಬಳಸಿ, ಆದರೆ ವ್ಯರ್ಥಮಾಡದಿರಿ. ಇದೇ ನಮ್ಮ ಈ ಭೂಮಿಯನ್ನು ಕಾಪಾಡಿಕೊಳ್ಳುವ ಅತ್ಯುತ್ತಮ ಮಾರ್ಗ. ನಮ್ಮಲ್ಲಿರುವ ‘ಪ್ರೇಮ’ವನ್ನು ಎಲ್ಲಾ ಗಿಡಮರಗಳಿಗೂ, ಸಮಸ್ತ ಜೀವಿಗಳಿಗೂ ಹಾಗೂ ಇಡೀ ಜಗತ್ತಿಗೂ ಕಳುಹಿಸೋಣ.

ವೇಳೆಯಾಯಿತು. ನಾವೀಗ ನಮ್ಮ ತರಗತಿಗೆ ಹಿಂತಿರುಗಿ, ನಮ್ಮ ನಮ್ಮ ಸ್ಥಳಗಳಲ್ಲಿ ಆಸೀನರಾಗೋಣ ಈಗ ನಿಧಾನವಾಗಿ, ನಿಮ್ಮ ಕಣ್ಣುಗಳನ್ನು ತೆರೆಯಿರಿ.

ಚಟುವಟಿಕೆ:

ಮರಗಳ ಚಿತ್ರವನ್ನು ಬರೆಯುವಂತೆ ಮಕ್ಕಳಿಗೆ ಹೇಳುವುದು.

[Source : Early Steps to Self Discovery Step – 2, Institute of Sathya Sai Education (India), Dharmakshetra, Mumbai.]

Leave a Reply

Your email address will not be published. Required fields are marked *