ಕಲ್ಲಲ್ಲೂ ದೇವರನ್ನು ಕಾಣು, ಆದರೆ ದೇವರನ್ನು ಕಲ್ಲೆಂದು ಭಾವಿಸದಿರು
ಕಲ್ಲಲ್ಲೂ ದೇವರನ್ನು ಕಾಣು, ಆದರೆ ದೇವರನ್ನು ಕಲ್ಲೆಂದು ಭಾವಿಸದಿರು
ದಕ್ಷಿಣೇಶ್ವರದ ಕಾಳಿ ಮಾತೆಯ ದೇವಾಲಯದ ಎರಡೂ ಪಕ್ಕಗಳಲ್ಲೂ ಹನ್ನೆರಡು ಶಿವ ದೇವಾಲಯಗಳು ಹಾಗೂ ರಾಧಾ ಗೋವಿಂದನ ಮಂದಿರವೂ ಇವೆ. ಪ್ರತ್ಯೇಕ ಪೂಜಾರಿಗಳು, ಪ್ರತಿದಿನವೂ ಅವುಗಳಲ್ಲಿರುವ ದೇವ ದೇವಿಯರಿಗೆ ಪೂಜೆ ಮಾಡುತ್ತಾರೆ.
ಶ್ರೀ ರಾಮಕೃಷ್ಣರು, ಕಾಳಿ ಮಾತೆಯ ದೇವಾಲಯದಲ್ಲಿ ಸೇವೆ ಸಲ್ಲಿಸಲು ಪ್ರಾರಂಭಿಸಿ ಕೆಲವು ದಿನಗಳು ಕಳೆದಿದ್ದವು. ಆಗೊಂದು ದಿನ ಒಂದು ಆಕಸ್ಮಿಕ ಘಟನೆಯು ಸಂಭವಿಸಿತು.
ಅಂದು ‘ನಂದೋತ್ಸವ,’ ಶ್ರೀ ಕೃಷ್ಣನ ಜನ್ಮೋತ್ಸವದ ಆಚರಣೆ ನಡೆದ ಮರುದಿನ. ಮಧ್ಯಾಹ್ನದ ಪೂಜೆಯು ಮುಗಿದಿತ್ತು. ರಾಧಾ ಗೋವಿಂದನ ದೇವಾಲಯದಲ್ಲಿ ಪೂಜಾರಿಗಳು, ಗೋವಿಂದಜೀ ವಿಗ್ರಹವನ್ನು ಶಯ್ಯೆಯ ಮೇಲೆ ಮಲಗಿಸಿ, ಸೇವೆ ಮಾಡಲೆಂದು ಎತ್ತಿಕೊಂಡು ಹೋಗುತ್ತಿದ್ದರು. ಅಕಸ್ಮಾತ್ ಕಾಲು ಜಾರಿ, ಕೆಳಗೆ ಬಿದ್ದರು. ಕೈಯಲ್ಲಿದ್ದ ಗೋವಿಂದನ ವಿಗ್ರಹವೂ ಕೆಳಗೆ ಬಿದ್ದು, ಅದರ ಕಾಲು ಮುರಿಯಿತು. ಶಾಸ್ತ್ರಗಳ ಪ್ರಕಾರವಾಗಿ, ಮುರಿದ ವಿಗ್ರಹಕ್ಕೆ ಪೂಜೆ ಮಾಡುವಂತಿರಲಿಲ್ಲ. ಆ ವಿಷಯವನ್ನು ರಾಣಿ ರಾಸಮಣಿ ಹಾಗೂ ಮಥುರ್ ಬಾಬು ಅವರಿಗೆ ತಿಳಿಸಲಾಯಿತು.
ಮುಂದೇನು ಮಾಡಬೇಕೆಂದು ತಿಳಿದುಕೊಳ್ಳಲು, ಅವರು ಹಲವು ಪಂಡಿತರನ್ನು ಕರೆಯಿಸಿದರು. ವಿಷಯದ ಬಗ್ಗೆ ಚರ್ಚೆಮಾಡಿದ ಆ ಪಂಡಿತರು, ಮುರಿದ ವಿಗ್ರಹವನ್ನು ಗಂಗಾನದಿಯಲ್ಲಿ ವಿಸರ್ಜಿಸಿ, ಅದರ ಬದಲಿಗೆ ಬೇರೊಂದು ಹೊಸ ವಿಗ್ರಹವನ್ನು ಮಾಡಿಸಿ ಪೂಜೆಸಲ್ಲಿಸಬೇಕೆಂದು ಒಮ್ಮತದ ಅಭಿಪ್ರಾಯ ನೀಡಿದರು.
ಅಲ್ಲಿಯೇ ಕುಳಿತು, ನಡೆಯುತ್ತಿದ್ದುದನ್ನೆಲ್ಲ ಆಲಿಸುತ್ತಿದ್ದ ಶ್ರೀ ರಾಮಕೃಷ್ಣರು, ಅವರಿಗೆ ಒಂದು ಪ್ರಶ್ನೆ ಹಾಕಿದರು, “ಒಂದುವೇಳೆ, ನಿಮ್ಮ ಮನೆಯವರಾರಿಗಾದರು ಹೀಗೆ ಕಾಲು ಮುರಿದು ಹೋದರೆ, ಅವರನ್ನು ಕೂಡ ಗಂಗೆಗೆ ತಳ್ಳುವಿರೇನು?” ಎಂದು.
ತಾವು ಇದರ ಬಗ್ಗೆ ಶ್ರೀ ರಾಮಕೃಷ್ಣರ ಅಭಿಪ್ರಾಯವನ್ನು ಕೇಳಲೇ ಇಲ್ಲವೆಂದು ಮಾಥುರ್ ಬಾಬುವಿಗೆ ಥಟ್ಟನೆ ಹೊಳೆಯಿತು. ಅವರು ಕೂಡಲೇ ಶ್ರೀ ರಾಮಕೃಷ್ಣರ ಅಭಿಪ್ರಾಯವೇನೆಂದು ಕೇಳಲು, ಅವರು ಉತ್ತರಿಸಿದರು, “ಒಂದು ವೇಳೆ ರಾಣಿ ರಾಸಮಣಿಯವರ ಅಳಿಯಂದಿರಲ್ಲಿ, ಯಾರಿಗಾದರೂ ಹೀಗೆ ಕಾಲು ಮುರಿದು ಹೋಗಿದ್ದಲ್ಲಿ, ಅವರನ್ನು ಹೊರಗೆ ತಳ್ಳಿ, ಇನ್ನೊಬ್ಬ ಹೊಸ ಅಳಿಯನನ್ನು ತರುವಿರಾ? ಅಥವಾ ವೈದ್ಯರನ್ನು ಕರೆಯಿಸಿ, ಅದನ್ನು ಸರಿಪಡಿಸುವ ಪ್ರಯತ್ನ ಮಾಡುವಿರಾ? ಇದೂ ಸಹ ಹಾಗೆಯೆ. ವಿಗ್ರಹದ ಕಾಲನ್ನು ಸರಿಪಡಿಸಿ, ಮೊದಲಿನಂತೆಯೇ ಅದಕ್ಕೆ ಪೂಜೆ ಮಾಡಬೇಕು,” ಎಂದು.
ದೇವರನ್ನು ನಮ್ಮ ಸಮೀಪ ಬಂಧು, ಆತ್ಮೀಯನೆಂದು ಭಾವಿಸಿ, ಅವನೇ ನಮ್ಮ ತಂದೆ, ತಾಯಿ, ಮಗು ಎಂದು ಪೂಜಿಸಬೇಕೇ ವಿನಃ, ಅವನನ್ನು ಕೇವಲ ಒಂದು ವಿಗ್ರಹವೆಂದು ಭಾವಿಸಬಾರದು ಎಂಬ ಸತ್ಯದ ಅರಿವು ಅಲ್ಲಿದ್ದವರಿಗೆಲ್ಲರಿಗೂ ಆಯಿತು.
ಶ್ರೀ ರಾಮಕೃಷ್ಣರು, ತಾವೇ ಮುಂದೆ ನಿಂತು, ವಿಗ್ರಹದ ಮುರಿದಿದ್ದ ಕಾಲನ್ನು ಸರಿಪಡಿಸಿ, ಮತ್ತೆ ಅದು ಸುಂದರವಾಗಿ ಕಂಗೊಳಿಸುವಂತೆ ಮಾಡಿದರು.
ಪ್ರಶ್ನೆಗಳು
- ಶ್ರೀ ಕೃಷ್ಣನ ಕಾಲು ಮುರಿದ ವಿಗ್ರಹದ ಬಗ್ಗೆ ಪಂಡಿತರು ವ್ಯಕ್ತಪಡಿಸಿದ ಅಭಿಪ್ರಾಯವು ಏನು?
- ಅದರ ಬಗ್ಗೆ ಶ್ರೀ ರಾಮಕೃಷ್ಣರ ಅಭಿಪ್ರಾಯವು ಹೇಗಿತ್ತು?
- ಈ ಕಥೆಯಲ್ಲಿ ಅಡಗಿರುವ ನೀತಿ ಏನು?