ತ್ವಮೇವ ಮಾತಾ – ಹೆಚ್ಚುವರಿ ಮಾಹಿತಿ

Print Friendly, PDF & Email
ತ್ವಮೇವ ಮಾತಾ- ಹೆಚ್ಚುವರಿ ಮಾಹಿತಿ
ವಿವರಣೆ:

ಒಬ್ಬ ಮನುಷ್ಯ ಸತ್ತಾಗ, ಆತನ ಲೌಕಿಕ ಆಸ್ತಿಗಳು ಮನೆಬಾಗಿಲಿನವರೆಗೂ ಜೊತೆಯಲ್ಲಿರುತ್ತವೆ. ಶವ ಸಂಸ್ಕಾರ ಮಾಡುವವರೆಗೆ ಮಾತ್ರ ಆತನ ಸಂಬಂಧಿಕರು ಜೊತೆಯಲ್ಲಿರುತ್ತಾರೆ. ಆದರೆ ಸದ್ಗುರು ಭಗವಂತ ಮಾತ್ರ ಎಲ್ಲರಿಗೂ ಮಿಗಿಲಾಗಿ ಆತನ ಜೊತೆಯಲ್ಲಿ ಬರುತ್ತಾನೆ.

ಆದ್ದರಿಂದ, ಭಗವಂತನೇ ನಮಗಿರುವ ಏಕೈಕ ನಿಜವಾದ ಸ್ನೇಹಿತ, ಸಂಬಂಧಿ ಹಾಗೂ ಸಂಪತ್ತು. ಯಾವ ಸರ್ವೋತ್ತಮ ಸಾರ್ವಭೌಮ ಪುರುಷನಲ್ಲಿ ಎಲ್ಲಾ ಅಂಶಗಳು ನೆಲೆಸಿರುವವೋ, ಯಾರು ಸಮಸ್ತ ಸೃಷ್ಟಿಯ ಅಂತರ್ಯಾಮಿ ಮತ್ತು ಆಂತರಿಕ ಪ್ರೇರಕನಾಗಿರುವನೋ, ಅಂತಹ ಪರಮಾತ್ಮನನ್ನು ಅರಿತುಕೊಳ್ಳಲು ಮತ್ತು ಅನುಭವಕ್ಕೆ ತಂದುಕೊಳ್ಳಲು ಆತನಲ್ಲಿ ಶರಣಾಗತರಾಗಿ ಆತನ ಕೃಪೆಗೆ ಪಾತ್ರರಾಗುವುದರ ಹೊರತು ಬೇರೆ ಮಾರ್ಗವಿಲ್ಲ.

ಆತನ ಪರಮಾವಧಿಯನ್ನು ಮತ್ತು ಸರ್ವಾಂತರ್ಯಾಮಿತ್ವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ನಿಮ್ಮಲ್ಲಿರುವ ನ್ಯೂನತೆಗಳನ್ನು ಅರಿತು, ಅಹಂಕಾರವನ್ನು ತ್ಯಜಿಸಿ, ಆತನ ಮಹಿಮೆಯಲ್ಲಿ ಪಾಲ್ಗೊಳ್ಳಿ. ಸಾಧಕರ ಮಾನಸಿಕ ವರ್ತನೆ ಹೀಗಿರಬೇಕು-‘ತ್ವಮೇವ ಸರ್ವಂ ಮಮ ದೇವ ದೇವ’- ‘ನೀವೇ ನನ್ನ ಸರ್ವಸ್ವ, ದೇವತೆಗಳಿಗೆಲ್ಲಾ ದೇವರಾದ ಓ ನನ್ನ ದೇವರೇ.’

ತುಳಸಿದಾಸರ ಕಥೆ:

ಇದು ಪ್ರಸಿದ್ಧ ಸಂತ ಕವಿ ತುಳಸಿದಾಸರ ಕಥೆ. ಅವರೊಬ್ಬ ಅನಾಥ ಶಿಶುವಾಗಿದ್ದರು. ಅವರನ್ನು ಅವರ ತಾಯಿಯ ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದರು. (ಆಗ ಅವರನ್ನು ‘ಮುನ್ನಾ’ ಎಂದು ಕರೆಯುತ್ತಿದ್ದರು) ಮಗು ಕೇಳಿದಾಗಲೆಲ್ಲಾ ಆತನ ತಂದೆ ತಾಯಿ ರಾಮ್‌ಜೀ (ಶ್ರೀರಾಮ) ಎಂದು ಚಿಕ್ಕಪ್ಪ ಹೇಳುತ್ತಿದ್ದರು. ಪೋಷಕರು ಯಾವಾಗಲೂ ಮಗುವಿನೊಂದಿಗೆ ಇರುವರೆಂದೂ ಪ್ರತ್ಯೇಕವಾಗಿ ಅಲ್ಲವೆಂದೂ ಮುನ್ನಾ ಸ್ವಲ್ಪ ದೊಡ್ಡವರಾದಾಗ ಅರಿತರು. ಅವರ ತಂದೆ ತಾಯಿಯಾದ ‘ರಾಮ್ ಜೀ’ ತಮ್ಮನ್ನು ಒಬ್ಬಂಟಿಯಾಗಿ ಬಿಟ್ಟು ದೇವಸ್ಥಾನದಲ್ಲಿ ಅನೇಕ ಜನರಿಂದ ಸುತ್ತುವರಿದು ವೈಭವದಿಂದ ಹೇಗೆ ವಾಸಿಸುತ್ತಿರುವರೆಂದು ಅವರಿಗೆ ಸೋಜಿಗವಾಯಿತು. ತುಳಸೀದಾಸರು ಮುಗ್ಧರಾಗಿದ್ದರಿಂದ ತಮ್ಮ ಚಿಕ್ಕಪ್ಪನ ಮಾತುಗಳನ್ನು ಸತ್ಯವೆಂದು ನಂಬಿದ್ದರು.

ಒಂದು ರಾತ್ರಿ ಅವರು ದೇವಸ್ಥಾನದ ಕಿಟಕಿಯಿಂದ ತೆವಳಿ ರಾಮನ ಪ್ರತಿಮೆಯನ್ನು ತಲುಪಿದರು. ಅವರಿಗೆ ಹಸಿವು ಮತ್ತು ಬಾಯಾರಿಕೆಯಾಗಿತ್ತು. ಆದ್ದರಿಂದ ಅವರು ಆಹಾರ ಬೇಕೆಂದು ಅಳಲು ಪ್ರಾರಂಭಿಸಿದರು. ಭಗವಾನ್ ರಾಮ್‌ಜಿ ನಿಜವಾಗಿಯೂ ಅವರ ತಂದೆ ತಾಯಿಯರು ಎಂಬುದರಲ್ಲಿ ತುಳಸಿದಾಸರಿಗೆ ಯಾವುದೇ ಸಂದೇಹವಿರಲಿಲ್ಲ. ಆದರೂ ಏಕೆ ಅವರು ತಮ್ಮ ಮಗುವನ್ನು ನೋಡಿಕೊಳ್ಳುತ್ತಿಲ್ಲ ಮತ್ತು ಏಕಾಂಗಿಯಾಗಿ ಬದುಕುತ್ತಿರುವುದೇಕೆ ಎಂದು ರಾಮ್‌ಜೀಯನ್ನು ಕೇಳಿದರು. ಆದರೆ ವಿಗ್ರಹವು ಉತ್ತರಿಸಲಿಲ್ಲ.

ಮಗು ತನ್ನ ಹೆತ್ತವರೊಂದಿಗೆ ಬದುಕಬೇಕು ಎಂದು ಪ್ರಾಮಾಣಿಕವಾಗಿ ನಂಬಿದ್ದ ತುಳಸೀದಾಸರು ಪ್ರತಿಮೆಯನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಲು ಯೋಚಿಸಿದರು. ಅವರು ಪ್ರತಿಮೆಯನ್ನು ತೆಗೆದುಕೊಂಡು ಹೋಗುತ್ತಿದ್ದಾಗ, ಪುರೋಹಿತರು ಸದ್ದು-ಗದ್ದಲವನ್ನು ಕೇಳಿ ಎಚ್ಚರಗೊಂಡರು. ಅವರು ತುಳಸೀದಾಸರನ್ನು ನಿಲ್ಲುವಂತೆ ಹೇಳಿದರು. ಆದರೆ ಅವರು ತಮ್ಮ ತಂದೆ ತಾಯಿಯರನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆಂದೂ ಅರ್ಚಕರಿಗೆ ತಮ್ಮ ರಾಮ್‌ಜೀಯನ್ನು ದೇವಸ್ಥಾನದಲ್ಲಿ ಇಟ್ಟುಕೊಳ್ಳುವ ಹಕ್ಕಿಲ್ಲ ಎಂದೂ ಉತ್ತರಿಸಿದರು.

ಪುರೋಹಿತರು ಅವರ ಬೆನ್ನಟ್ಟಿದರು. ತುಳಸಿದಾಸರು ಸಾಧ್ಯವಾದಷ್ಟು ವೇಗವಾಗಿ ಓಡಿದರು. ಈ ರೀತಿ ಓಡುವಾಗ ಅವರು ತುಳಸಿ ತೋಟದಲ್ಲಿ ಪ್ರಜ್ಞೆ ತಪ್ಪಿ ಬಿದ್ದರು. ಕರುಣಾಮಯಿ ಭಗವಂತ ಮಗುವಿನ ಪ್ರೀತಿ ಮತ್ತು ಪ್ರಾಮಾಣಿಕತೆಯಿಂದ ಭಾವೋದ್ವೇಗಗೊಂಡ. ಭಗವಂತನ ಕೃಪೆಯಿಂದ ಸಂತ ರಮಾನಂದರು ಬಂದರು, ಅವರು ಮಗುವನ್ನು ಎತ್ತಿ ಸಮಾಧಾನಪಡಿಸಿದರು. ಅವರು ತುಳಸಿ ತೋಟದಲ್ಲಿ ಹುಡುಗನನ್ನು ಕಂಡುಕೊಂಡ ಕಾರಣ, ತುಳಸಿದಾಸ್ ಎಂದು ಹೆಸರಿಟ್ಟರು. ಸಂತ ರಮಾನಂದರು ಮಗುವಿಗೆ ಆ ದಿನದಿಂದ ತಂದೆ ಮತ್ತು ತಾಯಿಯಾಗಿ ರಾಮ್‌ಜೀಯೇ ತಮ್ಮನ್ನು ಕಳುಹಿಸಿದ್ದಾರೆ ಎಂದು ಹೇಳಿದರು.

ಅಂದಿನಿಂದ ಅವರನ್ನು ತುಳಸಿದಾಸ್ ಎಂದು ಕರೆಯಲಾಯಿತು. ಸಂತ ರಮಾನಂದರು ಮಗುವನ್ನು ನೋಡಿಕೊಳ್ಳುವುದಲ್ಲದೆ ಅವರಿಗೆ ಶಿಕ್ಷಣವನ್ನು ನೀಡಿದರು ಹಾಗೂ ಮಗುವಿನ ಹೃನ್ಮನಗಳಲ್ಲಿ ಭಕ್ತಿಯನ್ನು ಬೆಳೆಸಿದರು.

ಹೀಗಾಗಿ ಭಗವಂತ ಮಾತ್ರ ನಮಗೆ ತಾಯಿ, ತಂದೆ, ಗುರು, ಸ್ನೇಹಿತ, ಮಾರ್ಗದರ್ಶಕ ಮತ್ತು ಸಂಪತ್ತು. ನಾವು ಆತನೆಡೆಗೆ ದೃಷ್ಟಿ ಹಾಯಿಸಿದೆವಾದರೆ, ಆತನು ಖಂಡಿತವಾಗಿಯೂ ನಮ್ಮತ್ತ ಕೃಪಾ ಕಟಾಕ್ಷ ಬೀರುತ್ತಾನೆ.

[Illustrations by Smt. Uma Manikandan]
[ಮೂಲ: ಶ್ರೀ ಸತ್ಯ ಸಾಯಿ ಬಾಲವಿಕಾಸ್ ಗುರುಗಳ ಕೈಪಿಡಿ, ಗ್ರೂಪ್ ೧, ಪ್ರಥಮ ವರ್ಷ, ‘ಶ್ರೀ ಸತ್ಯ ಸಾಯಿ ಬುಕ್ಸ್ & ಪಬ್ಲಿಕೇಷನ್ ಟ್ರಸ್ಟ್’ ಪ್ರಕಟಿಸಿದೆ, ‘ಧರ್ಮಕ್ಷೇತ್ರ, ಮಹಾಕಾಳಿ ಕೇವ್ಸ್ ರಸ್ತೆ, ಅಂಧೇರಿ (ಈಸ್ಟ್), ಮುಂಬೈ.]

Leave a Reply

Your email address will not be published. Required fields are marked *