ರಾಮನಿಗೆ ವಿಭೀಷಣನ ಶರಣಾಗತಿ

Print Friendly, PDF & Email
೧೧. ರಾಮನಿಗೆ ವಿಭೀಷಣನ ಶರಣಾಗತಿ

Vibhishna Surrenders Rama

ತಾನು ಹೇಳಿದ ಹಿತವಚನಗಳನ್ನು ತನ್ನ ಅಣ್ಣ ನಿರಾಕರಿಸಿದಾಗ, ಆತನ ಮನಸ್ಸನ್ನು ಬದಲಾಯಿಸಲು ಮತ್ತೊಮ್ಮೆ ವಿಭೀಷಣನು ಪ್ರಯತ್ನಿಸಿದನು. ಓಲಗ ಶಾಲೆಯಲ್ಲಿ ಅವನು ರಾವಣನ ಕಾಲಿಗೆ ಬಿದ್ದು ಬೇಡಿಕೊಂಡನು ಮತ್ತು ಅಪಶಕುನದ ಸೂಚಕವಾಗಿ ಹೇಗೆ ಗಾಳಿ ಬೀಸುತ್ತಿದೆ ಎಂಬುದನ್ನು ಗಮನಿಸಲು ಹೇಳಿದನು. ಇದರಿಂದ ರಾವಣನು ಕನಲಿ ವಿಭೀಷಣನ ಎದೆಗೆ ಒದೆದು ಆತನನ್ನು ರಾಜ ದ್ರೋಹಿ ಎಂದು ಆಪಾದಿಸಿದನು.

ಈ ಅಪಮಾನವನ್ನು ಹೆಚ್ಚು ಕಾಲ ಸಹಿಸಿಕೊಳ್ಳಲು ವಿಭೀಷಣನಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವನು ತನ್ನ ಪ್ರಾಮಾಣಿಕರಾದ ನಾಲ್ವರು ಅನುಯಾಯಿಗಳೊಂದಿಗೆ ಆಸ್ಥಾನವನ್ನು ಬಿಟ್ಟು ಹೊರಟನು. ತಮಗಿನ್ನು ರಾಮನ ಚರಣಗಳಲ್ಲಿಯೇ ಯೋಗ್ಯವಾದ ಸ್ಥಾನವೆಂದು ಆತನು ನಿಶ್ಚಯಿಸಿದನು. ಆ ಐವರು ಸಮುದ್ರದಿಂದ ಆಚೆಗೆ ಹಾರಿ ಹೋಗಿ ವಾನರ ಸೈನ್ಯವನ್ನು ಸಮೀಪಿಸಿದರು.

ಆಕಾಶ ಮಾರ್ಗದಲ್ಲಿ ಐದು ಕಪ್ಪು ಆಕೃತಿಗಳನ್ನು ಬರುತ್ತಿರುವುದನ್ನು ನೋಡಿದ ವಾನರ ದಂಡುಗಳು ಅವರನ್ನು ಕೊಲ್ಲುವುದಕ್ಕೆ ಸಿದ್ಧರಾಗಿದ್ದರು. ಆಕಾಶದತ್ತಣಿಂದಲೇ ವಿಭೀಷಣನು ಕೂಗಿದನು. “ನಾವು ಶತ್ರುಗಳಲ್ಲ. ನಾವು ರಾಮನ ಚರಣಗಳಲ್ಲಿ ಆಶ್ರಯ ಪಡೆಯಲು ಬಂದಿದ್ದೇವೆ.” ಹೀಗೆ ಹೇಳಿ ಅವರು ಕೆಳಗಿಳಿದರು. ವಾನರರು ಅವರನ್ನು ರಾಮನ ಸಮ್ಮುಖದಲ್ಲಿ ತಂದು ನಿಲ್ಲಿಸಿದರು. ವಿಭೀಷಣನು ರಾಮನ ಪಾದಾರವಿಂದಗಳಲ್ಲಿ ಬಿದ್ದು ಆಶ್ರಯವನ್ನು ನೀಡಬೇಕೆಂದು ಪ್ರಾರ್ಥಿಸಿದನು.

ತಮ್ಮ ದರ್ಜೆಗೆ ಸೇರದ ವಿಭೀಷಣನ ಬರುವಿಕೆಯನ್ನು ಸುಗ್ರೀವನು ವಿರೋಧಿಸಿದನು. ಅವನು ಅಂದನು, “ಈ ಐವರು ರಾವಣನ ಗುಪ್ತಚಾರರಲ್ಲದೆ ಬೇರೆಯವರಲ್ಲ.” ಅವನು ಲಕ್ಷ್ಮಣನ, ಹನುಮಂತನ ಹಾಗೂ ಅಂಗದನ ಸಲಹೆಗಳನ್ನು ಕೇಳಿದನು. ಲಕ್ಷ್ಮಣನು ವಿರೋಧಿಸಿದನು. ಅಂಗದನು ನಿರ್ಣಯವನ್ನು ಹಿರಿಯರಿಗೆ ಬಿಟ್ಟುಕೊಟ್ಟನು. ಹನುಮಂತನು ನಿಮ್ಮಂಥ ಶ್ರೇಷ್ಠರಿಗೆ ಗೊತ್ತಿದ್ದಷ್ಟು ಉತ್ತಮವಾದದ್ದು ನನಗೇನೂ ಗೊತ್ತಿಲ್ಲ. ನನ್ನ ಅಭಿಪ್ರಾಯವನ್ನು ನೀವು ಬಯಸಿದ್ದರಿಂದ ಹೇಳುತ್ತೇನೆ ಅಷ್ಟೇ. ವಿಭೀಷಣನನ್ನು ಸೇರಿಸಬಹುದು ಎಂದು ನನ್ನ ಸಲಹೆ. “ನಾನು ಲಂಕೆಯಲ್ಲಿರುವಾಗ ಅವನ ಮನೆಯಲ್ಲಿ ವೇದಘೋಷಗಳಾಗುತ್ತಿರುವುದನ್ನು ಕೇಳಿದ್ದೇನೆ. ಮತ್ತು ಅವನು ಸದಾ ಕಾಲವು ಪೂಜಾ ಕಾಯ೵ಗಳಲ್ಲಿ ತೊಡಗಿರುವುದನ್ನು ಕಂಡಿದ್ದೇನೆ. ಅವನು ತನ್ನ ಪವಿತ್ರ ಸ್ವಭಾವಕ್ಕೆ ಪ್ರಸಿದ್ಧನಾಗಿದ್ದಾನೆ. ಯಾವಾಗಲೂ ರಾವಣನ ದುಷ್ಕೃತ್ಯಗಳಿಗಾಗಿ ಅಸಮ್ಮತಿಯನ್ನು ಸೂಚಿಸುತ್ತಿದ್ದನು.”

ಸುಗ್ರೀವನು ಇಷ್ಟಾದರೂ ಒಪ್ಪಲಿಲ್ಲ. ನನ್ನ ಪ್ರಭುವೇ, ಸೋದರನ ಜೊತೆಗೆ ಕಾದಾಡಿದವನನ್ನು ನೀನು ನಂಬಲು ಹೇಗೆ ಸಾಧ್ಯ? ಅದೇ ರೀತಿ ನಾಳೆ ಅವನು ನಮ್ಮ ಜೊತೆಗೆ ಮಾಡಿದರೆ?

ರಾಮನು ನಕ್ಕು ಮಿತ್ರನೇ, “ವಿಭೀಷಣನು ರಾವಣನನ್ನು ತ್ಯಜಿಸಲು ಕಾರಣವಿದೆ. ಆದರೆ ನಮ್ಮನ್ನು ಬಿಟ್ಟು ಹೋಗಲು ಅವನಲ್ಲಿ ಯಾವ ಕಾರಣವೂ ಇಲ್ಲ.

ಅಷ್ಟೇ ಅಲ್ಲದೆ, ಬೇಡಿ ಬಂದವರಿಗೆ ಆಶ್ರಯವನ್ನು ನೀಡುವುದು ಕ್ಷತ್ರಿಯನಾದ ನನ್ನ ಧಮ೵ವಾಗಿದೆ.” ಎಂದನು ರಾಮ.

ಅನಂತರ ರಾಮನು ವಿಭೀಷಣನನ್ನು ತನ್ನ ಸಮ್ಮುಖದಲ್ಲಿ ಬರುವಂತೆ ಹೇಳಿ ಆಲಿಂಗನವನ್ನಿತ್ತು ಅವನ ಮಿತ್ರತ್ವಕ್ಕಾಗಿ ಭರವಸೆಯನ್ನಿತ್ತನು. ವಾನರರಿಗೆ ಸಮುದ್ರದ ಜಲವನ್ನು ತರಲು ಹೇಳಿ ಸರಳವಾದ ರೀತಿಯಲ್ಲಿ ವಿಭೀಷಣನಿಗೆ ಲಂಕೆಯ ‘ಅಧಿಪತಿ’ ಎಂದು ಪಟ್ಟಕಟ್ಟಿದನು.

ಆದರೂ ಸುಗ್ರೀವನಿಗೆ ಕೆಲವು ಶಂಕೆಗಳಿದ್ದವು. ಅವನು ಡೋಲಾಯಮಾನ ಚಿತ್ತದಿಂದ ರಾಮನನ್ನು ಪ್ರಶ್ನಿಸಿದನು. ದೇವಾ, ಒಂದು ವೇಳೆ ರಾವಣನೇ ಸ್ವತಃ ನಿನ್ನ ಆಶ್ರಯವನ್ನು ಹುಡುಕಿಕೊಂಡು ಬಂದರೆ, ನೀನೇನು ಮಾಡುವೆ? ರಾಮನು ಉತ್ತರಿಸಿದನು, “ನಾನು ಖಂಡಿತವಾಗಿಯೂ ಸಮ್ಮತಿಸುತ್ತೇನೆ. ನಾನು ನನ್ನ ಅಯೋಧ್ಯೆಯ ರಾಜ್ಯವನ್ನು ಅವನಿಗೆ ಕೊಡುತ್ತೇನೆ.” ರಾಮನ ಧಮ೵ಶ್ರದ್ಧೆಗೆ ಪ್ರತಿಯೊಬ್ಬರೂ ಆಶ್ಚಯ೵ಚಕಿತರಾದರು.

ಪ್ರಶ್ನೆಗಳು:
  1. ವಿಭೀಷಣನು ರಾವಣನ ಆಸ್ಥಾನವನ್ನು ತ್ಯಜಿಸಿದ್ದೇಕೆ?
  2. ಸುಗ್ರೀವನ ಸಂದೇಹಗಳಾವುವು? ಮತ್ತು ರಾಮನು ಅವುಗಳನ್ನು ಹೇಗೆ ನಿವಾರಿಸಿದನು?
  3. ವಿಭೀಷಣನನ್ನು ಸೇರಿಸಿಕೊಳ್ಳುವುದರಿಂದ ರಾಮನು ವ್ಯಕ್ತಪಡಿಸಿದ ಶ್ರೇಷ್ಠ ಗುಣಗಳು ಯಾವುವು?

Leave a Reply

Your email address will not be published. Required fields are marked *