ವಿವೇಕಾನಂದರ ಪ್ರಾರ್ಥನೆ
ವಿವೇಕಾನಂದರ ಪ್ರಾರ್ಥನೆ
ಶ್ರೀ ರಾಮಕೃಷ್ಣರು, ಶಿಷ್ಯ ನರೇಂದ್ರನನ್ನು ಬಹುವಾಗಿ ಪ್ರೀತಿಸುತ್ತಿದ್ದರು. ಅಂತೆಯೇ, ನರೇಂದ್ರನೂ ಸಹ ಅವರನ್ನು ಹೃತ್ಪೂರ್ವಕವಾಗಿ ಪ್ರೀತಿಸುತ್ತಿದ್ದ. ಗುರು, ಶಿಷ್ಯರ ನಡುವೆ ಇಂತಹ ಮಹತ್ತರ ಹಾಗೂ ಪವಿತ್ರ ಪ್ರೇಮವಿದ್ದಾಗ ಮಾತ್ರ, ಗುರುವು ಶಿಷ್ಯನಿಗೆ ಭಗವಂತನ ಕಡೆ ದಾರಿ ತೋರಲು ಮತ್ತು ಅವನಲ್ಲಿ ಅಡಗಿರುವ ದೈವತ್ವವನ್ನು ಜಾಗೃತಗೊಳಿಸಲು ಸಾಧ್ಯ.
ಶ್ರೀ ರಾಮಕೃಷ್ಣರ ಶಿಷ್ಯನಾದ ಮೇಲೆ, ನರೇಂದ್ರ ಬಹಳ ಸಂತೋಷವಾಗಿದ್ದ. ದೇವರ ಬಗ್ಗೆ ಅರಿಯಲು, ಆಗಾಗ್ಗೆ ದಕ್ಷಿಣೇಶ್ವರಕ್ಕೆ ಹೋಗುತ್ತಿದ್ದ. ಆ ಸಮಯದಲ್ಲಿ, ಒಂದು ದುಃಖಕರ ಸನ್ನಿವೇಶವು ಉಂಟಾಯಿತು. ಅದೇ ನರೇಂದ್ರನ ತಂದೆಯವರ ಆಕಸ್ಮಿಕ ಮರಣ. ಪರಿಣಾಮವಾಗಿ, ಅವನ ಕುಟುಂಬವು ಬಡತನದಲ್ಲಿ ಸಿಲುಕಿಕೊಂಡಿತು. ಕೆಲವೊಮ್ಮೆ ಒಂದು ಹೊತ್ತು ಊಟಮಾಡಲು ಸಹ ಹಣವಿಲ್ಲದ ಪರಿಸ್ಥಿತಿ. ನರೇಂದ್ರ ಬಹಳ ದುಃಖಿತನಾದ. ಯಾವುದಾದರೊಂದು ಉದ್ಯೋಗಕ್ಕಾಗಿ ಹುಡುಕತೊಡಗಿದ.
ನರೇಂದ್ರ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, B.A., ಪದವಿಯನ್ನೂ ಪಡೆದಿದ್ದ. ಆದರೂ ಅವನಿಗೆ ಯಾವುದೇ ಕೆಲಸವೂ ದೊರೆಯಲಿಲ್ಲ. ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಕೆಲಸ ಹುಡುಕುತ್ತಾ ಅಲೆದಾಡಿದರೂ ಸಹ ಏನೂ ಪ್ರಯೋಜನವಾಗಲಿಲ್ಲ. ತಾನು ಸಂಪಾದಿಸದೆ ಹೋದರೆ, ತನ್ನ ತಾಯಿ, ಸಹೋದರ, ಸಹೋದರಿಯರ ಗತಿ ಏನು? ಎಂದು ಚಿಂತಾಕ್ರಾಂತನಾದ.
ಒಂದು ದಿನ, ಶ್ರೀ ರಾಮಕೃಷ್ಣರ ಬಳಿ ತನ್ನ ಈ ಎಲ್ಲಾ ಕಷ್ಟಗಳನ್ನೂ ಹೇಳಿಕೊಂಡ.
ಆಗ ಶ್ರೀ ರಾಮಕೃಷ್ಣರು ಹೇಳಿದರು, “ನರೇನ್! ಈ ದಿನ ಮಂಗಳವಾರ. ಇಂದು ನೀನೇನೇ ಕೇಳಿಕೊಂಡರೂ, ಕಾಳಿಮಾತೆ ಅದನ್ನು ನೆರವೇರಿಸುವಳು. ಹೋಗಿ, ಅವಳ ಸಹಾಯಕ್ಕಾಗಿ ಪ್ರಾರ್ಥಿಸು,” ಎಂದು.
ಅಂದು ಸಂಜೆ, ಪ್ರಾರ್ಥಿಸಲೆಂದು ನರೇಂದ್ರ ಕಾಳಿಮಾತೆಯ ಮಂದಿರಕ್ಕೆ ಹೋದ. ಅಲ್ಲಿಂದ ಹೊರಬಂದ ಅವನನ್ನು, ಶ್ರೀ ರಾಮಕೃಷ್ಣರು ಕೇಳಿದರು,” ನಿನ್ನ ಪ್ರಾರ್ಥನೆಗೆ ತಾಯಿ ಏನು ಉತ್ತರಿಸಿದಳು?”
“ಓಹ್! ತಾಯಿಯನ್ನು ನನ್ನ ಕಷ್ಟದ ಬಗ್ಗೆ ಕೇಳಲು ಮರೆತೇ ಬಿಟ್ಟೆನಲ್ಲಾ,” ಎಂದು ನರೇಂದ್ರ ದುಃಖಿಸಿದ.
“ಹೌದೇ? ಬೇಗ ಹೋಗು. ಮತ್ತೊಮ್ಮೆ ಪ್ರಾರ್ಥಿಸು,” ಎಂದು ಶ್ರೀ ರಾಮಕೃಷ್ಣರು ಸೂಚಿಸಿದರು.
ಎರಡನೆಯ ಬಾರಿಯೂ ಏನನ್ನೂ ಕೇಳದೆ, ಹೊರಗೆ ಬಂದ.
ಪುನಃ ಮೂರನೆಯ ಬಾರಿ ಒಳಗೆ ಹೋಗಿ ಬಂದ ನರೇಂದ್ರನ ಮುಖದಲ್ಲಿ ಶಾಂತಿ ತುಂಬಿತ್ತು. ಅವನು ಶ್ರೀ ರಾಮಕೃಷ್ಣರಿಗೆ ಹೇಳಿದ, “ನನಗೆ ಹಣಬೇಕೆಂದು ತಾಯಿಯನ್ನು ಹೇಗೆ ಪ್ರಾರ್ಥಿಸಲಿ? ಇದು ಮಹಾರಾಜನ ಬಳಿ ಹೋಗಿ, ನನಗೊಂದು ಕುಂಬಳಕಾಯಿ ನೀಡಿರೆಂದು ಕೇಳಿಕೊಂಡಂತೆ ಆಗುತ್ತದೆ. ಹಾಗಾಗಿ, ನನಗೆ ನಿಸ್ವಾರ್ಥ ಪ್ರೇಮ, ಭಕ್ತಿ ಮತ್ತು ಆಕೆಯನ್ನು ಅರಿಯುವ ಶಕ್ತಿಯನ್ನು ಅನುಗ್ರಹಿಸೆಂದು ಮಾತ್ರ, ನಾನು ಮಾತೆಯ ಬಳಿ ಕೇಳಿಕೊಳ್ಳಲು ಸಾಧ್ಯವಾಯಿತು,” ಎಂದು.
ಆನಂತರ, ಶ್ರೀ ರಾಮಕೃಷ್ಣರು, ಇನ್ನು ಮುಂದೆ ನರೇಂದ್ರನ ಕುಟುಂಬದವರಿಗೆ, ಅಗತ್ಯವಸ್ತುಗಳ ಕೊರತೆಯು ಎಂದೂ ಉಂಟಾಗದೆಂದು ಹರಸಿದರು. ಕೇವಲ ಹಣಸಂಪಾದನೆಯ ಬಗ್ಗೆಯೇ ಪ್ರಯತ್ನಿಸುವುದು ಸರಿಯಲ್ಲವೆಂದು ನರೇಂದ್ರನಿಗೂ ಮನವರಿಕೆಯಾಯಿತು.
ಅಂದು ರಾತ್ರಿ, ಶ್ರೀ ರಾಮಕೃಷ್ಣರು ನರೇಂದ್ರನಿಗೆ ಕಾಳಿಮಾತೆಯನ್ನು ಕುರಿತ ಒಂದು ಸುಮಧುರ ಗೀತೆಯನ್ನು ಕಲಿಸಿಕೊಟ್ಟರು. ಇಡೀ ರಾತ್ರಿ ನರೇಂದ್ರನು ಆ ಗೀತೆಯನ್ನು ಹಾಡುತ್ತಾ ಕಳೆದ. ಶ್ರೀ ರಾಮಕೃಷ್ಣರು ಧ್ಯಾನದಲ್ಲಿ ಮುಳುಗಿದರು.
ಪ್ರಶ್ನೆಗಳು
- ನರೇಂದ್ರನು ಏಕೆ ದುಃಖಿತನಾಗಿದ್ದ?
- ಶ್ರೀ ರಾಮಕೃಷ್ಣರು ಅವನಿಗೆ ನೀಡಿದ ಸಲಹೆ ಏನು ?
- ನರೇಂದ್ರನು ಕಾಳಿಮಾತೆಯ ಬಳಿ ಏನನ್ನು ಕೇಳಿಕೊಂಡನು?
- ತಾನು ಕೇಳಿಕೊಳ್ಳಬೇಕೆಂದಿದ್ದುದನ್ನು ಏಕೆ ಕೇಳಲಾಗಲಿಲ್ಲ ?
- ಆಗ ಶ್ರೀ ರಾಮಕೃಷ್ಣರು ಏನು ಮಾಡಿದರು ?