ಪೋಲು ಮಾಡಬೇಡ.

Print Friendly, PDF & Email
ಪೋಲು ಮಾಡಬೇಡ.

ಒಂದು ದಿನ ಗಾಂಧೀಜಿ ಕೋಣೆಯಲ್ಲಿ ಏನನ್ನೋ ಹುಡುಕುತ್ತಿದ್ದರು. ಆಶ್ರಮವಾಸಿಯಾಗಿದ್ದ ಮೀರಾಬೆನ್ ಎಂಬ ಮಹಿಳೆ ಗಾಂಧೀಜಿಯ ಚಿಂತೆ ತುಂಬಿದ ಮುಖವನ್ನೂ, ಕಳವಳದಿಂದ ಅವರು ಹುಡುಕುವುದನ್ನೂ ಕಂಡು ಬಾಪು, ಏನು ಹುಡುಕುತ್ತಿದ್ದೀರಿ? ಏನನ್ನಾದರೂ ಕಳೆದುಕೊಂಡಿದ್ದೀರಾ? ಎಂದು ಕೇಳಿದಳು.

ಹೌದು, ನನ್ನ ಪೆನ್ಸಿಲ್ಲು ಕಳೆದಿದೆ, ಹುಡುಕುತ್ತಿದ್ದೇನೆ. ಎಷ್ಟು ದೊಡ್ಡದಿತ್ತು? ಹೊಸ ಪೆನ್ಸಿಲ್ಲೆ? ತಾನೇನಾದರೂ ಅದನ್ನು ಹುಡುಕಿ ಕೊಡಬಹುದೋ ಎಂಬ ಆಸೆಯಿಂದ ಮೀರಾಬೆನ್ ಕೇಳಿದಳು.

ಅದು ನಾನು ಬಳಸುತ್ತಿದ್ದ ಪೆನ್ಸಿಲ್ಲು, ನಿನ್ನ ಹೆಬ್ಬೆರಳಿನಷ್ಟಿತ್ತು ಎಂದರು ಬಾಪೂ. ಆ ತುಂಡು ಪೆನ್ಸಿಲಿಗಾಗಿ ಬಾಪೂಜಿ ಏಕೆ ಇಷ್ಟೊಂದು ಚಿಂತಾಗ್ರಸ್ತರಾಗಿದ್ದಾರೆ ಅಂದು ಮೀರಾಬೆನ್‍ಗೆ ಆಶ್ಚರ್ಯವಾಯಿತು. ಯಾರೋ ಎದ್ದು ಹೋಗಿ ಒಂದು ಹೊಸ ಪೆನ್ಸಿಲ್ ತಂದು ಗಾಂಧೀಜಿಗೆ ನೀಡಿದರು.

ನನಗೆ ಹೊಸ ಪೆನ್ಸಿಲ್ಲು ಬೇಕಾಗಿದೆಯೆಂದು ನಿನಗೆ ಯಾರು ಹೇಳಿದರು? ಮೂರು ವಾರಗಳಿಂದಲೂ ಬಳಸುತ್ತಿದ್ದ ಆ ಪೆನ್ಸಿಲ್ಲೇ ನನಗೆ ಬೇಕಾಗಿದೆ ಎಂದರು ಬಾಪೂ. ಮತ್ತೆ ತಡಕಾಟ ಪ್ರಾರಂಭವಾಯಿತು. ಕೊನೆಗೆ ಫೈಲುಗಳ ಮಧ್ಯೆ ಸಿಕ್ಕಿಕೊಂಡಿದ್ದ ಆ ತುಂಡು ಪೆನ್ಸಿಲ್ಲು ಸಿಕ್ಕಿತು. ಭಾರೀ ಸಂಕಟದಿಂದ ಪಾರಾದ ಹಾಗೆ ಗಾಂಧೀಜಿ ನಿರಾಳವಾಗಿ ನಿಟ್ಟುಸಿರು ಬಿಟ್ಟರು.

ಒಮ್ಮೆ ಗಾಂಧೀಜಿ ಪ್ರವಾಸ ಮಾಡುತ್ತಿದ್ದರು. ಅವರ ಜೊತೆಯಲ್ಲಿ ಆಶ್ರಮವಾಸಿಯಾಗಿದ್ದ ಮೀರಾಬೆನ್ ಇದ್ದಳು. ಸಾಮಾನ್ಯವಾಗಿ ಪ್ರತಿ ದಿನ ಊಟದ ಜೊತೆಯಲ್ಲಿ ಜೇನುತುಪ್ಪ ಸೇವಿಸುವುದು ಗಾಂಧೀಜಿಯವರ ಅಭ್ಯಾಸ. ಆದರೆ ಆಶ್ರಮದಿಂದ ಹೊರಡುವಾಗ ಜೇನುತುಪ್ಪದ ಸೀಸೆ ಇಟ್ಟುಕೊಳ್ಳುವುದು ಮೀರಾಬೆನ್‌ಗೆ ಮರೆತುಹೋಯಿತು. ಪ್ರವಾಸದ ಮೊದಲನೇ ದಿನವೇ ಮಧ್ಯಾಹ್ನ ಒಂದು ಹಳ್ಳಿಯಲ್ಲಿ ಅವರು ತಂಗಿದರು. ಮೀರಾಬೆನ್ ಬಾಪೂಜಿಯ ಊಟಕ್ಕೆ ಅಣಿ ಮಾಡಿದಳು. ನೋಡಿದರೆ ಜೇನುತುಪ್ಪ ಇಲ್ಲ! ತನ್ನ ಮರೆವಿನಿಂದ ತಪ್ಪಾಯಿತಲ್ಲ ಎಂದು ವ್ಯಥೆಪಟ್ಟು ಒಡನೆಯೇ ಯಾರನ್ನೋ ಪೇಟೆಗೆ ಕಳಿಸಿ ಒಂದು ಹೊಸ ಜೇನುತುಪ್ಪದ ಸೀಸೆ ತರಿಸಿದಳು. ಗಾಂಧೀಜಿ ಬಂದು ಊಟಕ್ಕೆ ಕುಳಿತರು. ಅವರ ದೃಷ್ಟಿ ಸಹಜವಾಗಿ ಈ ಹೊಸ ಸೀಸೆಯ ಮೇಲೆ ಬಿತ್ತು. “ಇದೇನಿದು ಹೊಸ ಸೀಸೆ ಜೇನುತುಪ್ಪ ಬಂದಿದೆ. ನಾವು ಬಳಸುತ್ತಿದ್ದ ಹಳೆಯ ಸೀಸೆ ಏನಾಯಿತು?” ಎಂದು ಕೇಳಿದರು. ಮೀರಾಬೆನ್ ಸಂಕೋಚದಿಂದ “ಬಾಪು ನಾನು ಅದನ್ನು ತರಲು ಮರೆತುಬಿಟ್ಟೆ, ತಪ್ಪಾಯಿತು.” ಎಂದಳು. “ಅದಕ್ಕಾಗಿ ಈಗ ಹೊಸ ಸೀಸೆ ತರಿಸಿದೆಯಾ?” ಗಾಂಧೀಜಿ ನುಡಿದರು.

“ಇಲ್ಲಿ ನೋಡು, ನಾವು ಉಪಯೋಗಿಸುವುದು ಸಾರ್ವಜನಿಕರ ಹಣ. ಅದನ್ನು ಯಾವ ಕಾರಣಕ್ಕೂ ಪೋಲು ಮಾಡುವುದು ಸಲ್ಲದು. ಹಳೆಯದು ಮುಗಿಯುವವರೆಗೂ ನಾನು ಈ ಹೊಸ ಜೇನುತುಪ್ಪವನ್ನು ಬಳಸಲಾರೆ.”

ಇಡೀ ಪ್ರವಾಸದ ಅವಧಿಯಲ್ಲಿ ಗಾಂಧೀಜಿ ನುಡಿದಂತೆ ನಡೆದರು. ಜೇನುತುಪ್ಪ ಸೇವಿಸಲೇ ಇಲ್ಲ. ಆಶ್ರಮಕ್ಕೆ ಹಿಂದಿರುಗಿದ ಮೇಲೆಯೇ ಹಳೆಯ ಸೀಸೆಯಲ್ಲಿ ಉಳಿದಿದ್ದ ಜೇನನ್ನು ಅವರು ಬಳಸಿದ್ದು.

ಪ್ರಶ್ನೆಗಳು
  1. ‘ಮಿತವ್ಯಯ’ ಎಂದರೇನು? ನಾವು ಏಕೆ ಅದನ್ನು ಅಭ್ಯಾಸ ಮಾಡಬೇಕು?
  2. ನೀವು ಬಹುಮಾನವಾಗಿ 100 ರೂಪಾಯಿಗಳನ್ನು ಗೆದ್ದರೆ, ಆ ಹಣದಲ್ಲಿ ಏನು ಮಾಡುವಿರಿ?
  3. ಈ ಕೆಳಗಿನವುಗಳನ್ನು ಜನ ಹೇಗೆ ಪೋಲು ಮಾಡುತ್ತಾರೆ? ಪೋಲು ಮಾಡುವ ನಾಲ್ಕು ಬಗೆ ತಿಳಿಸಿ.(a) ಹಣ (b) ಸಮಯ (c) ಶಕ್ತಿ.

Narration: Ms.Shreya Pulli
[Sri Sathya Sai Balvikas Alumna]

Leave a Reply

Your email address will not be published. Required fields are marked *

error: