‘ಕರ್ತವ್ಯ’ ಎಂದರೇನು?
‘ಕರ್ತವ್ಯ’ ಎಂದರೇನು?
ಒಬ್ಬ ಯುವ ಸನ್ಯಾಸಿಯು, ಅರಣ್ಯಕ್ಕೆ ತೆರಳಿ, ಅಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಸಹನೆ ಮತ್ತು ಕಠಿಣ ಪರಿಶ್ರಮದಿಂದ ಧ್ಯಾನ, ಪೂಜೆ ಮತ್ತು ಯೋಗ ಸಾಧನೆಯಲ್ಲಿ ತೊಡಗಿದ.
ಒಂದು ದಿನ ಆತನು ಧ್ಯಾನಮಗ್ನನಾಗಿ ಅದೊಂದು ಮರದ ಕೆಳಗೆ ಕುಳಿತಿದ್ದ. ಆಗ ಕೆಲವು ಒಣಗಿದ ಎಲೆಗಳು ಆತನ ತಲೆಯಮೇಲೆ ಉದುರಿದವು. ತಲೆಯೆತ್ತಿ ನೋಡಿದಾಗ, ಅ ಮರದ ಮೇಲೆ ಒಂದು ಕಾಗೆ ಮತ್ತು ಒಂದು ಕೊಕ್ಕರೆಯು ಕಿತ್ತಾಡುತ್ತಿದ್ದುದು ಕಂಡು ಬಂದಿತು. “ನನ್ನ ಮೇಲೆ ಒಣ ಎಲೆಗಳನ್ನು ಬೀಳಿಸಲು, ನಿಮಗೆ ಅದೆಷ್ಟು ಧೈರ್ಯ!” ಎಂದು ಕೋಪದಿಂದ ಅವುಗಳ ಮೇಲೆ ದೃಷ್ಟಿ ಬೀರಿದ. ಯೋಗಸಿದ್ಧಿಯನ್ನು ಪಡೆದಿದ್ದ ಆತನ ತಲೆಯಿಂದ ಒಂದು ಬೆಂಕಿಯ ಜ್ವಾಲೆಯು ಮೇಲೆದ್ದು, ಆ ಹಕ್ಕಿಗಳನ್ನು ಸುಟ್ಟು ಭಸ್ಮ ಮಾಡಿತು. ಇದರಿಂದ ಆತನಿಗೆ ತನ್ನಲ್ಲಿ ಇಂತಹ ಶಕ್ತಿಯು ಬೆಳೆಯುತ್ತಿರುವುದನ್ನು ತಿಳಿದು ಬಹು ಆನಂದವಾಯಿತು. ತನ್ನ ಒಂದು ನೋಟಮಾತ್ರದಿಂದಲೇ ಅವೆರಡು ಹಕ್ಕಿಗಳು ಭಸ್ಮವಾದುದನ್ನು ಕಂಡು ತನ್ನ ಬಗ್ಗೆ ತುಂಬಾ ಹೆಮ್ಮೆಯಾಯಿತು, ಅವನಲ್ಲಿ ಅಹಂಭಾವವೂ ಮೂಡಿತು.
ನಂತರ, ಭಿಕ್ಷಾಟನೆಗೆಂದು ಆ ಸನ್ಯಾಸಿಯು ಸಮೀಪದ ಪಟ್ಟಣಕ್ಕೆ ಹೊರಟನು. ಒಂದು ಮನೆಯ ಬಾಗಿಲ ಮುಂದೆ ನಿಂತು, “ತಾಯಿ! ಭಿಕ್ಷೆ ನೀಡಿ,” ಎಂದು ಕೇಳಿಕೊಂಡ. “ಸ್ವಲ್ಪ ತಾಳು, ಮಗನೇ,” ಎಂಬ ಒಂದು ಧ್ವನಿಯು ಮನೆಯೊಳಗಿನಿಂದ ಕೇಳಿ ಬಂದಿತು. ಆತನಿಗೆ ಸಿಟ್ಟು ಬಂದು, ಹೀಗೆ ಆಲೋಚಿಸಿದ, “ನನಗೆ ಕಾಯಬೇಕೆಂದು ಹೇಳುವ ಈ ದುಷ್ಟ ಹೆಂಗಸಿಗೆ, ನನ್ನ ಶಕ್ತಿಯ ಬಗ್ಗೆ ಇನ್ನೂ ತಿಳಿದಿಲ್ಲವೆಂದೆನ್ನಿಸುತ್ತಿದೆ.” ಆಗ ಪುನಃ ಒಳಗಿನಿಂದ ಅದೇ ಧ್ವನಿ ಕೇಳಿಬಂತು, “ಹುಡುಗನೇ! ನಿನ್ನ ಬಗ್ಗೆ ನೀನು ತುಂಬಾ ಅಹಂಭಾವ ಪಡಬೇಡ . ಇಲ್ಲಿ ಯಾವ ಕಾಗೆ, ಕೊಕ್ಕರೆಗಳೂ ಇಲ್ಲ.” ಎಂದು. ಅದನ್ನು ಕೇಳಿಸಿಕೊಂಡ ಆ ಸನ್ಯಾಸಿಗಾದರೋ ಬಹಳ ಆಶ್ಚರ್ಯವಾಯಿತು. ಮತ್ತಷ್ಟು ಸಮಯ ಕಾದ ಮೇಲೆ, ಆ ಮನೆಯ ಗೃಹಿಣಿಯು ಭಿಕ್ಷೆ ಕೊಡಲು ಹೊರಬಂದಳು. ಆಕೆಯ ಪಾದಗಳ ಮೇಲೆ ಬಿದ್ದು ನಮಸ್ಕರಿಸುತ್ತಾ, ಆತ ಪ್ರಶ್ನಿಸಿದ, “ತಾಯಿ! ಅದರ ಬಗ್ಗೆ ನಿಮಗೆ ತಿಳಿದುದಾದರೂ ಹೇಗೆ?” ಎಂದು.
ಆ ಗೃಹಿಣಿಯು ಉತ್ತರಿಸಿದಳು, “ಮಗು! ನಾನೊಬ್ಬ ಸಾಧಾರಣ ಮಹಿಳೆ. ನನಗೆ ಯಾವ ಯೋಗಾಭ್ಯಾಸವಾಗಲೀ, ಸಾಧನೆಯಾಗಲೀ ತಿಳಿದಿಲ್ಲ. ನಿನ್ನನ್ನು ಕಾಯಿಸಬೇಕಾಗಿ ಬಂದುದೇಕೆಂದರೆ, ನನ್ನ ಪತಿಯು ಹುಷಾರಿಲ್ಲದೆ ಮಲಗಿರುವುದರಿಂದ, ಅವರಿಗೆ ಆರೈಕೆ ಮಾಡುತ್ತಿದ್ದೆ. ಅದು ನನ್ನ ಕರ್ತವ್ಯ. ಮದುವೆಗೆ ಮೊದಲು ಮತ್ತು ಮದುವೆಯ ನಂತರ, ನಾನು ಆಯಾ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಶ್ರಮಿಸುತ್ತಿದ್ದೇನೆ. ಇದೇ ನನ್ನ ಯೋಗ ಸಾಧನೆ. ಇದರಿಂದಾಗಿಯೇ ನನಗೆ ಜ್ಞಾನ ಪ್ರಾಪ್ತಿ. ನಿನ್ನ ಆಲೋಚನೆಗಳನ್ನೂ ಮತ್ತು ಅರಣ್ಯದಲ್ಲಿ ನೀನು ಮಾಡಿದುದರ ಬಗ್ಗೆಯೂ, ಅದರಿಂದ ತಿಳಿದುಕೊಳ್ಳಲು ಸಾಧ್ಯವಾಯಿತು. ಇದಕ್ಕಿಂತಲೂ ಹೆಚ್ಚಿನ ಅರಿವು ಬೇಕೆಂದರೆ, ನೀನು ವಾರಣಾಸಿಗೆ ಹೋಗು. ಅಲ್ಲಿಯ ಮಾರುಕಟ್ಟೆಯಲ್ಲಿ, ಒಬ್ಬ ಕಟುಕನಿದ್ದಾನೆ. ಅವನಿಂದ ನೀನು ಮತ್ತಷ್ಟು ಅರಿವನ್ನು ಪಡೆಯಬಹುದು.” ಎಂದು.
“ಕೀಳುಜಾತಿಗೆ ಸೇರಿದ ಒಬ್ಬ ಚಂಡಾಲನ ಬಳಿ ಏಕೆ ಹೋಗಬೇಕು? ಅವನಿಂದ ತಾನು ಕಲಿಯಬೇಕಾದುದು ಏನಿರುತ್ತದೆ?,” ಎಂದು ಆ ಸನ್ಯಾಸಿ ಮೊದಲಿಗೆ ಯೋಚಿಸಿದರೂ ಸಹ, ಗೃಹಿಣಿಯ ಬಳಿ ತನಗಾದ ಅನುಭವದಿಂದಾಗಿ, ಅಲ್ಲಿಗೆ ಹೋಗಿ ನೋಡೋಣವೆಂದು ನಿರ್ಧರಿಸಿದ. ವಾರಣಾಸಿಯನ್ನು ತಲುಪಿ, ಅಲ್ಲಿ ಮಾರುಕಟ್ಟೆಯನ್ನು ಹುಡುಕುತ್ತ ಬಂದ ಆತ, ದೂರದಿಂದಲೇ ಕಂಡಿದ್ದಾದರೂ ಏನು? ಆ ಕಟುಕ ಪ್ರಾಣಿಗಳ ಮಾಂಸವನ್ನು ಕತ್ತರಿಸುತ್ತಾ, ಚೌಕಾಸಿ ಮಾಡುತ್ತಿದ್ದ ಗಿರಾಕಿಗಳ ಮೇಲೆ ಕೂಗಾಡುತ್ತಾ ಇದ್ದುದು. ಜಿಗುಪ್ಸೆಯಿಂದ ಆ ಸನ್ಯಾಸಿ ದೇವರಲ್ಲಿ ಮೊರೆಯಿಟ್ಟ, “ಓ ದೇವರೇ! ನನಗೆ ಸಹಾಯ ಮಾಡು. ಈ ಕಟುಕನೋ ರಾಕ್ಷಸನಂತೆ ವರ್ತಿಸುತ್ತಿದ್ದಾನೆ. ಇಂತಹವನಿಂದ ನಾನು ಕಲಿಯಬಹುದಾದ್ದು ಏನಿರಬಲ್ಲದು?” ಎಂದು.
ಹೀಗೆ ಸನ್ಯಾಸಿ ಯೋಚಿಸುತ್ತಿರುವಾಗಲೇ, ಆತನನ್ನು ನೋಡಿದ ಆ ಕಟುಕ ಕೇಳಿದ, “ಓ! ನಿಮ್ಮನ್ನು ಆ ಗೃಹಿಣಿಯು ಇಲ್ಲಿಗೆ ಕಳುಹಿಸಿದಳೇ? ಬನ್ನಿ, ನಾನು ನನ್ನ ವ್ಯಾಪಾರವನ್ನು ಮುಗಿಸಿಬರುವವರೆಗೂ, ದಯವಿಟ್ಟು ಈ ಆಸನದ ಮೇಲೆ ಕುಳಿತುಕೊಂಡಿರಿ,” ಎಂದು ಒಂದು ಆಸನವನ್ನು ತೋರಿಸಿದ.
ಮುಂದೇನಾಗುತ್ತದೆಯೋ ಎಂದು ಯೋಚಿಸುತ್ತಾ, ಆ ಸನ್ಯಾಸಿಯು ಆ ಕಟುಕನಿಗಾಗಿ ಕಾಯುತ್ತ ಕುಳಿತ. ತನ್ನ ವ್ಯಾಪಾರವನ್ನು ಮುಗಿಸಿ, ಹಣವನ್ನು ಎಣಿಸಿ ತೆಗೆದುಕೊಂಡ ಅವನು, “ಬನ್ನಿ, ಸ್ವಾಮಿ. ನಮ್ಮ ಮನೆಗೆ ಹೋಗೋಣ,” ಎಂದು ಕರೆದ. ಮನೆಗೆ ಕರೆದೊಯ್ದು, ಆತನಿಗೆ ಆಸನವನ್ನು ನೀಡಿ, “ದಯವಿಟ್ಟು ಸ್ವಲ್ಪ ಸಮಯ ತಾವು ಕಾದಿರಿ” ಎಂದು ಹೇಳುತ್ತಾ ಒಳಗೆ ನಡೆದ. ಅಲ್ಲಿದ್ದ ತನ್ನ ತಂದೆ ತಾಯಿಗಳಿಗೆ ನಮಸ್ಕರಿಸಿ, ಅವರಿಗೆ ಸ್ನಾನ ಮಾಡಿಸಿ, ಆಹಾರವನ್ನು ನೀಡಿ ಉಪಚರಿಸಿ, ನಂತರ ಸನ್ಯಾಸಿಯ ಬಳಿ ಬಂದು ಕುಳಿತು,” ಹೇಳಿ, ಸ್ವಾಮಿ. ತಾವು ನನ್ನನ್ನು ಕಾಣಲು ಬಂದಿದ್ದೀರಿ. ನನ್ನಿಂದ ಏನಾಗಬೇಕೋ ತಿಳಿಸಿ.” ಎಂದು ಕೇಳಿದ.
ಸನ್ಯಾಸಿಯು ಅವನಿಗೆ ‘ದೇವರು’, ‘ಜೀವನ’ ಮೊದಲಾದ ವಿಷಯಗಳ ಬಗ್ಗೆ, ಕೆಲವು ಪ್ರಶ್ನೆಗಳನ್ನು ಕೇಳಿದ. ಅದಕ್ಕೆ ಆ ವ್ಯಾಧ (ಕಟುಕ) ನು ಕೊಟ್ಟ ಉತ್ತರಗಳೇ, “ವ್ಯಾಧ ಗೀತೆ” ಎಂದು ಪ್ರಸಿದ್ಧವಾಗಿದೆ. ಭಗವದ್ಗೀತೆಯನ್ನು ಓದಿದ ನಂತರ, ಈ ವ್ಯಾಧ ಗೀತೆಯನ್ನು ಓದಿದರೆ, ಇದು ‘ವೇದಾಂತ’ ದ ಪರಮೋಚ್ಚ ಸಿದ್ಧಾಂತವೆಂಬ ಅರಿವಾಗುತ್ತದೆ.
ಕಟುಕನ ಉಪದೇಶವನ್ನು ಕೇಳಿ ದಿಗ್ಭ್ರಾಂತನಾದ ಸನ್ಯಾಸಿಯು, ಅವನನ್ನು ಪ್ರಶ್ನಿಸಿದ, “ನೀನು ಇಂತಹ ಜ್ಞಾನಿಯಾಗಿದ್ದೂ ಸಹ ಕಟುಕನಾಗಿ, ಈ ಹಿಂಸಾತ್ಮಕ, ನೀಚ ಕೆಲಸವನ್ನು ಏಕೆ ಮಾಡುತ್ತಿರುವೆ?” ಎಂದು.
ಅದಕ್ಕೆ ಆ ಕಟುಕನು ಹೀಗೆ ಉತ್ತರಿಸಿದ, “ಮಗನೇ, ಕೇಳು. ಯಾವ ಕೆಲಸವೂ ನೀಚವಾದುದಲ್ಲ, ಅಶುದ್ಧವೂ ಅಲ್ಲ. ನನ್ನ ಜನನ, ಪರಿಸ್ಥಿತಿ ಮತ್ತು ಹಾಗೂ ವಾತಾವರಣದಿಂದಾಗಿ, ನನ್ನ ಬಾಲ್ಯದಲ್ಲೇ ನಾನು ಈ ವೃತ್ತಿಯನ್ನು ಕಲಿತೆ. ಆದರೆ ನಾನು ಆ ವೃತ್ತಿಯನ್ನೇ ನಿಷ್ಠೆಯಿಂದ ಮಾಡುತ್ತಿದ್ದೇನೆ. ನನ್ನ ತಂದೆ ತಾಯಿಗಳನ್ನು ಸಂತೋಷವಾಗಿ ಇಡುವುದೇ, ನನ್ನ ಗುರಿ. ನನಗೆ ಯಾವ ಯೋಗಾಭ್ಯಾಸವೂ ತಿಳಿದಿಲ್ಲ, ನಾನು ಸನ್ಯಾಸವನ್ನೂ ಸ್ವೀಕರಿಸಿಲ್ಲ. ಈ ಲೌಕಿಕ ಪ್ರಪಂಚದಿಂದ ದೂರವಾಗಿ ಕಾಡಿಗೂ ಹೋಗಿಲ್ಲ. ಆದರೆ ನನ್ನ ಕರ್ತವ್ಯ ನಿಷ್ಠೆಯಿಂದಾಗಿ ನಾನು ಈ ಹಂತವನ್ನು ತಲುಪಿದ್ದೇನೆ,” ಎಂದು.
ನಮಗೆ ನಮ್ಮ ಜನನದಿಂದಾಗಿ ಯಾವ ಕರ್ತವ್ಯವನ್ನು ಮಾಡಬೇಕಾಗಿ ಬರುವುದೋ, ಅದನ್ನು ನಿಷ್ಠೆಯಿಂದ ಮಾಡೋಣ. ಪ್ರತಿ ಮಾನವನು ಜೀವನದಲ್ಲಿ ಯಾವ ಸ್ಥಾನ, ಅವಕಾಶ ದೊರೆಯುವುದೋ, ಅದರ ಪ್ರಕಾರವಾಗಿ ಆ ಕರ್ತವ್ಯಗಳನ್ನು ನಿರ್ವಹಿಸಬೇಕು.
ಆದರೆ, ಮಾನವನ ಸ್ವಭಾವದಲ್ಲಿರುವ ಒಂದು ಅಪಾಯಕರ ಅಂಶವೆಂದರೆ, ಅವನು ತನ್ನನ್ನು ತಾನು ತಿಳಿಯುವ ಪ್ರಯತ್ನವನ್ನು ಮಾಡುವುದಿಲ್ಲ. ತಾನು ಮಹಾರಾಜನಾಗಲು ಯೋಗ್ಯನೆಂದೇ ಭಾವಿಸುತ್ತಾನೆ. ಒಂದು ವೇಳೆ ಹಾಗಾದರೂ ಸಹ, ಆ ಸ್ಥಾನಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲೇಬೇಕು. ಹಾಗೆ ಮಾಡಿದಾಗ, ಅದಕ್ಕಿಂತಲೂ ಶ್ರೇಷ್ಠ ಕರ್ತವ್ಯ ಅವನನ್ನು ಅರಸುತ್ತಾ ಬರುತ್ತದೆ.