ನಸೀರುದ್ದೀನನ ಬುದ್ಧಿವಂತಿಕೆ ಮತ್ತು ಹಾಸ್ಯಪ್ರಜ್ಞೆ
ನಸೀರುದ್ದೀನನ ಬುದ್ಧಿವಂತಿಕೆ ಮತ್ತು ಹಾಸ್ಯಪ್ರಜ್ಞೆ
ಮುಲ್ಲಾ ನಸೀರುದ್ದೀನನು ತುರ್ಕಿ ದೇಶದವನು. ಆತನು ತನ್ನ ಜಾಣ್ಮೆ, ವಾಕ್ಚಾತುರ್ಯ ಮತ್ತು ಹಾಸ್ಯ ಪ್ರವೃತ್ತಿಗಳಿಂದಾಗಿ, ಪ್ರಸಿದ್ಧನಾದವನು. ಈಗಲೂ ಸಹ ಆತನ ನೆನಪಿನಲ್ಲಿ “ಪ್ರಾಣಿಗಳ ಹಬ್ಬ”ವನ್ನು, ಅಲ್ಲಿ ಆಚರಿಸಲಾಗುತ್ತದೆ.
ಒಂದು ದಿನ, ನಸೀರುದ್ದೀನನು ಒಂದು ಸಾಬೂನನ್ನು ತಂದು, ತನ್ನ ಹೆಂಡತಿಯ ಕೈಗೆ ಕೊಟ್ಟು, ತನ್ನ ಮೇಲಂಗಿಯನ್ನು ಒಗೆದು ಕೊಡೆಂದು ಕೇಳಿದ. ಅಂತೆಯೇ, ಅವಳು ಅಂಗಿಯನ್ನು ನೆನೆಸಿ, ಸಾಬೂನನ್ನು ಹಚ್ಚತೊಡಗಿದಳು. ಆಗ, ಎಲ್ಲಿಂದಲೋ ಒಂದು ದೊಡ್ಡ ಕಾಗೆಯು ಹಾರಿ ಕೆಳಗೆ ಬಂದು, ಆ ಸಾಬೂನನ್ನು ಕಚ್ಚಿಕೊಂಡು ಹಾರಿಹೋಗಿ, ಮರದ ರೆಂಬೆಯ ಮೇಲೆ ಕುಳಿತಿತು. ಮುಲ್ಲಾನ ಹೆಂಡತಿಗೆ ಎಲ್ಲಿಲ್ಲದ ಸಿಟ್ಟು ಬಂದು, ಆ ಕಾಗೆಯನ್ನು ಜೋರು ಧ್ವನಿಯಲ್ಲಿ ಬೈಯ್ಯತೊಡಗಿದಳು.
“ಏನಾಯಿತು?” ಎಂದು ಕೇಳುತ್ತಾ ನಸೀರುದ್ದೀನನು ವೇಗವಾಗಿ ಮನೆಯೊಳಗಿಂದ ಹೊರಬಂದನು. “ನಾನು ನಿಮ್ಮ ಅಂಗಿಯನ್ನು ಒಗೆಯಲು ಶುರು ಮಾಡಿದ್ದೆ. ಆದರೆ ಆ ದುಷ್ಟ ಕಾಗೆಯು ಬಂದು, ಆ ಸಾಬೂನನ್ನು ಕಿತ್ತುಕೊಂಡು ಹಾರಿಹೋಯಿತು,” ಎಂದು ಅವಳು ಸಿಟ್ಟಿನಿಂದ ಹೇಳಿದಳು.
ಅದಕ್ಕೆ ಉತ್ತರವಾಗಿ, ಮುಲ್ಲಾ ನಗುತ್ತಾ ಹೇಳಿದನು, “ನನ್ನ ಅಂಗಿಯ ಬಣ್ಣವನ್ನು ನೋಡು, ಹಾಗೆಯೇ ಕಾಗೆಯ ಮೈಬಣ್ಣವನ್ನೂ ಗಮನಿಸಿ ನೋಡು. ನನ್ನ ಅಗತ್ಯಕ್ಕಿಂತಲೂ, ಅದರ ಅವಶ್ಯಕತೆಯೇ ಹೆಚ್ಚಾಗಿದೆ ಎಂದು ಅನಿಸುವುದಿಲ್ಲವೇ? ಹೇಳು. ಯೋಚನೆ ಮಾಡಬೇಡ. ನಾನೀಗಲೇ ಹೋಗಿ ಮತ್ತೊಂದು ಸಾಬೂನನ್ನು ತರುವೆ,” ಎಂದು.
ಮತ್ತೊಂದು ದಿನ. ದುಃಖದಿಂದ ಚಿಂತಾಕ್ರಾಂತನಾಗಿ ಕುಳಿತಿದ್ದ ಒಬ್ಬ ವ್ಯಕ್ತಿಯನ್ನು, ದಾರಿಯಲ್ಲಿ ನಸೀರುದ್ದೀನನು ಕಂಡ. ಅವನ ಬಳಿಗೆ ಹೋಗಿ, ಅದಕ್ಕೆ ಕಾರಣವೇನೆಂದು ವಿಚಾರಿಸಲಾಗಿ, ಆ ವ್ಯಕ್ತಿ ಹೇಳಿದ, “ಸಹೋದರ! ಏಕೋ ಏನೋ, ನನಗೆ ಜೀವನದಲ್ಲಿ ಯಾವುದರಲ್ಲೂ ಆಸಕ್ತಿಯೇ ಇಲ್ಲ. ನನ್ನ ಬಳಿ ಬೇಕಾದಷ್ಟು ಹಣವಿದೆ. ಒಳ್ಳೆಯ ಹೆಂಡತಿ, ಮಕ್ಕಳು ಇದ್ದೂ ಸಹ ನನಗೆ ಸಂತೋಷವಿಲ್ಲ.” ಅದನ್ನು ಕೇಳಿಸಿಕೊಳ್ಳುತ್ತಿದ್ದ ನಸೀರುದ್ದೀನನು, ಒಂದು ಮಾತನ್ನೂ ಆಡದೇ, ಆ ಪ್ರಯಾಣಿಕನ ಕೈಯಲ್ಲಿದ್ದ ಚೀಲವನ್ನು ಥಟ್ಟನೆ ಕಿತ್ತುಕೊಂಡು, ವೇಗವಾಗಿ ಓಡತೊಡಗಿದ. ನಸೀರುದ್ದೀನನ್ನು ಹಿಡಿದು, ತನ್ನ ಚೀಲವನ್ನು ವಾಪಸ್ಸು ಕಿತ್ತುಕೊಳ್ಳಲು, ಆ ವ್ಯಕ್ತಿಯೂ ಸಹ ವೇಗವಾಗಿ ಓಡಲು ಯತ್ನಿಸಿದ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗೆ ಸ್ವಲ್ಪ ದೂರ ಓಡಿದ ಮೇಲೆ, ಆ ಚೀಲವನ್ನು ರಸ್ತೆಯ ಬದಿಯಲ್ಲಿ ಇಟ್ಟು, ನಸೀರುದ್ದೀನನು ತಾನೊಂದು ಮರದ ಹಿಂದೆ ಬಚ್ಚಿಟ್ಟುಕೊಂಡು, ಗಮನಿಸತೊಡಗಿದ. ಬಹು ಆಯಾಸದಿಂದ ಓಡಿ ಬರುತ್ತಿದ್ದ ಆ ಪ್ರಯಾಣಿಕನು, ತನ್ನ ಚೀಲವು ಕಾಣಿಸಿದ ಕೂಡಲೇ ಅತ್ಯಂತ ಸಂತೋಷದಿಂದ ಕೂಗುತ್ತಾ ಅದನ್ನು ತೆಗೆದುಕೊಳ್ಳಲು ಓಡಿ ಬಂದ.
ಆಗ ಹೊರಬಂದ ನಸೀರುದ್ದೀನನು, ನಗುತ್ತಾ ಕೇಳಿದ, “ಇದೇ ಸಂತೋಷ, ಆನಂದ! ಈಗ ನಿನಗದು ಸಿಕ್ಕಿತಲ್ಲವೇ?” ಎಂದು.
ಪ್ರಶ್ನೆಗಳು
೧ ನಸೀರುದ್ದೀನನ ಹೆಂಡತಿಗೆ ತುಂಬಾ ಕೋಪ ಬಂದುದೇಕೆ?
೨. ಅದಕ್ಕೆ ನಸೀರುದ್ದೀನನು ಕೊಟ್ಟ ಸಮಾಧಾನವೇನು?
೩. ಪ್ರಯಾಣಿಕನಿಗೆ ಸಂತೋಷದ ಅನುಭವವು ದೊರೆಯಲು, ನಸೀರುದ್ದೀನನು ಏನು ಮಾಡಿದನು?
[ಕೃಪೆ: ಸ್ಟೋರೀಸ್ ಫಾರ್ ಚಿಲ್ಡ್ರನ್ – 2
ಶ್ರೀ ಸತ್ಯಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್, ಪ್ರಶಾಂತಿ ನಿಲಯಂ.]