ಯೋಗಕ್ಷೇಮಂ ವಹಾಮ್ಯಹಮ್

Print Friendly, PDF & Email
ಯೋಗಕ್ಷೇಮಂ ವಹಾಮ್ಯಹಮ್

ಒಬ್ಬ ಪ್ರಸಿದ್ಧ ಪಂಡಿತನು, ಅಲ್ಲಿಯ ಮಹಾರಾಜನ ಆಸ್ಥಾನದಲ್ಲಿ ಭಗವದ್ಗೀತೆಯ ಮೇಲೆ ಪ್ರವಚನಗಳನ್ನು ಕೊಡುತ್ತಿದ್ದ. ಒಂದು ದಿನ,

“ಅನನ್ಯಾ ಶ್ಚಿಂತಯಂತೋಮಾಂ

ಯೇ ಜನಾಃ ಪರ್ಯುಪಾಸತೇ

ತೇಷಾಮ್ ನಿತ್ಯಾಭಿಯುಕ್ತಾನಾಮ್

ಯೋಗಕ್ಷೇಮಂ ವಹಾಮ್ಯಹಮ್ II”

ಎಂಬ ಶ್ಲೋಕದ ಬಗ್ಗೆ, ಆ ಪಂಡಿತನು ಅತ್ಯಂತ ಉತ್ಸಾಹದಿಂದ, ಅದರ ಬಹುಮುಖ ಪರಿಣಾಮಗಳ ಬಗ್ಗೆ ಹಲವಾರು ಉದಾಹರಣೆಗಳ ಸಹಿತವಾಗಿ ವಿವರಿಸುತ್ತಿದ್ದ.

King questioning the pandit.

ಆದರೆ, ಮಹಾರಾಜನಿಗಾದರೋ ಅದಾವುದೂ ಒಪ್ಪಿಗೆಯಾಗದೆ, ಅರ್ಥವು ಸರಿಯಾಗಿಲ್ಲವೆಂದು ತಲೆಯಲ್ಲಾಡಿಸಿದ. ಪಂಡಿತನು ನೀಡಿದ ಪ್ರತಿ ವಿವರಣೆಯ ಸತ್ಯತೆಯ ಬಗ್ಗೆಯೂ ವಾದಿಸತೊಡಗಿದ.

ಆ ಪಂಡಿತನಾದರೋ ಹಲವಾರು ಮಹಾರಾಜರುಗಳ ಆಸ್ಥಾನದಲ್ಲಿ ‘ಶ್ರೇಷ್ಠ ಪಂಡಿತ’ನೆಂದು ಅನೇಕ ಬಿರುದುಗಳ ಮೂಲಕ ಗೌರವಿಸಲ್ಪಟ್ಟಿದ್ದವನು.

ಆದರೆ ಈ ಮಹಾರಾಜನಾದರೋ ಎಲ್ಲ ಆಸ್ಥಾನಿಕರ ಮುಂದೆ ತಾನು ಶ್ಲೋಕಕ್ಕೆ ನೀಡಿದ ಅರ್ಥವಿವರಣೆಯು ಸರಿಯಿಲ್ಲವೆಂದು ಹೇಳಿದಾಗ, ಆ ಬಡಪಾಯಿ ಪಂಡಿತನಿಗೆ ತೇಜೋವಧೆಯಾಯಿತು. ತನ್ನನ್ನು ಯಾರೋ ಚೂರಿಯಿಂದ ಇರಿದಷ್ಟು ನೋವಾಯಿತು. ಇದ್ದುದರಲ್ಲಿ ಧೈರ್ಯವನ್ನು ತಂದುಕೊಂಡು ತನ್ನ ಎಲ್ಲ ವಿದ್ವತ್ತಿನ ಆಧಾರದ ಮೇಲೆ ‘ಯೋಗ’ ಮತ್ತು ‘ಕ್ಷೇಮ’ ಎಂಬ ಪದಗಳ ಮೇಲೆ ತನ್ನ ವಾಕ್ ಚಾತುರ್ಯವನ್ನು ಉಪಯೋಗಿಸಿ, ನಿರರ್ಗಳವಾಗಿ ವಿವರಣೆ ನೀಡತೊಡಗಿದ. ಆದರೆ ಮಹಾರಾಜನಾದರೋ ಅದನ್ನೂ ಒಪ್ಪಲಿಲ್ಲ. “ಈ ಶ್ಲೋಕದ ಸರಿಯಾದ ಅರ್ಥವನ್ನು ತಿಳಿದುಕೊಂಡು, ನಾಳೆ ಆಸ್ಥಾನಕ್ಕೆ ಬಂದು ನನ್ನನ್ನು ನೋಡಿ,” ಎಂದು ಹೇಳುತ್ತಾ, ಸಿಂಹಾಸನದಿಂದ ಇಳಿದು, ಒಳಗೆ ಹೊರಟುಹೋದ.

ಇದರಿಂದಾಗಿ, ಆ ಪಂಡಿತನು ತನ್ನಲ್ಲಿ ಉಳಿದಿದ್ದ ಅಲ್ಪ ಸ್ವಲ್ಪ ಧೈರ್ಯವನ್ನೂ ಕಳೆದುಕೊಂಡ. ಚಿಂತೆಯ ಭಾರದಿಂದ ಕುಗ್ಗಿಹೋದ. ಆದ ಅವಮಾನದಿಂದ ತತ್ತರಿಸಿಹೋದ ಆ ಪಂಡಿತನು ಮನೆ ತಲುಪಿ, ಭಗವದ್ಗೀತೆಯ ಗ್ರಂಥವನ್ನು ಒಂದು ಪಕ್ಕದಲ್ಲಿ ಇಟ್ಟು, ಸುಮ್ಮನೆ ಮಲಗಿದ.

ಈ ವರ್ತನೆಯನ್ನು ನೋಡಿ ಆಶ್ಚರ್ಯಗೊಂಡ ಆತನ ಪತ್ನಿಯು ಕೇಳಿದಳು, “ಇದೇನು ಈ ದಿನ ಹೀಗೆ ದುಃಖಿತರಾಗಿ ಅರಮನೆಯಿಂದ ಬಂದಿದ್ದೀರಿ? ಅಲ್ಲಿ ಏನು ನಡೆಯಿತು?” ಎಂದು. ಆಕೆಯು ಒಂದಾದ ಮೇಲೊಂದು ಪ್ರಶ್ನೆಗಳನ್ನು ಹಾಕತೊಡಗಿದಾಗ, ಪಂಡಿತನು ಅರಮನೆಯಲ್ಲಿ ತನಗಾದ ಅವಮಾನ, ಮಹಾರಾಜನು ನೀಡಿರುವ ಆಜ್ಞೆ,- ಇವೆಲ್ಲವನ್ನೂ ಆಕೆಗೆ ವಿವರವಾಗಿ ತಿಳಿಸಿದ. ನಡೆದ ವಿಷಯಗಳ ಬಗ್ಗೆ ಶಾಂತವಾಗಿ ಆಲಿಸುತ್ತಿದ್ದ ಆಕೆ, ಆ ಘಟನೆಯ ಬಗ್ಗೆ ಸ್ವಲ್ಪ ಆಲೋಚಿಸಿ, ನಂತರ ಹೀಗೆ ನುಡಿದಳು, “ಮಹಾರಾಜರು ಹೇಳಿದುದು ಸರಿ. ನೀವು ಆ ಶ್ಲೋಕಕ್ಕೆ ನೀಡಿದ ಅರ್ಥ ವಿವರಣೆ ಸರಿಯಿರಲಿಲ್ಲ. ಅದನ್ನು ಮಹಾರಾಜರು ಹೇಗೆ ಒಪ್ಪುವರು? ಇದರಲ್ಲಿ ತಪ್ಪು ನಿಮ್ಮದೇ, “ಇದನ್ನು ಕೇಳಿದ ಪಂಡಿತನು, ಬಾಲ ತುಳಿಸಿಕೊಂಡ ಹಾವಿನಂತೆ ಆಕ್ರೋಶದಿಂದ ಮೇಲೆದ್ದ, “ಏ ಮೂರ್ಖ ಹೆಂಗಸೇ! ನಿನಗೇನು ಗೊತ್ತಿದೆ? ನನಗಿಂತಲೂ ನೀನು ಅಷ್ಟೊಂದು ಬುದ್ಧಿವಂತಳೇ? ಸದಾ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಾ, ಎಲ್ಲರಿಗೂ ಬಡಿಸುತ್ತಾ ಇರುವ ನಿನಗೆ ನನಗಿಂತಲೂ ಹೆಚ್ಚು ತಿಳಿದಿದೆಯೇ? ಬಾಯಿ ಮುಚ್ಚಿ, ಇಲ್ಲಿಂದ ತೊಲಗು,” ಎಂದು ಆರ್ಭಟಿಸಿದ.

Wife advising the pandit

ಆದರೆ ಆತನ ಪತ್ನಿಯು ಅಲ್ಲಿಂದ ಹೊರಡಲಿಲ್ಲ. ಆಕೆ ಹೇಳಿದಳು, “ಸತ್ಯವನ್ನು ಹೇಳಿದರೆ ಅದಕ್ಕೇಕೆ ಇಷ್ಟೊಂದು ಕೋಪ? ಆ ಶ್ಲೋಕವನ್ನು ಮತ್ತೊಮ್ಮೆ ಓದಿ, ಅದರ ಅರ್ಥದ ಬಗ್ಗೆ ಚಿಂತನೆ ಮಾಡಿ, ನಿಮಗೆ ಸರಿಯಾದ ಉತ್ತರವು ದೊರೆಯುತ್ತದೆ,”
ಆಕೆಯ ಈ ಶಾಂತ, ಮೃದು ವಚನಗಳಿಂದ ಆ ಪಂಡಿತನಿಗೆ ಸ್ವಲ್ಪ ಸಮಾಧಾನವೆನಿಸಿತು.

ಪುನಃ ಎದ್ದು ಕುಳಿತು, ಶ್ಲೋಕದ ಪ್ರತಿಯೊಂದು ಪದದ ಅರ್ಥವನ್ನೂ ವಿವರವಾಗಿ ವಿಶ್ಲೇಷಣೆ ಮಾಡುತ್ತಾ, “ಅನನ್ಯಾಶ್ಚಿಂತಯಂತೋಮಾಂ -” ದ ಹಲವು ಅರ್ಥಗಳನ್ನು, ನಿಧಾನವಾಗಿ, ಜೋರಾಗಿ ಹೇಳತೊಡಗಿದ. ಆಗ ಆತನ ಪತ್ನಿ ನಡುವೆ ಕೇಳಿದಳು, “ಕೇವಲ ಪದಗಳನ್ನು ಕಲಿತು ಅದರ ಅರ್ಥವನ್ನು ವಿವರಿಸುವುದರಿಂದ, ಯಾವ ಪ್ರಯೋಜನವಿದೆ? ನೀವು ಮಹಾರಾಜರ ಬಳಿಗೆ ಹೋದಾಗ ನಿಮ್ಮ ಮನಸ್ಸಿನಲ್ಲಿ ಯಾವ ಉದ್ದೇಶವಿತ್ತು?”

ಇದರಿಂದ ಮತ್ತಷ್ಟು ಕೋಪಗೊಂಡ ಪಂಡಿತನು ಕೋಪದಿಂದ ಅರಚಿದ, “ನಾನು ಈ ಮನೆ, ಸಂಸಾರಗಳನ್ನು ನಿರ್ವಹಿಸಬೇಕಲ್ಲವೇ? ನಿಮ್ಮೆಲ್ಲರಿಗೂ ಆಹಾರ, ಬಟ್ಟೆ ಬರೆಗಳನ್ನು ಒದಗಿಸಬೇಡವೇ? ಆದುದರಿಂದಲೇ ಮಹಾರಾಜನ ಬಳಿಗೆ ಹೋಗಬೇಕಾಯಿತು. ಇಲ್ಲದಿದ್ದರೆ, ಅಲ್ಲಿ ನನಗೇನು ಕೆಲಸವಿತ್ತು?”

ಆಗ ಆತನ ಪತ್ನಿಯು ಉತ್ತರಿಸಿದಳು, “ಈ ಶ್ಲೋಕದಲ್ಲಿ ಶ್ರೀ ಕೃಷ್ಣನು ನೀಡಿರುವ ಭರವಸೆಯನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ, ಮಹಾರಾಜರ ಬಳಿಗೆ ಹೋಗಬೇಕಾದ ಅಗತ್ಯವೇ ಇರುತ್ತಿರಲಿಲ್ಲ. ಬೇರೆ ಯಾವ ಆಲೋಚನೆಯೂ ಇಲ್ಲದೆ, ಅವನ ಮೇಲೆಯೇ ಮನಸ್ಸನ್ನು ನಿಲ್ಲಿಸಿ, ಅವನಿಗೆ ಸಂಪೂರ್ಣ ಶರಣಾದಲ್ಲಿ, ಅಂತಹ ಭಕ್ತರ ಯೋಗಕ್ಷೇಮವನ್ನು ತಾನು ನೋಡಿಕೊಳ್ಳುವೆನೆಂದೂ, ಅವರಿಗೆ ಬೇಕಾದುದೆಲ್ಲವನ್ನು ಅನುಗ್ರಹಿಸುವೆನೆಂದು ಶ್ರೀ ಕೃಷ್ಣನು ಹೇಳಿದ್ದಾನೆ. ಆದರೆ ನೀವಾದರೋ ಈ ಮೂರನ್ನೂ ಮಾಡದೇ ನಿಮಗೆ ಬೇಕಾದ್ದನ್ನು ಕೊಡುವರೆಂಬ ಆಸೆಯಿಂದ ಮಹಾರಾಜರ ಬಳಿಗೆ ಹೋದಿರಿ. ಅದು, ಈ ಶ್ಲೋಕದ ಅರ್ಥಕ್ಕೆ ತದ್ವಿರುದ್ಧ. ಆದುದರಿಂದಲೇ, ಮಹಾರಾಜರು ನಿಮ್ಮ ಅರ್ಥ ವಿವರಣೆಯನ್ನು ಒಪ್ಪಲಿಲ್ಲ.”

Maharaja falling at pandits feet

ತನ್ನ ಪತ್ನಿಯ ಮಾತುಗಳನ್ನು ಕೇಳಿದ ಆ ಪ್ರಸಿದ್ಧ ಪಂಡಿತನು, ಸ್ವಲ್ಪ ಹೊತ್ತು ಮೌನವಾಗಿ ಕುಳಿತ. ಆತನಿಗೆ ತನ್ನ ತಪ್ಪಿನ ಅರಿವಾಯಿತು. ಮರುದಿನ ಆತನು, ಅರಮನೆಗೆ ಹೋಗದೇ ಮನೆಯಲ್ಲೇ ಶ್ರೀ ಕೃಷ್ಣನ ಆರಾಧನೆಯಲ್ಲಿ ಮಗ್ನನಾದ. ಪಂಡಿತರು ಏಕೆ ಬರಲಿಲ್ಲವೆಂದು ಮಹಾರಾಜರು ವಿಚಾರಿಸಿದಾಗ, ಆತನು ಮನೆಯಲ್ಲೇ ಇದ್ದಾನೆಂದು, ಇನ್ನೂ ಅರಮನೆಗೆ ಹೊರಟಿಲ್ಲವೆಂದೂ ತಿಳಿದು ಬಂತು. ಪಂಡಿತನನ್ನು ಕರೆತರಲು ಒಬ್ಬ ದೂತನನ್ನು ಕಳುಹಿಸಿದ. ತಾನು ಬರುವುದಿಲ್ಲವೆಂದು ನಿರಾಕರಿಸುತ್ತಾ ಪಂಡಿತನು ಹೀಗೆ ಹೇಳಿದನು, “ನಾನು ಯಾರ ಬಳಿಗೂ ಹೋಗಬೇಕಾದ ಅಗತ್ಯವಿಲ್ಲ. ನನ್ನ ಪ್ರಭು ಶ್ರೀ ಕೃಷ್ಣನೇ ನನಗೆ ಬೇಕಾದುದನ್ನೆಲ್ಲಾ ಒದಗಿಸಿ, ನನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ. ಇದನ್ನು ಅರ್ಥಮಾಡಿಕೊಳ್ಳದ ನಾನು ಅವಮಾನಕ್ಕೆ ಗುರಿಯಾದೆ. ಈವರೆಗೆ ಒಂದು ಪದಕ್ಕೆ ಇರಬಹುದಾದ ನಾನಾ ವಿಧವಾದ ಅರ್ಥಗಳ ಬಗ್ಗೆ ಅಂಧನಾಗಿ ಯೋಚಿಸಿದೆನೇ ಹೊರತು, ಶ್ರೀ ಕೃಷ್ಣನನ್ನು ನಿರಂತರ ಪೂಜಿಸುತ್ತಾ, ಅವನಿಗೆ ಶರಣಾದಲ್ಲಿ ನಮ್ಮ ಎಲ್ಲಾ ಅಗತ್ಯಗಳನ್ನೂ ಅವನೇ ಪೂರೈಸುವನು ಎಂಬುದನ್ನು ತಿಳಿಯದೇ ಇದ್ದೆ.”

ದೂತನು ಪಂಡಿತನ ಈ ಸಂದೇಶವನ್ನು ರಾಜನಿಗೆ ತಲುಪಿಸಿದ. ಆಗ ಸ್ವತಃ ಮಹಾರಾಜನೇ ಕಾಲ್ನಡಿಗೆಯಲ್ಲಿ ಪಂಡಿತನ ಮನೆಗೆ ಬಂದು ಆತನ ಪಾದಗಳಿಗೆ ನಮಸ್ಕರಿಸುತ್ತಾ ಹೇಳಿದ,” ನಿಮ್ಮ ಅನುಭವದ ಆಧಾರದ ಮೇಲೆ, ನಿನ್ನೆಯ ಶ್ಲೋಕದ ಅರ್ಥವನ್ನು ಇಂದು ಸರಿಯಾಗಿ ತಿಳಿಸಿದಿರಿ,” ಎಂದು.

‘ಆಚರಣೆಯಲ್ಲಿ ಇಡದ ಆಧ್ಯಾತ್ಮಿಕ ವಿಚಾರಗಳ ಬಗ್ಗೆ ಉಪದೇಶ, ಕೇವಲ ವಿದ್ವತ್ಪ್ರದರ್ಶನ ಮತ್ತು ಆಡಂಬರಗಳ ಪ್ರಚಾರ ಸಾಧನ ಮಾತ್ರ’ ಎಂಬುದನ್ನು ಪಂಡಿತನಿಗೆ ಮಹಾರಾಜನು ಹೀಗೆ ಮನವರಿಕೆ ಮಾಡಿಸಿದ.

ಪ್ರಶ್ನೆಗಳು
  1. ಈ ಶ್ಲೋಕವು ಯಾವ ಪವಿತ್ರ ಗ್ರಂಥದಲ್ಲಿ ಬರುತ್ತದೆ?
  2. ಈ ಶ್ಲೋಕದ ಅರ್ಥವೇನು?
  3. ಪಂಡಿತನು ಶ್ಲೋಕಕ್ಕೆ ಕೊಟ್ಟ ಅರ್ಥವಿವರಣೆಯು ಮಹಾರಾಜನಿಗೆ ಏಕೆ ತೃಪ್ತಿಯನ್ನು ಕೊಡಲಿಲ್ಲ?
  4. ರಾಜನಿಗೆ ಅದರ ಅರ್ಥವು ಯಾವಾಗ ಒಪ್ಪಿಗೆಯಾಯಿತು?

Leave a Reply

Your email address will not be published. Required fields are marked *