ಗೋಲ್ಡ್ ಸ್ಮಿತ್ನ ಚಿನ್ನದ ಹೃದಯ
ಗೋಲ್ಡ್ ಸ್ಮಿತ್ನ ಚಿನ್ನದ ಹೃದಯ
ಆಲಿವರ್ ಗೋಲ್ಡ್ಸ್ಮಿತ್‌ನು ಆಂಗ್ಲ ಭಾಷೆಯ ಬಹುದೊಡ್ಡ ಪ್ರಬಂಧಕಾರ, ಕಾದಂಬರಿಕಾರ ಮತ್ತು ನಾಟಕಕಾರನೂ ಸಹ ಆಗಿದ್ದನು. ಅವನೊಬ್ಬ ದಯಾಳು ವ್ಯಕ್ತಿಯಾಗಿದ್ದನು. ಅವನು ಮಕ್ಕಳನ್ನು ಪ್ರೀತಿಸುತ್ತಿದ್ದನು ಮತ್ತು ದೀನ, ದುರ್ಬಲರ ಸಹಾಯಕ್ಕೆ ಸದಾ ಸಿದ್ಧನಾಗಿರುತ್ತಿದ್ದನು.
ಆಲಿವರ್ ಗೋಲ್ಡ್ಸ್ಮಿತ್‌ನು ಯುವಕನಾಗಿದ್ದಾಗ ಮುಂದೆ ವೈದ್ಯನಾಗಬೇಕೆಂದು ಔಷಧಶಾಸ್ತ್ರವನ್ನು ಅಭ್ಯಾಸ ಮಾಡಿದನು. ಆದರೆ ನಂತರ ಅವನು ವೈದ್ಯಕೀಯ ವೃತ್ತಿಯನ್ನು ಮಾಡಲಿಲ್ಲ. ಒಮ್ಮೆ ಒಬ್ಬ ಬಡ ಹೆಂಗಸಿನ ಗಂಡನಿಗೆ ಖಾಯಿಲೆಯಾಗಿತ್ತು. ಕವಿಯ ದಯಾ ಪರತೆಯ ಬಗ್ಗೆ ಕೇಳಿದ್ದ ಆ ಹೆಂಗಸು ಅವನಲ್ಲಿಗೆ ಹೋಗಿ, “ಸ್ವಾಮಿ. ನನ್ನ ಗಂಡನಿಗೆ ಬಹಳ ಖಾಯಿಲೆ ಆಗಿದೆ. ನನ್ನಲ್ಲಿ ಹಣವಿಲ್ಲ ವಾದ್ದರಿಂದ ವೈದ್ಯರಿಂದ ಅವನ ಪರೀಕ್ಷೆ ಮಾಡಿಸುವುದು ಕಷ್ಟವಾಗಿದೆ. ನೀವು ಒಮ್ಮೆ ಬಂದು ನೋಡಲು ಸಾಧ್ಯವೇ?” ಎಂದು ಕೇಳಿದಳು.
ಗೋಲ್ಡ್ಸ್ಮಿತ್‌ನು ಆ ಹೆಂಗಸಿನೊಂದಿಗೆ ಅವಳ ಮನೆಗೆ ಹೋಗಿ ನೋಡಿದಾಗ, ರೋಗಿಯು ಬಹಳ ನಿಶ್ಯಕ್ತನಾಗಿರುವುದು ಕಂಡು ಬಂತು. ಅವನು ಸುತ್ತಲೂ ನೋಡಿದಾಗ ಒಲೆಯಲ್ಲಿ ಬೆಂಕಿ ಇರಲಿಲ್ಲ, ಮಾತ್ರವಲ್ಲದೆ ಅನೇಕದಿನಗಳಿಂದ ಅಡುಗೆ ಮಾಡಿ ಊಟ ಮಾಡಿದ ಯಾವ ಲಕ್ಷಣಗಳೂ ಅಲ್ಲಿ ಕಾಣಿಸಲಿಲ್ಲ. ಅಲ್ಲದೆ ರೋಗಿಗೆ ಹೊದಿಸಲು ಸರಿಯಾದ ಬಟ್ಟೆಯೂ ಇರಲಿಲ್ಲ. ಸ್ವಲ್ಪ ಹೊತ್ತು ಮಾತನಾಡಿದ ನಂತರ ಅವನು, “ಅಮ್ಮಾ, ನಾನು ಕೆಲವು ಮಾತ್ರೆಗಳನ್ನು ಕಳಿಸುತ್ತೇನೆ, ಅವುಗಳನ್ನು ತಪ್ಪದೆ ರೋಗಿಗೆ ಕೊಡಿ” ಎಂದು ಹೇಳಿದನು.
ಅವನು ಮನೆಗೆ ಹೋಗಿ, ಒಂದು ಚಿಕ್ಕ ಪೆಟ್ಟಿಗೆಯಲ್ಲಿ ಹತ್ತು ಗಿನಿ ಹಣವನ್ನು ಹಾಕಿ ಅದರ ಮೇಲೊಂದು ಚೀಟಿಯನ್ನು ಇಟ್ಟನು. ಆ ಚೀಟಿಯಲ್ಲಿ ಅವನು, “ಇದನ್ನು ಬ್ರೆಡ್ಡು, ಹಾಲು ಮತ್ತು ಇದ್ದಿಲನ್ನು ತರಲು ಉಪಯೋಗಿಸಿ. ಸಮಾಧಾನವಾಗಿರಿ, ಒಳ್ಳೆಯದಾಗುವುದನ್ನು ನಿರೀಕ್ಷಿಸಿ” ಎಂದು ಬರೆದಿದ್ದನು.
ಅವನು ಆ ಪೆಟ್ಟಿಗೆಯನ್ನು ಒಬ್ಬ ಸೇವಕನ ಹತ್ತಿರ ರೋಗಿಗೆ ಕಳಿಸಿದನು. ರೋಗಿಯು ಆ ಪೆಟ್ಟಿಗೆಯಲ್ಲಿ ವೈದ್ಯರ ಔಷಧಗಳಿಗಿಂತ ಉತ್ತಮವಾದ ಪರಿಹಾರವಿರುವುದನ್ನು ಕಂಡುಕೊಂಡನು. ಕೆಲವೇ ವಾರಗಳಲ್ಲಿ ರೋಗಿಯು, ತಾನೇ ಹೋಗಿ ವೈದ್ಯರನ್ನು ಭೇಟಿಮಾಡಲು ಶಕ್ತನಾದನು ಮತ್ತು ಸಮಯಕ್ಕೆ ಸರಿಯಾಗಿ ನೀಡಿದ ಸಹಾಯಕ್ಕಾಗಿ ಅವನಿಗೆ ಕೃತಜ್ಞತೆ ಸಲ್ಲಿಸಿದನು.
ಪ್ರಶ್ನೆಗಳು:
- ಗೋಲ್ಡ್ ಸ್ಮಿತ್ ಯಾರು?
- ರೋಗಿಯು ಯಾವುದರಿಂದ ನರಳುತ್ತಿದ್ದನು?
- ವೈದ್ಯರು ನೀಡಿದ ಔಷಧ ಯಾವುದು?
- ಈ ಕಥೆಯ ನೀತಿ ಏನು?
[ಆಕರ: ಸ್ಟೋರೀಸ್ ಫಾರ್ ಚಿಲ್ಡ್ರನ್ – II
ಪ್ರಕಟಣೆ: ಶ್ರೀ ಸತ್ಯಸಾಯಿ ಬುಕ್ಸ್ & ಪಬ್ಲಿಕೇಷನ್ಸ್ ಟ್ರಸ್ಟ್, ಪ್ರಶಾಂತಿನಿಲಯಂ]