ಮತ್ತಷ್ಟು ರೆಡ್ಡಿಂಗ್
ಗುರುಗಳ ಉಲ್ಲೇಖ: ಪಂಚಭೂತಗಳ ಬಗ್ಗೆ ಭಗವಾನ್ ಬಾಬಾರವರ ಪ್ರಶ್ನೋತ್ತರವಾಹಿನಿ
ಪ್ರಶ್ನೋತ್ತರವಾಹಿನಿ: ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರಗಳು
I. ದೇಹ ಮತ್ತು ಇಂದ್ರಿಯಗಳು
ಪ್ರಶ್ನೆ: ಮಾನವ ದೇಹವು ಪಂಚಭೂತಗಳಿಂದ ಆಗಿದೆ ಎಂದು ಏಕೆ ಹೇಳುತ್ತಾರೆ?
ಪ್ರ: ಪಂಚಭೂತಗಳು ಯಾವುವು?
ಉ: ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ. ಸಾಮಾನ್ಯ ಮಾತುಗಳಲ್ಲಿ ಆಕಾಶ, ಗಾಳಿ, ಬೆಂಕಿ, ನೀರು ಮತ್ತು ಮಣ್ಣು.
ಪ್ರ: ಇವು ಎಲ್ಲಿಂದ ಹುಟ್ಟಿದವು?
ಉ: ಪ್ರತಿಯೊಂದು ಮುಂದಿನ ದ್ರವ್ಯವು, ಅದರ ಹಿಂದಿನದರಿಂದ ಹುಟ್ಟಿತು.
ಪ್ರ: ಹಾಗಾದರೆ,ಮೊಟ್ಟ ಮೊದಲನೆಯದರ ಮೂಲ, ಅಂದರೆ ಈ ಐದರ ಮೂಲ ಯಾವುದು?
ಉ: ನಿರ್ವಿಕಾರ, ಅಚಲ, ಪರಿಪೂರ್ಣ ‘ಬ್ರಹ್ಮನ್’.
ಪ್ರ: ಪಂಚಭೂತಗಳಿಗೂ, ಮಾನವ ದೇಹಕ್ಕೂ ನಡುವೆ ಇರುವ ಸಂಬಂಧ ಎಂಥದ್ದು?
ಉ: ಬ್ರಹ್ಮದಿಂದ ಯತ್ನ ಮತ್ತು ಮಹತ್ (ಪ್ರಯತ್ನ ಮತ್ತು ಬ್ರಹ್ಮಾಂಡ) ಹುಟ್ಟಿದವು. ಇವುಗಳಿಂದ ಆಕಾಶ ಹುಟ್ಟಿತು. ಆಕಾಶದಿಂದ ವಾಯು; ವಾಯುವಿನಿಂದ ಅಗ್ನಿ; ಅಗ್ನಿಯಿಂದ ಜಲ; ಜಲದಿಂದ ಪೃಥ್ವಿ; ಉದ್ಭವಿಸಿದವು. ಈ ಐದು ದ್ರವ್ಯಗಳ ಮಿಶ್ರಣದ ಫಲವೇ ಮನುಷ್ಯ ದೇಹ.
ಪ್ರ: ದೇಹದಲ್ಲಿ ಈ ದ್ರವ್ಯಗಳು ಯಾವ ರೂಪದಲ್ಲಿ ಉಳಿದಿರುತ್ತವೆ?
ಉ: ಪ್ರತಿಯೊಂದು ಭೂತವೂ [ದ್ರವ್ಯವೂ] ಮತ್ತೆ ಐದಾಗಿ ವಿಭಜಿತವಾಗಿ, ದೇಹದ ರಚನೆಯಲ್ಲಿ ಸೇರಿವೆ.
ಪ್ರ: ಮೊದಲನೆಯದಾದ ಆಕಾಶವು ಪಡೆದುಕೊಂಡ ಐದು ರೂಪಗಳು ಯಾವುವು?
ಉ: ಜ್ಞಾತಾ (ಗ್ರಹಿಸುವವನು), ಮನಸ್ಸು, ಬುದ್ಧಿ, ಚಿತ್ತ, ಅಹಂಕಾರ – ಇವೇ ಆಕಾಶ ಪಂಚಕಗಳು.
ಪ್ರ: ದೇಹದಲ್ಲಿ ಎಂದು ಮಾತನಾಡುವಾಗ ಇವುಗಳನ್ನು ಹೇಗೆ ಸೂಚಿಸಲಾಗುತ್ತದೆ?
ಉ: ಅವುಗಳನ್ನು ಅಂತರಿಂದ್ರಿಯಗಳೆಂದು ಗುರುತಿಸಲಾಗಿದೆ.
ಪ್ರ: ಮುಂದಿನ ದ್ರವ್ಯವಾದ ವಾಯುವಿನ ಐದು ರೂಪಗಳು ಯಾವುವು?
ಉ: ಸಮಾನ, ವ್ಯಾನ, ಉದಾನ, ಪ್ರಾಣ ಮತ್ತು ಅಪಾನ.
ಪ್ರ: ದೇಹದಲ್ಲಿ ಅವುಗಳನ್ನು ಏನೆಂದು ಕರೆಯುತ್ತಾರೆ?
ಉ: ಪಂಚ ಪ್ರಾಣಗಳು ಎಂದು.
ಪ್ರ: ಅಗ್ನಿಯ ವಿಷಯವೇನು?
ಉ: ಆ ದ್ರವ್ಯವು, ಕಿವಿ, ಚರ್ಮ, ಕಣ್ಣು, ನಾಲಗೆ ಮತ್ತು ಮೂಗು ಎಂಬ ಪಂಚೇಂದ್ರಿಯಗಳಾಯಿತು.
ಪ್ರ: ಈ ಗುಂಪನ್ನು ವಿಶಿಷ್ಟವಾಗಿ ಗುರುತಿಸುವುದು ಹೇಗೆ?
ಉ: ಜ್ಞಾನೇಂದ್ರಿಯಗಳು, ಗ್ರಹಿಕೆಯ ಅಂಗಗಳು ಎಂಬುದಾಗಿ.
ಪ್ರ: ಜಲ ಪಂಚಕಗಳು ಅಥವಾ ‘ಅಪ್’ ದ್ರವ್ಯದ ಐದು ರೂಪಗಳನ್ನು ಹೇಳಿ?
ಉ: ಶಬ್ದ, ಸ್ಪರ್ಶ, ರೂಪ, ರಸ, ಗಂಧ
ಪ್ರ: ಇವುಗಳಿಗೂ ಒಂದು ವಿಶೇಷವಾದ ಹೆಸರಿದೆಯೇ?
ಉ: ಇವುಗಳನ್ನು ಪಂಚ ತನ್ಮಾತ್ರೆಗಳು ಎನ್ನುತ್ತಾರೆ. ಇವು ಸೂಕ್ಷ್ಮ ಅಂಶಗಳು.
ಪ್ರ: ಉಳಿದದ್ದು ಪೃಥ್ವಿ ದ್ರವ್ಯ. ಇದು ದೇಹದಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ?
ಉ: ಧ್ವನ್ಯಂಗಗಳು, ಕೈಗಳು, ಕಾಲುಗಳು, ಗುಹ್ಯಂಗಗಳು ಮತ್ತು ವಿಸರ್ಜನಾ ಅಂಗಗಳು.
ಪ್ರ: ಇವುಗಳಿಗೆ ಹೆಸರು?
ಉ: ಕರ್ಮೇಂದ್ರಿಯಗಳು ಎನ್ನುತ್ತಾರೆ.
ಪ್ರ: ಪಂಚಭೂತಗಳಿಂದಾದ, ಈ ಮಾನವ ದೇಹವನ್ನು ಒಂದು ಘಟಕವಾಗಿ ಪರಿಗಣಿಸುವುದಕ್ಕೆ ಬದಲು, ವೇದಾಂತಿಗಳು ಅದರಲ್ಲಿ ಅನೇಕ ಘಟಕಗಳಿವೆ ಎನ್ನುತ್ತಾರೆ. ನಿಜವೇ?
ಉ: ಅನೇಕ ಅಲ್ಲ. ಮೂರು. ಕೆಲವರು ನಾಲ್ಕು ಇವೆ ಎನ್ನುತ್ತಾರೆ.
ಪ್ರ: ಅವು ಯಾವುವು? ಅವುಗಳ ಹೆಸರೇನು? ಮೂರು, ನಾಲ್ಕನೆಯವು?
ಉ: ಸ್ಥೂಲ ದೇಹ, ಸೂಕ್ಷ್ಮದೇಹ, ಕಾರಣ ದೇಹ. ಕೆಲವರು ಮಹಾಕಾರಣ ದೇಹವನ್ನೂ ಹೇಳುತ್ತಾರೆ.
ಪ್ರ: ಸ್ಥೂಲ ದೇಹ ಎನ್ನುವುದು ಯಾವುದು?
ಉ: ಈಗಾಗಲೇ ನಾನು ಹೇಳಿರುವ ೨೫ಭೂತ ತತ್ವಗಳಿಂದ ಆಗಿರುವ ದೇಹ ಎಂದರ್ಥ.
ಪ್ರ: ಹಾಗಾದರೆ ಸೂಕ್ಷ್ಮದೇಹ ಎನ್ನುವುದು ಯಾವುದು?
ಉ: ಐದು ಜ್ಞಾನೇಂದ್ರಿಯಗಳು, ಐದು ತನ್ಮಾತ್ರೆಗಳು, ಐದು ಪ್ರಾಣಗಳು, ಮನಸ್ಸು ಮತ್ತು ಬುದ್ಧಿ ಈ ಹದಿನೇಳು ಕೂಡಿ ಸೂಕ್ಷ್ಮದೇಹವಾಗುತ್ತದೆ.
ಪ್ರ: ಇದಕ್ಕೆ ಸೂಕ್ಷ್ಮದೇಹ ಎಂದು ಮಾತ್ರ ಹೆಸರೋ, ಬೇರೆ ಹೆಸರಿದೆಯೋ?
ಉ: ಯಾಕಿಲ್ಲ? ಇದೆ. ಅದಕ್ಕೆ ‘ತೈಜಸ’ ಎಂದೂ ಕರೆಯುತ್ತಾರೆ.
ಪ್ರ: ಅದು ಯಾವುದೋ ಒಂದು ಅವಸ್ಥೆಯೊಂದಿಗೆ ಸಂಬಂಧಿಸಿದೆಯೇ?
ಉ: ಹೌದು.
ಪ್ರ: ಅದರ ಹೆಸರೇನು?
ಉ: ಸ್ವಪ್ನಾವಸ್ಥೆ.
ಪ್ರ: ಸ್ಥೂಲ ದೇಹಕ್ಕೆ ನಿರ್ದಿಷ್ಟವಾದ ಒಂದು ಅವಸ್ಥೆ ಇದೆಯೇ?
ಉ: ಇದೆ. ಅದಕ್ಕೂ ಇದೆ.
ಪ್ರ: ದಯವಿಟ್ಟು ಅದರ ಹೆಸರು ಹೇಳಿ?
ಉ: ಜಾಗೃತ್ ಅವಸ್ಥೆ, ಎಚ್ಚರವಾಗಿರುವ ಸ್ಥಿತಿ.
ಪ್ರ: ಕಾರಣ ದೇಹ ಎನ್ನುವುದು ಯಾವುದು?
ಉ: ಅಲ್ಲಿ ಚಿತ್ತವು, ಜ್ಞಾತದೊಂದಿಗೆ ಕೂಡಿಕೊಂಡಿದೆ.
ಪ್ರ: ಅದರ ಅವಸ್ಥೆ ಯಾವುದು?
ಉ: ಸುಷುಪ್ತಿ; ಆಳವಾದ ನಿದ್ರೆ.
ಪ್ರ: ಮಹಾಕಾರಣ ದೇಹ ಎಂದು ಯಾವುದಕ್ಕೆ ಹೇಳುತ್ತಾರೆ?
ಉ: ಯಾವುದೇ ದ್ರವ್ಯತತ್ವದೊಂದಿಗೆ ಬೆರೆಯದ ಪರಿಶುದ್ಧ ಚಿತ್ತ ಅದು. ಶಾಶ್ವತ ಸಾಕ್ಷಿ, ಸ್ವಯಂಪ್ರಭೆ; ಅದನ್ನೇ ಮಹಾಕಾರಣ ದೇಹ ಎನ್ನುತ್ತಾರೆ.
ಪ್ರ: ಮಿಕ್ಕವುಗಳಿಗಿರುವಂತೆ ಅದಕ್ಕೂ ಹೆಸರಿದೆಯೇ?
ಉ: ಹೌದು. ‘ಹಿರಣ್ಯಗರ್ಭ’ ಎಂದು ಅದರ ಹೆಸರು.
ಪ್ರ: ಅದರ ಅವಸ್ಥೆ?
ಉ: ಅದು ಅವಸ್ಥಾ ರಹಿತ. ಪ್ರಜ್ಞೆಯ ಎಲ್ಲ ಅವಸ್ಥೆಗಳಿಗೆ ಅದು ಅತೀತವಾದುದರಿಂದಲೇ ಅದನ್ನು ‘ಅಕ್ಷರ ಪುರುಷ’ ಎಂದು ವರ್ಣಿಸುತ್ತಾರೆ.
ಪ್ರ: ಮತ್ತೆ ಸ್ಥೂಲ ದೇಹದ ವಿಷಯಕ್ಕೆ ಬರುವುದಾದರೆ, ಅದನ್ನು ರೂಪಿಸಿರುವ ಪಂಚಭೂತಗಳಿಗೆ ಅನ್ವಯಿಸಬಹುದಾದ ನಿರ್ದಿಷ್ಟ ಉತ್ಪನ್ನಗಳು ಯಾವುವು?
ಉ: ಪೃಥ್ವಿಯಿಂದ ಮೂಳೆ, ಚರ್ಮ, ಮಾಂಸ, ರಕ್ತನಾಳ ಮತ್ತು ಕೂದಲು.
ಪ್ರ: ಜಲಕ್ಕೆ?
ಉ: ರಕ್ತ, ಮೂತ್ರ, ಜೊಲ್ಲು, ಶ್ಲೇಷ್ಮ ಮತ್ತು ಮಿದುಳು.
ಪ್ರ: ಅಗ್ನಿಯಿಂದ?
ಉ: ಹಸಿವೆ, ಬಾಯಾರಿಕೆ, ನಿದ್ರೆ, ಆಲಸ್ಯ, ಗೆಳೆತನ
ಪ್ರ: ವಾಯು ತತ್ವವು ಏನನ್ನು ಉತ್ಪಾದಿಸುತ್ತದೆ?
ಉ: ಚಟುವಟಿಕೆ, ಚಲನೆ, ವೇಗ, ನಾಚಿಕೆ, ಹೆದರಿಕೆ.
ಪ್ರ: ಹೀಗೆಯೇ ಆಕಾಶ ತತ್ವವೂ ಕೆಲವು ಪರಿಣಾಮಗಳಿಗೆ ಕಾರಣವಾಗಿರಬೇಕಲ್ಲವೇ?
ಉ: ಹೌದು, ಕಾಮ, ಕ್ರೋಧ, ಲೋಭ, ಮದ ಮತ್ತು ಮಾತ್ಸರ್ಯ
ಪ್ರ: ಮನುಷ್ಯನಿಗೆ ಹಲವು ಕ್ಲೇಶಗಳಿವೆಯಲ್ಲವೇ? ಅವನ ದೇಹದ ರಚನೆಯ ಪರಿಣಾಮಗಳಿಗೂ, ಅವನ ಕ್ಲೇಶಗಳಿಗೂ ಸಂಬಂಧವಿದೆಯೇ?
ಉ: ನಿಮಗೆ ಕೆಲವು ಸಂದೇಹಗಳಿರುವಂತೆ ತೋರುತ್ತದೆ. ಮನುಷ್ಯನ ಎಲ್ಲ ಸಂಕಟಗಳಿಗೂ ಕಾರಣ, ಈ ಸ್ಥೂಲ ಗುಣಗಳ ಸಮೂಹ. ಕ್ಲೇಶಗಳು ಬಹುವಾಗಿರುವಂತೆ ತೋರಿದರೂ, ಅವು ನಾಲ್ಕು ಬಗೆ ಮಾತ್ರ. ಅವುಗಳನ್ನು ವಾಸನೆಗಳೆಂದು ಕರೆಯುತ್ತಾರೆ.
ಪ್ರ: ನಾಲ್ಕು ವಾಸನೆಗಳು ಯಾವುವು?
ಉ: ದೇಹ, ಮನಸ್ಸು, ಸಂಪತ್ತು ಮತ್ತು ಸ್ತ್ರೀ. ಬೇರೆ ಕೆಲವು ಇದ್ದರೂ, ಅವು, ಅಂತಿಮವಾಗಿ ಇವುಗಳ ಮೇಲೆಯೇ ನಿಲ್ಲುತ್ತವೆ.
ಪ್ರ: ಮನುಷ್ಯನು ಗರ್ವದಿಂದ ಕುರುಡಾಗಿ ಬಿಂಕ ತೋರಿಸುತ್ತಾನೆ. ಅವನಲ್ಲಿ ಮೇಲೇಳುವ ಈ ಅಹಂ ಯಾವುದು? ಎಷ್ಟು ಬಗೆಯ ಅಹಂಗಳಿವೆ?
ಉ: ನಾಲ್ಕು ಬಗೆ. ಕುಲದ ಗರ್ವ, ಸಿರಿಯ ಗರ್ವ, ಯೌವನದ ಗರ್ವ ಮತ್ತು ವಿದ್ವತ್ತಿನ ಗರ್ವ, ಇನ್ನೂ ಇತರ ಬಗೆಗಳಿದ್ದರೂ, ಅವುಗಳನ್ನು ಈ ನಾಲ್ಕರಲ್ಲೇ ವರ್ಗೀಕರಿಸಬಹುದು.