ಮಾನವ ಸೇವೆಯೇ ಮಾಧವ ಸೇವೆ
ಅಬ್ರಹಾಂ ಲಿಂಕನ್ ೧೮೬೧ರಲ್ಲಿ ಅಮೆರಿಕದ ಅಧ್ಯಕ್ಷನಾಗಿದ್ದನು. ಅವನು ಕರುಣಾಳು, ಸಭ್ಯ, ನ್ಯಾಯ ಪ್ರೇಮಿ ಎಂದು ಪ್ರಖ್ಯಾತನಾಗಿದ್ದನು. ಚಿಕ್ಕಂದಿನಿಂದಲೂ ಅವನಿಗೆ ಪರೋಪಕಾರ ಮಾಡುವ ಪ್ರವೃತ್ತಿ. ಅಮೆರಿಕದ ಅಧ್ಯಕ್ಷನಾದ ಮೇಲೆಯೂ ಅತ್ಯಂತ ಸರಳವಾದ ಜೀವನ ನಡೆಸುತ್ತಾ ತನ್ನ ಗೆಳೆಯರೊಂದಿಗೆ ಪ್ರತಿದಿನ ವಾಯುವಿಹಾರ ಹೋಗುತ್ತಿದ್ದನು. ಒಂದು ದಿನ ಹೀಗೆ ವಾಯುವಿಹಾರ ಮುಗಿಸಿಕೊಂಡು ಹಿಂದಿರುಗುತ್ತಿರುವಾಗ ತನ್ನ ಹಿಂದೆ ಸವಾರನಿಲ್ಲದ ಒಂದು ಕುದುರೆ, ಬೆನ್ನ ಮೇಲೆ ಜೀನು ಸಮೇತ ಬರುತ್ತಿರುವುದನ್ನು ನೋಡಿದನು. ಇದೇಕೆ ಈ ಕುದುರೆ ಹೀಗೆ ಬರುತ್ತಿದೆ? ಇದರ ಸವಾರ ಯಾರಾಗಿರಬಹುದು? ಈಗ ಅವನೆಲ್ಲಿ? ಮುಂತಾದ ಪ್ರಶ್ನೆಗಳು ಗೆಳೆಯರ ನಡುವೆ ಹಾದುಹೋದವು.
ಅವರಿಗೆ ಅದು ತಮ್ಮ ಪರಿಚಯದ ಒಬ್ಬ ವ್ಯಕ್ತಿಯ ಕುದುರೆ ಎಂದು ಅನ್ನಿಸಿತು. “ಇದರ ಒಡೆಯ ಒಬ್ಬ ಮಹಾಕುಡುಕ. ಅಲ್ಲೇ ದಾರಿಯಲ್ಲಿ ಎಲ್ಲೋ ಬಿದ್ದು ಹೋಗಿರಬಹುದು”, ಎಂದರು ಅವರು. “ಹಾಗಾದರೆ ಬನ್ನಿ, ಹೋಗಿ ನೋಡೋಣ. ಪಾಪ, ಅವನಿಗೆ ಸಹಾಯ ಬೇಕಾಗಿರಬಹುದು,” ಎಂದನು ಅಬ್ರಹಾಂ “ನಿನಗೆ ಬುದ್ಧಿಯಿಲ್ಲ, ಸುಮ್ಮನಿರು. ನಾವೇಕೆ ಅವನನ್ನು ಹುಡುಕಿಕೊಂಡು ಹೋಗಬೇಕು? ಅವನು ಅಲ್ಲೇ ಬಿದ್ದು ಬುದ್ದಿ ಕಲಿಯಲಿ. ಕತ್ತಲಾಗುತ್ತಿದೆ ಹೋಗೋಣ”, ಎಂದು ಗೆಳೆಯರು ಖಂಡಿತವಾಗಿ ಹೇಳಿಬಿಟ್ಟರು. ಆದರೆ ಅಬ್ರಹಾಂ ಅವರ ಮಾತನ್ನು ಒಪ್ಪಲಿಲ್ಲ. “ಕ್ಷಮಿಸಿ, ನೀವು ಬೇಕಾದರೆ ಮನೆಗೆ ಹೋಗಿ. ನಾನು ಅವನನ್ನು ನೋಡಿಯೇ ಬರುತ್ತೇನೆ”. ಎಂದು ಹೇಳಿ ಹಿಂದಕ್ಕೆ ಆ ಕುದುರೆ ಬಂದ ದಿಕ್ಕಿಗೆ ನಡೆದನು. ಗೆಳೆಯರು ಹೊರಟು ಹೋದರು. ಸ್ವಲ್ಪ ದೂರ ನಡೆದು ಬಂದಾಗ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಬಿದ್ದಿರುವುದು ಕಾಣಿಸಿತು. ಅವನಿಗೆ ಮೈಮೇಲೆ ಎಚ್ಚರವಿರಲಿಲ್ಲ.
ಕುದುರೆಯ ಮೇಲಿನಿಂದ ಬಿದ್ದ ದುದೈವಿ ವ್ಯಕ್ತಿ ಅವನೇ ಇರಬೇಕೆಂದು ಅಬ್ರಹಾಂ ಭಾವಿಸಿದನು. ಅವನ ಹತ್ತಿರ ಕುಳಿತು, ಕೈಕಾಲು ತಿಕ್ಕಿ ಬಹಳ ಕಷ್ಟದಿಂದ ಅವನಿಗೆ ಪ್ರಜ್ಞೆ ಬರುವ ಹಾಗೆ ಮಾಡಿದನು. ಆಮೇಲೆ ಹಿಡಿದೆಬ್ಬಿಸಿ ತನ್ನ ಮೇಲೆ ಒರಗಿಸಿಕೊಂಡು ಬಹಳ ಶ್ರಮಪಟ್ಟು ತನ್ನ ಮನೆಗೆ ಕರೆತಂದನು. ಯಾವನೋ ದಾರಿಹೋಕ ಕುಡುಕನನ್ನು ಹೀಗೆ ಮನೆಗೆ ಕರೆತಂದನಲ್ಲ ಎಂದು ಮನೆಯವರೆಲ್ಲಾ ಅವನ ಮೇಲೆ ಸಿಟ್ಟಾದರು. ಆದರೆ ಅಬ್ರಹಾಂ ಅದನ್ನು ಲಕ್ಷಿಸಲಿಲ್ಲ. ಶಾಂತನಾಗಿ ಹೇಳಿದನು. “ಇಲ್ಲಿ ನೋಡಿ, ಇವನು ಕುಡುಕನೇ ಇರಬಹುದು. ಆದರೆ ನಮ್ಮ ನಿಮ್ಮ ಹಾಗೆಯೇ ಇವನೂ ಒಬ್ಬ ಮನುಷ್ಯ. ಈಗ ಇವನಿಗೆ ಸಹಾಯ ಮಾಡುವುದು ನಮ್ಮ ಕತವ್ಯ”.
ಅಬ್ರಹಾಂ ಅವನನ್ನು ಸ್ನಾನದ ಮನೆಗೆ ಕರೆದೊಯ್ದು, ತಂಪು ನೀರಿನ ತುಂತುರು ನಲ್ಲಿಯ ಕೆಳಗೆ ಕುಳ್ಳಿರಿಸಿದನು. ಸ್ವಲ್ಪ ಹೊತ್ತಿಗೆ ಅಮಲು ಇಳಿದು ಆ ವ್ಯಕ್ತಿಗೆ ಪೂತಿ ಎಚ್ಚರ ಬಂದಿತು. ತನ್ನ ಸ್ಥಿತಿಯ ಬಗೆಗೆ ಅವನಿಗೆ ತುಂಬಾ ನಾಚಿಕೆಯಾಯಿತು. ಅಬ್ರಹಾಂ ಊಟ ಮಾಡಿಸಿ ಅವನನ್ನು ಮನೆಗೆ ಕಳುಹಿಸಿಕೊಟ್ಟನು.
ಪ್ರಶ್ನೆಗಳು:
- ನೀವು ಯಾವಾಗಲಾದರೂ ತೊಂದರೆಯಲ್ಲಿದ್ದ ವ್ಯಕ್ತಿಗೆ ಸಹಾಯ ಮಾಡಿದ್ದೀರಾ? ಹೌದಾದರೆ, ಏನು ಸಹಾಯ ಮಾಡಿದ್ದೀರಿ? ಆಗ ನಿಮ್ಮ ಅನುಭವ ಹೇಗಿತ್ತು?
- ಲಿಂಕನ್ನರನ್ನು ಅವರ ದೇಶದ ಜನತೆ ಏಕೆ ಅಷ್ಟು ಪ್ರೀತಿಸುತ್ತಿದ್ದರು?
- ಲಿಂಕನ್ನರಂತೆ, ತಮ್ಮ ಜನತೆಯ ಮೇಲೆ ಅಪಾರ ಕರುಣೆ ತೋರಿದ ಬೇರೆ ಯಾರಾದರೂ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ನಿಮಗೆ ತಿಳಿದಿದಿಯೇ? ಗೊತ್ತಿದ್ದರೆ, ಅವರ ಬಗ್ಗೆ ಬರೆಯಿರಿ.