ಸತ್ಯವೇ ದೇವರು (II)
ಬ್ರಿಟಿಷರ ಆಡಳಿತ ಕಾಲದಲ್ಲಿ, ಭಾರತದ ಸ್ವಾತಂತ್ರ್ಯಕ್ಕಾಗಿ, ಮಹಾತ್ಮಾ ಗಾಂಧೀಜಿಯವರ ಜೊತೆ ಹೋರಾಡಿದ ರಾಷ್ಟ್ರನಾಯಕರಲ್ಲಿ ಬಾಲಗಂಗಾಧರತಿಲಕರು ಒಬ್ಬರು.
ವಿದ್ಯಾರ್ಥಿ ದೆಸೆಯಲ್ಲಿಯೇ, ಶಿಸ್ತು ಸನ್ನಡತೆಗಳಿಂದ ಕೂಡಿದ ಬುದ್ಧಿವಂತ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ತಿಲಕರು ತನ್ನ ಅಧ್ಯಾಪಕರುಗಳಲ್ಲಿ ಮೆಚ್ಚುಗೆಯನ್ನು ಪಡೆದಿದ್ದರು. ಅವರು ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ತರಗತಿಯಲ್ಲಿ ಒಂದು ಪ್ರಸಂಗ ನಡೆಯಿತು. ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳು ತರಗತಿಯಿಂದ ಹೊರಗಿದ್ದಾಗ ಯಾರೋ ಒಬ್ಬ ವಿದ್ಯಾರ್ಥಿ ನೆಲಗಡಲೆ ತಿಂದು ಸಿಪ್ಪೆಗಳನ್ನು ಅಧ್ಯಾಪಕರ ಮೇಜಿನ ಬಳಿ ನೆಲದ ಮೇಲೆ ಚೆಲ್ಲಿದ್ದನು. ಘಂಟೆ ಬಾರಿಸಿದಾಗ ಬಿಡುವು ಮುಗಿದು, ಎಲ್ಲಾ ವಿದ್ಯಾರ್ಥಿಗಳು ಒಳಗೆ ಬಂದು ಅವರವರ ಜಾಗಗಳಲ್ಲಿ ಕುಳಿತರು. ಆದರೆ ಆ ನೆಲಗಡಲೆ ಸಿಪ್ಪೆಗಳನ್ನು ಯಾರೂ ಗಮನಿಸಿರಲಿಲ್ಲ. ಅಧ್ಯಾಪಕರು ತರಗತಿಯೊಳಗೆ ಪ್ರವೇಶಿಸಿದಾಗ ತನ್ನ ಮೇಜಿನ ಬಳಿ ನೆಲದಲ್ಲಿ ಹರಡಿ ಕೊಂಡಿದ್ದ ನೆಲಗಡಲೆ ಸಿಪ್ಪೆಗಳನ್ನು ಕಂಡು ಕೋಪಗೊಂಡರು. “ಈ ತುಂಟತನ ಮಾಡಿದ್ದು ಯಾರು?” ಎಂದು ಸಿಟ್ಟಿನಲ್ಲಿ ಕೇಳಿದಾಗ ಮಕ್ಕಳಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.
“ಮತ್ತೊಮ್ಮೆ ಕೇಳುತ್ತಿದ್ದೇನೆ, ಈ ತಪ್ಪು ಮಾಡಿದ ಹುಡುಗ ಎದ್ದು ನಿಲ್ಲದಿದ್ದರೆ, ಆತ ಯಾರೆಂದು ಉಳಿದ ವಿದ್ಯಾರ್ಥಿಗಳು ನನಗೆ ತಿಳಿಸಬೇಕು” ಎಂದು ಘರ್ಜಿಸಿದರು. ವಿದ್ಯಾರ್ಥಿಗಳು ಈ ಅಪರಾಧಿ ಹುಡುಗ ಯಾರಿರಬಹುದೆಂದು ಆಶ್ಚರ್ಯದಿಂದ ಒಬ್ಬರನೊಬ್ಬರು ನೋಡುತ್ತಿದ್ದರು. ಕೋಪಾವಿಷ್ಟರಾದ ಅಧ್ಯಾಪಕರು ಮೇಜಿನ ಮೇಲಿದ್ದ ಬೆತ್ತವನ್ನು ಕೈಗೆತ್ತಿಕೊಂಡು ಅಪರಾಧಿ ಹುಡುಗನನ್ನು ಗುರುತಿಸಲು ನೀವು ನನಗೆ ಸಹಕರಿಸದಿದ್ದರೆ ತರಗತಿಯ ಪ್ರತಿಯೊಬ್ಬರಿಗೂ ನಾನು ಶಿಕ್ಷೆಯನ್ನು ಕೊಡುತ್ತೇನೆ ಎಂದರು. ಹೀಗೆ ಹೇಳುತ್ತಾ ಮುಂದಿನ ಸಾಲಿನ ವಿದ್ಯಾರ್ಥಿಗಳ ಸಮೀಪಕ್ಕೆ ಅಧ್ಯಾಪಕರು ಬಂದಾಗ, ತಿಲಕನು ಎದ್ದು ನಿಂತು, “ಸ್ವಾಮಿ, ನಮ್ಮಲ್ಲಿ ಹೆಚ್ಚಿನವರಿಗೆ ಅಪರಾಧಿ ಹುಡುಗ ಯಾರೆಂಬುದು ತಿಳಿದಿಲ್ಲ. ನೆಲದ ಮೇಲಿರುವ ಸಿಪ್ಪೆಗಳನ್ನು ನಮ್ಮಲ್ಲಿ ಯಾರೂ ನೋಡಿಯೂ ಇಲ್ಲ. ಬಿಡುವಿನ ವೇಳೆ ನಾವು ಹೊರಗೆ ಹೋದಾಗ ಇತರ ತರಗತಿಯ ಹುಡುಗರು ಈ ತುಂಟತನದ ಕೆಲಸ ಮಾಡಿರಲೂಬಹುದು. ಹೀಗಿರುವಾಗ ನಿರಪರಾಧಿಗಳಾದ ವಿದ್ಯಾರ್ಥಿಗಳನ್ನು ಹೊಡೆಯುವುದು ಸರಿಯೇ?” ಎಂದು ಧೈರ್ಯವಾಗಿ ಕೇಳಿದನು. ಗಂಗಾಧರ್ ತಿಲಕನ ಉತ್ತಮ ನಡವಳಿಕೆಯನ್ನು ಅಧ್ಯಾಪಕರು ಚೆನ್ನಾಗಿ ತಿಳಿದಿದ್ದರೂ, ತನ್ನ ಸಿಟ್ಟನ್ನು ನಿಯಂತ್ರಿಸಿಕೊಳ್ಳುವಲ್ಲಿ ಅಸಮರ್ಥರಾದರು.
ಬಾಲ ಗಂಗಾಧರನನ್ನು ಉದ್ದೇಶಿಸಿ, “ನಿನ್ನ ಅತಿ ಬುದ್ಧಿವಂತಿಕೆ ನನ್ನಲ್ಲಿ ತೋರಿಸಬೇಡ. ಆ ಹುಡುಗ ಯಾರೆಂಬುದು ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿರಲೇಬೇಕು ಎಂಬುದು ನನ್ನ ಅಭಿಪ್ರಾಯ. ನೀವು ಹೇಳದೆ ಇದ್ದರೆ ನಾನು ಎಲ್ಲಾ ವಿದ್ಯಾರ್ಥಿಗಳನ್ನೂ ಶಿಕ್ಷಿಸುತ್ತೇನೆ” ಎಂದರು. ತಕ್ಷಣ, ಬಾಲ ಗಂಗಾಧರ, “ಸ್ವಾಮಿ ಈ ವಿಷಯದ ಬಗ್ಗೆ ನಾವು ನಿರಪರಾಧಿಗಳು ಎನ್ನುವುದು ಸತ್ಯ. ಹಾಗಾಗಿ, ನಿಮ್ಮ ಈ ಕ್ರಮ ಸಮರ್ಪಕವೂ ಅಲ್ಲ, ನ್ಯಾಯ ಯುಕ್ತವೂ ಅಲ್ಲ ಎನ್ನುವುದು ನನ್ನ ಅಭಿಪ್ರಾಯ. ನಿರಪರಾಧಿ ಮಕ್ಕಳನ್ನು ಶಿಕ್ಷಿಸುವುದನ್ನು ನಾನು ನೋಡಲಾರೆ. ಆದುದರಿಂದ ತರಗತಿಯಿಂದ ಹೊರಗೆ ಹೋಗಲು ನನಗೆ ಅನುಮತಿ ಕೊಡಿ” ಎಂದು ವಿನಯಪೂರ್ವಕವಾಗಿ ಅಧ್ಯಾಪಕರಲ್ಲಿ ನಿವೇದಿಸಿಕೊಂಡನು. ಅಧ್ಯಾಪಕರು ಏನನ್ನೋ ಹೇಳುವುದರೊಳಗಾಗಿ ಬಾಲ ಗಂಗಾಧರನು ತನ್ನ ಪುಸ್ತಕಗಳನ್ನು ಎತ್ತಿ ಕೊಂಡು ತರಗತಿಯಿಂದ ನಡೆದೇ ಬಿಟ್ಟನು.
ಬಾಲ ಗಂಗಾಧರನ ಸತ್ಯ ಸಂಧತೆ, ನ್ಯಾಯ ಪರತೆ ಮತ್ತು ಧೈರ್ಯವನ್ನು ಕಂಡು ಇತರ ವಿದ್ಯಾರ್ಥಿಗಳು ಆತನನ್ನು ಮೆಚ್ಚಿ ಕೊಂಡರು. ಅಧ್ಯಾಪಕರಿಗೂ ಆತನ ನಡವಳಿಕೆ ಮೆಚ್ಚುಗೆಯಾಯಿತು. ಶಾಂತ ಚಿತ್ತರಾದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಬಾಲಗಂಗಾಧರನು ಸಾಮಾನ್ಯ ಹುಡುಗನಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ಆತನ ಹಾಗೆ ಶಿಸ್ತು ಮತ್ತು ಸತ್ಯ ನಿಷ್ಠೆಯನ್ನು ಬೆಳೆಸಿಕೊಂಡರೆ ನಮ್ಮ ದೇಶದ ಭವಿಷ್ಯ ಉಜ್ವಲವಾಗುವುದು” ಎಂದರು. ಸತ್ಯ ಸಂಧತೆ, ನ್ಯಾಯ ಪರತೆ ಮುಂತಾದ ಮೌಲ್ಯಗಳ ಮೇಲಿನ ಆತನ ಅನನ್ಯವಾದ ಪ್ರೇಮ, ಇವೆಲ್ಲವೂ ಬಾಲಗಂಗಾಧರನನ್ನು ನಮ್ಮ ದೇಶದ ಒಬ್ಬ ಮಹಾನಾಯಕನನ್ನಾಗಿ ಮಾಡಿತು. ಇಂತಹ ಉದಾತ್ತ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರಿಂದ, ಅವರು ನಮ್ಮ ದೇಶದ ಎಲ್ಲಾ ಜನರ ಪ್ರೀತಿ, ಗೌರವ ಹಾಗು ಮೆಚ್ಚುಗೆಗಳನ್ನು ಪಡೆದು “ಲೋಕಮಾನ್ಯ ತಿಲಕ ” ಎಂದು ಪ್ರಸಿದ್ಧಿ ಪಡೆದರು.
ಪ್ರಶ್ನೆಗಳು:
- ಅಧ್ಯಾಪಕರು ಮಾಡಿದ ಪ್ರಮಾದ (ತಪ್ಪು) ಏನು?
- ಬಾಲ ಗಂಗಾಧರನು ತರಗತಿಯಿಂದ ಏಕೆ ಹೊರಗೆ ಹೋದನು?
- ಒಂದು ವೇಳೆ ಈ ಪ್ರಕರಣ ನಡೆದ ದಿನ ಬಾಲ ಗಂಗಾಧರನ ತರಗತಿಯಲ್ಲಿ ನೀವು ಇರುತ್ತಿದ್ದರೆ ಏನು ಮಾಡುತ್ತಿದ್ದಿರಿ?