ಸಂತ ಏಕನಾಥರು
ಮಹಾರಾಷ್ಟ್ರದ ಪೈಥಾನ್ ಎಂಬಲ್ಲಿ ಏಕನಾಥರು ಜನಿಸಿದರು. ಹುಟ್ಟಿದ ಕೆಲವೇ ದಿನಗಳಲ್ಲಿ ತಂದೆಯನ್ನು ಕಳೆದುಕೊಂಡ ಅವರು, ಯುವಾವಸ್ಥೆಗೆ ಬರುವಷ್ಟರಲ್ಲೇ ತಾಯಿಯನ್ನೂ ಕಳೆದುಕೊಂಡರು. ಧಾರ್ಮಿಕ ನಿಷ್ಠೆ ಮತ್ತು ದೈವ ಭಕ್ತಿಯನ್ನು ಹೊಂದಿದ್ದ ಅವರ ಅಜ್ಜಿ ಮತ್ತು ತಾತ, ಆ ಹುಡುಗನನ್ನು ಬಹು ಪ್ರೇಮ ಮತ್ತು ಅಕ್ಕರೆಯಿಂದ ಸಾಕಿದರು. ತಮ್ಮ ಚಿಕ್ಕ ವಯಸ್ಸಿನಿಂದಲೇ, ರಾಮಾಯಣ, ಭಾಗವತ ಮತ್ತು ಪುರಾಣ ಪುಣ್ಯಕಥೆಗಳನ್ನು ಶ್ರದ್ಧಾ ಭಕ್ತಿ ಮತ್ತು ಏಕಾಗ್ರತೆಯಿಂದ ಆಲಿಸುವ ಅಭ್ಯಾಸವನ್ನು ಏಕನಾಥರು ಹೊಂದಿದ್ದರು. ಅನೇಕ ಸಮಯಗಳಲ್ಲಿ, ಅವುಗಳ ಬಗ್ಗೆ ಸೂಕ್ಷ್ಮವಾದ ಮತ್ತು ನಿರ್ಣಾಯಕ ಪ್ರಶ್ನೆಗಳನ್ನು ಕೇಳುತ್ತಿದ್ದರು.
ದೊಡ್ಡವನಾಗುತ್ತಾ ಬಂದಂತೆ, ತನಗೆ ಒಬ್ಬ ಗುರುವಿನ ಅವಶ್ಯಕತೆಯಿದೆಯೆಂದು, ಏಕನಾಥರಿಗೆ ಅನಿಸತೊಡಗಿತು. ಅದೊಂದು ರಾತ್ರಿ, ಏಕನಾಥರು ತನ್ಮಯತೆಯಿಂದ ಭಗವಂತನ ಮಹಿಮೆಯನ್ನು ಆಲಿಸುತ್ತಿದ್ದರು. ಆಗ ಅವರಿಗೆ ಒಂದು ವಾಣಿಯು ಕೇಳಿಬಂತು. ದಿಯೊಘರ್ (ದೇವಘಡ) ದಲ್ಲಿರುವ ಜನಾರ್ಧನ ಪಂತರ ಬಳಿಗೆ ಹೋಗಿ, ಅವರಿಂದ ದೀಕ್ಷೆಯನ್ನು ಪಡೆಯಬೇಕೆಂದು ಆ ವಾಣಿಯು ಸೂಚಿಸಿತು. ಅದರ ಆಣತಿಯಂತೆ, ದಿಯೊಘರ್ ಗೆ ಅವರು ಪ್ರಯಾಣ ಬೆಳೆಸಿದರು. ಅಲ್ಲಿ, ತಮ್ಮ ಗುರುವಿಗೆ ಅತ್ಯಂತ ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದರು. ಗುರುವಿನ ಅಪ್ಪಣೆಯಂತೆ, ಅವರ ಕಛೇರಿಯಲ್ಲಿ ಗುಮಾಸ್ತೆಯ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸತೊಡಗಿದರು.
ಒಂದು ದಿನ, ಅವರ ಲೆಕ್ಕಾಚಾರದಲ್ಲಿ ಒಂದು ಸಣ್ಣ ತಪ್ಪಾಗಿ, ಸ್ವಲ್ಪ ಹಣವು ಕಡಿಮೆ ಬಿದ್ದಿತು. ಆಗ ಏಕನಾಥರು ಏಕಾಗ್ರಚಿತ್ತದಿಂದ ಸುಮಾರು ಏಳು ಗಂಟೆಗಳ ಕಾಲ ಆ ಲೆಖ್ಖ ಪತ್ರಗಳನ್ನು ಪರಿಶೀಲಿಸಿ, ತಪ್ಪು ಎಲ್ಲಿ ಆಗಿದೆ ಎಂಬುದನ್ನು ಗುರುತಿಸಿ ಕಂಡುಹಿಡಿದರು. ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಅದನ್ನು ತಡೆದುಕೊಳ್ಳಲಾಗದೇ, ಜೋರು ಧ್ವನಿಯಲ್ಲಿ ಹಾಡುತ್ತಾ, ಆ ಕೊಠಡಿಯಲ್ಲಿ ನರ್ತಿಸತೊಡಗಿದರು. ಶಬ್ದ ಕೇಳಿ ಎಚ್ಚರಗೊಂಡ ಗುರುಗಳು, ಬಂದು ಏಕನಾಥರ ಈ ಭಾವ ಪರವಶತೆಯನ್ನು ನೋಡಿ, ಆ ಆನಂದಕ್ಕೆ ಕಾರಣವೇನೆಂದು ಪ್ರಶ್ನಿಸಿದರು. ಕಾರಣವನ್ನು ತಿಳಿದ ಗುರುಗಳು, ಈಗ ಏಕನಾಥರು ದೀಕ್ಷೆಯನ್ನು ಪಡೆಯಲು ಅರ್ಹರಾಗಿದ್ದಾರೆಂದು ಅರಿತರು. ಆಗ, ಆತನನ್ನು ಉದ್ದೇಶಿಸಿ ಹೀಗೆ ಹೇಳಿದರು, “ಲೌಕಿಕ ಲೆಖ್ಖಪತ್ರಗಳ ಮೇಲೆ ತೋರಿಸಿದ ಏಕಾಗ್ರತೆಯಿಂದಾಗಿ ನೀನು ಕೆಲವು ಕಾಸುಗಳನ್ನು ಪಡೆದೆ. ಇದೇ ಏಕಾಗ್ರಚಿತ್ತತೆಯ ಒಂದು ಅಂಶವನ್ನು ನೀನು ಪರಮಾತ್ಮನ ಮೇಲೆ ಇಟ್ಟಲ್ಲಿ, ನೀನು ಸುಜ್ಞಾನವನ್ನು ಪಡೆಯುವೆ. ಈ ಅನಿತ್ಯ ಜಗತ್ತಿನ ಮೇಲಿಟ್ಟಿರುವ ಗಮನವನ್ನು, ನಿತ್ಯಸತ್ಯನಾದ, ಶಾಶ್ವತನಾದ ಆ ಪರಮಾತ್ಮನ ಕಡೆ ತಿರುಗಿಸು,” ಎಂದು. ಹೀಗೆ, ಗುರುಗಳು ಏಕನಾಥರ ಗಮನವನ್ನು ಆಧ್ಯಾತ್ಮಿಕದತ್ತ ತಿರುಗಿಸಿ, ಆತನಿಗೆ ದೀಕ್ಷೆಯನ್ನು ನೀಡಿದರು.
ದೀಕ್ಷೆಯನ್ನು ಸ್ವೀಕರಿಸಿದ ನಂತರ, ಋಷಿ ಮಾರ್ಕಂಡೇಯರು ತಪಸ್ಸು ಮಾಡಿದ್ದ ತಪೋವನಕ್ಕೆ ಹೋಗಿ, ಅಲ್ಲಿ ತಪಸ್ಸನ್ನು ಪ್ರಾರಂಭಿಸಿದರು. ಶ್ರೀ ಕೃಷ್ಣನ ಧ್ಯಾನಮಾಡಿ, ಅವನ ದರ್ಶನ ಭಾಗ್ಯವನ್ನು ಪಡೆದರು. ಆ ಸಮಯದಲ್ಲಿ, ಒಂದು ವಿಷ ಸರ್ಪವು ಅವರ ಮೈಮೇಲೆಲ್ಲಾ ಹರಿದಾಡಿದರೂ ಸಹ, ಅವರನ್ನು ಕಚ್ಚಲಿಲ್ಲ. ಅವರ ಶರೀರದೊಡನೆ ಸಂಪರ್ಕ ಹೊಂದಿದ್ದರಿಂದಾಗಿ, ಅದು ಕಚ್ಚುವ ಶಕ್ತಿಯನ್ನೇ ಕಳೆದುಕೊಂಡಿತು.
ತಪಸ್ಸಿನ ಅವಧಿಯ ನಂತರ, ಗುರುವಿನ ಅಪ್ಪಣೆಯನ್ನು ಪಡೆದು ಏಕನಾಥರು ವೃಂದಾವನ, ಪ್ರಯಾಗ, ಬದರಿನಾಥ್ ಮೊದಲಾದ ಅನೇಕ ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿದರು. ಗಂಗಾ, ಯಮುನಾ, ಗೋದಾವರಿಯಂತಹ ಹಲವು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರು. ಹದಿಮೂರು ವರ್ಷಗಳ ಕಾಲ ಹೀಗೆ ತೀರ್ಥಯಾತ್ರೆ ಮಾಡಿ, ಹಿಂತಿರುಗಿ ಬಂದ ಅವರು, ಗುರುವಿನ ಆಜ್ಞೆಯಂತೆ ಗಿರಿಜಾ ಎಂಬ ಕನ್ಯೆಯೊಡನೆ ವಿವಾಹವಾದರು. ಆಕೆಯು ಅವರ ಆಧ್ಯಾತ್ಮಿಕ ಸಾಧನೆಯಲ್ಲಿ ನೆರವಾಗಿ ನಿಂತಳು.
ಏಕನಾಥರ ಜೀವನದಲ್ಲಿ ನಡೆದ ಅನೇಕ ಘಟನೆಗಳು ಬಹು ಸ್ಪೂರ್ತಿದಾಯಕ. ಯುವಕ ಏಕನಾಥರು ಸಹಿಷ್ಣುಗಳು, ಸೌಮ್ಯ ಸ್ವಭಾವದವರು ಮತ್ತು ಗೌರವ ಪೂರ್ಣ ನಡವಳಿಕೆ ಹೊಂದಿದ್ದವರು. ಯಾವುದೇ ಕಾರಣಕ್ಕೂ ಅವರಿಗೆ ಕೋಪ ಬರುತ್ತಿರಲಿಲ್ಲ. ಒಂದು ದಿನ, ಅವರನ್ನು ದ್ವೇಷಿಸುತ್ತಿದ್ದ ಒಬ್ಬ ವ್ಯಕ್ತಿಯು, ಬೇಕೆಂದೇ ಅವರ ಮೇಲೆ ೧೦೮ ಬಾರಿ ಉಗುಳಿದನು. ಸಹನೆ ಕಳೆದುಕೊಳ್ಳದ ಏಕನಾಥರು ಅವನು ಉಗುಳಿದ ಪ್ರತಿಬಾರಿಯೂ, ಗೋದಾವರಿ ನದಿಯಲ್ಲಿ ಮಿಂದು ಬರುತ್ತಿದ್ದರು. ಇದರಿಂದ ಪಶ್ಚಾತ್ತಾಪಗೊಂಡ ಆ ವ್ಯಕ್ತಿಯು, ಆ ವ್ಯಕ್ತಿಯು, ಅವರ ಪಾದಗಳ ಮೇಲೆ ಬಿದ್ದು, ತನ್ನ ಹೀನ ಕಾರ್ಯಕ್ಕೆ ಕ್ಷಮೆಯನ್ನು ಯಾಚಿಸಿದನು.
ಮಾನವನ ಅತ್ಯಂತ ಕೆಟ್ಟ ಶತ್ರುವೆಂದರೆ ಕೋಪ. ಏಕನಾಥರು ಅದನ್ನು ಸಂಪೂರ್ಣವಾಗಿ ಗೆದ್ದಿದ್ದರು. ಮತ್ತೊಂದು ಸಂದರ್ಭ. ಒಬ್ಬ ದುಷ್ಟನು ಅವರನ್ನು ಬಹುವಾಗಿ ನಿಂದಿಸುತ್ತಾ, ಶಾಪ ಹಾಕುತ್ತಲೇ ಇದ್ದನು. ಆದರೆ, ಅದಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ಏಕನಾಥರು ಶಾಂತವಾಗಿದ್ದರು. ಆ ದುಷ್ಟನಿಗಾದರೋ ಬಹಳ ಆಯಾಸವಾಯಿತು. ಆಗ ಏಕನಾಥರು ಹೀಗೆಂದರು, “ಓ ಅತಿಥಿಯೇ! ಇಷ್ಟು ದೀರ್ಘಕಾಲ ಉಪದೇಶಮಾಡಿ ನಿನಗೆ ಬಹಳ ಆಯಾಸವಾಗಿರಬೇಕು. ಮನೆಗೆ ಬಾ. ನನ್ನ ಹೆಂಡತಿಯು ಅಡುಗೆ ಮಾಡಿದ್ದಾಳೆ. ಬಂದು ನನ್ನ ಜೊತೆಯಲ್ಲಿ ಊಟಮಾಡು,” ಎಂದು. ಆ ಸಂತನ ಸಮಚಿತ್ತತೆಯನ್ನು ಆ ವ್ಯಕ್ತಿಗೆ ನಂಬಲು ಸಾಧ್ಯವಾಗಲಿಲ್ಲ. ಅವರ ಮನೆಯಲ್ಲಿ ಗಿರಿಜಾ ಬಡಿಸಲು ಬಂದಳು. ಆಗ ಆ ದುಷ್ಟನು ಏಕನಾಥರನ್ನು ಕೋಪ ಗೊಳ್ಳುವಂತೆ ಮಾಡಬೇಕೆಂದು, ತನ್ನ ಕೊನೆಯ ಪ್ರಯತ್ನವನ್ನು ಮಾಡಿದನು. ಅವನು ಆಕೆಯ ಬೆನ್ನಿನ ಮೇಲೆ ಜಿಗಿದು ಕುಳಿತನು. ಆದರೆ ಆ ಸಾಧ್ವಿಯಾದರೋ ಕೇವಲ ಮುಗುಳ್ನಕ್ಕಳು ಮಾತ್ರ. ಆಗ ಏಕನಾಥರು ಆಕೆಗೆ ಹೇಳಿದರು, “ಪ್ರಿಯೆ! ನೀನು ನೇರವಾಗಿ ನಿಲ್ಲಲು ಪ್ರಯತ್ನಮಾಡದಿರು. ಹಾಗೆ ಮಾಡಿದಲ್ಲಿ, ಈ ಮಗುವು ಕೆಳಗೆ ಬೀಳಬಹುದು. “ಆಕೆ ಉತ್ತರಿಸಿದಳು, “ನನಗೆ ತಿಳಿದಿದೆ. ಚಿಕ್ಕವನಿದ್ದಾಗ ನಮ್ಮ ಮಗನೂ ಸಹ ಇದೇ ರೀತಿ ಆಟ ಆಡುತ್ತಿದ್ದನಲ್ಲವೇ?”.
ಆ ಮಾತನ್ನು ಕೇಳಿಸಿಕೊಂಡ ಆ ದುಷ್ಟನಿಗೆ ಹೇಗಾಗಿರಬಹುದು! ಅವನು ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಾ, ಅವರಿಬ್ಬರ ಪಾದಗಳ ಮೇಲೆ ಬಿದ್ದು, ಬಹುವಾಗಿ ಕ್ಷಮೆಯನ್ನು ಯಾಚಿಸಿದನು.
ಏಕನಾಥರು ಸರಳವಾದ ಮರಾಠಿ ಭಾಷೆಯಲ್ಲಿ, ಸುಲಭವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬೋಧಿಸುತ್ತಿದ್ದರು. ಇದನ್ನು ನೋಡಿದ ವಿದ್ವತ್ಪೂರ್ಣ ಪಂಡಿತರಿಗೆ, ತಮ್ಮ ಪ್ರವಚನಗಳಿಗೆ ಹೆಚ್ಚು ಜನರು ಬರದೇ ಇದ್ದುದರಿಂದ ತುಂಬಾ ನಿರಾಸೆಯಾಯಿತು. ಏಕನಾಥರ ಜನಪ್ರಿಯತೆಯನ್ನು ಅವರಿಂದ ಸಹಿಸಲಾಗಲಿಲ್ಲ. ಹಲವಾರು ರೀತಿಗಳಲ್ಲಿ ಅವರನ್ನು ನಿಂದಿಸಲು ಮತ್ತು ಅವಹೇಳನ ಮಾಡಲು ಪ್ರಾರಂಭಿಸಿದರು. ಅದಕ್ಕೆ ಉತ್ತರವಾಗಿ ಏಕನಾಥರು ನುಡಿದುದು ಇಷ್ಟೇ. “ನಿಂದಕರು ಮತ್ತು ವಿಮರ್ಶಕರು ಪೂಜನೀಯರು. ನಾನು ಅವರಿಗೆ ನಮಸ್ಕರಿಸುವೆ. ನನ್ನ ಎಲ್ಲ ಪಾಪಗಳನ್ನೂ ಅವರಲ್ಲವೇ ತೊಳೆದು ಹಾಕುತ್ತಿರುವುದು! ಅದು ನನ್ನ ಮನೆಗೆ ಗಂಗೆಯು ಹರಿದು ಬಂದಂತೆ. ಅಂತಹವರ ಮೇಲೆ ನಾನು ಕೋಪಗೊಳ್ಳುವುದೇ? ಅವರಿಲ್ಲದೆ ಹೋದ ಪಕ್ಷದಲ್ಲಿ, ನನ್ನ ಪಾಪಗಳನ್ನು ತೊಳೆಯುವರಾದರು ಯಾರು?” ಎಂದು.
ದೇವರು ಕೇವಲ ದೇವಾಲಯಗಳಲ್ಲಿ ಮಾತ್ರವಲ್ಲದೇ, ಎಲ್ಲೆಲ್ಲೂ, ಎಲ್ಲ ಜೀವಿಗಳಲ್ಲೂ ಇರುವನೆಂಬ ಸತ್ಯವನ್ನು ಅವರು ಮನಗಂಡಿದ್ದರು. ಒಮ್ಮೆ, ಅವರು ಪ್ರಯಾಗದಿಂದ ರಾಮೇಶ್ವರಕ್ಕೆ ಪವಿತ್ರ ಗಂಗಾಜಲವನ್ನು ತೆಗೆದುಕೊಂಡು ಯಾತ್ರೆಹೊರಟರು. ಮಾರ್ಗ ಮಧ್ಯದಲ್ಲಿ, ತೀವ್ರ ಬಾಯಾರಿಕೆಯಿಂದಾಗಿ ಬಳಲಿ, ಸಾಯುವ ಸ್ಥಿತಿಯಲ್ಲಿ ಬಿದ್ದಿದ್ದ ಒಂದು ಕತ್ತೆ ಕಂಡರು. ಅದರ ಸ್ಥಿತಿಯನ್ನು ಕಂಡ ಏಕನಾಥರ ಮನಸ್ಸು ಕರಗಿತು. ಕೂಡಲೇ, ತನ್ನ ಕೈಯಲ್ಲಿನ ಪಾತ್ರೆಯಲ್ಲಿದ್ದ ಗಂಗಾಜಲವನ್ನು ಅದಕ್ಕೆ ಕುಡಿಸಿದರು. ಕತ್ತೆಯು ಬದುಕಿತು. ಆದರೆ ಏಕನಾಥರ ಸಂಗಡ ಬಂದವರಾದರೋ ಅವರನ್ನು ಅಪಹಾಸ್ಯ ಮಾಡಿದರು. ಅದಕ್ಕೆ ಉತ್ತರವಾಗಿ ಏಕನಾಥರು ನುಡಿದರು, “ಕತ್ತೆಯ ಬಾಯಾರಿಕೆಯನ್ನು ತಣಿಸಿದ ನನಗೆ, ರಾಮೇಶ್ವರದಲ್ಲಿ ಆ ಜಲದಿಂದ, ಶಿವನಿಗೆ ಅಭಿಷೇಕ ಮಾಡಿದಷ್ಟೇ ಪುಣ್ಯವು ಲಭಿಸಿದೆ. ಅದರಿಂದ, ಶ್ರೀ ರಾಮನು ಖಂಡಿತವಾಗಿಯೂ ಸಂತೋಷಿಸುವನು ಎಂಬ ನಂಬಿಕೆಯು ನನಗಿದೆ,” ಎಂದು.
ಈ ಮೂಲಕ ದೇವರು ದೇವಾಲಯಗಳಲ್ಲಿ ಮಾತ್ರವಲ್ಲ, ಸಕಲ ಜೀವಿಗಳಲ್ಲೂ ಇರುವನೆಂಬ ಸತ್ಯವನ್ನು ಅವರೆಲ್ಲರಿಗೂ ಮನಗಾಣಿಸಿದರು.
[Illustrations by T. Reshma, Sri Sathya Sai Balvikas Alumina]
[Source: Stories for Children-II, Sri Sathya Sai Books & Publications, PN]