ಭದ್ರಾಚಲ
ಭದ್ರಾಚಲವು ಆಂಧ್ರಪ್ರದೇಶದ ತೆಲಂಗಾಣ ಪ್ರದೇಶದ ಗೋದಾವರಿ ನದಿಯ ಉತ್ತರ ದಿಕ್ಕಿನಲ್ಲಿರುವ ಒಂದು ಕುಗ್ರಾಮ. ಭದ್ರಾ ಋಷಿಗಳು ಅನೇಕ ವರ್ಷಗಳಿಂದ ಇಲ್ಲಿ ನೆಲೆಸಿದ್ದರಿಂದ ಈ ಸ್ಥಳಕ್ಕೆ ಭದ್ರಾಚಲ ಎಂಬ ಹೆಸರು ಬಂದಿತು.
ಭದ್ರಾಚಲವು ರಾಮ, ಸೀತೆ ಮತ್ತು ಲಕ್ಷ್ಮಣರ ಭೇಟಿ ಮತ್ತು ತಂಗುವಿಕೆಯಿಂದ ಪವಿತ್ರವಾದ ಸ್ಥಳವಾಗಿದೆ. ಪುರಾಣದ ಪ್ರಕಾರ, ರಾವಣನು ಸೀತೆಯನ್ನು ಅಪಹರಿಸುವ ಸಂದರ್ಭದಲ್ಲಿ ಅವರು ವಾಸಿಸುತ್ತಿದ್ದ ಪರ್ಣಕುಟೀರ ಭದ್ರಾಚಲದಿಂದ ಸುಮಾರು 32 ಕಿಲೋಮೀಟರ್ಗಳಷ್ಟು ದೂರದ ಸ್ಥಳವಾಗಿತ್ತು. ರಾಮ ಮತ್ತು ಸೀತೆಯರು ವಾಸಿಸುತ್ತಿದ್ದ ಸ್ಥಳಕ್ಕೆ ಗುರುತಾಗಿ ಅಲ್ಲೊಂದು ಪುಟ್ಟ ಗುಡಿಸಲು ಈಗಲೂ ಇದೆ. ಸೀತೆಯನ್ನು ಮೋಹಗೊಳಿಸಲು ಮಾರೀಚನು ಚಿನ್ನದ ಜಿಂಕೆಯಾಗಿ ಕಾಣಿಸಿಕೊಂಡ ಸ್ಥಳ ಮತ್ತು ಲಕ್ಷ್ಮಣ ತಾನು ರಾಮನನ್ನು ಹುಡುಕಿ ವಾಪಾಸು ಬರುವವರೆಗೂ ಈ ಗೆರೆಯನ್ನು ದಾಟಬಾರದು ಎಂದು ಸೀತೆಗೆ ನುಡಿದು ಆ ಗುಡಿಸಲಿನ ಎದುರು ಹಾಕಿದ ಲಕ್ಷ್ಮಣ ರೇಖೆ ಎಲ್ಲವೂ ಸ್ಪಷ್ಟವಾಗಿ ಕಾಣುತ್ತದೆ.
ಹತ್ತಿರದಲ್ಲೇ ರಾಮ, ಸೀತೆ ಮತ್ತು ಲಕ್ಷ್ಮಣರು ನಿತ್ಯವೂ ಸ್ನಾನ ಮಾಡುತ್ತಿದ್ದರು ಎನ್ನಲಾದ ಶುದ್ಧವಾದ ತಿಳಿನೀರಿನ ಒಂದು ತೊರೆ ಇದೆ. ಹತ್ತಿರದಲ್ಲೆಲ್ಲೂ ಶುದ್ಧ ನೀರು ಸಿಗದ ಕಾರಣ ಲಕ್ಷ್ಮಣನು ತನ್ನ ಬಾಣವನ್ನು ನೆಲಕ್ಕೆ ಬಿಟ್ಟಾಗ, ಚಿಮ್ಮಿದ ನೀರು ತೊರೆಯ ಮೂಲವಾಯಿತು ಎಂದು ಕಥೆ ಹೇಳುತ್ತದೆ.
ಸೀತೆಯನ್ನು ಮರಳಿ ಪಡೆಯಲು ಲಂಕೆಯತ್ತ ದಂಡಯಾತ್ರೆಗೆ ಹೊರಡುವಾಗ ಶ್ರೀರಾಮನು ಗೋದಾವರಿ ನದಿಯನ್ನು ದಾಟಿದ ಸ್ಥಳದಲ್ಲಿ ಭದ್ರಾಚಲದಲ್ಲಿರುವ ದೇವಾಲಯವನ್ನು ನಿರ್ಮಿಸಲಾಯಿತು ಎನ್ನಲಾಗುತ್ತದೆ. ಇದನ್ನು 17ನೇ ಶತಮಾನದಲ್ಲಿ ಗೋಲ್ಕೊಂಡಾದ ಕುತುಬ್ ಶಾಹಿ ರಾಜರಲ್ಲಿ ಕೊನೆಯವನಾದ ಅಬ್ದುಲ್ ಹಸನ್ ತಾನೇ ಷಾ ನ ಅವಧಿಯಲ್ಲಿ ಭದ್ರಾಚಲವನ್ನು ಒಳಗೊಂಡ ಗ್ರಾಮದ ತಹಶೀಲ್ದಾರನಾದ ಗೋಪಣ್ಣ ಎನ್ನುವವನು ನಿರ್ಮಿಸಿದನು.
ಗೋಪಣ್ಣನು ಶ್ರೀರಾಮನ ಪರಮ ಭಕ್ತನಾಗಿದ್ದನು. ಶ್ರೀರಾಮನ ಮೇಲಿನ ಆಳವಾದ ಭಕ್ತಿಯಲ್ಲಿ ಮುಳುಗಿದ್ದ ಗೋಪಣ್ಣ ತನ್ನ ಕೆಲಸವನ್ನು ನಿರ್ಲಕ್ಷಿಸಿ ಭದ್ರಾಚಲದಲ್ಲಿ ಶ್ರೀರಾಮನ ದೇವಾಲಯವನ್ನು ನಿರ್ಮಿಸಿ ಆದಾಯ ಸಂಗ್ರಹದಿಂದ ರೂ.6 ಲಕ್ಷಗಳನ್ನು ಬಳಸಿಕೊಂಡನು. ಈ ವಿಷಯವು ರಾಜ ತಾನೇ ಷಾಗೆ ತಿಳಿಯಿತು ಹಾಗೂ ಹಣವನ್ನು ಬಳಸಿಕೊಂಡದ್ದಕ್ಕಾಗಿ ಗೋಪಣ್ಣನನ್ನು ಬಂಧಿಸಲಾಯಿತು. ಅವನನ್ನು ಗೋಲ್ಕೊಂಡದ ಕೋಟೆಯ ನೆಲಮಾಳಿಗೆಯಲ್ಲಿರುವ ಸಣ್ಣ ಕತ್ತಲ ಕೋಣೆಯಲ್ಲಿ ಬಂಧಿಸಿಡಲಾಯಿತು. ಬಹಳಕಾಲ ಸೆರೆವಾಸದಿಂದ ನರಳಿದ ಗೋಪಣ್ಣನು ತುಂಬಾ ಹತಾಶನಾಗಿ ತನ್ನ ಜೀವನವನ್ನು ಕೊನೆಗಾಣಿಸಲು ನಿರ್ಧರಿಸಿದನು. ಒಂದು ದಿನ ಶ್ರೀ ರಾಮನು ಅವನ ಕನಸಿನಲ್ಲಿ ಬಂದು, ದೇವಾಲಯ ನಿರ್ಮಿಸಲು ಬಳಸಲಾದ ಹಣವನ್ನು ರಾಜನಿಗೆ ಹಿಂದಿರುಗಿಸಲಾಗಿದೆ ಎಂದು ಹೇಳಿ ರಶೀದಿಯನ್ನು ತೋರಿಸಿದನು.
ಮರುದಿನ, ಗೋಲ್ಕೊಂಡ ಜೈಲಿನಲ್ಲಿದ್ದ ಗೋಪಣ್ಣನನ್ನು ಭೇಟಿ ಮಾಡಿದ ರಾಜ ತಾನೇ ಷಾ, ಒಬ್ಬ ಅಪರಿಚಿತ ವ್ಯಕ್ತಿಯೊಬ್ಬ ತನ್ನಲ್ಲಿಗೆ ಬಂದು ರೂ.6 ಲಕ್ಷದ ಸಂಪೂರ್ಣ ಮೊತ್ತವನ್ನು ನೀಡಿದ ನಿಗೂಢ ಕಥೆಯನ್ನು ಹೇಳಿದನು. ಆಗ ಗೋಪಣ್ಣನು ಶ್ರೀರಾಮನು ತನ್ನ ಕನಸಿನಲ್ಲಿ ಬಂದು ರಾಜನಿಗೆ ಹಣ ಪಾವತಿಸಿದ ರಶೀದಿಯನ್ನು ತೋರಿಸಿದ ವಿಷಯವನ್ನು ತಿಳಿಸಿದಾಗ ರಾಜನು ರೋಮಾಂಚನಗೊಂಡನು ಮತ್ತು ತಾನು ಮಾಡಿದುದಕ್ಕಾಗಿ ಗೋಪಣ್ಣನ ಕ್ಷಮೆ ಯಾಚಿಸಿದನು. ತಕ್ಷಣವೇ ಅವನನ್ನು ಬಿಡುಗಡೆ ಮಾಡಿ ಅಲ್ಲಿಂದ ನಂತರ ಅವನನ್ನು ಗೌರವಾದರದಿಂದ ನಡೆಸಿಕೊಂಡನು. ಅಲ್ಲದೇ ರಾಜನು ದೇವಾಲಯದ ನಿರ್ವಹಣೆಗಾಗಿ ಪ್ರತಿ ವರ್ಷ ಹಣದ ವ್ಯವಸ್ಥೆಯನ್ನು ಮಾಡಿದನು. ಇದನ್ನು ಅವನ ಉತ್ತರಾಧಿಕಾರಿಗಳಾದ ಮುಸಲ್ಮಾನ ಆಡಳಿತಗಾರರು ಸುಮಾರು 250 ವರ್ಷಗಳ ಕಾಲ ಮುಂದುವರಿಸಿದರು. ಗೋಪಣ್ಣ ಆಧ್ಯಾತ್ಮಿಕ ಜ್ಞಾನವನ್ನು ಪಡೆದನಂತರ ರಾಮದಾಸ ಎಂದು ಪ್ರಸಿದ್ಧರಾದರು.
ಭದ್ರಾಚಲದಲ್ಲಿ ಸುಮಾರು ಹದಿನೈದು ದಿನಗಳ ಕಾಲ ನಡೆಯುವ ಶ್ರೀರಾಮನವಮಿಯ ಆಚರಣೆಯ ಸಂದರ್ಭದಲ್ಲಿ ಪ್ರತಿ ವರ್ಷ ಭಾರತದಾದ್ಯಂತ ಸಾವಿರಾರು ಭಕ್ತರು ಸೇರುತ್ತಾರೆ. ಈ ಆಚರಣೆಯ ಪ್ರಮುಖ ಸಮಾರಂಭವೆಂದರೆ “ಸೀತಾ ಕಲ್ಯಾಣ.” ಈ ದಿನ, ಶ್ರೀರಾಮ ಸೀತೆಯರ ಪುಟ್ಟದಾದ ಸುಂದರ ವಿಗ್ರಹಕ್ಕೆ ಗೋದಾವರಿಯ ಪವಿತ್ರ ನೀರಿನಲ್ಲಿ ಅಭಿಷೇಕ ಮಾಡಿ, ಭವ್ಯವಾದ ರತ್ನಾಭರಣಗಳಿಂದ ಅಲಂಕರಿಸಲಾಗುತ್ತದೆ ಮತ್ತು ಉಲ್ಲಾಸದಿಂದ ಅಲಂಕರಿಸಿದ ಬೆಳ್ಳಿಯ ಪಲ್ಲಕ್ಕಿಯಲ್ಲಿ ಬೃಹತ್ ಕಲ್ಯಾಣಮಂಟಪಕ್ಕೆ ಕೊಂಡೊಯ್ಯಲಾಗುತ್ತದೆ ಮತ್ತು ಸಂಪೂರ್ಣ ವಿಧಿ ವಿಧಾನಗಳೊಂದಿಗೆ ಹಾಗೂ ವೈದಿಕ ಸ್ತೋತ್ರಗಳ ಪಠಣದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೀತಾರಾಮರ ವಿವಾಹವನ್ನು ನೆರವೇರಿಸಲಾಗುತ್ತದೆ.
ಪರ್ಣಶಾಲೆಯಲ್ಲಿ ಶ್ರೀರಾಮ ಸೀತೆಯರ ಒಂದು ಪುಟ್ಟ ದೇವಾಲಯವಿದ್ದು ಇದನ್ನು ಭದ್ರಾಚಲ ಮುಖ್ಯ ದೇವಾಲಯದ ನಿಧಿಯಿಂದ ನಿರ್ವಹಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪರ್ಣಶಾಲೆಯಲ್ಲಿರುವ ಈ ದೇವಾಲಯದಲ್ಲಿ ಒಂದು ದೊಡ್ಡ ಪವಾಡ ನಡೆಯಿತು. ಕೇವಲ ಕೆಲವು ವರ್ಷಗಳ ಹಿಂದಷ್ಟೇ ಆ ಪ್ರದೇಶದಲ್ಲಿ ಭೂಮಿಯ ಕೆಳಗೆ ದೊಡ್ಡದಾಗಿ ಘರ್ಜಿಸಿದಂತೆ, ಗುಳು ಗುಳು ಶಬ್ದ ಕೇಳುತ್ತಾ ಭೂಮಿಯು ಕಂಪಿಸಿತು. ಸ್ಥಳೀಯ ಜನರನ್ನು ಭಯಭೀತರನ್ನಾಗಿಸಿದ ಈ ಭೂಕಂಪನವು ದೇವಾಲಯದ ಗರ್ಭಗುಡಿಯ ಸುತ್ತಲಿನ ಸುಮಾರು ಎರಡು ಮೀಟರ್ಗಳಷ್ಟು ಇದ್ದ ಗುಹೆಯನ್ನು ಬಿಟ್ಟು ಇತರೆಡೆಗಳಲ್ಲಿ ಹಾನಿಯುಂಟುಮಾಡಿತ್ತು. ಆಶ್ಚರ್ಯವೆಂಬಂತೆ, ಇದು ಗರ್ಭಗುಡಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಮತ್ತು ವಿಗ್ರಹಗಳಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಈ ಅದ್ಭುತ ಪವಾಡವು ಸ್ಥಳೀಯ ನಿವಾಸಿಗಳ ನಂಬಿಕೆಗಳನ್ನು ಎಷ್ಟು ಹೆಚ್ಚಿಸಿತೆಂದರೆ, ಅಲ್ಲಿಂದ ನಂತರ ಪ್ರತಿದಿನ ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸದ ಸ್ಥಳೀಯರೇ ಇಲ್ಲ.
ಪ್ರಶ್ನೆಗಳು :
- ಭದ್ರಾಚಲ ಎಲ್ಲಿದೆ?
- ಅಲ್ಲಿ ಯಾರನ್ನು ಪೂಜಿಸಲಾಗುತ್ತದೆ?
- ಈ ದೇವಾಲಯವನ್ನು ಯಾರು ನಿರ್ಮಿಸಿದರು? ಅವರು ಅದನ್ನು ಹೇಗೆ ನಿರ್ಮಿಸಿದರು?
- ರಾಮದಾಸರನ್ನು ಯಾಕೆ ಜೈಲಿಗೆ ಕಳುಹಿಸಲಾಯಿತು?
- ಅವರನ್ನು ಯಾವಾಗ ಬಿಡುಗಡೆ ಮಾಡಲಾಯಿತು?
Source – Stories for Children – II
Published by – Sri Sathya Sai Books & Publications Trust, Prashanti Nilayam