ಗುರುವಾಯೂರ್, ದಕ್ಷಿಣದ ದ್ವಾರಕೆ
ಕೃಷ್ಣಾವತಾರದ ಸಮಯದಲ್ಲಿ ದೇವಕಿ ಮತ್ತು ವಸುದೇವರಿಗೆ ಬಹಿರಂಗಪಡಿಸಿದಂತೆ ಗುರುವಾಯೂರಪ್ಪನ ಆರಾಧ್ಯ ಮೂರ್ತಿಯು ಭಗವಾನ್ ಮಹಾವಿಷ್ಣುವಿನ ಪೂರ್ಣಾವತಾರವಾಗಿದೆ. ಕಶ್ಯಪ ಮತ್ತು ಅದಿತಿ ವಸುದೇವ ಮತ್ತು ದೇವಕಿಯಾಗಿ ಜನಿಸಿದರು ಹಾಗೂ ಭಗವಂತ ಸತತ ಮೂರನೇ ಬಾರಿ ಅವರ ಮಗುವಾಗಿ ಜನಿಸಿದ.
ಗುರುವಾಯೂರಿನ ಮೂರ್ತಿಯು ಮೊದಲು ಸ್ವತಃ ನಾರಾಯಣನಿಂದಲೇ ಪೂಜಿಸಲ್ಪಟ್ಟಿತು, ನಂತರ ಅವನು ಇದನ್ನು ಬ್ರಹ್ಮನಿಗೆ ನೀಡಿದನು ಹಾಗೂ ಈ ದೇವರ ಅನುಗ್ರಹದಿಂದ ಬ್ರಹ್ಮನು ತನ್ನ ಸೃಷ್ಟಿಕಾರ್ಯವನ್ನು ನಿರ್ವಹಿಸಿದನು. ದೇವಕಿ ಮತ್ತು ವಸುದೇವರಿಂದ ಪೂಜಿಸಲ್ಪಟ್ಟ ಮೂರ್ತಿಯೂ ಅದೇ ಆಗಿತ್ತು; ನಂತರ ಕೃಷ್ಣ ದ್ವಾರಕೆಯ ಅಧಿಪತಿಯಾದಾಗ ಅವನು ದೇವಾಲಯವನ್ನು ನಿರ್ಮಿಸಿ ಅಲ್ಲಿ ಆ ಮೂರ್ತಿಯನ್ನು ಪ್ರತಿಷ್ಠಾಪಿಸಿದನು.
ದ್ವಾಪರಯುಗದ ಅಂತ್ಯದಲ್ಲಿ, ಭಗವಾನ್ ಶ್ರೀಕೃಷ್ಣನು ಉದ್ಧವನಿಗೆ ತನ್ನ ಅವತಾರದ ಉದ್ದೇಶವು ಈಡೇರಿತು ಮತ್ತು ತಾನು ಶೀಘ್ರದಲ್ಲೇ ವೈಕುಂಠಕ್ಕೆ ತೆರಳುವೆನೆಂದು ಹೇಳಿದನು. ಉದ್ಧವನು ಕಲಿಯುಗದಲ್ಲಿ ಬರಲಿರುವ ಭೀಕರ ಭವಿಷ್ಯವನ್ನು ಯೋಚಿಸುತ್ತಾ ದುಃಖದಲ್ಲಿ ಮುಳುಗಿದನು. ಆದರೆ, ತಾನು ವಿಗ್ರಹದಲ್ಲೇ ಪ್ರಕಟಗೊಂಡು, ಭಕ್ತರನ್ನು ಅನುಗ್ರಹಿಸುವೆನೆಂದು ಕೃಷ್ಣನು ಅವನನ್ನು ಸಮಾಧಾನಪಡಿಸಿದನು. ಅಲ್ಲದೇ ಸನ್ನಿಹಿತವಾಗಿರುವ ಜಲಪ್ರಳಯದ ಸಂದರ್ಭದಲ್ಲಿ ವಿಗ್ರಹವನ್ನು ರಕ್ಷಿಸಿ ದೇವತೆಗಳ ಗುರು ಬೃಹಸ್ಪತಿಯೊಂದಿಗೆ ಸಮಾಲೋಚಿಸಿ ಅದನ್ನು ಪವಿತ್ರಸ್ಥಳದಲ್ಲಿ ಪ್ರತಿಷ್ಠಾಪಿಸಲು ಅವನು ಉದ್ಧವನಿಗೆ ನಿರ್ದೇಶಿಸಿದನು.
ಅದೇ ರೀತಿಯಾಗಿ, ಬೃಹಸ್ಪತಿ ಹಾಗೂ ವಾಯು ವಿಗ್ರಹದ ಜವಾಬ್ದಾರಿ ವಹಿಸಿಕೊಂಡು ಅದನ್ನು ಪ್ರತಿಷ್ಠಾಪಿಸಲು ಪವಿತ್ರ ಸ್ಥಳಕ್ಕಾಗಿ ಇಡೀ ಭೂಮಿಯನ್ನೆಲ್ಲಾ ಹುಡುಕಾಡಲು ಹೊರಟರು. ದಾರಿಯಲ್ಲಿ, ಅವರು ನಾರದರ ಸಲಹೆಯಂತೆ ಅದೇ ವಿಗ್ರಹದ ಹುಡುಕಾಟದಲ್ಲಿದ್ದ ಪರಶುರಾಮರನ್ನು ಭೇಟಿಯಾದರು. ಅವರು ಕಮಲದ ಹೂವುಗಳಿಂದ ತುಂಬಿದ ಒಂದು ಸುಂದರ ಸರೋವರದ ಬಳಿ ಬಂದರು. ಅದರ ಒಂದು ಬದಿಯಲ್ಲಿ ಅವರನ್ನು ಸ್ವಾಗತಿಸಲು ಶಿವ ಪಾರ್ವತಿಯರು ನಿಂತಿದ್ದರು. ಈ ಸ್ಥಳವನ್ನು ನಾರಾಯಣನ ವಿಗ್ರಹಕ್ಕಾಗಿ ಬಹಳ ಹಿಂದೆಯೇ ಗುರುತಿಸಲಾಗಿದೆ ಎಂದು ಶಿವ ಹೇಳಿದನು; ನಂತರ, ಪವಿತ್ರ ಜಲವನ್ನು ವಿಗ್ರಹಕ್ಕೆ ಪ್ರೋಕ್ಷಿಸಿ ಅದಕ್ಕೆ ನಮಸ್ಕರಿಸುತ್ತಾ, ಶಿವನು ಗುರು ಮತ್ತು ವಾಯುವಿನ ಕಡೆಗೆ ತಿರುಗಿ, “ನೀವಿಬ್ಬರು ಜೊತೆಯಾಗಿ ಇದರ ಪ್ರತಿಷ್ಠಾಪನೆ ಮಾಡಬೇಕು ಮತ್ತು ನೀವಿಬ್ಬರು ಈ ಪವಿತ್ರ ದೇವಾಲಯದ ಸ್ಥಾಪಕರಾದ್ದರಿಂದ, ಈ ಸ್ಥಳವು ಗುರುವಾಯೂರು ಎಂದು ಪ್ರಸಿದ್ಧಿಯಾಗಲಿ” ಎಂದು ಹೇಳಿದನು. ಹೀಗೆ ಹೇಳಿ ಶಿವ ಪಾರ್ವತಿಯರು ಸರೋವರದ ಇನ್ನೊಂದು ಬದಿಗೆ ತೆರಳಿದರು. ಇವತ್ತಿಗೂ, ಈ ಘಟನೆಗೆ ಸಾಕ್ಷಿಯೆಂಬಂತೆ, ಗುರುವಾಯೂರಿನಿಂದ ಒಂದು ಕಿಲೋಮೀಟರ್ ದೂರದಲ್ಲಿ ಶಿವನ ದೇವಾಲಯವಿದೆ.
ಹೀಗಾಗಿ ಗುರುವಾಯೂರಿನ ಮಹಿಮೆಯು ವಿಗ್ರಹದ ದೈವತ್ವದ ಮೇಲೆ ನಿಂತಿದೆ. ತನ್ನ ತೇಜಸ್ವಿಯಾದ ನಾಲ್ಕು ತೋಳುಗಳಲ್ಲಿ ಶಂಖ, ಚಕ್ರ, ಗದಾ, ಪದ್ಮಗಳನ್ನು ಹೊಂದಿರುವ ಜಗತ್ತನ್ನೇ ಮೋಡಿ ಮಾಡುವ ಶ್ರೀಕೃಷ್ಣನ ಅತ್ಯಂತ ಸುಂದರ ರೂಪ ಇದಾಗಿದೆ. ಇಲ್ಲಿ ಭಗವಂತನು ತುಳಸಿ ಮಾಲೆ ಮತ್ತು ಮುತ್ತಿನ ಸರಗಳಿಂದ ಅತ್ಯಂತ ತೇಜೋಮಯ ರೂಪದಲ್ಲಿ ಕಂಗೊಳಿಸುತ್ತಾನೆ. ಭಕ್ತರ ಕರೆಗೆ ಓಗೊಡುವ ದೇವರುಗಳಲ್ಲಿ, ಗುರುವಾಯೂರಪ್ಪನ ಹೆಸರೇ ಸುಲಭದಲ್ಲಿ ಬರುತ್ತದೆ.
ಹೀಗೆ, ಸ್ವಾರ್ಥ ದುರಾಸೆಗಳನ್ನು ಹೊಂದಿದವರು ಕೂಡಾ ಅವನೆಡೆಗೆ ಸೆಳೆಯಲ್ಪಟ್ಟರೆ, ಅಂಥವರನ್ನೂ ಅವನು ಅನುಗ್ರಹಿಸುತ್ತಾನೆ ಮತ್ತು ಸಂಪತ್ತು, ಅಧಿಕಾರವನ್ನು ಬೇಡುವವರು ಕೂಡಾ ಅಂತಿಮವಾಗಿ ಅವನ ಅನುಗ್ರಹವನ್ನೇ ಬೇಡುತ್ತಾರೆ; ಇದನ್ನಲ್ಲವೇ ಭಗವಂತ ಆರ್ತ, ಅರ್ಥಾರ್ಥಿ, ಜಿಜ್ಞಾಸು ಮತ್ತು ಜ್ಞಾನಿ ಎಂಬ ನಾಲ್ಕು ರೀತಿಯ ಜನರು ತನ್ನನ್ನು ಪೂಜಿಸುತ್ತಾರೆ ಎಂದಿರುವುದು. ಭಗವಂತ ಮೋಡಿಗಾರ, ಅವನು ಅಂತಿಮವಾಗಿ ತನ್ನ ಬಳಿ ಬರುವ ಎಲ್ಲರನ್ನೂ ಜ್ಞಾನಿಗಳನ್ನಾಗಿ ಪರಿವರ್ತಿಸುತ್ತಾನೆ.
[Source – Stories for Children – II]
Published by – Sri Sathya Sai Books & Publications Trust, Prashanti Nilayam