ಕರ್ಮಣ್ಯೇವಾಧಿಕಾರಸ್ತೇ-ಶ್ಲೋಕ- ಮುಂದುವರಿದ ಅಧ್ಯಯನ
ನಿನಗೆ ಕೆಲಸ ಮಾಡುವ ಹಕ್ಕಿದೆ. ಕೆಲಸದ ಫಲಕ್ಕಾಗಿ ಹಂಬಲಿಸಬೇಡಿ. ಕರ್ಮದ ಫಲಗಳು ನಿನ್ನ ಉದ್ದೇಶವಾಗದಿರಲಿ. ಅದೇ ಸಮಯದಲ್ಲಿ, ಈ ಸಿದ್ಧಾಂತದಿಂದಾಗಿ ನಾವು ಕರ್ಮವನ್ನು ಬಿಟ್ಟುಬಿಡಬಾರದು ಮತ್ತು ನಿಷ್ಕ್ರಿಯರಾಗಬಾರದು ಎಂದು ಭಗವಂತ ಬಯಸುತ್ತಾನೆ.
ನಾವು ಫಲಿತಾಂಶಗಳ ಆಸೆಯಿಂದ ಕೆಲಸ ಮಾಡಿದರೆ ಅಂತಹ ಕರ್ಮಗಳು ಬಂಧನವನ್ನು ಉಂಟುಮಾಡುತ್ತವೆ.
ಇಚ್ಛೆಯ ಸ್ವಾತಂತ್ರ್ಯವನ್ನು ಮನುಷ್ಯನಿಗೆ ಮಾತ್ರ ನೀಡಲಾಗಿದೆ. ಅವನು ತನ್ನ ಕರ್ತವ್ಯವನ್ನು ನಿರ್ವಹಿಸಿದರೆ, ಭಗವಂತನ ಆಜ್ಞೆಗಳನ್ನು ನಿರ್ವಹಿಸಿದರೆ, ಅವನ ಕರ್ಮಗಳು ಮತ್ತು ಅವುಗಳ ಫಲಗಳ ಮೇಲಿನ ಎಲ್ಲಾ ಬಾಂಧವ್ಯವನ್ನು ತ್ಯಜಿಸಿ, ದೇವರನ್ನು ಅರಿತುಕೊಳ್ಳುವ ಸಾಧನವಾಗಿ ಬಳಸಿದರೆ, ಅವನು ಸುಲಭವಾಗಿ ಯಶಸ್ವಿಯಾಗಬಹುದು. ಮನುಷ್ಯನಿಗೆ ಕೆಲಸ ಮಾಡಲು ಮಾತ್ರ ಹಕ್ಕಿದೆ, ಆದರೆ ಕೆಲಸವನ್ನು ತ್ಯಜಿಸಲು ಅಲ್ಲ. ಕಡ್ಡಾಯ ಕರ್ಮವನ್ನು ನಿರ್ಲಕ್ಷಿಸಬಾರದು. ಕರ್ತವ್ಯ ನಿರ್ವಹಿಸದಿರುವುದು ತಾಮಸಿಕ. ಕಷ್ಟ/ಅಸೌಖ್ಯವೆಂದು ಕರ್ತವ್ಯವನ್ನು ತಪ್ಪಿಸುವುದು ರಾಜಸಿಕ.
ಮಹಾರಾಜ ಜನಕ ಕರ್ಮಯೋಗಿಗೆ ಅತ್ಯುತ್ತಮ ಉದಾಹರಣೆ. ಅವನು ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದ ರಾಜನಾಗಿದ್ದ, ಆದರೆ ಅವನು ಯಾವಾಗಲೂ ದೇವರ ಕೈಯಲ್ಲಿ ತಾನು ಕೇವಲ ಒಂದು ಉಪಕರಣ ಎಂದು ಭಾವಿಸುತ್ತಿದ್ದ. ಅವನು ತನ್ನ ಎಲ್ಲಾ ಕಾರ್ಯಗಳನ್ನು ಮೋಹವಿಲ್ಲದೆ ಮಾಡುತ್ತಿದ್ದರಿಂದ, ಅವನು ತನ್ನ ಜೀವನದುದ್ದಕ್ಕೂ ಶಾಂತಿಯನ್ನು ಅನುಭವಿಸಿದ ಮತ್ತು ಮರಣಾನಂತರ ಅವನು ಮುಕ್ತಿಯನ್ನು ಪಡೆದ.
ಈ ಶ್ಲೋಕದಲ್ಲಿ ಕರ್ಮಯೋಗದ ತತ್ವವಿದೆ. ಅಂತರಂಗವನ್ನು ಶುದ್ಧೀಕರಿಸಲು, ನಾವು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು, ಆದರೆ ಕೆಲಸದ ಪ್ರತಿಫಲವನ್ನು ಬಯಸದೆ ಕೆಲಸ ಮಾಡಬೇಕು ಎಂದು ಕೃಷ್ಣ ಕಲಿಸುತ್ತಾನೆ.
ಸಾಮಾನ್ಯವಾಗಿ ಪ್ರಾಪಂಚಿಕ ಜೀವನದಲ್ಲಿ ನಮ್ಮಲ್ಲಿ ಅನೇಕರು ಉದಾತ್ತ ಕಾರ್ಯಗಳನ್ನು ಅಥವಾ ಕೆಲವು ಸಾಮಾಜಿಕ ಸುಧಾರಣೆಯ ಯೋಜನೆಗಳನ್ನು ಕೈಗೊಳ್ಳಲು ಹೆದರುವುದನ್ನು ನಾವು ನೋಡಿರಬಹುದು, ಏಕೆಂದರೆ ಫಲಿತಾಂಶಗಳು ನಾವು ನಿರೀಕ್ಷಿಸಿದಷ್ಟು ಉತ್ತಮವಾಗದು ಎಂದು ನಾವು ಹೆದರುತ್ತೇವೆ. ಆದರೆ, ಕೆಲವು ಕೆಲಸಗಳು ನಮ್ಮ ಪಾಲಿಗೆ ಬಿದ್ದರೆ, ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಬೇಕು, ನಮ್ಮ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸಿ ಕೆಲಸಕ್ಕೆ ಧುಮುಕಬೇಕು. ಒಮ್ಮೆ ನಾವು ಕೆಲಸಕ್ಕೆ ನಮ್ಮ ಅತ್ಯುತ್ತಮವಾದುದನ್ನು ನೀಡಿದರೆ, ಫಲಿತಾಂಶಗಳ ಬಗ್ಗೆ ನಾವು ಚಿಂತಿಸಬೇಕಾಗಿಲ್ಲ. ಆದರೆ ಕರ್ಮಫಲದಾತನಾದ ಭಗವಂತನ ಇಚ್ಚೆಯನ್ನು ನಾವು ಸ್ವೀಕರಿಸಿ ಶರಣಾಗರಾದಾಗ ಫಲಿತಾಂಶ ಖಂಡಿತವಾಗಿಯೂ ಉತ್ತಮವಾಗಿರುತ್ತದೆ. ಆದ್ದರಿಂದ ನಮಗೆ ಸರ್ವಶಕ್ತಿಯನ್ನು ಬಲಸಿಕೊಂಡು ಕೆಲಸ ಮಾಡುವ ಹಕ್ಕಿದೆ, ನಮ್ಮ ಕೈಲಾದಷ್ಟು ಪ್ರಯತ್ನಿಸಿ ಉಳಿದದ್ದನ್ನು ಅವನ ಕೈಯಲ್ಲಿ ಬಿಡಬೇಕು. ನಮ್ಮ ಕರ್ಮಗಳ ಫಲಗಳಿಗಾಗಿ ನಿರಂತರ ಹಂಬಲಸುತ್ತಾ ಹಾತೊರೆಯುತ್ತಿದ್ದರೆ ಅದು ನಮ್ಮ ಶಕ್ತಿಯನ್ನು ಕ್ಷೀಣಿಸುತ್ತದೆ. ಆಸೆ ಮತ್ತು ಕಡುಬಯಕೆಯಿದ್ದರೆ ಕೈಯಲ್ಲಿರುವ ಕೆಲಸದಲ್ಲಿ ಏಕಾಗ್ರತೆಯ ಇರುವುದಿಲ್ಲ.
ಎರಡನೆಯದಾಗಿ, ನಮ್ಮಲ್ಲಿ ಯಾರಿಗಾದರೂ ಕೆಲಸ ಅಥವಾ ಕರ್ಮವನ್ನು ತ್ಯಜಿಸಲು ಮತ್ತು ಸುಮ್ಮನೆ ಕುಳಿತುಕೊಳ್ಳುವ ಹಕ್ಕಿದೆ ಎಂದು ನಾವು ಭಾವಿಸಬಾರದು. ಕೆಲವು ಕರ್ಮಗಳ ಫಲವನ್ನು ಪಡೆಯುವ ಭರವಸೆಯಿಲ್ಲದೆಯೋ ಅಥವಾ ಫಲಗಳು ಪಕ್ವವಾಗಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುವುದರಿಂದಲೋ ಅವನು ಪ್ರಯತ್ನವನ್ನು ಮತ್ತು ಕರ್ಮವನ್ನು ಬಿಡಬಾರದು.
ಭವಿಷ್ಯವನ್ನು ವರ್ತಮಾನದಿಂದ ರೂಪಿತವಾಗುವುದು. ಒಬ್ಬ ರೈತ ತನ್ನ ಬೆಳೆಗಳಿಗೆ ಅಪಾಯವುಂಟಾಗುವುದೆಂಬ ಭಯದಿಂದ ಉಳುಮೆ ಮಾಡಲು ಮತ್ತು ಬಿತ್ತಲು ತನ್ನ ಪ್ರಸ್ತುತ ಅವಕಾಶಗಳನ್ನು ಹಾಳುಮಾಡಿಕೊಂಡರೆ, ಕೊಯ್ಯಲು ಯಾವುದೇ ಬೆಳೆಯಿರುವುದಿಲ್ಲ ಎಂಬುದು ಖಚಿತ. ಹೀಗಾಗಿ ವರ್ತಮಾನವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.
ಆದರೆ ಸತ್ಕರ್ಮವು ನಂತರ ಏನಾಗುತ್ತದೆ ಎಂಬುದರ ಕುರಿತು ಅನಗತ್ಯವಾಗಿ ಚಿಂತಿಸಬಾರದು. ನಾವು ಭಯ ಆತಂಕಗಳಿಂದ ಅರೆಮನಸ್ಸಿನ ಕೆಲಸ ಮಾಡುವುದರ ಬದಲಾಗಿ ನಮ್ಮ ಸಂಪೂರ್ಣ ಮನಸ್ಸು ಮತ್ತು ದೇಹವನ್ನು ನಿಸ್ವಾರ್ಥ ಕೆಲಸಕ್ಕೆ ಸಮರ್ಪಿಸಿದರೆ, ನಾವು ವರ್ತಮಾನದಲ್ಲಿ ಬದುಕಲು ಆರಂಭಿಸಿದ್ದೇವೆ ಎಂದರ್ಥ. ನಂತರ ಭವಿಷ್ಯವು ತಾನಾಗಿಯೇ ಸರಿಯಾಗುತ್ತದೆ.
ಅರ್ಜುನನಿಗೆ ಧರ್ಮದ ಸಲುವಾಗಿ ಯುದ್ಧ ಮಾಡುವ ಉದಾತ್ತ ಉದ್ದೇಶವನ್ನು ಕೈಗೊಳ್ಳಬೇಕಾಗಿ ಶ್ರೀಕೃಷ್ಣ ಪ್ರೇರೇಪಿಸಿದನು. ತನ್ನ ಬಂಧು ಬಳಗದವರನ್ನು ಸಂಬಂಧಿಕರನ್ನು ಕೊಲ್ಲುವುದೆಂದಾದರೂ ಸರಿ, ಕಾರಣ ಉದಾತ್ತವಾದ್ದರಿಂದ ಹಾಗೂ ಯಶಸ್ಸು ಖಚಿತವಾದ್ದರಿಂದ ಅವನ ಅತ್ಯುತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಲಹೆ ನೀಡಿದನು.
ಆದ್ದರಿಂದ ಕರ್ಮವು ಸ್ವತಃ ಕೆಟ್ಟದ್ದಲ್ಲ ಎಂದು ನಮಗೆ ತಿಳಿದಿದೆ, ಆದರೆ ಬಯಕೆಗಳೊಂದಿಗೆ ಬೆರೆತಾಗ ಅದು ನಮ್ಮನ್ನು ಕಾರಣ, ಪರಿಣಾಮಗಳ ಮತ್ತು ಪುನರ್ಜನ್ಮದ ಚಕ್ರಕ್ಕೆ ಬಂಧಿಸುತ್ತದೆ.
ಉತ್ತಮ ಕೆಲಸಗಾರರಾಗಲು ನಮಗೆ ಸಹಾಯ ಮಾಡುವ ನಾಲ್ಕು ಸೂಚನೆಗಳನ್ನು ನಾವು ಹೊಂದಿದ್ದೇವೆ. ಕರ್ಮಯೋಗಿ ಎಂದರೆ,
- ಕಷ್ಟಪಟ್ಟು ಕೆಲಸ ಮಾಡಬೇಕು
- ತನ್ನ ಕೆಲಸದ ಫಲಗಳ ಬಗ್ಗೆ ಯಾವುದೇ ಆಸೆಯನ್ನು ಹೊಂದಿರಬಾರದು.
- ಕೆಲವು ಕರ್ಮಗಳ ಫಲವನ್ನು ಪಡೆಯದಿದ್ದರೆ ಯಾವುದೇ ಹತಾಶೆ ಅಥವಾ ಕೋಪ ಅಥವಾ ಅಸಂತೋಷವನ್ನು ಅನುಭವಿಸಬಾರದು.
- ತನ್ನ ಕೆಲಸವನ್ನು ಮಾಡದೆ ಸುಮ್ಮನೆ ಕುಳಿತುಕೊಳ್ಳಬಾರದು.
ಸ್ಪೂರ್ತಿದಾಯಕವಾದ ತೀವ್ರ ಶ್ರಮವು ತನ್ನತನವನ್ನೇ ಮರೆಯಿಸಿ ಸಂತೋಷ ಮತ್ತು ಭಾವಪರವಶತೆಯನ್ನು ತರುತ್ತದೆ ಎಂದು ನಮ್ಮ ಸ್ವಾಮಿ ಹೇಳುತ್ತಾರೆ. ಒಳ್ಳೆಯ ಕೆಲಸಗಾರನಿಗೆ ಕೆಲಸವೇ ಒಂದು ರೀತಿಯ ಪ್ರತಿಫಲವಾಗಿದೆ. ಪರಮಾತ್ಮನನ್ನು ತಲುಪಲು ಮಾಡಿದ ಯಾವುದೇ ಸಾಧನೆಯು ತನ್ನದೇ ಪ್ರತಿಫಲವಾಗಿದೆ ಎಂದು ಅವರು ಹೇಳುತ್ತಾರೆ.
ಜಗತ್ತಿನ ಶ್ರೇಷ್ಠ ಕರ್ಮಯೋಗಿ ಎಂದರೆ ಸೂರ್ಯ ಭಗವಾನ್. ಅವನು ಬಡವರು ಮತ್ತು ಶ್ರೀಮಂತರು, ಒಳ್ಳೆಯವರು ಮತ್ತು ಕೆಟ್ಟವರು ಎಲ್ಲರ ಮೇಲೂ ಬೆಳಕು ಹರಿಸುತ್ತಾನೆ. ಅವನು ನಿಷ್ಕಾಮ ಕರ್ಮವನ್ನು ಮಾಡುತ್ತಾನೆ. ನಾವು ಎಲ್ಲಾ ಕರ್ಮಗಳನ್ನು ಭಗವಂತನ ಮಹಿಮೆಗಾಗಿ ಮಾಡಿದ ‘ಯಜ್ಞ’ ಎಂದು ಪರಿಗಣಿಸಿ ಕರ್ಮದ ಫಲಿತಾಂಶಗಳ ಕಡೆಗೆ ನಿರ್ಲಿಪ್ತರಾಗಿರುವುದನ್ನು ಅಭ್ಯಾಸ ಮಾಡಬೇಕು. ಪ್ರಯತ್ನ ಮತ್ತು ಪರಿಶ್ರಮ ಮನುಷ್ಯನ ಕರ್ತವ್ಯ. ಸೋಲು ಗೆಲುವುಗಳು ದೇವರ ಅನುಗ್ರಹವನ್ನು ಅವಲಂಬಿಸಿರುತ್ತದೆ. – ಬಾಬಾ
ಗೀತೋಪನ್ಯಾಸಗಳಿಂದ – ಬಾಬಾ
ಪ್ರತಿಯೊಂದು ಕರ್ಮವೂ ಪರಿಣಾಮ ಅಥವಾ ಫಲಿತಾಂಶವನ್ನು ಹೊಂದಿರುತ್ತದೆ. ಪ್ರತಿಯೊಂದು ಕರ್ಮಕ್ಕೂ ಒಂದು ಫಲವಿದೆ. ತರುವಾಯ, ಆ ಫಲವು ಮತ್ತೊಂದು ಕರ್ಮಕ್ಕೆ ಕಾರಣವಾಗುತ್ತದೆ. ಕರ್ಮ ಮತ್ತು ಫಲ, ಫಲ ಮತ್ತು ಕರ್ಮಗಳ ಚಕ್ರವು ಬೀಜ ಮತ್ತು ಮರದಂತೆ ಮುಂದುವರಿಯುತ್ತದೆ. ಇವು ಪ್ರಪಂಚದ ನೈಸರ್ಗಿಕ ಚಕ್ರಗಳು. ಹೀಗಿರುವಾಗ, ಫಲದ ಬಗ್ಗೆ ವಿಶೇಷ ಆಸಕ್ತಿ ಏಕೆ?
ನಾವು ಹಿಂದೆ ತಪ್ಪು ಕಾರ್ಯಗಳಲ್ಲಿ ತೊಡಗಿದ್ದರಿಂದ ಈಗ ನಮಗೆ ದುಃಖ ಮತ್ತು ಕಷ್ಟವಿದೆ. ಆದರೆ ನಾವು ಎಂದಿಗೂ ಕರ್ಮದಿಂದ ದೂರವಿರಬಾರದು. ಕರ್ಮದ ಮಹತ್ವವನ್ನು ಗುರುತಿಸಿ ಅದನ್ನು ಉತ್ತಮವಾಗಿ ನಿರ್ವಹಿಸಿ. ಫಲ ನಿಮಗೆ ಸಂತೋಷವನ್ನು ತರುತ್ತದೆಯೋ ಅಥವಾ ದುಃಖವನ್ನು ತರುತ್ತದೆಯೋ ಅದು ಬಿತ್ತಿದ ಬೀಜವನ್ನು ಅವಲಂಬಿಸಿರುತ್ತದೆ. ನಿಮ್ಮ ಹಿಂದಿನ ಕೆಟ್ಟ ಕರ್ಮದ ಫಲಿತಾಂಶವಾದ ದುಃಖವನ್ನು ತೊಡೆದುಹಾಕುವುದು ಹೇಗೆ? ವರ್ತಮಾನದಲ್ಲಿ ಒಳ್ಳೆಯ ಕಾರ್ಯಗಳಲ್ಲಿ ತೊಡಗುವುದರಿಂದ ಮಾತ್ರ ದುಃಖ ದೂರವಾಗುತ್ತದೆ.
ಸ್ವಾಮಿ ಹೇಳುತ್ತಾರೆ, “ನೀವು 60 ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಒಂದು ಒಳ್ಳೆಯ ಭಾವನೆ ಹೊರಹೊಮ್ಮುತ್ತದೆ. ದೇಹವನ್ನು ಗಡಿಯಾರಕ್ಕೆ ಹೋಲಿಸಬಹುದು. ಕರ್ಮಗಳು ಗಡಿಯಾರದ ಸೆಕೆಂಡ್ ಮುಳ್ಳಿನಂತೆ. ಭಾವನೆಗಳು ಗಡಿಯಾರದ ನಿಮಿಷದ ಮುಳ್ಳು ಮತ್ತು ನಿಮ್ಮ ಸಂತೋಷವನ್ನು ಗಂಟೆಯನ್ನು ಸೂಚಿಸುವ ಮುಳ್ಳಿಗೆ ಹೋಲಿಸಬಹುದು. ನಾವು 60 ಒಳ್ಳೆಯ ಕರ್ಮಗಳನ್ನು ಮಾಡಿದರೆ ನಿಮಿಷದ ಮುಳ್ಳು ಒಂದು ಒಳ್ಳೆಯ ಭಾವನೆಯನ್ನು ನೀಡುತ್ತದೆ ಮತ್ತು 60 ಒಳ್ಳೆಯ ಭಾವನೆಗಳನ್ನು ಹೊಂದಿದ್ದರೆ, ಗಂಟೆಯು ಒಂದು ಸ್ಥಾನ ಚಲಿಸಿ ನಮಗೆ ಆನಂದವನ್ನು ನೀಡುತ್ತವೆ.
ಭಗವದ್ಗೀತೆಯು ಕೆಲಸಗಳನ್ನು ತ್ಯಜಿಸಿ ಸನ್ಯಾಸವನ್ನು ತೆಗೆದುಕೊಳ್ಳುವಂತೆ ಹೇಳುವುದಿಲ್ಲ. ಅದು ನಮಗೆ ಅನಾಸಕ್ತಿಯನ್ನು ಅಭ್ಯಾಸ ಮಾಡಲು ಕಲಿಸುತ್ತದೆ ಅಂದರೆ ಕರ್ಮಗಳ ಫಲಗಳ ಬಗ್ಗೆ ನಿರ್ಲಿಪ್ತತೆಯನ್ನು ಬೆಳೆಸಿಕೊಳ್ಳುವುದು.
ನಮ್ಮ ಹಣೆಬರಹಕ್ಕೆ ನಾವೇ ಹೊಣೆ ಎಂದು ಸ್ವಾಮಿ ಆಗಾಗ ಹೇಳುತ್ತಿರುತ್ತಾರೆ. ಅವರು ಹೇಳುತ್ತಾರೆ,
“ಕರ್ಮವನ್ನು ಬಿತ್ತಿ ಪ್ರವೃತ್ತಿಯನ್ನು ಕೊಯ್ಯಿರಿ
ಪ್ರವೃತ್ತಿಯನ್ನು ಬಿತ್ತಿ ಅಭ್ಯಾಸವನ್ನು ಕೊಯ್ಯಿರಿ
ಅಭ್ಯಾಸವನ್ನು ಬಿತ್ತಿ ಚಾರಿತ್ರ್ಯವನ್ನು ಕೊಯ್ಯಿರಿ
ಚಾರಿತ್ರ್ಯವನ್ನು ಬಿತ್ತಿ ಅದೃಷ್ಟವನ್ನು ಕೊಯ್ಯಿರಿ”
ಆದ್ದರಿಂದ, ನಮ್ಮ ಕಾರ್ಯಗಳು ಸರಿಯಾಗಿದ್ದರೆ, ನಮ್ಮ ಭವಿಷ್ಯವು ಒಳ್ಳೆಯದಾಗುವುದು.