ವಂಶಾವಳಿ

Print Friendly, PDF & Email
ವಂಶಾವಳಿ

ಶ್ರೀ ಸತ್ಯಸಾಯಿ ಬಾಬಾರವರು ಜನಿಸಲು ಆರಿಸಿಕೊಂಡ ರಾಜು ವಂಶವು, ವೆಂಕಾವಧೂತ ಮುನಿಗಳ ಕಾಲದಿಂದಲೂ ಧಾರ್ಮಿಕತೆಗೆ ಹೆಸರುವಾಸಿ ಆಗಿದ್ದಿತು. ಅವರ ತಾತನವರಾದ ಶ್ರೀ ರತ್ನಾಕರಂ ಕೊಂಡಮರಾಜುರವರು ೧೧೬ ವರ್ಷಗಳ ಕಾಲ ಬಾಳಿದ ಮಹಾತ್ಮರು. ಅವರು ಸಭ್ಯರೂ ಸಾಧುಸ್ವಭಾವದವರೂ ಆದ ವ್ಯಕ್ತಿಯಾಗಿದ್ದರು. ಸಂಗೀತ ವಿದ್ವಾಂಸರಾಗಿದ್ದರು. ನಾಟಕಗಳನ್ನು ತಾವೇ ರಚಿಸುತ್ತಿದ್ದರು, ಅಭಿನಯಿಸುತ್ತಿದ್ದರು. ಲೇಪಾಕ್ಷಿ ಶೈಲಿಯ ಸಂಪೂರ್ಣ ರಾಮಾಯಣವನ್ನು ಬಾಯಿಪಾಠ ಮಾಡಿಕೊಂಡಿದ್ದರು.

ಈ ಪ್ರಖ್ಯಾತ ಮಹಾ ಕಾವ್ಯದ ಘಟನೆಗಳನ್ನು ಹಾಡುತ್ತ, ಕೊಂಡಮರಾಜು ಅವರು, ಶ್ರೀರಾಮನ ನಿಷ್ಠಾವಂತ ಸಹೋದರನಾದ ಲಕ್ಷ್ಮಣನ ಪಾತ್ರವನ್ನು ತಮ್ಮದೇ ಆದ ಶೈಲಿಯಲ್ಲಿ ಅಭಿನಯಿಸುತ್ತಿದ್ದರು. ಲಕ್ಷ್ಮಣನ ದೃಢವಾದ ಶ್ರದ್ಧಾ ಭಕ್ತಿಗಳನ್ನು ಅವರು ವ್ಯಕ್ತಪಡಿಸುತ್ತಿದ್ದ ರೀತಿ, ಪ್ರೇಕ್ಷಕರ ಹೃನ್ಮನಗಳನ್ನು ಗೆಲ್ಲುತ್ತಿತ್ತು. ಈ ಪಾತ್ರಾಭಿನಯಕ್ಕಾಗಿಯೇ ಅವರಿಗೆ ಬಹಳ ಬೇಡಿಕೆ ಇದ್ದಿತು.

ಈ ರಾಜು ವಂಶದವರೇ ಗ್ರಾಮದಲ್ಲಿ ಶ್ರೀ ಗೋಪಾಲಸ್ವಾಮಿ ದೇವಾಲಯವನ್ನು ಕಟ್ಟಿಸಿ, ಗ್ರಾಮಕ್ಕೆ ದತ್ತು ಮಾಡಿದವರು. ಈ ನಮ್ಮ ಧರ್ಮಶೀಲ, ಸನ್ಮಾನ್ಯ ‘ತಾತ’ ನವರು, ಶ್ರೀಕೃಷ್ಣನ ಸತೀಮಣಿ ಸತ್ಯಭಾಮಾ ದೇವಿಗೊಂದು ದೇವಾಲಯವನ್ನು ಸಮರ್ಪಿಸಿದರು.

ಶ್ರೀ ಕೊಂಡಮರಾಜುರವರಿಗೆ ಇಬ್ಬರು ಪುತ್ರರು : ಪೆದ್ದ ವೆಂಕಮರಾಜು ಮತ್ತು ಚಿನ್ನ ವೆಂಕಮರಾಜು. ಈ ಇಬ್ಬರೂ ತಮ್ಮ ತಂದೆಯಿಂದ ಅವರ ಸಂಗೀತ, ನಾಟಕ ಮತ್ತು ಸಾಹಿತ್ಯಕ ಕೌಶಲ್ಯಗಳನ್ನು ಪಾರಂಪರಿಕವಾಗಿ ರೂಢಿಸಿಕೊಂಡರು.

ಶ್ರೀ ಸಾಯಿಬಾಬಾರವರ ‘ತಂದೆ’ಯಾಗಲು ಪೂರ್ವ ನಿಯಾಮಕರಾದ, ಹಿರಿಯ ಮಗ ಪೆದ್ದ ವೆಂಕಮರಾಜುರವರು, ತಮ್ಮ ದೂರದ ನೆಂಟರಾದ ಶ್ರೀ ಸುಬ್ಬರಾಜುರವರ ಮಗಳಾದ ಈಶ್ವರಮ್ಮನ್ನನ್ನು ವಿವಾಹವಾದರು. ದೈವ ಪ್ರೇರಿತವಾದ ಈ ವಿವಾಹದಿಂದ ದಂಪತಿಗಳಿಗೆ ಶೇಷಮರಾಜು ಎಂಬ ಮಗನೂ ವೆಂಕಮ್ಮ ಮತ್ತು ಪಾರ್ವತಮ್ಮ ಎಂಬ ಇಬ್ಬರು ಹೆಣ್ಣು ಮಕ್ಕಳೂ ಜನಿಸಿದರು.

ಶ್ರೀ ಕೊಂಡಮರಾಜುರವರ ಸತಿ ಲಕ್ಷಮ್ಮನವರಿಗೆ ಜೀವನದಲ್ಲಿ ಒಂದೇ ಒಂದು ಆಸೆ. ಉಪವಾಸ, ವ್ರತ, ನಿಯಮಗಳನ್ನು ಪಾಲಿಸಿ, ಧರ್ಮಗ್ರಂಥಗಳಲ್ಲಿ ಹೇಳಿರುವಂತೆ ದೈವಾನುಗ್ರಹವನ್ನು ಸಂಪಾದಿಸುವುದು. ಆ ಕಾರಣ ಅವರು ವ್ರತ, ಉಪವಾಸ, ನಿಯಮಗಳನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಿದ್ದರು.

ತಾತನವರಿಗೆ ವಯಸ್ಸಾದಂತೆ ನಾಟಕಗಳಲ್ಲಿ ಅಭಿನಯಿಸಲಾಗಲೀ, ತಾವೇ ಬರೆಯಲಾಗಲೀ ಸಾಧ್ಯವಾಗುತ್ತಿರಲಿಲ್ಲ. ಗ್ರಾಮದ ಮಕ್ಕಳನ್ನು ತಮ್ಮ ಪಲ್ಲಂಗದ ಸುತ್ತಲೂ ಸೇರಿಸಿ, ಅವರಿಗೆ ದೇವರ ಅವತಾರಗಳ ಕಥೆಗಳನ್ನು ಹೇಳಿ ಆನಂದಿಸುತ್ತಿದ್ದರು. ಕಥೆಗಳಲ್ಲಿ ಬರುವ ಪಾತ್ರಗಳನ್ನೂ, ಅವುಗಳ ಸಾಹಸ ಕಾರ್ಯಗಳನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ ಕಾರಣ ಮಕ್ಕಳು ಕಥೆ ಕೇಳಲು ಹಾತೊರೆಯುತ್ತಿದ್ದರು.

ಈ ಸರಳ ಸ್ವಭಾವದ, ಧರ್ಮಶೀಲ ವಂಶದಲ್ಲಿ ಶ್ರೀ ಸಾಯಿಬಾಬಾ ಜನಿಸಿದರು. ಶುದ್ಧ ಶಾಖಾಹಾರಿಯಾದ ತನ್ನ ಪುಟ್ಟ ಮೊಮ್ಮಗ ಸತ್ಯನನ್ನು ಕೊಂಡಮರಾಜು ವಿಶೇಷವಾಗಿ ಪ್ರೀತಿಸುತ್ತಿದ್ದರು. ಸತ್ಯನಾದರೋ ಆ ಆಸುಪಾಸಿನಲ್ಲಿ ಮಾಂಸಾಹಾರ ತಯಾರಿ ನಡೆದಿದ್ದರೆ ದೂರ ಹೋಗಿ ಬಿಡುತ್ತಿದ್ದನು. ಏಳು ವರ್ಷ ವಯಸ್ಸಿನ ಈ ಬಾಲಕನು ಬುದ್ಧಿವಂತನೂ, ಚುರುಕು ಬುದ್ಧಿಯುಳ್ಳವನೂ ಆಗಿದ್ದನು. ಆಗಲೇ ರುಚಿಕರವಾದ ಆಡುಗೆಯನ್ನೂ ಮಾಡಬಲ್ಲವನಾಗಿದ್ದನು. ಅನ್ನ, ಪಲ್ಯಗಳು, ಚಟ್ನಿ ಮುಂತಾದವುಗಳನ್ನು ತನ್ನ ತಾಯಿಯು ತೆಗೆದುಕೊಳ್ಳುತ್ತಿದ್ದ ಕಾಲಾವಧಿಗೂ ಕಡಿಮೆ ಸಮಯದಲ್ಲಿ ಮಾಡಿಬಿಡುತ್ತಿದ್ದನು.

ಈ ಪುಟ್ಟ ಬಾಲಕನು ತನ್ನ ಸುಶ್ರಾವ್ಯ ಕಂಠದಿಂದ ಹಾಡುವುದರಿಂದಲೂ, ಅಭಿನಯಿಸುವ ಮೂಲಕವೂ, ಪುಟ್ಟ ನಾಟಕಗಳನ್ನು ಬರೆಯುವ ಮೂಲಕವೂ ಆ ಹಿರಿಯರನ್ನು ಆನಂದ ಪಡಿಸುತ್ತಿದ್ದನು. ಮುಂಬರುವ ವರ್ಷಗಳಲ್ಲಿ, ತನ್ನ ಮೊಮ್ಮಗನ ಅನುಗ್ರಹಕ್ಕಾಗಿ ಬಂದ ಭಕ್ತರು, ಶ್ರೀ ಕೊಂಡಾಮರಾಜುರವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಆ ಹಿರಿಯರ ಕಣ್ಣುಗಳು, ಆನಂದದಿಂದ ಹೊಳೆಯುತ್ತಿದ್ದುವು. ಭಗವಂತನು ತನ್ನ ವಂಶದಲ್ಲಿ ಜನಿಸಿರುವುದನ್ನು ತಿಳಿದು ಆನಂದ ಪರವಶವಾಗುತ್ತಿದ್ದುವು. ತನ್ನ ಗುರು ವೆಂಕಾವಧೂತರು ಹೇಳುತ್ತಿದ್ದ, “ಭೂದೇವಿ ಅಳುತ್ತಿದ್ದಾಳೆ. ನಾರಾಯಣನು ಜನ್ಮ ತಾಳುತ್ತಾನೆ. ನೀನು ಕಣ್ಣಾರೆ ಕಾಣುತ್ತೀಯೆ. ಅವನು ನಿನ್ನನ್ನೂ ಪ್ರೀತಿಸುತ್ತಾನೆ,” ಎಂಬ ಮಾತುಗಳನ್ನು ನೆನೆಸಿಕೊಳ್ಳುತ್ತಿದ್ದರು. ಆ ಮಾತು ನಿಜವಾಯಿತು. ನಾರಾಯಣನು ಅವರ ಮನೆಯಲ್ಲಿ ಶ್ರೀ ಸತ್ಯಸಾಯಿಯಾಗಿ ಜನಿಸಿದನು. ಅವರ ಜೀವನದ ಕೊನೆಯ ದಿನಗಳನ್ನು ಅವರ್ಣನೀಯವಾದ ಆನಂದದಿಂದ ತುಂಬಿ, ಸುಖಪ್ರದವನ್ನಾಗಿ ಮಾಡಿದನು. ಸ್ವಾಮಿಯ ಸೇವೆಯಲ್ಲಿ ತುಂಬು ಜೀವನ ನಡೆಸಿದ ಈ ಪರಿಪೂರ್ಣ ಜೀವಿಯ ಅಂತ್ಯವು ೧೯೫೦ರಲ್ಲಾಯಿತು. ಅಂತ್ಯಕಾಲದಲ್ಲಿ ರಾಮಾಯಣದ ಶ್ಲೋಕಗಳನ್ನು ಎತ್ತರದ ಧ್ವನಿಯಲ್ಲಿ ತಮಗೆ ತಾವೆ ಹೇಳಿಕೊಳ್ಳುತ್ತಿದ್ದರಂತೆ.

[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]

Leave a Reply

Your email address will not be published. Required fields are marked *