ಬಾಲ್ಯದ ಕಥೆಗಳು-2

Print Friendly, PDF & Email
ಬಾಲ್ಯದ ಕಥೆಗಳು-2

ಪುಟ್ಟ ಬಾಲಕನಿದ್ದಾಗ ಕೂಡಾ ಬಾಬಾರವರು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯದ ಪುಸ್ತಕಗಳ ಮತ್ತು ಚಲನಚಿತ್ರಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅವು ದುಡ್ಡು ಮಾಡುವ ಉದ್ದೇಶದಿಂದ ಆದರ್ಶಗಳನ್ನು ಅಧೋಗತಿಗೆ ಇಳಿಸುತ್ತವೆಂದು ಅವರ ಅಭಿಪ್ರಾಯ. ಸಂಚಾರೀ ಚಿತ್ರಮಂದಿರದವರು ಗ್ರಾಮದಲ್ಲಿ ಗುಡಾರ ಹಾಕಿದಾಗಲೆಲ್ಲಾ ಸುತ್ತುಮುತ್ತಲಿನ ಮೈಲುಗಟ್ಟಲೆ ದೂರದ ಊರುಗಳಿಂದ ಜನರು ಬರುತ್ತಿದ್ದರು. ಆದಷ್ಟು ಚಿತ್ರಗಳನ್ನು ನೋಡುವ ಸಲುವಾಗಿ ತಮ್ಮ ಅಲ್ಪ ಸಂಪಾದನೆಯನ್ನೆಲ್ಲಾ ವ್ಯಯಿಸುತ್ತಿದ್ದರು. ಇತರ ಮಕ್ಕಳೊಡನೆ ಈ ಚಿತ್ರಗಳನ್ನು ನೋಡಲು ಸತ್ಯನು ಒಪ್ಪುತ್ತಿರಲಿಲ್ಲ. ಅವು ಆತ್ಮವಂಚಕ ಮೌಲ್ಯಗಳನ್ನು ಬಿಂಬಿಸುವುದಾಗಿ ವಿವರಿಸುತ್ತಿದ್ದನು. ಧರ್ಮ ಶಾಸ್ತ್ರಗಳನ್ನು ತಪ್ಪಾಗಿ ತರ್ಕಿಸುತ್ತವೆ ಎಂದು ಹೇಳುತ್ತಿದ್ದನು. ಸಂಗೀತವನ್ನು ಅಕ್ರಮ ರೀತಿಯಲ್ಲಿ ಹಾಡಿ ಹಾಳು ಮಾಡುತ್ತಿರುವುದಾಗಿ ತಿಳಿಸುತ್ತಿದ್ದನು.

pandari bhajan

ಹತ್ತು ವರ್ಷದವನಿದ್ದಾಗ ಸತ್ಯನು ‘ಪಂಡರಿ ಭಜನ ಮಂಡಲಿ’ಯನ್ನು ಸ್ಥಾಪಿಸಿ ನಡೆಸುತ್ತಿದ್ದನು. ಅದರಲ್ಲಿ ೧೮ ಬಾಲಕರಿದ್ದರು. ಎಲ್ಲರೂ ಒಂದೇ ರೀತಿಯ ಮಾಸಲು ಕಂದು ಬಣ್ಣದ ವಸ್ತ್ರವನ್ನು ಧರಿಸುತ್ತಿದ್ದರು. ಎಲ್ಲರ ಕೈಯಲ್ಲಿ ಒಂದು ಬಾವುಟ, ಎಲ್ಲರ ಕಾಲುಗಳಲ್ಲೂ ಗೆಜ್ಜೆಗಳು. ಜನಪದ ಗೀತೆಗಳನ್ನೂ ಯಾತ್ರಿಕ ಭಕ್ತರು ಪಾಂಡುರಂಗನ ದರ್ಶನಕ್ಕಾಗಿ ಹಾತೊರೆಯುವ ಲಾವಣೀ ಪದಗಳನ್ನೂ ಕುಣಿಯುತ್ತಾ ಹಾಡುತ್ತಿದ್ದರು. ದೂರದ ಯಾತ್ರೆಯ ಸಂಕಷ್ಟಗಳನ್ನು ಹಾಡು, ಪದ್ಯಗಳ ಮೂಲಕ ಸತ್ಯನು ಮಕ್ಕಳಿಗೆ ಹೇಳಿಕೊಡುತ್ತಿದ್ದನು. ಭಾಗವತದಿಂದ ಆಯ್ದ ಶ್ರೀಕೃಷ್ಣನ ಜೀವನದ ಬಗ್ಗೆ ಹಾಡುಗಳನ್ನೂ ರಚಿಸಿ ಹೇಳಿ ಕೊಡುತ್ತಿದ್ದನು. ಸತ್ಯನು ಬಾಲ ಕೃಷ್ಣನ ಇಲ್ಲವೇ ತಾಯಿ ಯಾಶೋದೆಯ ಪಾತ್ರಗಳನ್ನು ವಹಿಸುತ್ತಿದ್ದನು. ಭಕ್ತಿಯ ಹಾಡುಗಳಿಗೆ ಅವನ ನೃತ್ಯ, ಮಾತುಗಳು ಅಥವಾ ಸಂಗೀತವು ಕಳೆಕಟ್ಟುತ್ತಿದ್ದುವು. ಅವನ ಕೃಷ್ಣನ ಪಾತ್ರವು ಅದೆಷ್ಟು ಶೋಭಿಸುತ್ತಿತ್ತೆಂದರೆ, ಬೃಂದಾವನ ಅಥವಾ ಮಧುರೆಯಿಂದ ಶ್ರೀಕೃಷ್ಣನೇ ಎದುರು ಬಂದು ನಿಂತಿರುವನೇನೋ ಎಂಬಂತೆ ಹಳ್ಳಿಗರಿಗೆ ಭಾಸವಾಗುತ್ತಿತ್ತು.

ಅವನ ಆಟಗಳು ಪಾತ್ರಗಳು ಅದೆಷ್ಟು ನೈಜವಾಗಿರುತ್ತಿತ್ತು ಎಂದರೆ ನರಸಿಂಹ ದೇವರ ಪಾತ್ರವನ್ನು ವಿವರಿಸುವ ಹಾಡು ಹೇಳುವಾಗ ಸತ್ಯನು ನರಸಿಂಹಾವತಾರವನ್ನೇ ತಾಳಿದಂತಿದ್ದು, ರೌದ್ರನಾಗಿ ಮೇಲೆಗರಿದಾಗ ನೋಡಿದವರಿಗೆ ಭಯ ಹುಟ್ಟಿಸುತ್ತಿತ್ತು. ಜನರು ಅವನಿಗೆ ಆರತಿ ಎತ್ತಿ ಪೂಜಿಸುತ್ತಿದ್ದರು. ಕೂಡಲೇ ಸತ್ಯನು ಮೊದಲಿನಂತೆ ಶಾಂತನಾಗಿ ಹಾಡನ್ನು ಮುಂದುವರೆಸುತ್ತಿದ್ದನು. ಈ ವೃತ್ತಾಂತವು ಸುತ್ತೆಲ್ಲಾ ಹರಡಿ, ಪುಟ್ಟಪರ್ತಿಯಲ್ಲಿ ಭಜನ ಮಂಡಲಿಯವರು ಹಾಡಿ ಕುಣಿಯುವಾಗ ಸತ್ಯನ ಮೈಮೇಲೆ ದೇವರು ಬರುವುದೆಂದು ಪ್ರತೀತಿ ಹಬ್ಬಿತ್ತು.

ಅವನು ಸಾಂಪ್ರದಾಯಿಕ ಪ್ರಸಂಗಗಳನ್ನು ತನ್ನ ಹಾಡುಗಳಲ್ಲಿ ಸೇರಿಸುತ್ತಿದ್ದುದಲ್ಲದೆ, ಅಲ್ಲಿನವರಾರೂ ಅಲ್ಲಿಯವರೆಗೆ ಕೇಳಿ, ನೋಡಿರದ ಹೊಸ ದೇವರನ್ನೂ ಹೊಸ ದೇವಸ್ಥಾನವನ್ನೂ ಸೇರಿಸಿ ಹಾಡುತ್ತಿದ್ದನು. ದೇವಸ್ಥಾನವು ಶಿರ್ಡಿ ಹಾಗೂ ದೇವರು ಸಾಯಿಬಾಬಾ ಆಗಿರುತ್ತಿತ್ತು. ಮಕ್ಕಳು ಹಾಡುತ್ತಾ ಕುಣಿಯುತ್ತಾ ರಸ್ತೆಗಳಲ್ಲಿ ಹೋಗುವುದನ್ನು ಕಂಡ ಹಿರಿಯರು, ಈ ಸಾಯಿಬಾಬಾ ಯಾರೆಂದು ಆಶ್ಚರ್ಯ ಪಡುತ್ತಿದ್ದರು.

ಅಕ್ಕ ಪಕ್ಕದ ಗ್ರಾಮಗಳಲ್ಲಿ ಕಾಲರಾ ಉಪದ್ರವವು ಹರಡಿ, ಅನೇಕ ಕುಟುಂಬಗಳು ಸಾವು ನೋವಿಗೀಡಾದಾರೂ ಪುಟ್ಟಪರ್ತಿಯು ಮಾತ್ರಸುರಕ್ಷಿತವಾಗಿ ಪಾರಾಗಿತ್ತು! ಗ್ರಾಮದ ತಿಳುವಳಿಕಸ್ತರು, ಭಜನ ಮಂಡಳಿಯಿಂದುಂಟಾಗಿರುವ ದೈವೀ ವಾತಾವರಣವು, ಗ್ರಾಮದ ಆರೋಗ್ಯ ಮತ್ತು ಸುರಕ್ಷತೆಗೆ ಕಾರಣವೆಂದು ನಂಬಿದರು. ಈ ಕಾರಣ ಬೇರೆ ಬೇರೆ ಗ್ರಾಮಗಳವರು ಈ ಬಾಲಕರ ಭಜನ ಮಂಡಳಿಯವರನ್ನು ಹಾಡುವುದಕ್ಕಾಗಿ, ನಾಟಕ ಆಡುವುದಕ್ಕಾಗಿ ತಮ್ಮ ಗ್ರಾಮಗಳಿಗೆ ಕರೆಸಿಕೊಳ್ಳುತ್ತಿದ್ದರು. ಪುರಾಣದ ಕಥೆಗಳಿಂದ ಆಯ್ದ ಈ ನಾಟಕಗಳು ಅಸತ್ಯವನ್ನು ಜಯಿಸಿ, ಸತ್ಯವು ಪ್ರಕಾಶಿಸುವುದನ್ನೂ ದೇವರು ತನ್ನ ಭಕ್ತರನ್ನು ಪ್ರೇಮದಿಂದ ಕಾಪಾಡುವುದನ್ನೂ ತೋರಿಸುತ್ತಿದ್ದುವು.

ಸತ್ಯನು ಅನೇಕ ಪಾತ್ರಗಳನ್ನು ಆರಿಸಿಕೊಂಡು ಅಭಿನಯಿಸುತ್ತಿದ್ದನು. ಅವನು ವಿಶೇಷವಾಗಿ ಶ್ರೀಕೃಷ್ಣ ಮತ್ತು ಮೋಹಿನಿ ಪಾತ್ರಗಳನ್ನು ಅಭಿನಯಿಸುತ್ತಿದ್ದನು. ಅವನ ಪಾದಗಳಲ್ಲಿ ಹಿಂದೆಂದೂ ಕಾಣದ ಒಂದು ರೀತಿಯ ಲಯ, ಬಳುಕು ಮತ್ತು ಸೌಂದರ್ಯವು ಲಾಸ್ಯವಾಡುತ್ತಿತ್ತು. ಅದನ್ನು ಕಂಡವರಿಗೆ, ಅವನು ಭೂಮಿಯನ್ನು ಮುಟ್ಟದೆ ತೇಲುತ್ತಿರುವಂತೆಯೂ ಸ್ವರ್ಗೀಯ ಪ್ರದೇಶಕ್ಕೆ ಸೇರಿದವನಂತೆಯೂ ಭಾಸವಾಗುತ್ತಿತ್ತು. ಈ ಪುಟ್ಟ ಬಾಲಕನ ನಾಟಕಾಭಿನಯವು ಅದೆಷ್ಟು ನೈಜವಾಗಿ ಇರುತ್ತಿತ್ತೆಂದರೆ, ಅವನು ಹರಿಶ್ಚಂದ್ರನ ಹೆಂಡತಿ ಚಂದ್ರಮತಿಯ ಪಾತ್ರವನ್ನು ಮಾಡುತ್ತಿದ್ದಾಗ, ಆಕೆಯ ಶಿರಚ್ಛೇದನದ ಸಂದರ್ಭದಲ್ಲಿ, ಅದು ಬರಿಯ ನಾಟಕವೆಂಬುದನ್ನು ಮರೆತು, ಅವನ ಸ್ವಂತ ತಾಯಿಯು, ಅವನಿಗೆ ಆ ಶಿಕ್ಷೆಯನ್ನು ತಪ್ಪಿಸಲು ವೇದಿಕೆಯನ್ನು ಹತ್ತಿದ್ದರು.

[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]

Leave a Reply

Your email address will not be published. Required fields are marked *

error: