ಬಾಲ್ಯದ ಕಥೆಗಳು-3

Print Friendly, PDF & Email
ಬಾಲ್ಯದ ಕಥೆಗಳು-3

ಸತ್ಯನ ತಂದೆತಾಯಿಯರು ಅವನಿಗೆ ಪ್ರೌಢ ಶಾಲೆಯ ಶಿಕ್ಷಣ ದೊರಕಲೆಂಬ ಉದ್ದೇಶದಿಂದ ಅವನನ್ನು ಕಮಲಾಪುರಕ್ಕೆ ಕಳುಹಿಸಲು ನಿರ್ಧರಿಸಿದರು. ಅಲ್ಲಿ ಅವನ ಅಣ್ಣನಾದ ಶೇಷಮರಾಜುವಿನ ಜೊತೆ ಇರುವುದೆಂದೂ ನಿರ್ಧರಿಸಿದರು. ಸಾಧು ಸ್ವಭಾವದವನೂ ಸನ್ನಡತೆಯುಳ್ಳ ಬಾಲಕನೂ ಆದ ಕಾರಣ ಅವನು ಕಮಲಾಪುರದ ಪ್ರೌಢಶಾಲೆಯಲ್ಲಿ ಉಪಾಧ್ಯಾಯರುಗಳ ಅಚ್ಚುಮೆಚ್ಚಿನ ಶಿಷ್ಯನಾದನು.

ಆ ಶಾಲೆಯ ಸ್ಕೌಟ್ ಮಾಸ್ಟರ್, ಸತ್ಯನನ್ನು ತನ್ನ ದಳಕ್ಕೆ ಸೇರಿಸಿಕೊಳ್ಳಲು ಕಾತುರರಾದರು. ಇತರ ಮಕ್ಕಳಂತೆ ಅವನೂ ಸೇರಿಕೊಳ್ಳಲು ಒತ್ತಾಯ ಮಾಡಿದರು. ಆಗ ಸತ್ಯನಲ್ಲಿ ಒಂದೇ ಒಂದು ಜೊತೆ ಬಟ್ಟೆಯಿದ್ದಿತು. ಒಂದು ಷರ್ಟ್ ಮತ್ತು ನಿಕ್ಕರ್. ಆ ಬಟ್ಟೆಗಳ ಬಗ್ಗೆ ಅವನು ಬಹಳ ಎಚ್ಚರವಹಿಸುತ್ತಿದ್ದನು. ಪ್ರತಿದಿನ ಶಾಲೆಯಿಂದ ಹಿಂದಿರುಗಿದ ಕೂಡಲೇ ಒಂದು ಟವಲ್ ಸುತ್ತಿಕೊಂಡು, ಆ ಬಟ್ಟೆಗಳನ್ನು ಒಗೆದು ಹಾಕುತ್ತಿದ್ದನು. ಅವು ಒಣಗಿದ ಬಳಿಕ, ಹಿತ್ತಾಳೆ ಚೊಂಬಿನಲ್ಲಿ ಕೆಂಡವನ್ನು ಹಾಕಿ, ಅದು ಬಿಸಿಯಾದ ಮೇಲೆ ಅದರಿಂದ ಇಸ್ತ್ರಿ ಮಾಡಿಕೊಳ್ಳುತ್ತಿದ್ದನು. ಹಾಗೂ ಬಟ್ಟೆಯಲ್ಲಿ ಮಡಿಕೆಗಳಿದ್ದರೆ, ಅದನ್ನು ಮಡಿಸಿ, ಭಾರವಾದ ಟ್ರಂಕ್ ಕೆಳಗೆ, ರಾತ್ರಿಯ ಹೊತ್ತು ಇಟ್ಟಿರುತ್ತಿದ್ದನು. ಹಾಗಾಗಿ ಅವನ ಬಟ್ಟೆಗಳು ಸದಾಕಾಲ ಶುಭ್ರವಾಗಿಯೂ ನೀಟಾಗಿಯೂ ಕಾಣುತ್ತಿದ್ದುವು.

ಆ ಸ್ಕೌಟ್ ದಳದವರು ಪುಷ್ಪಗಿರಿ ಜಾತ್ರೆ ಮತ್ತು ದನಗಳ ಪ್ರದರ್ಶನಕ್ಕೆ ಹೋಗುವವರಿದ್ದರು. ಅಲ್ಲಿ ಅವರು ಜನರಿಗೆ ಕುಡಿಯುವ ನೀರು ಒದಗಿಸುವುದು; ಸ್ಥಳ ನಿರ್ಮಲೀಕರಣ; ಕಳೆದು ಹೋದ ಮಕ್ಕಳನ್ನು ಅವರ ತಾಯಿ ತಂದೆಯರ ವಶಕ್ಕೆ ಒಪ್ಪಿಸುವುದು; ಹೀಗೆ ಉಪಯುಕ್ತವಾದ ನಾನಾವಿಧವಾದ ಸೇವಾಕಾರ್ಯಗಳನ್ನು ಹಮ್ಮಿಕೊಂಡಿದ್ದರು.

ಅವನ ಸಹಪಾಠಿಯಾದ ರಮೇಶ್ ಎಂಬುವನು ಸತ್ಯನ ಬಳಿ ಸ್ಕೌಟ್ ಸಮವಸ್ತ್ರವಿಲ್ಲದ ಕಾರಣ, ಸಮವಸ್ತ್ರವನ್ನು ಕೊಡುಗೆಯಾಗಿ ನೀಡಲು ಇಚ್ಛಿಸಿದನು. ಸತ್ಯನು ಅದಕ್ಕೆ ಒಪ್ಪಲಿಲ್ಲ. ಆ ರೀತಿ ಬಹುಮಾನ ಪಡೆದರೆ ತಮ್ಮ ಗೆಳೆತನವು ಹಾಳಾಗುವುದಾಗಿಯೂ ನಿಜವಾದ ಗೆಳೆತನವು ಹೃದಯಗಳ ಮಧ್ಯೆ ಬೆಸೆಯ ಬೇಕೇ ಹೊರತು, ಐಹಿಕ ವಸ್ತುಗಳನ್ನು ಕೊಡು-ತೆಗೆದುಕೊಳ್ಳುವುದರಿಂದ ಅಲ್ಲವೆಂದು ವಿವರಿಸಿದನು.

Ramesh

ಶಿಬಿರದ ಶುಲ್ಕವು ಪ್ರತಿ ಬಾಲಕನಿಗೆ ರೂ. ೧೨ ಇದ್ದಿತು. ಸ್ಕೌಟ್ ದಳವು ಶಿಬಿರಕ್ಕೆ ಹೊರಡುವ ದಿನ, ಸತ್ಯನು ತನ್ನ ಬಳಿ ಹಣವಿಲ್ಲದ ಕಾರಣ, ಹೊಟ್ಟೆನೋವಿನಿಂದ ನರಳುತ್ತಿರುವಂತೆ ನಟಿಸಿ, ಮಲಗಿದನು. ಬಾಲಕರೆಲ್ಲರೂ ಬಸ್‌ನಲ್ಲಿ ಹೊರಟ ಮೇಲೆ, ಇವನು ಮೇಲೆದ್ದು, ಒಂಭತ್ತು ಮೈಲಿ ದೂರದ ಪುಷ್ಪಗಿರಿಗೆ ನಡೆದು ಹೋದನು. ಅಲ್ಲಿ ತನ್ನ ಆದರ್ಶ ನಡೆವಳಿಕೆಯ ಮೂಲಕ ತನ್ನ ಸಹಪಾಠಿಗಳು ನಿಸ್ವಾರ್ಥ ಸೇವೆ ಸಲ್ಲಿಸುವಂತೆ ಹುರಿದುಂಬಿಸಿದನು.

Camp

ಹಿಂದಿರುಗುವ ಸಮಯ ಬಂದಾಗ, ಅವನು ಸುಮ್ಮನೆ ಶಿಬಿರದಿಂದ ಹೊರಬಂದು, ಮನೆಗೆ ನಡೆದುಬಂದನು. ಯಾರಿಗೂ ಏನೂ ತಿಳಿಯದಂತೆ ಎಲ್ಲವೂ ನಡೆದು ಹೋಯಿತು. ಈ ರೀತಿಯಲ್ಲಿ ಸ್ವಾಮಿಯವರು ತಮ್ಮ ಬಾಲ್ಯದ ದಿನಗಳಿಂದಲೂ ಸಮಾಜದ ದುರ್ಗುಣಗಳ ನಿರ್ಮೂಲನೆಗೂ, ಸದ್ಗುಣಗಳ ಅಭಿವೃದ್ಧಿಗೂ ತಮ್ಮನ್ನು ತಾವು ಅರ್ಪಿಸಿಕೊಂಡಿರುವುದನ್ನು ಕಾಣುತ್ತೇವೆ. ಮುಂದೆ ಶೇಷಮರಾಜುರವರನ್ನು ಉರವಕೊಂಡ ಪ್ರೌಢ ಶಾಲೆಯ ತೆಲುಗು ಪಂಡಿತರನ್ನಾಗಿ ವರ್ಗಾಯಿಸಿದಾಗ, ಸತ್ಯನೂ ಅವರ ಜೊತೆಗೆ ಹೋದನು. ಆ ಶಾಲೆಯಲ್ಲಿ ಪ್ರತಿಯೊಬ್ಬ ಉಪಾಧ್ಯಾಯನೂ ಈ ಪುಟ್ಟ ಬಾಲಕನ ಬಗ್ಗೆ ತಿಳಿಯಲು ಉತ್ಸುಕರಾಗಿದ್ದರು. ಕೆಲವರು ಅತ್ಯಂತ ಆದರ ಗೌರವಗಳಿಂದಾದರೆ ಮತ್ತೆ ಕೆಲವರು ಕುತೂಹಲದಿಂದ ತಿಳಿಯಲಿಷ್ಟಪಟ್ಟವರು.

ಅನತಿ ಕಾಲದಲ್ಲಿ ಸತ್ಯನು ಎಲ್ಲರಿಗೂ ಅಚ್ಚುಮೆಚ್ಚಾದನು. ಶಾಲೆಯಲ್ಲೇ ಅಲ್ಲ, ಉರವಕೊಂಡ ನಗರದಲ್ಲೂ ಪ್ರಖ್ಯಾತನಾದನು. ಶಾಲೆಯ ದಿನಚರಿ ಪ್ರಾರಂಭವಾಗುವ ಮುನ್ನ, ಅವನೇ ಬೆಳಗಿನ ಪ್ರಾರ್ಥನೆಯನ್ನು ನಡೆಸಿಕೊಡುವನು. ಉಪಾಧ್ಯಾಯರೂ ವಿಧ್ಯಾರ್ಥಿಗಳೂ ತಮ್ಮ ತಮ್ಮ ನಿಗದಿತ ಕರ್ತವ್ಯ ಪಾಲನೆಯನ್ನು ಮಾಡುವಂತೆ ಪ್ರೇರಿಸುತ್ತಿರುವನೇನೋ ಎನ್ನುವಂತಿದ್ದಿತು.

ಸಂಗೀತ, ಸಾಹಿತ್ಯ ಮತ್ತು ನಾಟಕ ಕಲೆಗಳಲ್ಲಿ ಅವನ ವಿಶೇಷ ಪರಿಣತಿಯು, ಉಪಾಧ್ಯಾಯರುಗಳ ಗಮನವನ್ನು ಸೆಳೆಯಿತು. ನಾಟಕದ ಜವಾಬ್ದಾರಿಯಿದ್ದ ಉಪಾಧ್ಯಾಯರು, ಒಂದು ನಾಟಕವನ್ನು ರಚಿಸಲು ಕೋರಿದರು. ಸತ್ಯನು ಉಲ್ಲಾಸದಿಂದ ‘ಚೆಪ್ಪಿನಟ್ಲು ಚೇಸ್ತಾರಾ?’ (ನುಡಿದಂತೆ ನಡೆವರೆ?) ಎಂಬ ನಾಟಕವನ್ನುರಚಿಸಿದನು. ಈ ನಾಟಕವು ಬಹಳ ಯಶಸ್ವಿಯಾಯಿತು. ನಾಟಕದ ಮೂಲ ವಸ್ತುವು ಮಾನವನು ಇತರರಿಗೆ ಉಪದೇಶ ಮಾಡುವಂತೆ ತಾನು ನಡೆದುಕೊಳ್ಳದೆ ಇರುವುದರ ವಿಫಲತೆಯನ್ನು ತೋರಿಸುತ್ತದೆ. ಹನ್ನೆರಡು ವರ್ಷದ ಸತ್ಯನು ಮುಖ್ಯ ಪಾತ್ರವನ್ನು ತಾನೇ ಉತ್ತಮ ರೀತಿಯಲ್ಲಿ ಅಭಿನಯಿಸಿದನು. ಅದು ಅವನ ಜೊತೆಯ ವಿದ್ಯಾರ್ಥಿಗಳ ಮೇಲೂ ಉಪಾಧ್ಯಾಯರ ಮೇಲೂ ಗ್ರಾಮಸ್ಥರ ಮೇಲೂ ಪ್ರಭಾವ ಬೀರಿತು. ಹೇಳುವುದೊಂದು ಮಾಡುವುದೊಂದು ಆದರೆ ಅದು ಬರಿಯ ಬೂಟಾಟಿಕೆ ಎಂಬುದನ್ನು ತೋರಿಸಿತು. ಈ ನಾಟಕವು ಹಿರಿಯರ ಕಣ್ಣು ತೆರೆಸಿತು. ಸತ್ಯನ ದೂರದರ್ಶಿತ್ವವನ್ನೂ ನಿಜವಾದ ಶಿಕ್ಷಣದ ಬಗ್ಗೆ ಇರುವ ಉತ್ಸಾಹವನ್ನೂ ತೋರಿಸಿತು.

[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]

Leave a Reply

Your email address will not be published. Required fields are marked *