ಜೋನ್ ಆಫ್ ಆರ್ಕ್

Print Friendly, PDF & Email
ಜೋನ್ ಆಫ್ ಆರ್ಕ್

ಫ್ರಾನ್ಸ್ ನ ಲೊರಿಯೇನ್ ಸಂಸ್ಥಾನದ ದೂರದ ಒಂದು ಹಳ್ಳಿಯಲ್ಲಿ ಜಾಕ್ಸ್ಡಿಆರ್ಕ್ ಎಂಬ ಪೌರನು ವಾಸವಾಗಿದ್ದನು. ಅವನಿಗೆ ಜೋನ್ ಆಫ್‌ ಆರ್ಕ್ ಎಂಬ ಒಬ್ಬಳು ಮಗಳಿದ್ದಳು. ನಮ್ಮ ಈ ಕಥೆಯ ಸಂದರ್ಭದಲ್ಲಿ ಅವಳಿಗೆ ಇಪ್ಪತ್ತು ವರ್ಷ ವಯಸ್ಸಾಗಿತ್ತು. ಬಾಲ್ಯದಿಂದಲೂ ಅವಳು ಒಬ್ಬ ಏಕಾಂಗಿಯಾದ ಹುಡುಗಿಯಾಗಿದ್ದಳು. ಅವಳು ಇಡೀ ದಿನ ಒಬ್ಬರೇ ಒಬ್ಬ ಮಾನವ ರೂಪವನ್ನು ನೋಡದೆ, ಮಾನವ ಧ್ವನಿಯನ್ನು ಕೇಳದೆ ಕೇವಲ ಕುರಿಗಳ ಮತ್ತು ಹಸುಗಳ ಮಂದೆಯನ್ನು ಆರೈಕೆ ಮಾಡುವುದರಲ್ಲಿ ಒಲವನ್ನು ಹೊಂದಿದ್ದಳು. ಆಗಾಗ್ಗೆ ಹಳ್ಳಿಯ ಕತ್ತಲು ತುಂಬಿದ ಚರ್ಚ್ ನಲ್ಲಿ ಗಂಟೆಗಟ್ಟಳೆ ಪ್ರಾರ್ಥನೆ ಮಾಡುತ್ತಿದ್ದಳು. ಅಲ್ಲಿ ಕೆಲವು ರೂಪಗಳನ್ನು ತಾನು ನೋಡ ಬಲ್ಲೆ ಮತ್ತು ಅವು ತನ್ನೊಡನೆ ಮಾತನಾಡುತ್ತವೆ ಎಂದು ಅವಳು ಯೋಚಿಸಿದ್ದಳು. ಅನೇಕ ಹಳ್ಳಿಗರು ಜೋನ್‌ಳು ಅಪೂರ್ವವಾದ ದೃಶ್ಯಗಳನ್ನು ನೋಡಿದ್ದಾಳೆ ಎಂದು ನಂಬಿದ್ದರು ಮತ್ತು ಅವಳೊಡನೆ ದೇವತೆಗಳು ಮತ್ತು ಇತರ ಶಕ್ತಿಗಳು ಮಾತನಾಡುತ್ತವೆ ಎಂದು ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದರು.

Joan of Arc Praying in the Church

ಒಂದು ದಿನ ಜೋನ್‌ಳು ತನ್ನ ತಂದೆಯ ಹತ್ತಿರ ತಾನು ಒಂದು ಅಪರೂಪದ ಧ್ವನಿಯನ್ನು ಕೇಳಿದುದಾಗಿಯೂ, ಅದು ಹೋಗಿ ಡಾಫಿನ್‌ಗೆ ಸಹಾಯ ಮಾಡುವಂತೆ ತಿಳಿಸಿರುವುದಾಗಿಯೂ ಹೇಳಿದಳು. ಅವಳಿಗೆ ಬಹುಪಾಲು ಚರ್ಚ್ ನ ಗಂಟೆಗಳು ಬಾರಿಸುತ್ತಿದ್ದಾಗ ಈ ಧ್ವನಿಗಳು ಕೇಳಿಸುತ್ತಿದ್ದವು.

ಅಪರೂಪದ ದೃಶ್ಯಗಳನ್ನು ನೋಡಿದಾಗ ಮತ್ತು ಧ್ವನಿಗಳನ್ನು ಕೇಳಿದಾಗ ಜೋನ್, ಅವುಗಳನ್ನು ನಂಬುತ್ತಿದ್ದಳು. ಅವಳ ತಂದೆಯು, “ಜೋನ್, ಅದು ನಿನ್ನ ಭ್ರಾಂತಿ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಒಬ್ಬ ದಯಾಳುವನ್ನು ಮದುವೆಯಾಗು” ಎಂದು ಹೇಳುತ್ತಿದ್ದನು. ಆದರೆ ಜೋನ್, “ನಾನು ಮದುವೆಯಾಗುವುದಿಲ್ಲ, ಹೋಗಿ ಡಾಫಿನ್‌ಗೆ ಸಹಾಯ ಮಾಡುತ್ತೇನೆ” ಎಂದು ಉತ್ತರಿಸುತ್ತಿದ್ದಳು.

ಒಂದು ದಿನ ಜೋನ್‌ಳು, ಅವಳನ್ನು ಡಾಫಿನ್ ಬಳಿ ಕರೆದೊಯ್ಯಬಲ್ಲ ಬೌದ್ರಿಕೋರ್ಟ್ ಎಂಬ ದೊರೆಯನ್ನು ನೋಡಲು ತನ್ನ ಒಬ್ಬರು ಬಂಧುವಿನೊಡನೆ ಹೊರಟಳು. ದೊರೆಯ ಮನೆಯನ್ನು ತಲುಪಲು ಅವರು ಬಹಳದೂರ ಪ್ರಯಾಣ ಮಾಡಬೇಕಿತ್ತು. ಬಾಗಿಲಿನಲ್ಲಿದ್ದ ಸೇವಕರು ಒಳಗೆ ಹೋಗಿ, ದೊರೆಯ ಹತ್ತಿರ, ಒಬ್ಬಳು ರೈತಬಾಲಕಿಯು ಅವನನ್ನು ನೋಡಲು ಬಯಸುತ್ತಾಳೆಂದು ತಿಳಸಿದಾಗ ಅವನು ಅವಳನ್ನು ದೂರ ಕಳಿಸುವಂತೆ ಹೇಳಿದನು. ಆದರೆ ಅವನು ಬೇಗ ಮನಸ್ಸು ಬದಲಾಯಿಸಿ, ಅವಳನ್ನು ಕರೆಸಿ ಪ್ರಶ್ನೆ ಮಾಡಿದನು. ನಂತರ ಅವನು ಅವಳನ್ನು ಡಾಫಿನ್ ಇದ್ದ ಚಿನಾನ್ ಪಟ್ಟಣಕ್ಕೆ ಕಳಿಸಲು ಬಯಸಿದನು. ಆದ್ದರಿಂದ ಅವನು ಅವಳಿಗೆ ಒಂದು ಕುದುರೆಯನ್ನು ಮತ್ತು ಒಂದು ಕತ್ತಿಯನ್ನು ತರಿಸಿಕೊಟ್ಟು, ಅವಳನ್ನು ಚಿನಾನ್‌ಗೆ ಕರೆದುಕೊಂಡು ಹೋಗಲು ಇಬ್ಬರು ವ್ಯಕ್ತಿಗಳನ್ನು ನೇಮಿಸಿದನು. ಜೋನ್ ಪುರುಷರ ಉಡುಗೆ ಗಳನ್ನು ಧರಿಸಿದಳು. ಅವಳು ಒಂದು ಖಡ್ಗವನ್ನೂ ಧರಿಸಿದ್ದಳು. ಅವಳು ಕುದುರೆಯನ್ನೇರಿ, ಆ ಇಬ್ಬರು ವ್ಯಕ್ತಿಗಳೊಡನೆ ಪ್ರಯಾಣ ಬೆಳೆಸಿದಳು.

ಜೋನ್‌ಳು ಚಿನಾನ್‌ನ್ನು ತಲುಪಿದಾಗ, ಅವಳು ಡಾಫಿನ್‌ನನ್ನು ಭೇಟಿಮಾಡಿ, ‘ಅವನ ಶತ್ರುಗಳನ್ನು ನಿಗ್ರಹಿಸಿ ರ‍್ಹೀಮ್ಸ್ನ ದೊರೆಯನ್ನಾಗಿ ಮಾಡಬೇಕೆಂದು ತನಗೆ ಭಗವಂತನ ಆಜ್ಞೆಯಾಗಿದೆ’ ಎಂದು ತಿಳಿಸಿದಳು. ಡಾಫಿನ್‌ನು ಕೆಲವು ತಜ್ಞರ ಮತ್ತು ಪೂಜಾರಿಗಳ ಸಲಹೆ ಪಡೆದನು. ಅವರು ಜೋನ್‌ಳನ್ನು ಪ್ರಶ್ನೆಮಾಡಿ, ಅವಳಿಗೆ ಯಾವುದೋ ಆಧ್ಯಾತ್ಮಿಕ ಶಕ್ತಿ ಇದೆ ಎಂದು ತೀರ್ಮಾನಿಸಿದರು.

Joan, The Maid of Orleans

ಆದ್ದರಿಂದ ಜೋನ್ ಅವಳ ಕುದುರೆಯನ್ನೇರಿ ಪುನಃ ಪ್ರಯಾಣ ಬೆಳೆಸಿ, ಓರ್ಲಿಯಾನ್ಸ್ನ್ನು ತಲುಪಿದಳು. ಅವಳು ಯುದ್ಧದ ಬಿಳಿಯ ಕುದುರೆಯನ್ನೇರಿ, ಹೊಳೆಯುವ ಆಯುಧವನ್ನೂ, ಸೊಂಟಪಟ್ಟಿಯಲ್ಲಿ ಖಡ್ಗವನ್ನೂ ಧರಿಸಿ, ಮುಂದೆ ಒಂದು ಬಿಳಿಯ ಧ್ವಜವನ್ನು ಹಿಡಿದು ಹೊರಟಳು. ಅವಳ ಹಿಂದೆ ನಗರವನ್ನು ರಕ್ಷಿಸುವವರಿಗಾಗಿ ಆಹಾರವನ್ನು ಸರಬರಾಜು ಮಾಡುವ ಒಂದು ದೊಡ್ಡ ತಂಡ ಹೊರಟಿತು. ಆಗ ಓರ್ಲಿಯಾನ್ಸ್ ನಗರವನ್ನು ಒಂದು ಇಂಗ್ಲೀಷ್ ಸೈನ್ಯವು ಆಕ್ರಮಿಸಿಕೊಂಡಿತ್ತು.
ಗಡಿಯ ಗೋಡೆಯ ಮೇಲಿದ್ದ ಜನರು ಅವಳನ್ನು ನೋಡಿ, “ಬಾಲೆ ಬಂದಳು! ಅವಳು ನಮ್ಮನ್ನು ಕಾಪಾಡುತ್ತಾಳೆ!” ಎಂದು ಕೂಗಿದರು. ಇದು ಮತ್ತು ಅವಳು ಬರುತ್ತಿದ್ದ ದೃಶ್ಯವು ಆಂಗ್ಲರಲ್ಲಿ ಬೆದರಿಕೆಯನ್ನು ಉಂಟುಮಾಡಿತು. ಫ್ರೆಂಚರು, ಆಂಗ್ಲರ ಗಡಿರೇಖೆಯನ್ನು ದಾಟಿ ಓರ್ಲಿಯಾನ್ಸ್ ಅನ್ನು ಪ್ರವೇಶಿಸಿದರು.

ಆ ಸಮಯದಿಂದ ಜೋನ್‌ಳು “ಓರ್ಲಿಯಾನ್ಸ್ನ ಬಾಲೆ” ಯಾದಳು. ಅವಳು ಓರ್ಲಿಯಾನ್ಸ್ ನಲ್ಲೇ ಕೆಲವು ದಿನ ಉಳಿದಳು. ನಂತರ ಒಂದು ದಿನ ಅವಳು ಫ್ರೆಂಚ್ ಪಡೆಯನ್ನು ಆಕ್ರಮಣಕಾರರ ವಿರುದ್ಧ ಮುನ್ನಡೆಸಿ, ಅವರನ್ನು ದೂರ ಅಟ್ಟಿದಳು. ನಂತರ ಅವಳು ಫ್ರೆಂಚ್ ಪಡೆಯನ್ನು ಆಂಗ್ಲ ಸೈನ್ಯದ ವಿರುದ್ಧ ಮುನ್ನೆಡೆಸಿ ಅನೇಕ ಯುದ್ಧಗಳಲ್ಲಿ ಅವುಗಳನ್ನು ಸೋಲಿಸಿದಳು.

ಅಂತಿಮವಾಗಿ ಓರ್ಲಿಯಾನ್ಸ್ ನ ಬಾಲೆ ಮತ್ತು ಡಾಫಿನ್ ರ‍್ಹೀಮ್ಸ್ಗೆ ಬಂದರು. ರ‍್ಹೀಮ್ಸ್ನ ದೊಡ್ಡ ಚರ್ಚ್ನಲ್ಲಿ ಡಾಫಿನ್‌ನು ಕಿರೀಟವನ್ನು ಸ್ವೀಕರಿಸಿದನು. ಅವನು ಏಳನೆ ಚಾರ್ಲ್ಸ್ ಆದನು. ಆಗ ಬಾಲೆಯು ಅವನ ಪಾದಕ್ಕೆ ವಿನಮ್ರವಾಗಿ ಮಂಡಿಯೂರಿ, “ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಒಂದೇ ಒಂದು ಬಹುಮಾನ ತಮ್ಮಿಂದ ನಾನು ಕೇಳುವುದೆಂದರೆ, ನನ್ನನ್ನು ನನ್ನ ಮನೆಗೆ ಹಿಂತಿರುಗಲು ಬಿಟ್ಟು ಬಿಡಿ” ಎಂದು ಕೇಳಿಕೊಂಡಳು. ಆದರೆ ರಾಜನು ಅವಳ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರಿಸಿದನು.

ಕುರಿಗಾಹಿಯಾಗಿ ಸರಳ ಜೀವನ ನಡೆಸಲು ಜೋನ್ ಪುನಃ ಹಳ್ಳಿಗೆ ಹಿಂತಿರುಗಲಿಲ್ಲ. ಅವಳು ರಾಜನಿಗೆ ಸಹಾಯ ಮಾಡುವುದನ್ನು ಮುಂದುವರಿಸಿದಳು. ಎಲ್ಲಾ ಸಮಯದಲ್ಲೂ ಅವಳು ಧರ್ಮಯುತವಾದ, ನಿಸ್ವಾರ್ಥವಾದ, ವಿನಮ್ರ ಜೀವನವನ್ನು ನಡೆಸಿದಳು. ಕೊನೆಯಲ್ಲಿ ಅವಳು ಬ್ರಿಟಿಷರ ಕೈಗೆ ಸಿಕ್ಕಿಬಿದ್ದಳು. ಅವರು ಅವಳನ್ನು ಸುಟ್ಟು ಹಾಕಿದರು. ಆದರೆ ಬೆಂಕಿಗೆ ಅವಳ ಉತ್ಸಾಹವನ್ನು ಅಥವಾ ಅವಳ ಕೆಲಸವನ್ನು ಸುಡಲು ಸಾಧ್ಯವಾಗಲಿಲ್ಲ. ಅವಳ ದೇಶಪ್ರೇಮ ಮತ್ತು ನಾಯಕತ್ವಗಳು ಫ್ರೆಂಚರಿಗೆ ಮಾರ್ಗದರ್ಶಕವಾಗಿ ಬಹಳಕಾಲದವರೆಗೆ ಮುಂದುವರಿದವು ಕ್ರಮೇಣ ಫ್ರೆಂಚರು ಆಂಗ್ಲರನ್ನು ಹೊರದೂಡಿದರು ಮತ್ತು ಅಂತಿಮವಾಗಿ ಸ್ವತಂತ್ರರಾದರು.

ಪ್ರಶ್ನೆಗಳು:
  1. ತಾನು ಕೇಳಿದ ಧ್ವನಿಯ ಬಗ್ಗೆ ಜೋನ್ ಏನೆಂದು ಯೋಚಿಸಿದಳು?
  2. ಅವಳನ್ನು ಡಾಫಿನ್‌ನ ಆಸ್ಥಾನಕ್ಕೆ ಯಾರು ಕಳಿಸಿದರು?
  3. ಡಾಫಿನ್ ಏನು ಮಾಡಿದನು?
  4. ಅವಳನ್ನು ‘ಓರ್ಲಿಯಾನ್ಸ್ನ ಬಾಲೆ’ ಎಂದು ಏಕೆ ಕರೆಯಲಾಯಿತು?
  5. ಅವಳು ಡಾಫಿನ್‌ಗೆ ಹೇಗೆ ಸಹಾಯ ಮಾಡಿದಳು?
  6. ಜೋನ್‌ಳಿಂದಾಗಿ ಕೊನೆಯಲ್ಲಿ ಏನಾಯಿತು?

[ಆಕರ: ಸ್ಟೋರೀಸ್ ಫಾರ್ ಚಿಲ್ಡ್ರನ್- II
ಪ್ರಕಟಣೆ: ಶ್ರೀ ಸತ್ಯಸಾಯಿ ಬುಕ್ಸ್ & ಪಬ್ಲಿಕೇಷನ್ಸ್ ಟ್ರಸ್ಟ್, ಪ್ರಶಾಂತಿನಿಲಯಂ]

Leave a Reply

Your email address will not be published. Required fields are marked *

error: