ನವಿಲು
ನವಿಲು
ಪ್ರೀತಿಯ ಮಕ್ಕಳೇ! ಎಲ್ಲರೂ ಮೇಲೆದ್ದು ನಿಲ್ಲಿ. ನಿಮ್ಮ ಸುತ್ತಲೂ ಒಮ್ಮೆ ತಿರುಗಿ. ಕೈಗಳನ್ನು ಮೇಲೆತ್ತಿ. ಕೈಗಳನ್ನು ಕೆಳಗಿಳಿಸಿ.
ಸುಂದರವಾದ ಪಕ್ಷಿ ನವಿಲನ್ನು ಅದೋ ಅಲ್ಲಿ ನೋಡಿ. ಅದು ನಮ್ಮ ರಾಷ್ಟ್ರೀಯ ಪಕ್ಷಿ. ಈಗ ಕೆಳಗೆ ಕುಳಿತುಕೊಳ್ಳಿ. ಬೆನ್ನು ನೇರವಾಗಿರಲಿ. ಚಿನ್ಮುದ್ರೆಯಲ್ಲಿ ಕೈಗಳನ್ನು ಇಟ್ಟುಕೊಂಡು, ನಿಧಾನವಾಗಿ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. ಕೇಳಿಬರುತ್ತಿರುವ ಧ್ವನಿಯನ್ನು ಮಾತ್ರ ಆಲಿಸಿ.
ಹೆಚ್ಚಿನ ಸಂಖ್ಯೆಯಲ್ಲಿ ನವಿಲುಗಳಿರುವ ಒಂದು ಉದ್ಯಾನವನಕ್ಕೆ, ನಾವೀಗ ಹೋಗುತ್ತಿದ್ದೇವೆ. ಓ! ನವಿಲುಗಳು ಕಾಳುಗಳನ್ನು ಹೆಕ್ಕಿ ತಿನ್ನುವುದರಲ್ಲಿ ಮಗ್ನವಾಗಿವೆ. ಆಕಾಶದತ್ತ ತಲೆಯೆತ್ತಿ ನೋಡಿ! ಅದು ಮಳೆಮೋಡಗಳಿಂದ ಆವರಿಸಲ್ಪಟ್ಟಿದೆ, ಅಲ್ಲವೇ? ಆ ನವಿಲುಗಳನ್ನು ನೋಡಿ! ಪ್ರತಿ ನವಿಲು, ತನ್ನ ಗರಿಗಳನ್ನು ಪೂರ್ಣವಾಗಿ ಕೆದರಿಕೊಂಡು, ಆನಂದದಿಂದ ನೃತ್ಯ ಮಾಡುತ್ತಿದೆ. ವಾಹ್! ಅದೆಷ್ಟು ಬಣ್ಣಗಳು ಆ ಗರಿಗಳಲ್ಲಿ ಕಾಣುತ್ತಿವೆ! ನೀಲಿ, ನೇರಳೆ! ನಿಜಕ್ಕೂ ಅತಿ ಸುಂದರ. ಅವು ತಮ್ಮ ತಲೆಗಳನ್ನಾಡಿಸುತ್ತಾ, ನರ್ತಿಸುವುದನ್ನು ನೋಡಲು ಅದೆಷ್ಟು ಚಂದ! ಇದೆಂತಹ ಮನಸೆಳೆಯುವ ದೃಶ್ಯ!
ನವಿಲು ತನ್ನ ಎಲ್ಲಾ ಗರಿಗಳನ್ನೂ ತೆರೆದು ಹರಡಿಕೊಂಡು ಸೌಂದರ್ಯವನ್ನು ಎಲ್ಲೆಡೆ ಪಸರಿಸುತ್ತಿದೆ. ನಾವು ಕೂಡ ಸೌಂದರ್ಯವನ್ನು ಹೇಗೆ ಹರಡಬಹುದು? ನಾವು ಪ್ರತಿಯೊಬ್ಬರೂ ಒಂದೊಂದು ಸುಂದರ ನವಿಲಿನಂತೆ. ‘ಕರುಣೆ’, ‘ಪ್ರಾಮಾಣಿಕತೆ’, ‘ಪರಿಶುದ್ಧತೆ’, ‘ಶಿಸ್ತು’ ಮತ್ತು ‘ಉತ್ತಮ ನಡವಳಿಕೆ’- ಇವೇ ನಾವು ಹರಡಬಹುದಾದ ಸುಂದರ ಗರಿಗಳು. ಅವುಗಳ ಮೂಲಕವೇ ನಾವು, ನಮ್ಮ ಜೀವನದ ಸೌಂದರ್ಯವನ್ನು ಎಲ್ಲೆಡೆ ಹರಡೋಣ. ಪ್ರಕೃತಿಯಿಂದ ನಾವು ಕಲಿಯಬಹುದಾದ ಪಾಠಗಳು ಅನೇಕ. ಇಂತಹ ಪ್ರಕೃತಿಯನ್ನು ನಾವು ಉಳಿಸಿಕೊಳ್ಳೋಣ, ಬೆಳೆಸಿಕೊಳ್ಳೋಣ.
ಹೀಗೆ ಹೇಳಿಕೊಳ್ಳುತ್ತಾ ನಿಮ್ಮ ಕಣ್ಣುಗಳನ್ನು ನಿಧಾನವಾಗಿ ತೆರೆಯಿರಿ
ಓ ದೇವರೇ! ಒಳ್ಳೆಯದನ್ನೇ ನೋಡುವ, ಒಳ್ಳೆಯದನ್ನೇ ಮಾಡುವ, ಮತ್ತು ಒಳ್ಳೆಯವರಾಗಿಯೇ ಇರಲು ಸಹಾಯ ಮಾಡು, ದಾರಿ ತೋರಿಸು.
ಚಟುವಟಿಕೆ:
ಉದ್ಯಾನದಲ್ಲಿ ನೀವು ಕಂಡ ದೃಶ್ಯದ ಚಿತ್ರವನ್ನು ಬಿಡಿಸಿ.
[Source : Silence to Sai-lens – A Handbook for Children, Parents and Teachers by Chithra Narayan & Gayeetree Ramchurn Samboo MSK – A Institute of Sathya Sai Education – Mauritius Publications]