ಓಂ ಸಹನಾವವತು – ಶ್ಲೋಕ – ಚಟುವಟಿಕೆ
ಓಂ ಸಹನಾವವತು – ಶ್ಲೋಕ – ಚಟುವಟಿಕೆ
ಚಟುವಟಿಕೆಯ ಧ್ಯೇಯ: ನಾವೆಲ್ಲರೂ ಪರಸ್ಪರ ಅವಲಂಬಿತರಾಗಿದ್ದೇವೆ. ಒಟ್ಟಾಗಿ, ಒಮ್ಮತದಿಂದ ಕೆಲಸ ಮಾಡಿದರೆ ಮತ್ತು ಪರಸ್ಪರರ ಅಗತ್ಯಗಳನ್ನು ನೋಡಿಕೊಂಡರೆ ಮಾತ್ರ ನಾವು ಪ್ರಗತಿ ಸಾಧಿಸಬಹುದು ಎಂಬ ಪಾಠವನ್ನು ಮೊದಲ ಗುಂಪಿನ ಬಾಲವಿಕಾಸ ಮಕ್ಕಳಿಗೆ ಅರ್ಥಮಾಡಿಸಿ ಕೊಡಲು ಈ ಚಟುವಟಿಕೆ.
ಅಗತ್ಯವಿರುವ ವಸ್ತುಗಳು: ಚಿತ್ರ ಬಿಡಿಸುವ ಕಾಗದಗಳು, ಕತ್ತರಿ, ಬಣ್ಣ ಪೆನ್ಸಿಲ್‌ಗಳು / (ಕ್ರಯೋನ್ಗಳು), ಪೆನ್ಸಿಲ್, ರಬ್ಬರ್, ಕೋಲು ಮತ್ತು ಅಂಟು.
ಮಾಡುವ ವಿಧಾನ:
- ಮಕ್ಕಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ.
- ಮೇಲೆ ತಿಳಿಸಿದ ವಸ್ತುಗಳನ್ನು ಎರಡು ಗುಂಪುಗಳಿಗೆ ವಿತರಿಸಿ. ತರಗತಿಯಲ್ಲಿ ಹೆಚ್ಚಿನ ಮಕ್ಕಳು ಇದ್ದರೆ, ಗುರುಗಳು ಹೆಚ್ಚು ಗುಂಪುಗಳನ್ನು ರಚಿಸಬಹುದು. ಯಾವುದೇ ತಂಡವು ಎಲ್ಲ ವಸ್ತುಗಳನ್ನು ಪಡೆಯದಂತೆ ನೋಡಿಕೊಳ್ಳಬೇಕು. ಉದಾಹರಣೆಗೆ, ಹುಡುಗರ ಗುಂಪಿಗೆ ಕಿತ್ತಳೆ ಬಣ್ಣದ ಪೆನ್ಸಿಲ್, ಚಾರ್ಟ್, ಕತ್ತರಿ, ಪೆನ್ಸಿಲ್ ನೀಡಬಹುದು ಮತ್ತು ಹುಡುಗಿಯರ ಗುಂಪಿಗೆ ಹಸಿರು ಬಣ್ಣದ ಪೆನ್ಸಿಲ್, ಪೆನ್ಸಿಲ್, ಚಾರ್ಟ್, ಅಂಟು ನೀಡಬಹುದು.
- ಪ್ರತಿಯೊಂದೂ ಗುಂಪಿನವರು ಚಾರ್ಟ್ ಪೇಪರ್, ಮತ್ತು ಬಣ್ಣದ ಮೂಲಕ ಭಾರತೀಯ ಧ್ವಜವನ್ನು ಚಿತ್ರಿಸಿ ಮತ್ತು ಅಂತಿಮವಾಗಿ ಅದನ್ನು ಕೋಲಿಗೆ ಜೋಡಿಸಬೇಕು ಎಂದು ಮಕ್ಕಳಿಗೆ ವಿವರಿಸಿ ಹೇಳಬೇಕು.
- ಆರಂಭದಲ್ಲಿ ಮಕ್ಕಳು ತಮ್ಮ ಬಳಿ ಅಗತ್ಯವಾದ ವಸ್ತುಗಳು ಇಲ್ಲ ಎಂದು ದೂರು ನೀಡಬಹುದು. ಉದಾಹರಣೆ – ಹುಡುಗರ ಗುಂಪು ಹಸಿರು ಬಣ್ಣದ ಪೆನ್ಸಿಲ್, ಅಂಟು ಇತ್ಯಾದಿಗಳನ್ನು ಹೊಂದಿಲ್ಲ ಎಂದು ಹೇಳಬಹುದು ಮತ್ತು ಹುಡುಗಿಯರ ಗುಂಪು ಕಿತ್ತಳೆ ಬಣ್ಣದ ಪೆನ್ಸಿಲ್, ಕತ್ತರಿ ಇತ್ಯಾದಿಗಳನ್ನು ಹೊಂದಿಲ್ಲ ಎಂದು ಹೇಳಬಹುದು. ಮಕ್ಕಳಿಗೆ ಇತರ ಗುಂಪುಗಳೊಂದಿಗೆ ವಸ್ತುಗಳನ್ನು ಹಂಚಿಕೊಳ್ಳಲು ಅವಕಾಶವಿದೆ. ಆದಾಗ್ಯೂ, ಹಂಚಿಕೊಳ್ಳಲು ಅವಕಾಶವಿದೆ ಎಂದು ಗುರುಗಳು ಸ್ಪಷ್ಟವಾಗಿ ಮೊದಲೇ ಹೇಳಬಾರದು. ಆದರೆ ಎರಡೂ ಗುಂಪುಗಳು ಹೇಗೆ ವರ್ತಿಸುತ್ತಿವೆ ಎಂಬುದನ್ನು ಗಮನಿಸಿ. ಎಲ್ಲಾ ಮಕ್ಕಳು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆಯೇ ಎಂದು ಗುರುಗಳು ನೋಡಬೇಕು.
- ಪೂರ್ಣಗೊಂಡ ಭಾರತೀಯ ತ್ರಿವರ್ಣ ಧ್ವಜವನ್ನು ಸಲ್ಲಿಸಿದ ನಂತರ ರಾಷ್ಟ್ರಗೀತೆಯನ್ನು ಎಲ್ಲರೂ ಒಟ್ಟಾಗಿ ಹಾಡಲು ಹೇಳಿರಿ.
ಚರ್ಚೆಗಾಗಿ ಸೂಚಿಸಲಾದ ಪ್ರಶ್ನೆಗಳು:
- ತಮ್ಮ ಗುಂಪಿಗೆ ಕೊಟ್ಟಿದ್ದ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆಯೇ? ಎಂದು ಮಕ್ಕಳನ್ನು ಕೇಳಿ.
- ಇತರ ಗುಂಪುಗಳಿಂದ ವಸ್ತುಗಳನ್ನು ಎರವಲು ಪಡೆಯದೆ ಕೊಟ್ಟಂತಹ ಚಟುವಟಿಕೆಯನ್ನು ಪೂರ್ಣಗೊಳಿಸಲು ಆಗುತಿತ್ತೇ ಎಂದು ಮಕ್ಕಳನ್ನು ಕೇಳಿ.
- ತಂಡವಾಗಿ ಕೆಲಸ ಮಾಡುವಾಗ ಅವರ ಭಾವನೆಗಳು ಹೇಗಿದ್ದವು ಎಂದು ಅವರನ್ನು ಕೇಳಿ. ಇತರ ಗುಂಪುಗಳು ಅವರಿಗೆ ಬೇಕಾದ ವಸ್ತುಗಳನ್ನು ನೀಡುವ ಮೊದಲು ಆ ಗುಂಪಿನವರು ಏನು ಮಾಡುತ್ತಿದ್ದಾರೆಂಬುದನ್ನು ತಿಳಿದು, ಅವರು ಮುಗಿಸುವವರೆಗೆ ತಾಳ್ಮೆಯಿಂದ ಕಾಯ್ದಿದ್ದಾರೆಯೇ? ಎಂದು ಮಕ್ಕಳನ್ನು ಕೇಳಿ.
- ಅವರು ತಮ್ಮ ಧ್ವಜವನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವವರೆಗೆ ಇತರ ಗುಂಪುಗಳನ್ನು ಕಾಯುವಂತೆ ಮಾಡಿದ್ದಾರೆಯೇ?
- ಅವರು ನಯವಾಗಿ ಕೇಳಿದ್ದಾರೆಯೇ ಅಥವಾ ಗುಂಪುಗಳಿಂದ ಬೇಡಿಕೆಯಿಟ್ಟಿದ್ದಾರೆಯೇ?
ತೀರ್ಮಾನ:
ಜೀವನದಲ್ಲಿ ಯಶಸ್ವಿಯಾಗಲು ಗುಂಪಿನಲ್ಲಿ ಒಟ್ಟಿಗೆ ಕೆಲಸ ಮಾಡುವ ಮತ್ತು ಪರಸ್ಪರ ಸಹಾಯ ಮಾಡುವ ಮಹತ್ವವನ್ನು ಗುರುಗಳು ವಿವರಿಸಬೇಕು.
ಈ ಚಟುವಟಿಕೆಯಲ್ಲಿ ಕೆಳಗೆ ಹೇಳಿದಂತೆ ಸ್ವಲ್ಪ ವ್ಯತ್ಯಾಸ ಮಾಡಿಕೊಳ್ಳಬಹುದು –
ಗುರುವು ಅಗತ್ಯವಾದ ವಸ್ತುಗಳಲ್ಲಿ ಒಂದನ್ನು ತನ್ನೊಂದಿಗೆ ಇಟ್ಟುಕೊಳ್ಳಬಹುದು, ಉದಾಹರಣೆಗೆ ಇಲ್ಲಿ ಅಂಟು ಅಂತ ಭಾವಿಸಿ. ಗುಂಪುಗಳು ತಮ್ಮ ಚಟುವಟಿಕೆಯನ್ನು ಬಹುತೇಕ ಮುಗಿಸಿದ ನಂತರ, ಅಂದರೆ ಧ್ವಜವನ್ನು ಕೋಲಿಗೆ ಅಂಟಿಸುವ ಅಂತಿಮ ಸಂದರ್ಭದಲ್ಲಿ ಗುರುಗಳು ಗುಂಪುಗಳಿಗೆ ಸಹಾಯ ಮಾಡಬಹುದು. ಆ ನಂತರ ಗುರುವು ಈ ಕೆಳಗಿನ ಪ್ರಶ್ನೆಗಳನ್ನು ಕೇಳಬಹುದು.
- ಚಟುವಟಿಕೆಯನ್ನು ಮುಗಿಸಲು ಅಂಟು ಮುಖ್ಯವಾಗಿತ್ತೇ?
- ಅಂಟು ಮಾತ್ರ ಬಳಸಿ ಧ್ವಜವನ್ನು ಮಾಡಲು ಗುರುಗಳಿಗೆ ಸಾಧ್ಯವಿದೆಯೇ?
ಸ್ವಾಮಿ ಎಂದೂ ಹೇಳುವಂತೆ – ಇಂದ್ರಿಯ ಮತ್ತು ಭಾವನೆಗಳ ತರಬೇತಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಹಕಾರದ ಪ್ರಕ್ರಿಯೆಯಾಗಿದೆ. ಗುರುಗಳು ಮತ್ತು ಶಿಷ್ಯರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸರಿಯಾದ ರೀತಿಯ ಕಲಿಕೆ ಸಾಧ್ಯ ಅನ್ನುವುದನ್ನು ಗುರುಗಳು ಮೇಲಿನ ಚಟುವಟಿಕೆಯೊಂದಿಗೆ ವಿವರಿಸಿ ಹೇಳಬೇಕು.