ಜನನ ಮತ್ತು ಬಾಲ್ಯದ ಮೊದಲ ದಿನಗಳು
ದಿನಗಳುರುಳಿದಂತೆ, ಆಯ್ಕೆಯಾದ ತಾಯಿ ಈಶ್ವರಮ್ಮನಿಗೆ ಮತ್ತೊಂದು ಮಗನಿರಬೇಕೆಂಬ ಬಯಕೆ ಉಂಟಾಯಿತು. ಆ ಕಾರಣ ಆಕೆ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಸತ್ಯನಾರಾಯಣನೆಂಬ ರೂಪನಾಮಗಳಿಂದ ಭಕ್ತರ ಬಯಕೆಗಳನ್ನು ಈಡೇರಿಸುವ ಸ್ವಾಮಿಯ ವಿಶೇಷ ವ್ರತ, ಶ್ರೀ ಸತ್ಯನಾರಾಯಣ ಪೂಜೆಯನ್ನು ಆಚರಿಸಿದರು. ಸ್ವಲ್ಪ ಕಾಲದಲ್ಲಿಯೇ ಆಕೆಗೆ ಮತ್ತೊಂದು ಮಗುವಿನ ಅನುಗ್ರಹವಾಗುವುದೆಂಬ ಸೂಚನೆಯು ಕಂಡುಬಂದಿತು.
ತಾತನವರೂ ಅವರ ಇಬ್ಬರು ಮಕ್ಕಳೂ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದ ನಾಟಕಗಳನ್ನು ಗ್ರಾಮದಲ್ಲಿ ಆಡಿಸುವ ಹವ್ಯಾಸ ಇಟ್ಟುಕೊಂಡಿದ್ದು, ಮನೆಯಲ್ಲಿ ಅವುಗಳ ಅಭ್ಯಾಸ-ತಯಾರಿ ನಡೆಯುತ್ತಿತ್ತು. ಗೋಡೆಯ ಮೇಲೆ ತಂಬೂರಿಯನ್ನು ನೇತು ಹಾಕಲಾಗಿತ್ತು. ತಂಬೂರಿಯ ಕೆಳಗೆ ನೆಲದ ಮೇಲೆ ತಬಲಾವನ್ನು ಇಡಲಾಗಿತ್ತು. ಮಗುವು ಹುಟ್ಟುವ ದಿನವು ಸಮೀಪಿಸಿದಂತೆ, ಮಧ್ಯರಾತ್ರಿಯಲ್ಲೋ ಬೆಳಗಿನ ಜಾವದಲ್ಲೋ ನುರಿತವರು ಸುಶ್ರಾವ್ಯವಾಗಿ ತಂಬೂರವನ್ನು ಮೀಟಿದಂತೆ, ತಾಳಕ್ಕೆ ಸರಿಯಾಗಿ ತಂಬೂರದ ಧ್ವನಿಗೆ ಕೂಡಿಸಿ ತಬಲಾವನ್ನು ನುಡಿಸಿದಂತೆ ಶಬ್ದ ತರಂಗಗಳು ಕೇಳಿಬಂದು ಮನೆಯವರು ನಿದ್ರೆಯಿಂದ ಎಚ್ಚರಗೊಳ್ಳುತ್ತಿದ್ದರು.
ದಿನಗಳು ಕಳೆದು ಆ ಸುದಿನ ಬಂದಿತು. ೧೯೨೬ ನವಂಬರ್ ೨೩ರಂದು, ಸೂರ್ಯೋದಯದ ವೇಳೆಯಲ್ಲಿ ಗಂಡು ಮಗುವಿನ (ನಮ್ಮ ಬಾಬಾರವರ) ಜನನವಾಯಿತು. ಈಶ್ವರಮ್ಮ ಸತ್ಯನಾರಾಯಣ ಪೂಜೆ ಮಾಡುತ್ತಿದ್ದರು. ಮಗುವು ಹುಟ್ಟುವುದೆಂಬ ಸೂಚನೆ ಕಂಡ ಕೂಡಲೆ ಅವರ ಅತ್ತೆ ಲಕ್ಷಮ್ಮನವರಿಗೆ ಹೇಳಿ ಕಳುಹಿಸಲಾಯಿತು. ಲಕ್ಷಮ್ಮನವರು ಸಹ ಆ ಸಮಯದಲ್ಲಿ ಸತ್ಯನಾರಾಯಣ ವ್ರತವನ್ನು ಶಾಸ್ತ್ರಿಗಳ ಅಧ್ವರ್ಯದಲ್ಲಿ ಆಚರಿಸುತ್ತಿದ್ದರು. ಅವರ ಅಚಲಶ್ರದ್ಧೆ, ಭಕ್ತಿ, ಶಿಸ್ತು, ಆತ್ಮವಿಶ್ವಾಸ ಎಷ್ಟಿತ್ತೆಂದರೆ, ಪೂಜೆ ಮುಗಿಸಿದರೆ ಭಗವಂತ ಒಲಿಯುತ್ತಾನೆ ಎಂಬ ತಮ್ಮ ನಂಬಿಕೆಯನ್ನೇ ನೆಚ್ಚಿಕೊಂಡು, ವ್ರತವನ್ನು ಮುಗಿಸಿ ತೀರ್ಥ, ಪ್ರಸಾದಗಳನ್ನು ತೆಗೆದುಕೊಂಡ ಬಳಿಕವೇ ಮನೆಗೆ ಹಿಂತಿರುಗಿದರು. ಈಶ್ವರಮ್ಮನವರು ಪ್ರಸಾದ ಹೂವನ್ನು ತಲೆಗೆ ಮುಡಿದು, ತೀರ್ಥವನ್ನು ಸ್ವೀಕರಿಸಿದರು. ಶೀಘ್ರವೇ ಮಗುವಿನ ಜನನವಾಯಿತು.
ಅಂದು ಕಾರ್ತೀಕ ಸೋಮವಾರ. ಗ್ರಾಮಸ್ಥರು ಶಿವ ಸ್ಮರಣೆ ಮಾಡುತ್ತಿದ್ದರು. ಆ ದಿನದ ಮತ್ತೊಂದು ವಿಶೇಷವೆಂದರೆ, ಊರ್ಧ್ವಗಾಮಿಯಾದ ಆರ್ದ್ರಾ ನಕ್ಷತ್ರದಲ್ಲಿ ಮಗುವು ಹುಟ್ಟಿದ್ದು. ಈ ರೀತಿಯಲ್ಲಿ ದಿನ, ತಿಥಿ, ನಕ್ಷತ್ರಗಳು ಕೂಡಿ ಬಂದಾಗಲೆಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸುತ್ತಾರೆ. ಆ ವರ್ಷದ ಹೆಸರಂತೂ ಅಕ್ಷಯ; ಎಂದಿಗೂ ಕ್ಷೀಣವಾಗದಿರುವ, ಸದಾ ಸಂಪದ್ಭರಿತವಾದ ಸಂವತ್ಸರ. ಶಿಶುವು ವರ್ಣಿಸಲಾಗದಷ್ಟು ಸುಂದರವಾಗಿತ್ತು. ಅವತಾರದ ಲಕ್ಷಣದಂತೆ ಎಲ್ಲಾ ಆಧ್ಯಾತ್ಮಿಕ ಮತ್ತು ಧರ್ಮಗ್ರಂಥಗಳ ಜ್ಞಾನ, ಶಕ್ತಿಗಳನ್ನೂ ಹುಟ್ಟಿನಲ್ಲಿಯೇ ರೂಢಿಸಿಕೊಂಡಂತೆ ಹೇಳಬಹುದಾಗಿದ್ದಿತು. (ನಾವಿಂದು ಅವರಲ್ಲಿ ಕಾಣುವ ಅಲೌಕಿಕ ದೈವೀ ಸಂಕಲ್ಪ ಶಕ್ತಿಗಳನ್ನು ಕಾಣಬಹುದಾಗಿದ್ದಿತು).
ಮಗುವನ್ನು ಮಲಗಿಸಲು ಆ ಕೋಣೆಯ ಮೂಲೆಯಲ್ಲೊಂದು ಚಾಪೆಯ ಮೇಲೆ ದಟ್ಟಿಯನ್ನು ಹಾಸಿ ಸಿದ್ಧಪಡಿಸಲಾಗಿದ್ದಿತು. ಅಜ್ಜಿಯು ಮಗುವನ್ನು ಅದರ ಮೇಲೆ ಮಲಗಿಸಿದರು. ಇದ್ದಕ್ಕಿದ್ದ ಹಾಗೆ ಮಗುವನ್ನು ಯಾರೋ ಮೆಲ್ಲಗೆ ತೂಗುತ್ತಿರುವಂತೆ ಆಕೆಗೆ ಭಾಸವಾಯಿತು. ಚಾಪೆಯ ಮೇಲಿನ ಹಾಸು ಮಗುವಿನ ಪಕ್ಕಗಳಲ್ಲಿ ಮೇಲಕ್ಕೂ ಕೆಳಕ್ಕೂ ಅಲುಗುತ್ತಿತ್ತು! ಕ್ಷಣಕಾಲ ಅವರು ಉಸಿರು ಬಿಗಿಹಿಡಿದು ನೋಡಿ, ಕೂಡಲೇ ಮಗುವನ್ನು ಮೇಲೆತ್ತಿದ್ದರು. ಅವರು ಅಲ್ಲಿ ಕಂಡದ್ದೇನು? ಹಾಸಿನ ಕೆಳಗೆ ಸರ್ಪ ಮಲಗಿದೆ. ಆದಿಶೇಷನೋಪಾದಿಯಲ್ಲಿ, ಆಗ ತಾನೇ ಜನಿಸಿದ ಮಗುವಿಗೆ, ಶ್ರೀ ವಿಷ್ಣುವಿನ ಅವತಾರ ಪುರುಷನಿಗೆ ಹಾಸಿಗೆಯನ್ನು ಒದಗಿಸಿದಂತಿತ್ತು.
ಶ್ರೀ ಸತ್ಯನಾರಾಯಣ ವ್ರತವು ಮುಗಿದ ಬಳಿಕ ಗಂಡು ಮಗುವು ಬೇಕೆಂಬ ಅವರ ಹಂಬಲವು ಈಡೇರಿದ ಕಾರಣ, ಮಗುವಿಗೆ ಸತ್ಯನಾರಾಯಣ ಎಂದು ನಾಮಕರಣ ಮಾಡಿದರು. ಸಮಾರಂಭದ ವೇಳೆ ಮಗುವಿನ ಕಿವಿಯಲ್ಲಿ ಹೆಸರನ್ನು ಉಸುರಿದಾಗ ಮಗುವು ಮಂದಹಾಸ ಬೀರಿತು. ತಾನೇ ಸತ್ಯನಾರಾಯಣನಲ್ಲವೇ? ಮೊದಲಿಗೆ, ಆ ವಿಷಯವನ್ನು ಅವರಲ್ಲಿ ಸ್ಫುರಿಸುವಂತೆ ಮಾಡಿದ್ದೂ ತಾನೇ ಆಗಿ, ಈ ಮಾನವಾಕೃತಿಯ ಶಿಶುವಿನ ರೂಪದಲ್ಲಿ ಅವರೆದುರಿಗಿದ್ದಾನೆ!
‘ಸತ್ಯ’ ಎಂದರೆ ‘ನಿಜ’, ‘ನಾರಾಯಣ’ ಎಂದರೆ ಮಾನವನೊಳಗಿರುವ ದೇವರು. ಮಾನವರಿಗೆ ‘ಸತ್ಯ’ ಮಾರ್ಗವನ್ನು ತೋರುವುದು ಮತ್ತು ಅವರೊಳಗೇ ದೇವರು ಇದ್ದಾನೆಂದು ಅರ್ಥ ಮಾಡಿಸುವುದೇ ಬಾಬಾರವರು ಅವತಾರವೆತ್ತಿರುವ ಉದ್ದೇಶ. ತಾತನವರು ತಮಗಾಗಿ ಮನೆಯ ಪಕ್ಕದಲ್ಲೊಂದು ಸಣ್ಣ ಪರ್ಣಕುಟಿಯೊಂದನ್ನು ಕಟ್ಟಿಕೊಂಡಿದ್ದರು. ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಮುದ್ದಾಡಲೂ ಆಡಿಕೊಳ್ಳಲೂ ಆಗಲೆಂದು ಮಗುವನ್ನು ಅಜ್ಜಿಯು ಅವರ ಬಳಿಗೊಯ್ಯುತ್ತಿದ್ದರು. ಅವರು ತಮ್ಮ ಪೂಜಾಕೋಣೆಗೆ ಮಗುವನ್ನು ಕರೆದೊಯ್ದು ಪ್ರಾರ್ಥನೆಯಲ್ಲಿ ತಲ್ಲೀನರಾಗುತ್ತಿದ್ದರು. ಮಗುವು ಅವರು ಪ್ರಾರ್ಥನೆ ಮಾಡುವಾಗ ಶಾಂತಿ ಭಂಗ ಮಾಡುತ್ತಿರಲಿಲ್ಲ. ಬದಲಾಗಿ ಮಗುವು ಜೊತೆಯಲ್ಲಿರುವುದರಿಂದ, ತಮಗೆ ಶಾಂತಿ ಸಮಾಧಾನಗಳುಂಟಾಗಿ, ಪ್ರಾರ್ಥಿಸಲು ಸಹಾಯಕವಾಗಿರುವುದಾಗಿ ಅವರು ಕಂಡುಕೊಂಡರು.
ಸ್ವಲ್ಪ ದಿನಗಳಲ್ಲಿಯೇ ಮಗುವು ಗ್ರಾಮಸ್ಥರೆಲ್ಲರಿಗೂ ಪ್ರೀತಿಪಾತ್ರವಾಯಿತು. ಅದರ ಮನೋಹರ ಮಂದಹಾಸವು ಎಲ್ಲರನ್ನೂ ಆಕರ್ಷಿಸಿತು. ಮಗುವನ್ನು ಮುದ್ದಿಸಲು ಹಾಗೂ ತಿಂಡಿ ತಿನಿಸುಗಳನ್ನು ಮಗುವಿಗೆ ಕೊಡಬೇಕೆಂದು ಎಲ್ಲರೂ ಮುಂದೆ ಬಂದರು. ಹಾಗಾಗಿ, ಪೆದ್ದ ವೆಂಕಮರಾಜುರವರ ಮನೆಯು ಸದಾಕಾಲ ಜನರಿಂದ ತುಂಬಿರುತ್ತಿತ್ತು. ಎಲ್ಲರೂ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಮರೆಯಲು ತೊಟ್ಟಿಲ ಸುತ್ತ ಸುಳಿದಾಡುವವರೇ.
ವಂಶಪಾರಂಪರ್ಯವಾಗಿ ಗ್ರಾಮ ಲೆಕ್ಕಿಗರಾದ ಕರಣಂ ಅವರ ಮನೆಯು ರಾಜುರವರ ಮನೆಯ ಪಕ್ಕದಲ್ಲೇ ಇದ್ದಿತು. ಕರಣಂ ಮನೆಯವರು ಬ್ರಾಹ್ಮಣರು. ಕರಣಂ ಅವರ ಪತ್ನಿ ಸುಬ್ಬಮ್ಮನವರು, ಸಮಯ ಸಿಕ್ಕಿದಾಗ, ಮಗುವನ್ನೆತ್ತಿಕೊಂಡು ಮುದ್ದಾಡುತ್ತಿದ್ದರು. ಆಕೆ ಮಗುವನ್ನು ಎತ್ತಿಕೊಂಡಾಗಲೆಲ್ಲಾ ಅದು ಸಂತೋಷದಿಂದ ನಗುವುದು. ಆಕೆ ಉತ್ಸಾಹದಿಂದ ಮಗುವನ್ನು ತನ್ನ ಮನೆಗೆ ಕರೆದು ಒಯ್ಯುವರು. ಆಕೆಗೆ ವಯಸ್ಸಾಗಿದ್ದು ಮಕ್ಕಳಿರಲಿಲ್ಲ. ದಯಾಮಯಿ ಈಶ್ವರಮ್ಮ ಬೇಡವೆನ್ನುತ್ತಿರಲಿಲ್ಲ. ಆ ರೀತಿ ಸುಬ್ಬಮ್ಮನವರು ಎತ್ತಿಕೊಂಡು ಹೋಗುವಾಗ ಸತ್ಯನು ನಗುನಗುತ್ತಾ ಚಟುವಟಿಕೆಯಿಂದ ಇರುವುದನ್ನು ಕಂಡ ಹೆಂಗಸರು, “ಇದೆಲ್ಲೋ ಬ್ರಾಹ್ಮಣರ ಮಗು,” ಎಂದು ರೇಗಿಸುತ್ತಿದ್ದರು. ತನ್ನ ಮನೆಯಲ್ಲೂ ಇಲ್ಲದ ರೀತಿಯಲ್ಲಿ, ಸುಬ್ಬಮ್ಮನವರ ಮನೆಯಲ್ಲಿ ಸ್ವಯಂಪ್ರೇರಿತನಾಗಿ, ಉಲ್ಲಾಸ ಭರಿತನಾಗಿ ಇರುತ್ತಿದ್ದನು. ಆ ಕಾರಣ ವಿಧಿಯಿಲ್ಲವೆಂಬಂತೆ ಈಶ್ವರಮ್ಮನವರನ್ನು ‘ದೇವಕಿ’ ಎಂದೂ ಸುಬ್ಬಮ್ಮನವರನ್ನು ‘ಯಶೋದಾ’ ಎಂದೂ ಗ್ರಾಮದ ಮಹಿಳೆಯರು ಕರೆಯುತ್ತಿದ್ದರು. ದಿನದಿನಕ್ಕೆ ತನ್ನ ಮಗನು ಎಲ್ಲರಿಗೂ ಪ್ರೀತಿಪಾತ್ರನಾಗಿ, ಕೇಂದ್ರಬಿಂದುವಾಗಿ ಬೆಳೆಯುತ್ತಿರುವುದನ್ನು ಕಂಡು, ಈಶ್ವರಮ್ಮ ಹಿಗ್ಗುತ್ತಿದ್ದರು.
ಸತ್ಯನು ಬೆಳೆದಂತೆ, ಹಣೆಯ ಮೇಲೆ ಅಗಲವಾದ ವಿಭೂತಿ ಪಟ್ಟಿಯನ್ನು ಹಾಕಿಕೊಂಡಿರುವುದನ್ನೂ ಅದು ಅಳಿಸಿ ಹೋದರೆ ಪುನಃ ಧರಿಸುವುದನ್ನೂ ಆ ರೀತಿ ಧರಿಸಲು ಸಂತೋಷಿಸುವುದನ್ನೂ ಆಶ್ಚರ್ಯದಿಂದ ಗಮನಿಸಿದರು. ಅಷ್ಟೇ ಅಲ್ಲ, ಹಣೆಯ ಮಧ್ಯೆ ಕುಂಕುಮದ ಬೊಟ್ಟು ಇಟ್ಟುಕೊಳ್ಳುವುದನ್ನೂ ಸತ್ಯನು ಇಷ್ಟಪಡುತ್ತಿದ್ದನು. ಇದಕ್ಕಾಗಿ ಎಷ್ಟೋ ಸಾರಿ ತನ್ನ ಅಕ್ಕನ ಕುಂಕುಮ ಭರಣಿಗೆ ಲಗ್ಗೆ ಹಾಕುತ್ತಿದ್ದನು. ಅವನು ಶಿವನೂ ಹೌದು, ಶಕ್ತಿಯೂ ಹೌದು. ಶಿವ-ಶಕ್ತಿ : ಶಿವನ ವಿಭೂತಿ ಧಾರಣೆಗೂ ಶಿವನ ಮಡದಿಯ ಕುಂಕುಮ ಧಾರಣೆಗೂ ಇಷ್ಟಪಟ್ಟಿದ್ದನು.
ಅವನಿಗೆ ಮಾಂಸಾಹಾರದ ಬಗ್ಗೆ ಅದೆಷ್ಟು ವಿಮುಖತೆ ಇತ್ತೆಂದರೆ, ಕುರಿ, ಮೇಕೆ, ದನಗಳನ್ನು ಕೊಲ್ಲುವ ಅಥವಾ ಬಾತು, ಮೀನುಗಳನ್ನು ಹಿಡಿಯುವ ಸ್ಥಳಗಳಿಂದ ಸಹಜವಾಗಿ ದೂರವಿರುತ್ತಿದ್ದನು. ಮಾಂಸಾಹಾರ ತಯಾರಿಸುವ ಅಡಿಗೆ ಮನೆ ಮತ್ತು ಪಾತ್ರೆಗಳನ್ನು ದೂರ ಮಾಡುತ್ತಿದ್ದನು. ಕೆಲವು ವೇಳೆ ಯಾರಾದರೂ ಹಕ್ಕಿಯನ್ನು ಕೊಂದು ಆಹಾರ ತಯಾರಿಸುವರೆಂದು ತಿಳಿದು ಬಂದರೆ, ಅದನ್ನು ಪತ್ತೆ ಮಾಡಿ, ಕೈಲಿ ಹಿಡಿದು, ಎದೆಗವುಚಿ ಮುದ್ದು ಮಾಡುವನು. ಆ ರೀತಿ ಅವನು ಅದಕ್ಕೆ ನೀಡಿದ ಹೆಚ್ಚುವರಿ ಪ್ರೀತಿಯನ್ನು ಕಂಡು ಅದನ್ನು ಬಿಟ್ಟುಬಿಡುವರೆಂದು ಭಾವಿಸುತ್ತಿದ್ದನು. ಅಂತಹ ಸಮಯದಲ್ಲಿ, ಅವನು ಕರಣಂ ಅವರ ಮನೆಗೆ ಓಡಿ ಹೋಗಿ, ಸುಬ್ಬಮ್ಮನವರು ಬಡಿಸಿದ ಶಾಖಾಹಾರಿ ಊಟವನ್ನು ಮಾಡುತ್ತಿದ್ದನು.
ಸೃಷ್ಟಿಯ ಎಲ್ಲಾ ಜಂತುಗಳ ಬಗ್ಗೆ ಅವನು ತೋರಿಸುತ್ತಿದ್ದ ಪ್ರೀತಿ ವಾತ್ಸಲ್ಯಗಳು ಸ್ಪಷ್ಟವಾದಂತೆ, ನೆರೆಹೊರೆಯವರು, ಅವನನ್ನು ‘ಬ್ರಹ್ಮಜ್ಞಾನಿ’ ಎಂದು ಕರೆಯಲು ಪ್ರಾರಂಭಿಸಿದರು. ಬಾಬಾರವರು ತಮ್ಮ ೨-೩ ವರ್ಷಗಳ ಕೋಮಲ ವಯಸ್ಸಿನಲ್ಲಿಯೇ ನೋವು, ಕಷ್ಟಗಳಿಂದ ನರಳುವ ಜನರನ್ನು ಕಂಡರೆ ತಮ್ಮ ದಯಾರ್ದ್ರ ಹೃದಯವು ಕರಗುವುದೆಂಬುದನ್ನು ತೋರುತ್ತಿದ್ದರು. ಭಿಕ್ಷುಕರು ಯಾರಾದರೂ ಬಾಗಿಲ ಬಳಿ ಕಂಡರಾಯಿತು. ಒಳಗೆ ಓಡಿ ಹೋಗಿ, ಅವರಿಗೆ ತಿನ್ನಲು ಏನಾದರೂ ಕೊಡೆಂದು, ತನ್ನ ಅಕ್ಕಂದಿರಿಗೆ ದುಂಬಾಲು ಬೀಳುತ್ತಿದ್ದನು. ಒಮ್ಮೊಮ್ಮೆ ಅವರು ತಾಳ್ಮೆ ತಪ್ಪಿ, ಭಿಕ್ಷುಕರನ್ನು ಓಡಿಸಿ ಬಿಡುತ್ತಿದ್ದರು. ಆಗ ಸತ್ಯನು ಎತ್ತರಿಸಿದ ಧ್ವನಿಯಲ್ಲಿ ಅತ್ತು, ಹಟ ಮಾಡುತ್ತಿದ್ದನು. ಆಗ ವಿಧಿಯಿಲ್ಲದೆ ಭಿಕ್ಷುಕನನ್ನು ವಾಪಸ್ಸು ಕರೆಯಬೇಕಾಗುತ್ತಿತ್ತು. ಭಿಕ್ಷುಕರ ಹಾವಳಿ ಬಹಳ ಹೆಚ್ಚಾಗಿ, ಸತ್ಯನ ತಾಯಿಯವರು, ಸತ್ಯನನ್ನು ಕುರಿತು, “ನೋಡು ಅವರಿಗೆ ಬೇಕಾದರೆ ಕೊಡು. ಆಗ ನೀನು ತ್ಯಾಗ ಮಾಡಬೇಕಾಗುತ್ತದೆ,” ಎಂದರು. ಇದರಿಂದ ಸತ್ಯನು ವಿಚಲಿತನಾಗಲಿಲ್ಲ. ಹಸಿದು ಬಂದವರಿಗೆ ಅನ್ನ ನೀಡುವುದನ್ನು ಅವನು ಮುಂದುವರೆಸಿದನು. ತಾನು ಊಟ ಮಾಡುವುದನ್ನು ನಿಲ್ಲಿಸುತ್ತಿದ್ದನು. ಯಾರೇನೇ ಹೇಳಿದರೂ ಅವನು ಊಟವನ್ನು ಮುಟ್ಟುತ್ತಿರಲಿಲ್ಲ.
ಸತ್ಯನಿಗೆ ಊಟವನ್ನು ಕೊಡಲು ಒಬ್ಬ ರಹಸ್ಯದ ವ್ಯಕ್ತಿ ಬರುತ್ತಿದ್ದನು. ಸತ್ಯನು, ದಿನಗಟ್ಟಲೆ ಊಟ ಬಿಟ್ಟಾಗ, ಉಪವಾಸ ಮಾಡಿ ದಣಿದ ಮುಖವನ್ನಾಗಲೀ ತನ್ನ ಕೆಲಸ, ಕಾರ್ಯಗಳಲ್ಲಿ ಆಲಸ್ಯವನ್ನಾಗಲೀ ತೋರುತ್ತಿರಲಿಲ್ಲ. ತನ್ನ ತಾಯಿಯು ಕೇಳಿದರೆ ತಾನು ಊಟ ಮಾಡಿರುವುದಾಗಿಯೂ ಒಬ್ಬ ಹಿರಿಯ ವ್ಯಕ್ತಿಯು ಬಂದು ಕ್ಷೀರಾನ್ನದೂಟವನ್ನು ನೀಡಿರುವುದಾಗಿಯೂ ಹೇಳುತ್ತಿದ್ದನು. ಸಾಬೀತು ಪಡಿಸಲು ತನ್ನ ಬಲಗೈಯನ್ನು ತಾಯಿಯ ಮೂಗಿಗೆ ಹಿಡಿಯುವನು. ಆಕೆಗೆ, ತಾನೆಂದೂ ರುಚಿ ನೋಡಿರದಂತಹ, ಹಾಲು, ತುಪ್ಪ, ಮೊಸರುಗಳ ಸುವಾಸನೆಯ ಅನುಭವವಾಗುತ್ತಿದ್ದಿತು.
ಸತ್ಯನು ಬೆಳೆದು ಮನೆಯ ಹೊರಗೆ ಆಡುವಂತಾದಾಗ, ಹೊರಗೆ ಹೋದವನು, ಮನೆಗೆ ಹಿಂತಿರುಗುವಾಗ ದಾರಿಯಲ್ಲಿ ಕಂಡ ಕುರುಡರು, ಅಂಗವಿಕಲರು, ಖಾಯಿಲೆಯವರು ಮತ್ತು ನಿಶ್ಶಕ್ತರನ್ನು ಜೊತೆಯಲ್ಲಿ ಕರೆತರುವನು. ಅವರಿಗೆ ಅವನ ಅಕ್ಕಂದಿರು, ತಿನ್ನಲಾಗಲೀ ಅಥವಾ ಕೊಂಡೊಯ್ಯಲಾಗಲೀ ಏನಾದರೂ ಕೊಡಬೇಕಾಗಿತ್ತು. ಸತ್ಯನು ಇದೆಲ್ಲವನ್ನೂ ನೋಡುತ್ತಾ ಆನಂದಪಡುವನು.
ಮಗ ಎಂದರೆ ಸತ್ಯನಾರಾಯಣನ ಹಾಗಿರಬೇಕು ಎಂದು ಊರಿನ ಎಲ್ಲಾ ಹಿರಿಯರೂ ಹೇಳುವವರೇ. ಅವನ ಮಿತ್ರವರ್ಗದವರಂತೂ ಅವನನ್ನು ‘ಗುರು’ ಎಂದೇ ಕರೆಯುತ್ತಿದ್ದರು. ಅವನ ಮನೆಯವರೆಗೆ ಈ ವಿಷಯವು ಒಂದು ವಿಚಿತ್ರ ರೀತಿಯಲ್ಲಿ ತಿಳಿಯಿತು. ಅದೊಂದು ಶ್ರೀರಾಮನಮಿಯ ಸಂಜೆ. ವರ್ಣರಂಜಿತ ಉತ್ಸವವನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ಕರೆದೊಯ್ಯಲಾಯಿತು. ಎತ್ತಿನ ಬಂಡಿಗೆ ಹೂವುಗಳಿಂದ ಅಲಂಕಾರಿಸಲಾಗಿತ್ತು. ಮಧ್ಯದಲ್ಲಿ ಶ್ರೀರಾಮಚಂದ್ರನ ದೊಡ್ಡ ಪಟವನ್ನು ಇಟ್ಟಿದ್ದರು. ಬಂಡಿಯ ಮೇಲೆ ಅರ್ಚಕರು ಕುಳಿತಿದ್ದು, ಭಕ್ತರು ಅರ್ಪಿಸುವ ಹೂವು, ಕರ್ಪೂರ, ಇತ್ಯಾದಿಗಳನ್ನು ಸ್ವೀಕರಿಸಿ ಶ್ರೀರಾಮನನ್ನು ಅರ್ಚಿಸಿ ಮಂಗಳಾರತಿ ಮಾಡುತ್ತಿದ್ದರು. ಮನೆಗಳ ಮುಂದೆ ಉತ್ಸವ ಮೂರ್ತಿ ನಿಂತಾಗ, ಮನೆಯವರು ವಾದ್ಯ ಮೇಳದ ಸಂಗೀತವನ್ನು ಆಸ್ವಾದಿಸುತ್ತಾ ದೇವರಿಗೆ ಹೂವು ಕಾಯಿ ಸಮರ್ಪಿಸುತ್ತಿದ್ದರು.
ಉತ್ಸವದ ಸದ್ದಿಗೆ ಸತ್ಯನ ಮನೆಯವರು ಎಚ್ಚರಗೊಂಡರು. ಸತ್ಯನ ಸುಳಿವಿಲ್ಲ. ಮಧ್ಯರಾತ್ರಿ ಆಗಿ ಹೋಗಿದೆ. ಭಯಭ್ರಾಂತರಾಗಿ ಹುಡುಕಲು ಪ್ರಾರಂಭಿಸಿದರು. ಅಷ್ಟರಲ್ಲಿ ಮೆರೆವಣಿಗೆ ಮನೆಯ ಮುಂದೆ ಬಂದೇ ಬಿಟ್ಟಿತು. ನೋಡುತ್ತಾರೆ, ಅವರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಬಂಡಿಯ ಮೇಲೆ ಶ್ರೀರಾಮನ ಪಟದ ಮುಂದೆ, ಐದು ವರ್ಷದ ಸತ್ಯ, ರಾಜ ಠೀವಿಯಿಂದ ಆಸೀನನಾಗಿದ್ದಾನೆ. ಆಗ ಅವರು ಅವನ ಗೆಳೆಯರನ್ನು ಕುರಿತು, ”ಇದೇನಿದು?” ಎಂದು ಕೇಳಿದರು. ಗೆಳೆಯರು ಹೇಳಿದರು, “ಅವನು ನಮ್ಮ ಗುರು,” ಅವರಷ್ಟೆ ಏಕೆ? ಅವನು ಇಡೀ ವಿಶ್ವದ, ಸದಾಕಾಲಕ್ಕೂ ಆಗಿ ಬಂದ ಗುರುವಲ್ಲವೆ!
ಆಗ ಪುಟ್ಟಪರ್ತಿಯಲ್ಲೊಂದು ಸಣ್ಣ ಶಾಲೆಯಿದ್ದಿತ್ತು. ಬಾಬಾರವರು ತಮ್ಮ ಬಾಲ್ಯದಲ್ಲಿ ಇತರ ಬಾಲಕರೊಡನೆ ಆ ಶಾಲೆಗೆ ಹೋಗುತ್ತಿದ್ದರು. ಸಮಯ ಪಾಲನೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಒಂದು ಉಪಾಯವನ್ನು ಮಾಡಲಾಗಿದ್ದಿತು. ಸಮಯ ಮೀರಿ ಬರುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು. ಸಮಯಕ್ಕೆ ಸರಿಯಾಗಿ ಬಂದು, ಉಪಾಧ್ಯಾಯರಿಗೆ ವಂದನೆ ಸಲ್ಲಿಸುವವರಿಗೆ ಏನೂ ಇಲ್ಲ. ಅಲ್ಲಿಂದಾಚೆಗೆ ಬರುವವರಿಗೆ ಬೆತ್ತದ ಏಟು ಬೀಳುತ್ತಿತ್ತು. ಏಟುಗಳ ಸಂಖ್ಯೆಯು ವಿಳಂಬ ಮಾಡಿದಂತೆ ಹೆಚ್ಚಾಗುತ್ತಿತ್ತು. ಈ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಮಕ್ಕಳು ಚಳಿ, ಮಳೆ, ಗಾಳಿ, ಮಂಜು ಇವಾವುವುಗಳನ್ನು ಲೆಕ್ಕಿಸದೆ, ಸೂರ್ಯೋದಯಕ್ಕೆ ಮುಂಚೆ ಶಾಲೆಯ ಬಳಿ ಬಂದು ಸೂರಿನಡಿ ನಡುಗುತ್ತಾ ನಿಂತಿರುತ್ತಿದ್ದರು. ಇವರುಗಳ ಅವಸ್ಥೆಯನ್ನು ನೋಡಲಾಗದೆ ನಮ್ಮ ಪುಟ್ಟ ಸತ್ಯನು, ಮನೆಯಿಂದ ಷರ್ಟುಗಳು, ಟವಲ್ಗಳು ಮುಂತಾಗಿ ತಂದು ಅವರ ಸೌಖ್ಯವನ್ನು ವಿಚಾರಿಸಿಕೊಳ್ಳುತ್ತಿದ್ದನು. ಕೊನೆಗೆ ಇರುವ ಬಟ್ಟೆಗಳನ್ನು ಕಳೆದುಕೊಳ್ಳಲು ತಯಾರಿಲ್ಲದ ಮನೆಯ ಹಿರಿಯರು, ಬಟ್ಟೆಗಳನ್ನು ಒಳಗಿಟ್ಟು ಬೀಗ ಹಾಕುತ್ತಿದ್ದರು.
ಸತ್ಯನಾರಾಯಣನು ಬಾಲ ಪ್ರೌಢನಾಗಿದ್ದುದರಿಂದ ಇತರ ಮಕ್ಕಳಿಗಿಂತ ಬೇಗನೆ, ತನ್ನ ಪಾಠಗಳನ್ನು ತಾನೇ ಕಲಿತು ಬಿಡುತ್ತಿದ್ದನು. ಮನೆಯಲ್ಲಿ ಅಭ್ಯಾಸ ನಡೆಯುತ್ತಿದ್ದ ಎಲ್ಲಾ ನಾಟಕಗಳ, ಪ್ರಹಸನಗಳ ಹಾಡುಗಳನ್ನೂ ಹಾಡಬಲ್ಲವನಾಗಿದ್ದನು. ಅವನಿನ್ನೂ ೭ ವರ್ಷದವನಾಗಿದ್ದಾಗಲೇ ಸಾರ್ವಜನಿಕವಾಗಿ ಹಾಡಲು ಹಾಡುಗಳನ್ನು ರಚಿಸುತ್ತಿದ್ದನು. ಆ ಕಾರಣ ಸತ್ಯನಿಗೆ ಎಂಟು ವರ್ಷ ವಯಸ್ಸಾಗಿದ್ದಾಗ, ಉನ್ನತ ಪ್ರಾಥಾಮಿಕ ಪಾಠಶಾಲೆಗೆ ಸೇರಲು ಹೇಳಲಾಯಿತು. ಆ ಶಾಲೆಯು ಪುಟ್ಟಪರ್ತಿಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಬುಕ್ಕಪಟ್ಣಂ ಗ್ರಾಮದಲ್ಲಿದ್ದಿತು. ಆ ದೂರವನ್ನು ಬಿಸಿಲು, ಮಳೆಗಳೆನ್ನದೆ ಕಾಲು ನಡಿಗೆಯಲ್ಲೆ ಕ್ರಮಿಸಬೇಕಾಗಿದ್ದಿತು. ಕಲ್ಲು ಗುಡ್ಡಗಳನ್ನೂ ಕೆಸರಿನ ಹೊಂಡಗಳನ್ನೂ ಹಾಯ ಬೇಕಾಗಿದ್ದಿತು. ಕೆಲವೊಮ್ಮೆ ಪುಸ್ತಕದ ಚೀಲವನ್ನು ತಲೆಯ ಮೇಲೆ ಹೊತ್ತು, ಮಂಡಿಯಾಳದ ನೀರಿನಲ್ಲಿ ನಡೆಯಬೇಕಾಗಿದ್ದಿತು. ತಂಗಳು ಮೊಸರನ್ನ, ಚಟ್ನಿಯ ಊಟ ಮಾಡಿ, ಮಧ್ಯಾಹ್ನದ ಊಟಕ್ಕೆ ಬುತ್ತಿ ಹೊತ್ತು, ಬೆಳೆಕು ಹರಿಯುವ ಮುನ್ನವೇ ತನ್ನ ಸ್ನೇಹಿತರೊಡಗೂಡಿ ಶಾಲೆಗೆ ಹೋಗುತ್ತಿದ್ದನು.
ಸರಳ ಸ್ವಭಾವದವನೂ, ನಿರಾಡಂಬರನೂ, ಪ್ರಾಮಾಣಿಕನೂ ಮತ್ತು ಸತ್ಪ್ರವರ್ತಕನೂ, ವಿಧೇಯನೂ, ಮಿತಭಾಷಿಯೂ ಆದ ಇವನು ಇತರ ಬಾಲಕರಿಗೆ ಆದರ್ಶಪ್ರಾಯನಾಗಿದ್ದನು. ನಿಗದಿತ ವೇಳೆಗಿಂತಲೂ ಮುಂಚೆ ಶಾಲೆಗೆ ಬಂದು, ದೇವರ ಪಟವನ್ನಿಟ್ಟು, ಪೂಜೆ ಮಾಡಿ, ಒಂದಲ್ಲ ಒಂದು ರೀತಿಯ ಪ್ರಸಾದವನ್ನು ಹಂಚುತ್ತಿದ್ದನು.
ಅವನು ತನ್ನ ಖಾಲಿ ಚೀಲದಿಂದ ತೆಗೆದುಕೊಡುತ್ತಿದ್ದ ವಸ್ತುಗಳಿಗಾಗಿ ಬಾಲಕರು ಅವನನ್ನು ಸುತ್ತುವರಿಯುತ್ತಿದ್ದರು. ಅದು ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿ, ತಾನು ಹೇಳಿದಂತೆ ನಡೆದುಕೊಳ್ಳುವ ‘ದೇವದೂತ’ನೊಬ್ಬನು ಇರುವುದಾಗಿಯೂ ತಾನು ಏನು ಕೇಳಿದರೆ ಅದನ್ನು ತಂದುಕೊಡುವುದಾಗಿಯೂ ಹೇಳುತ್ತಿದ್ದನು.
ಉಪಾಧ್ಯಾಯರುಗಳಲ್ಲೊಬ್ಬರು ಈ ದೇವದೂತನ ಶಕ್ತಿಯ ಅನುಭವ ಪಡೆಯಬೇಕಾಯಿತು. ತರಗತಿಯಲ್ಲಿ ಇತರ ಬಾಲಕರು ಬರೆದುಕೊಳ್ಳುತ್ತಿದ್ದಂತೆ, ಸತ್ಯನು ಟಿಪ್ಪಣಿ ಬರೆದುಕೊಳ್ಳದೆ ಇದ್ದುದನ್ನು ಉಪಾಧ್ಯಾಯರೊಬ್ಬರು ಗಮನಿಸಿದರು. ಬದಲು ಹಾಡುಗಳನ್ನು ರಚಿಸಿ, ತನ್ನ ಸಹಾಧ್ಯಾಯಿಗಳಿಗೆ ಹಂಚಲು ಪ್ರತಿಗಳನ್ನು ಮಾಡುತ್ತಿರುವುದನ್ನು ಕಂಡರು. “ಏಕೆ ಹೀಗೆ?” ಎಂದು ಪ್ರಶ್ನಿಸಿದಾಗ ಸತ್ಯನು, “ಸಾರ್, ನಾನು ಟಿಪ್ಪಣಿ ಬರೆದುಕೊಳ್ಳಬೇಕಾಗಿಲ್ಲ. ನೀವು ಹೇಳಿರುವುದು ನನಗೆ ಅರ್ಥವಾಗಿದೆ. ಆ ವಿಷಯದ ಮೇಲೆ ನೀವು ಏನೇ ಪ್ರಶ್ನೆ ಕೇಳಿದರೂ ಉತ್ತರಿಸುತ್ತೇನೆ,” ಎಂದನು. ಉಪಾಧ್ಯಾಯರಿಗೆ ಇದು ಸರಿಕಾಣಲಿಲ್ಲ. ಸತ್ಯನಿಗೆ ಶಿಕ್ಷೆ ಕೊಡಬೇಕೆಂದು, “ದಿನದ ಕೊನೆಯ ಘಂಟೆ ಹೊಡೆಯುವವರೆಗೂ ಬೆಂಚು ಹತ್ತಿ ನಿಲ್ಲು,” ಎಂದು ಆದೇಶಿಸಿಬಿಟ್ಟರು. ಸತ್ಯನು ಅದನ್ನು ವಿಧೇಯನಾಗಿ ಪಾಲಿಸಿದನು. ಅವನ ಸಹಾಧ್ಯಾಯಿಗಳಿಗೆ ಇದು ಸರಿಕಾಣಲಿಲ್ಲ. ತಮ್ಮ ‘ಗುರು’ವು ಈ ರೀತಿ ಬೆಂಚಿನ ಮೇಲೆ ನಿಂತ ಅಹಿತಕರ ಘಟನೆಗೆ ನೊಂದುಕೊಂಡರು.
ಶಾಲೆಯಲ್ಲಿ ಜನಾಬ್ ಮೆಹಬೂಬ್ ಖಾನ್ ಎಂಬ ಇನ್ನೊಬ್ಬ ಮಾಸ್ತರಿದ್ದರು. ಸತ್ಯನನ್ನು ಕಂಡರೆ ಅವರಿಗೆ ಹೇಳಲಾಗದಷ್ಟು ಪ್ರೀತಿ, ಗೌರವವಿದ್ದಿತು. ಅವರು ಕಲಿಸುತ್ತಿದ್ದ ಇಂಗ್ಲಿಷ್ ಪಾಠವು ಎಲ್ಲ ಬಾಲಕರಿಗೂ ಚೆನ್ನಾಗಿ, ಸಮಗ್ರವಾಗಿ ಅರ್ಥವಾಗುತ್ತಿತ್ತು. ಇತರ ಬಾಲಕರಿಗೆ ಸತ್ಯನು ತೋರುತ್ತಿದ್ದ ಆದರ್ಶಪ್ರಾಯವಾದ ನಡವಳಿಕೆಯನ್ನು ಅವರು ಅರಿತವರಾಗಿ, ತಾವೊಂದು ಅದ್ಭುತ ಶಕ್ತಿಯೊಡನೆ ವ್ಯವಹರಿಸುತ್ತಿರುವುದಾಗಿ ಭಾವಿಸಿದ್ದರು. ಹಾಗಾಗಿ ಸತ್ಯನ ಬಗ್ಗೆ ವಿಶೇಷ ಪ್ರೇಮವುಳ್ಳವರಾಗಿದ್ದರು. ಸತ್ಯನು ಶುದ್ಧ ಶಾಖಾಹಾರಿಯಾಗಿರುವುದನ್ನೂ ಗಮನಿಸಿದ್ದರು. ಅವನನ್ನು ತಮ್ಮ ಮನೆಗೆ ತಿಂಡಿ ತಿನ್ನಲು ಕರೆಯ ಬೇಕೆನಿಸಿದಾಗ ಮನೆಯೆಲ್ಲವನ್ನೂ ಪರಿಶುಭ್ರಗೊಳಿಸಿ, ಈ ಪುಟ್ಟ ಬಾಲಕನನ್ನು ಆಹ್ವಾನಿಸುತ್ತಿದ್ದರು.
ಮೆಹಬೂಬ್ ಖಾನರು ತಮ್ಮ ಈ ಬಾಲಕನನ್ನು ಕೆಲವೊಮ್ಮೆ ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ಅವನ ತಲೆಯನ್ನು ನೇವರಿಸುತ್ತಾ, “ಓ! ಸತ್ಯಾ, ನೀನೊಬ್ಬ ಅದ್ಭುತ ಬಾಲಕ. ನೀನು ಸಾವಿರಾರು ಜನರಿಗೆ ಉಪಕಾರ ಮಾಡುವೆ. ನೀನೊಂದು ಅದ್ಭುತ ಶಕ್ತಿ,” ಎಂದು ಪಿಸುಮಾತಿನಲ್ಲಿ ಹೇಳುತ್ತಿದ್ದರು.
ಅವರು ತರಗತಿಗೆ ಬಂದರು. ತಮ್ಮ ಪುಟ್ಟ ಶಿಷ್ಯನು ಬೆಂಚಿನ ಮೇಲೆ ನಿಂತಿರುವುದನ್ನು ಕಂಡು ನೊಂದುಕೊಂಡರು. ಮುಂದಿನ ಪಾಠಕ್ಕಾಗಿ ಎದ್ದು ಕುರ್ಚಿ ಖಾಲಿ ಮಾಡಬೇಕಾಗಿದ್ದ ಮಾಸ್ತರು, ಕುರ್ಚಿಯಲ್ಲೇ ಕುಳಿತಿರುವುದನ್ನು ಗಮನಿಸಿದರು. ಅವರೇ ಬೆಂಚಿನ ಮೇಲೆ ನಿಲ್ಲಲು ಶಿಕ್ಷೆ ವಿಧಿಸಿದವರು. ಅವರು ಖಾನ್ರವರ ಕಿವಿಯಲ್ಲಿ, “ನಾನು ಏಳಲಾರೆ. ನಾನು ಎದ್ದರೆ, ಕುರ್ಚಿಯೂ ನನ್ನೊಡನೆ ಏಳುತ್ತದೆ!” ಎಂದು ಉಸುರಿದರು.
ಆ ಪಿಸುಮಾತನ್ನು ಕೇಳಿಸಿಕೊಂಡ ಬಾಲಕರು ತಮ್ಮೊಳಗೆ ಹುಸಿನಗೆ ನಕ್ಕರು. ಸತ್ಯನ ‘ದೇವದೂತನ’ ಶಕ್ತಿಯಿಂದಲೇ ಮಾಸ್ತರ್ ರಿಗೆ ಈ ಅವಸ್ಥೆ ಎಂದುಕೊಂಡರು. ಹೀಗೆಯೇ ಇರಬೇಕೆಂದು ವಿಚಾರ ಮಾಡಿದ ಮೆಹಬೂಬ್ ಖಾನರು, ಮಾಸ್ತರನ್ನು ಕುರಿತು, “ಸತ್ಯನಿಗೆ ಕೆಳಕ್ಕಿಳಿಯಲು ಹೇಳಿ,” ಎಂದರು. ಮಾಸ್ತರು ಹೇಳಿ ಸತ್ಯನು ಕೆಳಗಿಳಿದದ್ದೇ ತಡ, ಕುರ್ಚಿಯು ಅವರನ್ನು ಬಿಟ್ಟಿತು.
ವರ್ಷಗಳುರುಳಿದುವು. ಬಾಬಾರವರು ಈ ಘಟನೆಯನ್ನು ಮೆಲುಕು ಹಾಕುತ್ತಾ, “ನಾನು ಆ ರೀತಿ ಸಂಕಲ್ಪ ಮಾಡಿದ್ದುಂಟು. ಕೋಪದಿಂದಲ್ಲ. ಏಕೆಂದರೆ ನನ್ನಲ್ಲಿ ಕೋಪವೇ ಇಲ್ಲ. ನನ್ನ ಶಕ್ತಿಯನ್ನು ಪ್ರದರ್ಶಿಸಿ, ಕಾಲಕ್ರಮೇಣ ಜನರ ಮನಸ್ಸನ್ನು, ನನ್ನ ಅನನ್ಯ ವ್ಯಕ್ತಿತ್ವ ಹಾಗೂ ಧರ್ಮ ಪ್ರಚಾರ ಕಾರ್ಯಗಳತ್ತ ತಿರುಗಿಸುವುದಷ್ಟೇ ನನ್ನ ಉದ್ದೇಶವಾಗಿದ್ದಿತು,” ಎಂದು ತಿಳಿಸಿದರು.
ಸತ್ಯನು ಇತರ ಬಾಲಕರೊಡನೆ ವ್ಯವಹರಿಸುತ್ತಿದ್ದ ರೀತಿಗಳಿಂದಲೂ ಪ್ರಾರ್ಥನೆ, ಭಜನೆ, ಶ್ರದ್ಧೆ ಮತ್ತು ಸಂತೃಪ್ತಿಗಳ ಮೂಲಕ ದೊರೆಯುವ ಪರಮಾನಂದವು, ಲೌಕಿಕವಾಗಿ ದೊರೆಯುವ ಸುಖ ಸಂತೋಷಗಳಿಗಿಂತಲೂ ಶ್ರೇಷ್ಠವೆಂದು ತೋರಿಸುವ ಮೂಲಕವೂ ತನ್ನ ಬುದ್ಧಿಶಕ್ತಿ ಮತ್ತು ಪರಿಶುದ್ಧತೆಗಳಿಂದ ಗಳಿಸಿಕೊಂಡ ‘ಬ್ರಹ್ಮಜ್ಞಾನಿ’; ಎಂಬ ಉಪನಾಮವನ್ನು ಸಾರ್ಥಕ ಪಡಿಸಿಕೊಂಡನು. ಈ ಗುಣ ವಿಶೇಷಗಳಿದ್ದ ಸಂತರ ಕಥೆಗಳನ್ನು ತಿಳಿಸುವುದರಲ್ಲಿ ಆತನು ಮಹದಾನಂದ ಭರಿತನಾಗುತ್ತಿದ್ದನು.
ಆ ಪುಟ್ಟ ವಯಸ್ಸಿನಲ್ಲಿಯೂ ಸತ್ಯನ ಒಡನಾಡಲು, ಖಾಲಿ ಚೀಲದಿಂದ ತೆಗೆದು ಕೊಡುತ್ತಿದ್ದ ಸಿಹಿ ಪದಾರ್ಥಗಳನ್ನು ಪಡೆಯಲು ಮತ್ತು ಆತನ ಅನುಮೋದನೆಯನ್ನು ಪಡೆಯಲು ಮಕ್ಕಳು ಪರಿಶುದ್ಧರಾಗಿಯೂ ಪ್ರಾಮಾಣಿಕರಾಗಿಯೂ ವರ್ತಿಸಬೇಕಾಗಿದ್ದಿತು.
[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]