ಹುಲಿಯ ಕಥೆ
ಸ್ವಾಮಿಯವರು ಸೃಷ್ಟಿಯ ಎಲ್ಲಾ ಜಂತುಗಳನ್ನೂ ಸಮಭಾವದಿಂದ ಕಾಣುತ್ತಾರೆ. ಪ್ರಾಣಿಗಳನ್ನು ಕೊಲ್ಲುವುದಾಗಲೀ ಬೇಟೆ ಆಡುವುದಾಗಲೀ ಅವರು ಸಹಿಸುವುದಿಲ್ಲ.
ಒಂದಾನೊಂದು ದಿನ, ಉರವಕೊಂಡದಿಂದ ಪುಟ್ಟಪರ್ತಿಗೆ ಬಾಬಾರವರು ವಾಪಸ್ಸಾದ ಮೇಲೆ ಒಂದು ವಿಚಿತ್ರ ಘಟನೆ ನಡೆಯಿತು. ಚಿತ್ರಾವತೀ ನದಿಯ ಎದುರು ದಡಕ್ಕೆ ಸೇರಿದಂತಿರುವ ಕಾಡಿನಲ್ಲಿ ಬೇಟೆಯಾಡಲು ಒಬ್ಬ ಇಂಗ್ಲಿಷ್ ಅಧಿಕಾರಿಯು ಬಂದಿದ್ದನು. ಅವನು ಹುಲಿಯೊಂದನ್ನು ಕೊಂದು ಅನಂತಪುರಕ್ಕೆ ಸಾಗಿಸುತ್ತಿದ್ದನು. ಪುಟ್ಟಪರ್ತಿ ಗ್ರಾಮದ ಅಂಚಿನಲ್ಲಿ ಯಾವುದೇ ಕಾರಣ ಇಲ್ಲದೆ ಅವರ ಜೀಪು ಇದ್ದಕ್ಕಿದ್ದಂತೆ ನಿಂತು ಹೋಯಿತು. ಎಷ್ಟೇ ಪ್ರಯತ್ನ ನಡೆಸಿದರೂ ಆ ಜೀಪ್ನ ಡ್ರೈವರನಾಗಲೀ ಅಧಿಕಾರಿಯಾಗಲೀ ವಾಹನವನ್ನು ಚಾಲೂ ಮಾಡಲಾಗಲಿಲ್ಲ.
ಆಗ, ಆ ಡ್ರೈವರನು ಬಾಲ ಸಾಯಿಬಾಬಾರವರ ಬಗ್ಗೆ ಅಷ್ಟೋ ಇಷ್ಟೋ ಕಥೆಗಳನ್ನು ಕೇಳಿದ್ದನ್ನು ಇಂಗ್ಲಿಷ್ನವನಿಗೆ ಹೇಳಿದನು. ಸಮೀಪದ ಗ್ರಾಮದಲ್ಲೊಬ್ಬ ಬಾಲಕನಿದ್ದಾನೆ ಬರಿಯ ಕೈ ಚಾಲನೆಯಿಂದ ವಿಭೂತಿ ಸೃಷ್ಟಿಸುತ್ತಾನೆ. ಆ ಬೂದಿಯಿಂದ ಏನನ್ನಾದರೂ ಗುಣಪಡಿಸಬಹುದು. ಬಹುಶಃ ಜೀಪನ್ನೂ ಸಹ. ಅರ್ಧದಾರಿಯಲ್ಲಿ ನಿಂತು ದಿಕ್ಕುತೋಚದೆ ಇದ್ದುದರಿಂದಲೂ ಎಂಜಿನ್ ಸರಿ ಮಾಡಲಾಗದುದರಿಂದಲೂ ಆ ಅಧಿಕಾರಿಯು ಜೀಪ್ನಲ್ಲಿ ಕಾಯುವುದಾಗಿಯೂ ಡ್ರೈವರನು ಗ್ರಾಮಕ್ಕೆ ಹೋಗಿ, ಬಾಲಕನನ್ನು ಅರಸುವುದಾಗಿಯೂ ನಿರ್ಧರಿಸಿದನು.
ಡ್ರೈವರನು ಪುಟ್ಟಪರ್ತಿಯ ರಸ್ತೆಗಳಲ್ಲಿ ಅಡ್ಡಾಡುತ್ತಾ ಇದ್ದು, ಸ್ವಲ್ಪ ಕಾಲದ ಬಳಿಕ, ಬಾಲಕನನ್ನು ಕಂಡನು. ಅವನಿನ್ನೂ ಬಾಯಿ ತೆಗೆಯುವುದಕ್ಕೆ ಮುಂಚೆಯೇ ಬಾಬಾರವರು, “ನಾನೇ ಜೀಪ್ ಹತ್ತಿರ ಬರುತ್ತಿದ್ದೇನೆ,” ಎಂದರು. ಚಿತ್ರಾವತೀ ನದಿಯ ಮರಳು ಹಾಸಿನ ಮೇಲೆ ನಡೆದು ಜೀಪ್ ನಿಂತಿದ್ದ ಸ್ಥಳಕ್ಕೆ ಬಂದರು. ಜೀಪ್ನೊಳಗೆ ಬಾಗಿ ನೋಡಿ, ಅಲ್ಲಿ ಇದ್ದ ಸುಂದರವಾದ ಹುಲಿಯನ್ನು ಕಂಡರು. ಅದನ್ನು ಆ ಅಧಿಕಾರಿಯು, ಎರಡು ಗಂಟೆಗಳ ಮುಂಚೆ ತಾನೇ ಕೊಂದಿದ್ದನು. ಪುಟ್ಟಪರ್ತಿಯ ಅಂಚಿನಲ್ಲಿ ತಾವೇ ಆ ಜೀಪನ್ನು ನಿಲ್ಲಿಸಿದುದಾಗಿ ಹೇಳಿದರು. ಈಗ ಸತ್ತಿರುವ ಆ ಹುಲಿಯು ತಾಯಿ ಹುಲಿ ಎಂದೂ ಅದಕ್ಕೆ ಎರಡು ವಾರಗಳ ವಯಸ್ಸಿನ ಮೂರು ಮರಿಗಳಿರುವುದೆಂದೂ ತಿಳಿಸಿದರು. ಆ ಮರಿಗಳು ತಾಯಿಯನ್ನು ಕಾಣದೆ ಕಂಗಾಲಾಗಿರುವುದಾಗಿಯೂ ಹಸಿವಿನಿಂದ ಬಳಲುತ್ತಿರುವುದಾಗಿಯೂ ತಿಳಿಸಿದರು. ಬಾಬಾ ನಿಷ್ಠುರವಾಗಿ, “ಹಿಂದೆ ಹೋಗಿ, ಆ ಮರಿಗಳನ್ನು ತೆಗೆದುಕಂಡು ಬಾ. ಅವುಗಳನ್ನು ಕಾಳಜಿವಹಿಸಿ ಕಾಪಾಡುವ ಮೃಗಾಲಯಕ್ಕೆ ಕೊಡು. ಮತ್ತೊಮ್ಮೆ ಕಾಡು ಪ್ರಾಣಿಗಳನ್ನು ಬೇಟೆ ಆಡಬೇಡ. ಅವು ನಿನಗೇನೂ ತೊಂದರೆ ಮಾಡಿಲ್ಲವಲ್ಲ. ನೀನೇಕೆ ಅವುಗಳನ್ನು ಹುಡುಕಿ ಹೋಗುವುದು, ಬಲೆ ಹಾಕುವುದು ಅಥವಾ ಹಿಡಿಯುವುದು? ಹೀಗೆ ಹಿಡಿಯುವ ಬದಲು ಕ್ಯಾಮೆರಾದಲ್ಲಿ ಅವುಗಳನ್ನು ಹಿಡಿ,” ಎಂದು ಸಲಹೆ ನೀಡಿದರು. “ಅದು ನಿನ್ನಲ್ಲಿರುವ ಮಾರಕಾಸ್ತ್ರಕ್ಕಿಂತಲೂ ಬಲವಾದುದು. ಅದು ಪ್ರಾಣಿಗಳನ್ನು ಊನಗೊಳ
ಿಸುವುದಿಲ್ಲ ಅಥವಾ ಕೊಲ್ಲುವುದಿಲ್ಲ.” ಇಂಗ್ಲಿಷ್ನವನು ಬಾಬಾರವರು ಹೇಳಿದಂತೆಯೇ ಮಾಡಿದನು. ಆ ಮರಿಗಳನ್ನು ಮೃಗಾಲಯಕ್ಕೆ ತಲುಪಿಸಿದನು. ಅಲ್ಲಿಂದ ಮುಂದೆ ಬೇಟೆಯಾಡಲು ಕ್ಯಾಮರಾ ಮಾತ್ರ ಉಪಯೋಗಿಸಿದನು. ಬಂದೂಕದ ಬೇಟೆಗಿಂತಲೂ ಕ್ಯಾಮರಾದಿಂದ ಬೇಟೆ ಆಡುವುದು ಹೆಚ್ಚು ಸಾಹಸಮಯವಾದುದೆಂದೂ ಸಹಜೀವನ ನಡೆಸಲು ಅದು ಹೆಚ್ಚು ಶಾಂತಿಯುತ, ಅಹಿಂಸಾ ಮಾರ್ಗವೆಂದೂ ಪವಿತ್ರವಾದ ಹಾದಿಯೆಂದೂ ಕಂಡುಕೊಂಡನು.
ಬಾಬಾರವರ ವಿವೇಕವಾಣಿಯಿಂದ ಅವನು ಎಷ್ಟು ಪ್ರಭಾವಿತನಾಗಿದ್ದನೆಂದರೆ ಚರ್ಮಪ್ರಸಾಧಕನಿಂದ ಬಂದ ಹುಲಿಯ ಚರ್ಮವನ್ನು ನೋಡಿ ಸಹಿಸಲಾಗದೆ, ಅದನ್ನು ಪುಟ್ಟಪರ್ತಿಗೆ ತಂದು ಬಾಬಾರವರ ಅಡಿದಾವರೆಗಳಲ್ಲಿ ಅರ್ಪಿಸಿದನು.
[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]