ಪುಟ್ಟಪರ್ತಿಯ ಸ್ಥಳಪುರಾಣ
ಬೆಟ್ಟದ ಸಾಲುಗಳಿಂದ ಆವೃತವಾದ ಚಿತ್ರಾವತೀ ನದೀ ತೀರ, ಸುತ್ತಲಿರುವ ಬೆಟ್ಟಗಳಿಂದ ಮಾರ್ದನಿಸುತ್ತಿರುವ ದೇವಾಲಯದ ಗಂಟೆಗಳ ನಿನಾದ, ಇವುಗಳ ಮಧ್ಯೆ ಪುಟ್ಟ ಗ್ರಾಮ ಪುಟ್ಟಪರ್ತಿ. ಅವತಾರ ಪುರುಷ ಶ್ರೀ ಸತ್ಯಸಾಯಿ ಬಾಬಾರವರು ತಮ್ಮ ಜನನಕ್ಕಾಗಿ ಆರಿಸಿಕೊಂಡ ಪುಣ್ಯಸ್ಥಳವೇ ಇದು. ಹಿಂದಿನ ಕಾಲದಲ್ಲಿ ಕವಿಗಳಿಗೂ ಪಂಡಿತರಿಗೂ ವೀರರಿಗೂ ಆವಾಸ ಸ್ಥಳವಾಗಿ ಮೆರೆದು, ಅದೃಷ್ಟ ದೇವತೆಗಳ ದೇಗುಲವಾಗಿ ಪ್ರಖ್ಯಾತಿ ಹೊಂದಿ, ವಾಗ್ಗೇಯಕಾರರು ನೆಲೆಸಿದ್ದ ಬೀಡು.
ದಕ್ಷಿಣ ಭಾರತದ ಈ ಪುಟ್ಟ ಪ್ರಶಾಂತ ಗ್ರಾಮದ ಹೆಸರಿನ ಬಗ್ಗೆ ಅದೆಷ್ಟೋ ದಂತ ಕಥೆಗಳು ಪ್ರಚಲಿತವಾಗಿವೆ. ತೆಲುಗಿನಲ್ಲಿ ‘ಪುಟ್ಟ’ ಎಂದರೆ ಹುತ್ತ, ‘ಪರ್ತಿ’ ಎಂದರೆ ವರ್ಧಿಸುವುದು.
ಬಹಳ ಕಾಲದ ಹಿಂದೆ ಈ ಗ್ರಾಮವನ್ನು ‘ಗೊಲ್ಲಪಲ್ಲಿ’ ಎಂದು ಕರೆಯುತ್ತಿದ್ದರು; ಎಂದರೆ ಗೊಲ್ಲರು (ಗೋಪಾಲಕರು) ವಾಸಿಸುವ ಹಳ್ಳಿ. ಹೆಸರು ಕೇಳಿದ ಕೂಡಲೇ ಶ್ರೀಕೃಷ್ಣನ ಬಾಲ್ಯದ ದಿನಗಳು ನೆನಪಿಗೆ ಬರುತ್ತದೆ. ಹೌದು, ಗೋಪಾಲಕರು ಸುಖ, ಸಂತೋಷದಿಂದ ನಲಿದಾಡುತ್ತಿದ್ದರು. ದನಕರುಗಳು ಮೈದುಂಬಿ, ಆರೋಗ್ಯದಿಂದ ಜೀವಿಸುತ್ತಿದ್ದು, ಈ ಸ್ಥಳದಲ್ಲಿ ರುಚಿಕರವಾದ, ಗಟ್ಟಿಯಾದ ಹಾಲನ್ನು ಕರೆಯುತ್ತಿದ್ದುವು. ಮನೆಮನೆಯೂ ಬೆಣ್ಣೆ ತುಪ್ಪಗಳಿಂದ ತುಂಬಿ ತುಳುಕಾಡುತ್ತಿದ್ದುವು.
ಜನರು ಶಾಂತ, ಸಮೃದ್ಧ ಜೀವನ ನಡೆಸುತ್ತಿದ್ದರು. ಆದರೊಂದು ದಿನ, ಗುಡ್ಡಗಾಡಿನಲ್ಲಿ ಮೇವುಂಡು ಹಿಂದಿರುಗಿದಾಗ, ತನ್ನ ಹಸುವಿನ ಹಾಲು ಕರೆಯಲು, ಹಾಲೇ ಇಲ್ಲದಿರುವುದನ್ನು ಒಬ್ಬ ಗೋಪಾಲಕನು ಗಮನಿಸಿದನು. ಏಕೆ ಹೀಗೆ? ನೋಡಿಯೇ ಬಿಡಬೇಕು ಎಂದು ಯೋಚಿಸಿದ ಆ ಗೊಲ್ಲನು, ಹಸುವಿಗೆ ಕಾಣದಂತೆ ಅದನ್ನು ಹಿಂಬಾಲಿಸಿದನು. ಆ ಹಸುವಾದರೋ ವಿಚಿತ್ರ ರೀತಿಯಲ್ಲಿ, ತನ್ನ ಪುಟ್ಟ ಕರುವನ್ನು ಹಿಂದೆ ಬಿಟ್ಟು, ಗ್ರಾಮದ ಹೊರವಲಯದಲ್ಲಿದ್ದ ಒಂದು ಹುತ್ತದ ಬಳಿ ಹೋಯಿತು. ತ್ತದೊಳಗಿನಿಂದ ಒಂದು ನಾಗರ ಹಾವು ಮೇಲೆದ್ದು ನಿಂತ ದೃಶ್ಯವನ್ನು ಅವನು ಕಂಡನು.
ರೊಚ್ಚಿಗೆದ್ದ ಆ ಗೊಲ್ಲ ಬಾಲಕನು ಇದರಿಂದ ತನಗೆಷ್ಟು ನಷ್ಟವಾಗುತ್ತಿದೆ ಎಂದು ಯೋಚಿಸಿದನು. ಪಕ್ಕದಲ್ಲಿದ್ದ ದಪ್ಪ ಕಲ್ಲನ್ನು ತಲೆಯ ಮೇಲೆತ್ತಿ ಆ ಹಾವಿನ ಮೇಲೆ ಎಸೆದನು. ನೋವಿನಿಂದ ನರಳಿದ ಆ ನಾಗರಹಾವು ಸಾಯುವ ಮುನ್ನ ಆ ಗ್ರಾಮವನ್ನೂ, ಗೋಪಾಲಕರನ್ನೂ ಶಪಿಸಿತು. ಇನ್ನು ಮುಂದೆ ಈ ಗ್ರಾಮದಲ್ಲಿ ಕೊನೆ ಇಲ್ಲದಂತೆ ಹುತ್ತಗಳು ಬೆಳೆಯುತ್ತವೆ. ಹಾವುಗಳು ಇಲ್ಲಿ ಮನೆ ಮಾಡಿ ವಿಜೃಂಭಿಸುತ್ತವೆ ಎಂದಿತು.
ಹಾಗಾಗಿ, ದನಕರುಗಳ ಆರೋಗ್ಯ ಕೆಟ್ಟಿತು. ಅವು ಅವನತಿ ಹೊಂದಿದವು. ಎಲ್ಲಿ ನೋಡಿದರಲ್ಲಿ ಹುತ್ತಗಳು ಮೇಲೆದ್ದವು. ಹಳ್ಳಿಗರು ತಮ್ಮ ಗ್ರಾಮವನ್ನು ‘ವಾಲ್ಮೀಕಿ ಪುರ’ವೆಂದು ಕರೆದರು. ವಾಲ್ಮೀಕಿ ಪುರವೆಂದರೆ ‘ಹುತ್ತಗಳ ನಗರ’. ಈ ಹೆಸರಿನಿಂದ ಅವರಿಗೆ ಸ್ವಲ್ಪ ಸಮಾಧಾನ ದೊರಕಿತು. ವಾಲ್ಮೀಕಿಯಾದರೋ ಅಮರಕಾವ್ಯವೆನಿಸಿದ ‘ರಾಮಾಯಣ’ ವನ್ನು ಜಗತ್ತಿಗೆ ನೀಡಿದ ಕವಿ ಪುಂಗವ, ಮಹರ್ಷಿ ಅಲ್ಲವೇ?.
ಇಂದಿಗೂ ಪುಟ್ಟಪರ್ತಿಯ ಗ್ರಾಮಸ್ಥರು ಈ ಘಟನೆಯ ದ್ಯೋತಕವಾಗಿ, ಒಂದು ದಪ್ಪನೆಯ, ದುಂಡಗಿನ ಕಲ್ಲನ್ನು ತೋರಿಸುತ್ತಾರೆ. ಅದು ಸ್ವಲ್ಪ ಮುಕ್ಕಾಗಿದೆ. ಈ ಕಲ್ಲು ಆ ನಾಗರಹಾವನ್ನು ಹೊಡೆಯಲು ಪಯೋಗಿಸಿದ್ದು ಎನ್ನುತ್ತಾರೆ. ಆ ನಾಗರದ ರಕ್ತದ ಕಲೆಯೋ ಎಂಬಂತೆ ಆ ಕಲ್ಲಿನ ಮೇಲೆ ಉದ್ದವಾದ, ಕೆಂಪು ಬಣ್ಣದ ಕಲೆಯಿದೆ. ಅನತಿ ಕಾಲದಲ್ಲಿ ಆ ಕಲ್ಲು ಪೂಜಾರ್ಹವಾಯಿತು. ಶ್ರೀಕೃಷ್ಣನ ಪ್ರತೀಕವೆಂದು ಅದನ್ನು ಜನ ಕಂಡರು. ಶಾಪವು ಶಮನವಾಗಿ, ದನಕರುಗಳು ಆರೋಗ್ಯದಿಂದ ಬಾಳುವುದಾಗಿ ನಂಬಿದರು. ಕಾಲಕ್ರಮದಲ್ಲಿ ಒಂದು ದೇವಾಲಯ ನಿರ್ಮಾಣವಾಯಿತು. ಅನೇಕ ತಲೆಮಾರುಗಳಿಂದ ಆ ಕಲ್ಲನ್ನು ಜನರು ಪೂಜಿಸುತ್ತಾ ಬಂದಿದ್ದಾರೆ.
ಕೆಲವು ವರ್ಷಗಳ ಹಿಂದೆ ಈ ಕಲ್ಲಿನ ಬಗ್ಗೆ ತಿಳಿಯದೇ ಇರುವ ವಿಷಯವನ್ನು ಪ್ರಸ್ತುತ ಪಡಿಸುವುದಕ್ಕಾಗಿ ಬಾಬಾರವರು, ಈ ಕಲ್ಲನ್ನು ತೊಳೆದು, ಶ್ರೀಗಂಧವನ್ನು ಲೇಪಿಸಲು ಆಜ್ಞಾಪಿಸಿದರು. ಗಂಧ ಲೇಪನದ ಬಳಿಕ ಅಲ್ಲಿ ಕಂಡು ಬಂದದ್ದೇನು? ಹಸುವಿಗೊರಗಿ ಶ್ರೀಕೃಷ್ಣ ನಿಂತಿದ್ದಾನೆ. ಅಧರಗಳ ಬಳಿ ಕೊಳಲು ರಾರಾಜಿಸುತ್ತಿದೆ. ಗ್ರಾಮವಾಸಿಗಳು ಇಂದಿಗೂ ಸುಶ್ರಾವ್ಯವಾದ ಕೊಳಲಗಾನವು ತಮಗೆ ಕೇಳಿಬರುವುದಾಗಿ ಹೇಳುತ್ತಾರೆ.
ಅಂದಿನಿಂದ ಪುಟ್ಟಪರ್ತಿಯು ಮತ್ತೆ ಅಭಿವೃದ್ಧಿ ಹೊಂದಿತು. ದನಕರುಗಳು ಆರೋಗ್ಯವಾಗಿ ಬಾಳುತ್ತಿವೆ. ಗ್ರಾಮದ ಪೂರ್ವಭಾಗದಲ್ಲಿ ಈಗಲೂ ಹಳೆಯ ಕೋಟೆಯ ಬುರುಜನ್ನು ಕಾಣಬಹುದು. ಇದರಿಂದ, ಹಿಂದೆ ಪುಟ್ಟಪರ್ತಿಯು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಸಿರಬಹುದಾದ ಆಳ್ವಿಕೆಯನ್ನೂ, ಅಲ್ಲಿನ ಪಾಳೆಯಗಾರರ ಶೌರ್ಯ ಸಾಹಸಗಳನ್ನೂ ಕಾಣಬಹುದು.
[Source : Lessons from the Divine Life of Young Sai, Sri Sathya Sai Balvikas Group I, Sri Sathya Sai Education in Human Values Trust, Compiled by: Smt. Roshan Fanibunda]