ಮನೋಜವಂ ಶ್ಲೋಕ – ಚಟುವಟಿಕೆ
ಈ ಚಟುವಟಿಕೆಯ ಉದ್ದೇಶ – ಗ್ರೂಪ್ 1 ರ ಮಕ್ಕಳಲ್ಲಿ ನಾಮಸ್ಮರಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು. ಹಾಗೂ ಹೇಗೆ ದೇವರ ನಾಮಸ್ಮರಣೆಯು ನಮ್ಮನ್ನು ಕಾಪಾಡುವುದು ಹಾಗೂ ಕ್ಲಿಷ್ಟವಾದ ಕಾರ್ಯಗಳನ್ನು ನಿಭಾಯಿಸುವುದಕ್ಕೆ ನೆರವಾಗುವುದು ಎಂದು ಮಕ್ಕಳಿಗೆ ಅರ್ಥೈಸುವುದು.
ಬೇಕಾಗುವ ಸಾಮಗ್ರಿಗಳು – ಮಣಿಗಳು, ಪೋಣಿಸಲು ಕಂಬಿಗಳು, ಕತ್ತರಿ
ಜಪಮಾಲೆಯನ್ನು ತಯಾರಿಸುವ ಚಟುವಟಿಕೆ:
ಗುರುಗಳು ಹನುಮಂತನ ಜೀವನದ ಕಥೆಗಳನ್ನು ಹೇಳುತ್ತಾ ಹೇಗೆ ಹನುಮಂತನು ಶ್ರೀರಾಮನ ನಾಮವನ್ನು ಜಪಿಸುತ್ತಾ ಕ್ಲಿಷ್ಟವಾದ ಕಾರ್ಯಗಳನ್ನು ಸಹ ಸುಲಭವಾಗಿ ಮಾಡಿದನೆಂದು ವಿವರಿಸಬೇಕು. ಮಕ್ಕಳಿಗೆ, ನಾವು ಭಗವಂತನ ನಾಮಸ್ಮರಣಯೊಂದಿಗೆ ಯಾವ ಕೆಲಸವನ್ನು ಮಾಡಿದರೂ ನಮಗೆ ಬೇಕಾಗುವ ಧೈರ್ಯ, ಧೃಢನಿಶ್ಚಯ ಹಾಗೂ ಬುದ್ಧಿಶಕ್ತಿ ದೊರೆತು ಎಂಥ ಕಾರ್ಯವಾಗಲೀ ಆತ್ಮವಿಶ್ವಾಸದಿಂದ ಅನಾಯಾಸವಾಗಿ ಮಾಡಬಹುದಾಗಿದೆ ಎಂದು ತಿಳಿಸಬೇಕು.
- ಒಂದೊಂದು ಮಗುವಿಗೂ 26 ಸಮನಾದ ಮಣಿಗಳನ್ನು, ಒಂದು ಗುರುಮಣಿ (ಸ್ವಲ್ಪ ದೊಡ್ಡದಾಗಿ ವಿಭಿನ್ನ ಬಣ್ಣದ್ದು), ಒಂದು ದಾರ ಅಥವಾ ಕಂಬಿಯನ್ನು ಕೊಡಬೇಕು.
- ಸಮನಾದ, ಸ್ವಚ್ಛವಾದ ಜಾಗದಲ್ಲಿ ಆ ಮಣಿಗಳನ್ನು ಪೋಣಿಸುವದಕ್ಕೆ ಅನುಕೂಲವಾಗುವ ಹಾಗೆ ಇಡಬೇಕೆಂದು ಹೇಳಿ.
- ಒಂದು ಕಂಬಿ ಅಥವಾ ದಾರದ ಒಂದು ತುದಿಯನ್ನು ಗಂಟುಹಾಕಿ ಕಟ್ಟಿ ಒಂದೊಂದು ಮಣಿಯನ್ನು ಆ ಕಂಬಿಯಲ್ಲಿ ತೂರಿಸುವುದಕ್ಕೆ ಹೇಳಬೇಕು.
- 26 ಮಣಿಗಳನ್ನು ಪೋಣಿಸಿದ ಮೇಲೆ ಗುರುವು “ಗುರು ಮಣಿ”ಯನ್ನು ಪೋಣಿಸಿ ಕಟ್ಟಲು ನೆರವಾಗಬೇಕು.
ಸಂಕ್ಷಿಪ್ತವಾಗಿ ಕೇಳಬಹುದಾದ ಪ್ರಶ್ನೆಗಳು:
- ಈ ಚಟುವಟಿಕೆ ಇಷ್ಟವಾಯಿತೇ?
- ನೀವು ತಯಾರಿಸಿದ ಜಪಮಾಲೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬಿದೆಯೆಂದು ನಂಬುವಿರಾ? ಯಾಕೆ?
- ದೇವರ ನಾಮ ಜಪಿಸುತ್ತಾ ಯಾವ ಕೆಲಸ ಮಾಡಿದರೂ ಆಗುವ ಪರಿಣಾಮವೇನು?
ಪೂರ್ತಿ ಚಟುವಟಿಕೆ ಮುಗಿಯುವವರೆಗೆ ನಾಮಜಪದ ಮೇಲೆ ಗಮನವಿರಿಸಬೇಕು. ಕೊನೆಯಲ್ಲಿ ಜಪಮಾಲೆಗಳನ್ನು ಮಕ್ಕಳಿಗೆ ನೀಡಿ ಅವರ ಮನೆಯ ಪೂಜಾ ಮಂದಿರದಲ್ಲಿ ಇಡಲು ಹೇಳಬೇಕು. ಮಕ್ಕಳು ಅವರಿಗೆ ಇಷ್ಟವಾದ ಯಾವ ಮಂತ್ರವನ್ನೇ ಆಗಲಿ ಜಪಿಸಬಹುದು ಎಂದು ಹೇಳಬೇಕು. ಗಾಯತ್ರಿ ಮಂತ್ರ, ಓಂ ಶ್ರೀ ಸಾಯಿರಾಮ್ ಅಥವಾ ಓಂನಮಃಶಿವಾಯ ಅಥವಾ ಜೈ ಶ್ರೀರಾಮ್ ಎಂದು ನಿತ್ಯವೂ 27, ಸಾರಿ ಪಠಿಸಬಹುದು.
ವಿಶೇಷ ದಿನಗಳಲ್ಲಿ ಅಂದರೆ ಗಣೇಶ ಚತುರ್ಥಿಯ ದಿನ ಈ ಈ ಜಪಮಾಲೆಯನ್ನು ಹಿಡಿದು “ಓಂ ಶ್ರೀ ಗಣೇಶಾಯ ನಮಃ” ಎಂದು (27×4) 108 ಸಲ ಜಪಿಸಲು ಹೇಳಬಹುದು.