ಶಿಸ್ತು
ಶಿಸ್ತು ಎಂದರೆ ನಿಯಮಗಳನ್ನು ಅಥವಾ ನಡವಳಿಕೆಯ ಸಂಹಿತೆಯನ್ನು ಪಾಲಿಸಲು ಜನರನ್ನು ತರಬೇತುಗೊಳಿಸುವುದು. ನಾವು ನಿಯಮ-ನಿಬಂಧನೆಗಳ ವಿರುದ್ಧ ನಡೆದುಕೊಳ್ಳಬಾರದು. ನಮ್ಮ ಸ್ವಂತ ಲಾಭಕ್ಕಾಗಿಯೇ ಅವುಗಳನ್ನು ವಿಧಿಸಲಾಗಿದೆ. ಶಿಸ್ತಿಲ್ಲದೆ ಯಾವ ಖ್ಯಾತಿಯನ್ನೂ ಪಡೆಯಲಾಗದು. (ನ ಶ್ರೇಯೋ ನಿಯಮಂ ವಿನಾ). ನಮ್ಮ ಚಾರಿತ್ರ್ಯ ಮತ್ತು ಸದ್ಗುಣವನ್ನು ಬೆಳೆಸಲು ಶಿಸ್ತು ಅತ್ಯಗತ್ಯ. ಕೆಟ್ಟ ಅಭ್ಯಾಸಗಳನ್ನು ತೊಡೆದುಹಾಕಲು ಮತ್ತು ಉತ್ತಮ ಅಭ್ಯಾಸಗಳನ್ನು ಉತ್ತೇಜಿಸುವಲ್ಲಿ ಶಿಸ್ತು ಸಹಾಯಕವಾಗಿದೆ.
ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರು ಚಾರಿತ್ರ್ಯವನ್ನು ಸಂಪಾದಿಸುವ ತಂತ್ರವನ್ನು ವಿವರಿಸುತ್ತಾರೆ.
ಆಲೋಚನೆಗಳು ಕ್ರಿಯೆಗಳಾಗಿ ರೂಪುಗೊಳ್ಳುವುವು.
ಕ್ರಿಯೆಗಳು ಅಭ್ಯಾಸವನ್ನು ರೂಪಿಸುವುವು.
ಅಭ್ಯಾಸಗಳು ಮನುಷ್ಯನ ಚಾರಿತ್ರ್ಯವನ್ನು ರೂಪಿಸುತ್ತವೆ.
ಚಾರಿತ್ರ್ಯವು ನಮ್ಮ ಹಣೆಬರಹವನ್ನು ನಿರ್ಧರಿಸುತ್ತದೆ. ಚಾರಿತ್ರ್ಯವಿಲ್ಲದ ಜೀವನವು ದೀಪವಿಲ್ಲದ ದೇವಾಲಯದಂತೆ ನಿರರ್ಥಕ.
(ಶ್ರೀ ಸತ್ಯ ಸಾಯಿ ವಾಣಿ, ಸಂಪುಟ 8 ಎ, ಪು .222.)
ನಾವು ಪ್ರಕೃತಿಯಿಂದ ಶಿಸ್ತು ಕಲಿಯಬೇಕು:
ಪ್ರಕೃತಿಯ ಎಲ್ಲಾ ಅಂಶಗಳು ಭಗವಂತನ ನೀತಿ ನಿಯಮಗಳನ್ನು ಅನುಸರಿಸುತ್ತವೆ. ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು ಮತ್ತು ಜೀವಿಗಳು ಎಲ್ಲವೂ ಕೆಲವು ನಿಬಂಧನೆಗಳಿಗೆ ಒಳಪಟ್ಟಿರುತ್ತವೆ. (ಗುರುಗಳು ಸೌರವ್ಯೂಹ, ಸೂರ್ಯೋದಯ, ರಸ್ತೆಯಲ್ಲಿ ಸಂಚಾರದ ಸಮರ್ಪಕ ನಿಯಂತ್ರಣ, ಇತ್ಯಾದಿ ಚಿತ್ರಗಳನ್ನು ತೋರಿಸಬಹುದು. ಯಾವುದೇ ಶಿಸ್ತು ಇಲ್ಲದಿದ್ದರೆ ಏನಾಗಬಹುದು ಎಂಬುದನ್ನು ಚರ್ಚಿಸಬಹುದು).
“ನಿಮಗೆ ಭಕ್ತಿಯಿರಬಹುದು, ನೀವು ನಿಗದಿತ ಕರ್ತವ್ಯವನ್ನು ನಿರ್ವಹಿಸುತ್ತಿರಬಹುದು. ಆದರೆ ನೀವು ಶಿಸ್ತು ಪಾಲಿಸದಿದ್ದರೆ, ಉಳಿದ ಎರಡೂ ನಿಷ್ಪ್ರಯೋಜಕ. ಶಿಸ್ತೇ ನಿಮ್ಮ ಜೀವನದ ಪ್ರತಿಯೊಂದು ಚಟುವಟಿಕೆಯನ್ನೂ ನಿಯಂತ್ರಿಸಬೇಕು ಮತ್ತು ರೂಪಿಸಬೇಕು.” –ಭಗವಾನ್ ಬಾಬಾ
ಶಿಸ್ತುಬದ್ಧ ಜೀವನವನ್ನು ನಡೆಸಲು ಭಗವಾನರು ಮನುಷ್ಯನಿಗೆ ಈ ಕೆಳಗಿನ ತಡೆಯಾಜ್ಞೆಗಳನ್ನು ನೀಡಿದ್ದಾರೆ:
- ದೈವಿಕ ಆಜ್ಞೆಯನ್ನು ಅನುಸರಿಸಿ: ಕೆಟ್ಟದ್ದನ್ನು ನೋಡಬೇಡಿ, ಒಳ್ಳೆಯದನ್ನು ಮಾತ್ರ ನೋಡಿ, ಕೆಟ್ಟದ್ದನ್ನು ಕೇಳಬೇಡಿ, ಒಳ್ಳೆಯದನ್ನು ಮಾತ್ರ ಕೇಳಿ, ಕೆಟ್ಟದ್ದನ್ನು ಮಾತನಾಡಬೇಡಿ, ಒಳ್ಳೆಯದನ್ನೇ ಮಾತನಾಡಿ, ಕೆಟ್ಟದ್ದನ್ನು ಯೋಚಿಸಬೇಡಿ, ಒಳಿತನ್ನೇ ಯೋಚಿಸಿ, ಕೆಟ್ಟದ್ದನ್ನು ಮಾಡಬೇಡಿ, ಒಳಿತನ್ನೇ ಮಾಡಿ.
- ಆಸೆಗಳ ಮೇಲೆ ನಿಯಂತ್ರಣವನ್ನು ಅಭ್ಯಾಸ ಮಾಡಿ (Ceiling on desires ): ಸಮಯ ಪೋಲು ಮಾಡಬೇಡಿ, ಶಕ್ತಿಯನ್ನು ಪೋಲು ಮಾಡಬೇಡಿ, ಹಣವನ್ನು ಪೋಲು ಮಾಡಬೇಡಿ, ಆಹಾರವನ್ನು ಪೋಲು ಮಾಡಬೇಡಿ.
- ಆಧ್ಯಾತ್ಮಿಕ ಶಿಸ್ತಿನ ಮೊದಲ ಹೆಜ್ಜೆಯೇ ಮಾತಿನ ಶುದ್ಧೀಕರಣ. ಕೋಪವಿಲ್ಲದೆ ಮಧುರವಾಗಿ ಮಾತನಾಡಿ. ನಿಮ್ಮ ಪಾಂಡಿತ್ಯ ಅಥವಾ ಸಾಧನೆಗಳ ಬಗ್ಗೆ ಜಂಭ ಕೊಚ್ಚಿಕೊಳ್ಳಬೇಡಿ. ವಿನಮ್ರರಾಗಿರಿ, ಸೇವೆ ಮಾಡಲು ಉತ್ಸುಕರಾಗಿರಿ; ನಿಮ್ಮ ಮಾತನ್ನು ನಿಯಂತ್ರಿಸಿ, ಮೌನವನ್ನು ಅಭ್ಯಾಸ ಮಾಡಿ. ಅದು ನಿಮ್ಮನ್ನು ಜಗಳ, ವ್ಯರ್ಥ ಆಲೋಚನೆ ಮತ್ತು ಭಿನ್ನಾಭಿಪ್ರಾಯಗಳಿಂದ ಕಾಪಾಡುವುದು.
- ನೀವು ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಮೌನಾಚರಣೆಯನ್ನು ಅಭ್ಯಾಸ ಮಾಡಬೇಕು. ಇದು ನಿಮ್ಮ ಚೈತನ್ಯ ಶಕ್ತಿಯನ್ನು ಉಳಿಸಿ ಮಾನಸಿಕ ಶಾಂತಿಯನ್ನುಂಟುಮಾಡುತ್ತದೆ. ಸರಳ ಜೀವನ ಮತ್ತು ಉನ್ನತ ಚಿಂತನೆಯ ಶಿಸ್ತನ್ನು ಕೂಡ ನೀವು ಬೆಳೆಸಿಕೊಳ್ಳಬೇಕು.
[ಸತ್ಯ ಸಾಯಿ ವಾಣಿ, ಸಂಪುಟ II, ಅಧ್ಯಾಯ 6]
[ಸತ್ಯ ಸಾಯಿ ವಾಣಿ, ಸಂಪುಟ XXX, ಅಧ್ಯಾಯ 17]