ಆತುರದಿಂದ ಅಪಾರ ಹಾನಿ
ಒಂದು ಸಲ ಶಿವಾಜಿಯು ಯಾವುದೋ ಒಂದು ದುರ್ಗದಿಂದ ಇನ್ನೊಂದು ದುರ್ಗಕ್ಕೆ ಪ್ರಯಾಣ ಮಾಡುತ್ತಿರುವಾಗ ದಾರಿ ತಪ್ಪಿತು. ಗುಡ್ಡವೊಂದರ ಮೇಲೆ ನಿಂತು ಸುತ್ತುಲೂ ನೋಡಿದನು. ಅಲ್ಲೆಲ್ಲೂ ಯಾವ ಹಳ್ಳಿಯೂ ಕಣ್ಣಿಗೆ ಬೀಳಲಿಲ್ಲ. ಕತ್ತಲು ಹೆಚ್ಚುತ್ತಿತ್ತು. ಗುಡ್ಡದಿಂದ ಇಳಿದು ಬರುತ್ತಿರುವಾಗ ದೂರದಲ್ಲಿ ಮಿಣಮಿಣನೆ ಒಂದು ಬೆಳಕು ಕಾಣಿಸಿತು. ಅದನ್ನೇ ಗುರುತಿಟ್ಟು ಹೋಗಲು ಅವನಿಗೊಂದು ಗುಡಿಸಲು ಸಿಕ್ಕಿತು. ಗುಡಿಸಲಲ್ಲಿ ಒಬ್ಬ ಮುದುಕಿಯು ಅವನನ್ನು ಸ್ವಾಗತಿಸಿದಳು. ಅವನು ತುಂಬಾ ದಣಿದಿರುವನೆಂದು ತಿಳಿದು ಕೈಕಾಲು ಮುಖ ತೊಳೆಯಲು ಬಿಸಿ ನೀರು ಕೊಟ್ಟಳು. ವಿಶ್ರಾಂತಿಗಾಗಿ ಚಾಪೆ ಹಾಸಿದಳು. ಸ್ವಲ್ಪ ಹೊತ್ತು ಶಿವಾಜಿಯು ವಿಶ್ರಾಂತಿ ಪಡೆದ ನಂತರ ಅವನ ಹಸಿವು ಇಂಗಿಸಲು ‘ಕಿಚಡಿ’ ಮತ್ತು ‘ಕಡಿ’ಗಳನ್ನು ಒಂದು ತಟ್ಟೆಯಲ್ಲಿಟ್ಟು ಕೊಟ್ಟಳು.
ಶಿವಾಜಿಗೆ ತುಂಬಾ ಹಸಿವಾಗಿತ್ತು. ಆತುರದಿಂದ ಬಿಸಿ ಕಿಚಡಿಯಲ್ಲಿ ಕೈ ಹಾಕಿದ, ಬೆರಳುಗಳು ಸುಟ್ಟುವು. ‘ಹಾ’ ಎಂದು ಕೈ ಹಿಂದಕ್ಕೆ ತೆಗೆದುಕೊಂಡನು. ಆ ರಭಸಕ್ಕೆ ಸ್ವಲ್ಪ ಕಿಚಡಿ ನೆಲಕ್ಕೆ ಚೆಲ್ಲಿತು.
ಇದನ್ನು ಕಂಡ ಮುದುಕಿಯು, “ಓ! ನೀನೂ ನಿನ್ನ ಯಜಮಾನ ಶಿವಾಜಿಯಂತೆಯೇ ಅವಸರದ ಮನುಷ್ಯನೇ ಇರುವಂತಿದೆ. ಆದ್ದರಿಂದಲೇ ಕೈ ಸುಟ್ಟುಕೊಂಡೆ, ಅಲ್ಲದೆ ಸ್ವಲ್ಪ ಅನ್ನವನ್ನೂ ಹಾಳುಮಾಡಿದೆ,” ಎಂದಳು. ಶಿವಾಜಿಗೆ ಇದನ್ನು ಕೇಳಿ ಮೋಜೆನಿಸಿತು, ಆಶ್ಚರ್ಯವೂ ಆಯಿತು. “ನಮ್ಮ ಶಿವಾಜಿ ಮಹಾರಾಜರು ಅತುರಗಾರರೆಂದೇಕೆ ಹೇಳುತ್ತೀ, ಅಜ್ಜಿ?” ಎಂದು ಕೇಳಿದನು.
ಆ ಮುದುಕಿ ಕಪಟ ತಿಳಿಯದ ಮುಗ್ಧ ಹೆಂಗಸು. ಎದುರಿಗಿರುವವನು ಶಿವಾಜಿಯೇ ಎಂದು ತಿಳಿಯದೆ ಅವಳು ವಿವರಿಸಿದಳು, “ಮಗು ನಿನಗೆ ಗೊತ್ತಿಲ್ಲವೇ? ಶಿವಾಜಿಯು ಶತ್ರುಗಳ ಸಣ್ಣ ದುರ್ಗಗಳನ್ನು ಮೊದಲು ಗೆಲ್ಲದೆ ದೊಡ್ಡ ದುರ್ಗಗಳ ಮೇಲೆಯೇ ದಾಳಿಮಾಡುತ್ತಿದ್ದಾನೆ. ನೀನು ಬಿಸಿ ಕಿಚಡಿಗೆ ಕೈ ಹಾಕಿ ಬೆರಳು ಸುಟ್ಟುಕೊಂಡು ಸ್ವಲ್ಪ ಕಿಚಡಿಯನ್ನು ಹಾಳುಮಾಡಿದ ಹಾಗೆ, ಶಿವಾಜಿ ಮಹಾರಾಜನು ಶತ್ರುಗಳನ್ನು ನಿರ್ನಾಮ ಮಾಡುವ ಆತುರದಲ್ಲಿ ಚಿಂತೆಗೀಡಾಗಿದ್ದಾನೆಯಲ್ಲದೆ, ಶೂರ ಸೈನಿಕರನ್ನೂ ಕಳೆದುಕೊಳ್ಳುತ್ತಿದ್ದಾನೆ. ನೀನು ಮೊದಲು ತಟ್ಟೆಯ ಅಂಚಿನಲ್ಲಿ ತೆಳ್ಳಗೆ ಹರಡಿರುವ ಆರಿದ ಭಾಗವನ್ನು ತಿನ್ನಬೇಕಿತ್ತು. ಆಮೇಲೆ ಮಧ್ಯದ ಭಾಗವೂ ಆರುತ್ತಿತ್ತು. ಅದನ್ನು ಅಗ ಸುಲಭವಾಗಿ ತಿನ್ನಬಹುದಾಗಿತ್ತು. ಹೀಗೆಯೇ ಸೈನಿಕರನ್ನು ಕಳೆದುಕೊಳ್ಳದೆ ಸುಲಭವಾಗಿ ದೊಡ್ಡ ದುರ್ಗಗಳನ್ನು ಗೆಲ್ಲಲ್ಲು ಶಿವಾಜಿಗೆ ಸಹಾಯವಾಗುತ್ತಿತ್ತು.”
ಮುದುಕಿಯ ಮಾತಿನಲ್ಲಿದ್ದ ಬುದ್ಧಿವಂತಿಕೆಯನ್ನು ಶಿವಾಜಿಯು ತಕ್ಷಣವೇ ಗುರುತಿಸಿದನು. ಯಾವುದೇ ಕಾರ್ಯದಲ್ಲಿ ಜಯವನ್ನು ಬಯಸುವವನು ಆತುರ ಪಡಬಾರದೆಂದು ಅವನಿಗೆ ಅರ್ಥವಾಯಿತು. “ಸರಿಯಾಗಿ ಯೋಚನೆ ಮಾಡು, ಚೆನ್ನಾಗಿ ಯೋಜನೆ ರೂಪಿಸು, ಅಮೇಲೆ ಕ್ರಮವಾಗಿ ಮುಂದಕ್ಕೆ ಸಾಗು” ಎಂಬುದೇ ಅವನ ಜೀವನ ನೀತಿಯಾಯಿತು. ಹೀಗೆ ಶಿವಾಜಿ ಮಹಾರಾಜನು ಮರಾಠಾ ಸಾಮ್ರಾಜ್ಯವನ್ನು ಕಟ್ಟುವ ಕನಸನ್ನು ನನಸು ಮಾಡಿಕೊಂಡನು.
ಪ್ರಶ್ನೆಗಳು:
- ಆತುರದಿಂದ ಹೇಗೆ ಹಾನಿಯುಂಟಾಗುತ್ತದೆ?
- ಮುದುಕಿಯು ಶಿವಾಜಿಯನ್ನು ತೆಗಳುತ್ತಿದ್ದರೂ, ಶಿವಾಜಿಯು ಏಕೆ ಕೋಪಗೊಳ್ಳಲಿಲ್ಲ?
- “ಆತುರದಿಂದ ಅಪಾರ ಹಾನಿ”ಯಾಗಿದ್ದರ ಬಗ್ಗೆ ನಿಮ್ಮ ಅನುಭವಅಥವಾ ನೀವು ಕೇಳಿದ ಬೇರೆಯವರ ಅನುಭವದ ಬಗ್ಗೆ ಬರೆಯಿರಿ.