ಉಪದೇಶಕ್ಕೆ ಮೊದಲು ಆಚರಣೆ
ಸಂತರು ಉಪದೇಶಕ್ಕೂ ಮೊದಲು ಆಚರಿಸುತ್ತಾರೆ. ಆದುದರಿಂದ ಅವರ ಉಪದೇಶದಲ್ಲಿ ಶಕ್ತಿ ಇರುತ್ತದೆ ಅದು ನಮಗೆ ಒಳ್ಳೆಯದನ್ನು ಮಾಡುತ್ತದೆ.
ಮಹಾಗುರು ಶ್ರೀರಾಮಕೃಷ್ಣ ಪರಮಹಂಸರ ಶಿಷ್ಯವರ್ಗದಲ್ಲಿ ಒಬ್ಬ ಬಡ ಹೆಣ್ಣು ಮಗಳಿದ್ದಳು. ಒಂದು ದಿನ ಆಕೆಯು ತನ್ನ ಮಗನೊಡನೆ ಗುರುವಿನ ಹತ್ತಿರ ಬಂದು ಪ್ರಾರ್ಥಿಸಿದಳು. “ಗುರುದೇವ ನನ್ನ ಮಗನು ಪ್ರತಿದಿನವೂ ಮಿಠಾಯಿ ತಿನ್ನಬೇಕೆನ್ನುತ್ತಾನೆ. ಈ ಆಭ್ಯಾಸದಿಂದ ಇವನ ಹಲ್ಲುಗಳು ಹಾಳಾಗುತ್ತಿವೆ. ಮಿಠಾಯಿಯ ಬೆಲೆಯೂ ಹೆಚ್ಚು, ಪ್ರತಿ ದಿನವು ತಂದುಕೊಡಲು ನನಗೆ ಕಷ್ಟವಾಗುತ್ತಿದೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಹೊಡೆದು ನೋಡಿದೆ, ಅದೂ ವ್ಯರ್ಥವಾಯಿತು. ದಯವಿಟ್ಟು ಈ ಅಭ್ಯಾಸವನ್ನು ಬಿಡುವಂತೆ ಇವನಿಗೆ ಉಪದೇಶಿಸಿ ಆಶೀರ್ವದಿಸಬೇಕು.”
ಶ್ರೀ ರಾಮಕೃಷ್ಣನು ಹುಡುಗನ ಕಡೆಗೆ ನೋಡಿದರು. ಅವನಿಗೆ ಏನೂ ಹೇಳಲಿಲ್ಲ. ಇನ್ನು ಹದಿನೈದು ದಿನಗಳ ನಂತರ ಅವನನ್ನು ಕರೆದುಕೊಂಡು ಬರಬೇಕೆಂದು ಆ ಮಹಿಳೆಗೆ ಹೇಳಿ ಕಳಿಸಿಕೊಟ್ಟರು.
ಎರಡು ವಾರಗಳ ನಂತರ ಅವಳು ಮತ್ತೆ ಹುಡುಗನನ್ನು ಕರೆದುಕೊಂಡು ಬಂದಳು. ಕುಳಿತುಕೊಂಡ ನಂತರ ಶ್ರೀ ರಾಮಕೃಷ್ಣರು ಹುಡುಗನನ್ನು ಪ್ರೀತಿಯಿಂದ ನೋಡುತ್ತಾ, “ಮಗು ದಿನಾಲು ಮಿಠಾಯಿ ಬೇಕೆಂದು ನಿನ್ನ ತಾಯಿಯನ್ನು ಕಾಡುತ್ತೀಯಂತೆ, ನಿಜವೆ?” ಎಂದು ಕೇಳಿದರು. “ಹೌದು ಸ್ವಾಮಿ” ಎಂದು ಹುಡುಗನು ನಾಚಿಕೆಯಿಂದ ತಲೆತಗ್ಗಿಸಿ ನುಡಿದನು.
“ನೀನು ಜಾಣಮರಿ. ಈ ಮಿಠಾಯಿಗಳು ನಿನ್ನ ಹಲ್ಲುಗಳನ್ನು ಹಾಳುಮಾಡುತ್ತಿವೆಂದು ನೀನೂ ಬಲ್ಲೆ. ನಿನ್ನ ಬಗ್ಗೆ ತಾಯಿಗೆ ತುಂಬಾ ಚಿಂತೆಯಾಗಿದೆ. ನೀನು ಮಿಠಾಯಿ ಕೊಳ್ಳಲು ಹಣವನ್ನು ವೆಚ್ಚ ಮಾಡಿಸಿದರೆ ಅವಳು ನಿನ್ನ ಪುಸ್ತಕ, ಬಟ್ಟೆಬರೆಗಳಿಗೆ ಎಲ್ಲಿಂದ ಹಣ ತಂದಾಳು? ನೀನು ಮಾಡುತ್ತಿರುವುದು ತಪ್ಪಲ್ಲವೆ?”.
ಶ್ರೀ ರಾಮಕೃಷ್ಣರು ಈ ಮಾತುಗಳು ಹುಡುಗನ ಮನಸ್ಸನ್ನು ತಟ್ಟಿದುವು. ಅವರನ್ನು ನೋಡಿ “ಹೌದು ಸ್ವಾಮಿ,” ಎಂದಷ್ಟೇ ಹೇಳಿ ಸುಮ್ಮನಾದನು. “ಹಾಗಾದರೆ ಇಂದಿನಿಂದ ನೀನು ಮಿಠಾಯಿ ಬೇಡುವುದಿಲ್ಲವೆ?” ಮನಕರಗುವಂತೆ ಅಕ್ಕರೆಯಿಂದ ಶ್ರೀ ರಾಮಕೃಷ್ಣರು ಕೇಳಿದರು. ಮಗುವು ಮೃದುವಾಗಿ ನಕ್ಕು, “ಇಲ್ಲ ಸ್ವಾಮಿ ಇಂದಿನಿಂದ ಮಿಠಾಯಿಗೋಸ್ಕರ ಅಮ್ಮನನ್ನು ಹಿಂಸೆ ಮಾಡುವುದಿಲ್ಲ” ಎಂದನು. ಶ್ರೀ ರಾಮಕೃಷ್ಣರಿಗೆ ತುಂಬಾ ಸಂತೋಷವಾಯಿತು. ಹುಡುಗನನ್ನು ಹತ್ತಿರಕ್ಕೆ ಸೆಳೆದುಕೊಂಡು ಅವನ ಮೈದಡವುತ್ತಾ ಹೇಳಿದರು, “ನೀನು ತುಂಬಾ ಒಳ್ಳೆಯ ಹುಡುಗ. ನಿನಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಅನ್ನುವುದು ತಿಳಿದಿದೆ. ನಿಜವಾಗಿಯೂ ನೀನು ಸುಖವಾಗಿ ಬಾಳುವೆ,” ಹುಡುಗನು ನಮಸ್ಕಾರ ಮಾಡಿದನು. ಗುರುಗಳು ಆಶೀರ್ವದಿಸಿ ಬೇರೆ ಭಕ್ತರ ಕಡೆಗೆ ತಿರುಗಿದರು. ಹುಡುಗನು ಆಟವಾಡಲು ತೋಟಕ್ಕೆ ಹೋದನು.
ಆಗ ತಾಯಿಯು ಕೃತಜ್ಞತೆಯಿಂದ ಗುರುಗಳಿಗೆ ವಂದಿಸಿ ಕೇಳಿದಳು, “ಗುರುದೇವ, ಈ ಉಪದೇಶದ ಕೆಲವು ಮಾತುಗಳನ್ನು ಹೇಳಲು ನಮ್ಮನ್ನು ಎರಡು ವಾರ ಕಾಯಿಸಿದ್ದು ಏಕೆ?” ಶ್ರೀ ರಾಮಕೃಷ್ಣರು ನಗುತ್ತಾ ಉತ್ತರಿಸಿದರು, “ನೋಡು, ಈ ಎರಡು ವಾರಗಳ ಹಿಂದೆ ನೀನು ಬರುವಾಗ ನಾನೂ ಭಕ್ತರು ತಂದ ಮಿಠಾಯಿ ತಿನ್ನುತ್ತಿದ್ದೆ. ನಾನೇ ದಿನಾಲು ತಿನ್ನುತ್ತಿದ್ದ ಮಿಠಾಯಿಯನ್ನು ತಿನ್ನಬೇಡ ಎಂದು ನಿನ್ನ ಮಗನಿಗೆ ಹೇಗೆ ಹೇಳಲಿ? ಆದ್ದರಿಂದ ಅಂದಿನಿಂದಲೇ ನಾನು ಮಿಠಾಯಿ ತಿನ್ನುವುದನ್ನು ನಿಲ್ಲಿಸಿದೆ. ಇದರಿಂದಾಗಿ ನಾನು ಆಚರಿಸಿದ್ದನ್ನೇ ನಿನ್ನ ಮಗನಿಗೆ ಉಪದೇಶ ಮಾಡಲು ನನಗೆ ಶಕ್ತಿ ಬಂದಿತು. ನಾವು ಆಚರಿಸುವುದನ್ನೇ ಉಪದೇಶಿಸಿದಾಗ ನಮ್ಮ ಶಬ್ದಗಳು ಪ್ರಾಮಾಣಿಕವಾಗುತ್ತವೆ; ಕೇಳುವವರ ಅಂತಃಕರಣದ ಮೇಲೆ ಪ್ರಭಾವ ಬೀರುತ್ತವೆ.”
ಪ್ರಶ್ನೆಗಳು:
- ರಾಮಕೃಷ್ಣರು ಬಾಲಕನಿಗೆ ಮಿಠಾಯಿ ತಿನ್ನುವುದನ್ನು ನಿಲ್ಲಿಸಬೇಕು ಎಂದು ತಕ್ಷಣ ಉಪದೇಶಿಸದೆ, ತಾಯಿ ಮತ್ತು ಮಗನಿಗೆ ಎರಡು ವಾರಗಳ ನಂತರ ಬರಲು ಏಕೆ ಹೇಳಿದರು?
- ತಾವೇ ಆಚರಿಸದೆ, ಕೇವಲ ಉಪದೇಶಿಸಿದರೆ ಏನಾಗುತ್ತದೆ?
- ಈ ಕೆಳಗಿನ ವಿಷಯಗಳಲ್ಲಿ ನಿಮಗಾದ ಅನುಭವ ಬರೆಯಿರಿ.
- ಯಾರಾದರೂ ತಾವೇ ಸ್ವತಃ ಆಚರಿಸದೆ, ನಿಮಗೆ ಮಾಡಲು ಹೇಳಿದ್ದರೆ
- ತಾವು ಆಚರಿಸಿ, ನಿಮಗೆ ಮಾಡಲು ಹೇಳಿದ್ದರೆ, ಈ ಎರಡು ಪ್ರಕರಣಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಿದ್ದವು?