ತೃಪ್ತಿ ಮತ್ತು ಶಾಂತಿ
ಗೌತಮ ಬುದ್ಧನು ಒಂದು ದಿನ ಕಾಡುದಾರಿಯೊಂದರ ಮೂಲಕ ನಗರದ ಕಡೆಗೆ ಹೋಗುತ್ತಿದ್ದನು. ದಾರಿಯಲ್ಲಿ ತಣ್ಣನೆಯ ನೀರಿನ ತೊರೆಯೊಂದು ಹರಿಯುತ್ತಿತ್ತು. ಬುದ್ಧನು ಅದರಲ್ಲಿ ಕೈಕಾಲು ತೊಳೆದುಕೊಂಡು ಅಲ್ಲೇ ಪಕ್ಕದಲ್ಲಿದ್ದ ಮರದ ಕೆಳಗೆ ಭಗವಂತನನ್ನು ಕುರಿತು ಚಿಂತನೆ ಮಾಡುತ್ತಾ ಕುಳಿತುಕೊಂಡನು.
ಅದೇ ಮಾರ್ಗವಾಗಿ ಆ ಪ್ರದೇಶದ ರಾಜನು ಕುದುರೆಯ ಮೇಲೆ ಕುಳಿತು ಹೋಗುತ್ತಿದ್ದನು. ಸದಾ ಯುದ್ಧ, ರಾಜ್ಯ ವಿಸ್ತರಣೆ ಇವುಗಳಲ್ಲೇ ಮಗ್ನನಾಗಿದ್ದ ಆ ರಾಜನ ಹೃದಯದಲ್ಲಿ ದ್ವೇಷ, ಭಯ, ಅಸೂಯೆಗಳೇ ತುಂಬಿಕೊಂಡಿದ್ದವು. ಮರದ ಕೆಳಗೆ ಸನ್ಯಾಸಿಯೊಬ್ಬನು ಕಣ್ಣುಮುಚ್ಚಿ ಕುಳಿತುಕೊಂಡು ವಿಶ್ರಾಂತಿ ಪಡೆಯುತ್ತಿರುವುದನ್ನು ಕಂಡು ಆತನು ಕುದುರೆಯಿಂದಿಳಿದು ಬಂದು ಕೂಗಾಡತೊಡಗಿದನು, “ಎಲೋ ಸನ್ಯಾಸಿ, ಕಣ್ಣುತೆರೆ, ನಿನ್ನೆದುರಿಗೆ ಯಾರು ನಿಂತಿದ್ದಾರೆಂದು ನೋಡು. ರಾಜನಾದ ನಾನೇ ನಿನ್ನಂತೆ ಆಲಸಿಯಾಗಿ ಕುಳಿತುಕೊಳ್ಳುವುದಿಲ್ಲ. ನೀವು ಸನ್ಯಾಸಿಗಳು, ಇತರರ ದುಡಿಮೆಯಿಂದ ಬಂದ ಅನ್ನ ಉಂಡು ಸೋಮಾರಿತನವನ್ನೇ ಎಲ್ಲರಿಗೂ ಬೋಧಿಸುತ್ತೀರಿ.” ಹೀಗೆಯೇ ಸ್ವಲ್ಪ ಹೊತ್ತು ಬಾಯಿಗೆ ಬಂದಂತೆ ಬಯ್ದು ಬಯ್ದು ಕೊನೆಗೆ ದಣಿವಾಗಿ ಸುಮ್ಮನಾದನು.
ಅಲ್ಲಿಯವರಿಗೆ ಮೌನಿಯಾಗಿದ್ದ ಗೌತಮನು ಕಣ್ಣು ತೆರೆದು ಮುಗುಳ್ನಗುತ್ತಾ ರಾಜನನ್ನು ನೋಡಿ ಹೇಳಿದನು, “ಮಗು, ಕುಳಿತುಕೊ. ನೀನು ತುಂಬಾ ದಣಿದಂತೆ ತೋರುತ್ತದೆ. ಈ ತೊರೆಯಿಂದ ತಣ್ಣನೆಯ ನೀರು ತಂದುಕೊಡಲೆ?”.
ಬುದ್ಧನ ಈ ಮೃದು ವಚನಗಳನ್ನು ಕೇಳಿ ರಾಜನು ದಂಗಾದನು. ಈ ಸನ್ಯಾಸಿಯು ಮಹಾರಾಜ ಕುಮಾರ ಸಿದ್ಧಾರ್ಥನೇ ಇರಬೇಕೆಂದು ಅವನಿಗೆ ಅನಿಸಿತು. ಸಿದ್ಧಾರ್ಥನು ಸಮಸ್ತ ರಾಜ್ಯ ಭೋಗಗಳನ್ನು ತ್ಯಾಗ ಮಾಡಿ ಶಾಂತಿ ಬೋಧನೆಗಾಗಿ ಅರಮನೆಯನ್ನು ತೊರೆದು ಗೌತಮ ಬುದ್ಧನಾದ ವಿಷಯ ಅವನಿಗೆ ತಿಳಿದಿತ್ತು. ಸನ್ಯಾಸಿಯ ಪಾದಗಳಿಗೆ ಎರಗಿ ಅವನು ಪ್ರಾರ್ಥಿಸಿದನು, “ನನ್ನ ಅಪರಾಧವನ್ನು ಕೃಪೆಯಿಟ್ಟು ಮನ್ನಿಸಿ. ಕೋಪದಿಂದ ನಾನು ಅಷ್ಟೆಲ್ಲಾ ಮಾತನಾಡಿದರೂ ನೀವು ಶಾಂತರಾಗಿದ್ದುದು ಮಾತ್ರವಲ್ಲದೆ ನನ್ನನ್ನು ಪ್ರೀತಿಯಿಂದಲೇ ಮಾತನಾಡಿಸುತ್ತಿರುವಿರಲ್ಲ! ಇದು ಹೇಗೆ ಸಾಧ್ಯವಾಯಿತು, ದಯಮಾಡಿ ತಿಳಿಸಿರಿ.”
“ಮಗು, ನೀನು ಒಂದು ತಟ್ಟೆ ಮಿಠಾಯಿಯನ್ನು ಒಬ್ಬರಿಗೆ ಕೊಡಬಯಸಿದೆ ಎಂದು ತಿಳಿ, ಅದನ್ನು ಅವರು ಸ್ವೀಕರಿಸದೆ ಹೋದರೆ ಆ ಮಿಠಾಯಿ ಯಾರಿಗೆ ಹೋಗುತ್ತದೆ?” ರಾಜನು ತಕ್ಷಣವೇ ಹೇಳಿದನು, “ಕೊಟ್ಟವರಿಗೇ ಮರಳುತ್ತದೆ.”
“ಹಾಗಾದರೆ, ನೀನು ಆಡಿದ ಒಂದೇ ಒಂದು ಶಬ್ದವನ್ನೂ ನಾನು ಸ್ವೀಕರಿಸಲಿಲ್ಲ. ಹೀಗಿರುವಾಗ ಆ ಶಬ್ದಗಳು ನನ್ನನ್ನು ಹೇಗೆ ತಾನೆ ನೋಯಿಸಬಲ್ಲವು?”.
ರಾಜನಿಗೆ ಈಗ ಈ ಸನ್ಯಾಸಿಯು ಬುದ್ಧನೇ ಎಂದು ನಿಶ್ಚಯವಾಯಿತು. ತಲೆತಗ್ಗಿಸಿ ವಿನಯದಿಂದ ಅವನು ನುಡಿದನು, “ಭಗವನ್, ದಯವಿಟ್ಟು ನನಗೆ ನಿಜವಾದ ಸುಖದ ದಾರಿಯನ್ನು ತೋರಿಸಿ.” ಬುದ್ಧನ ಕಣ್ಣಿನಲ್ಲಿ ಸರ್ವಜ್ಞತೆಯ ಬೆಳಕು ತುಂಬಿತು. ಆತನು ನುಡಿದನು, “ಮಗು, ಕೋಪ, ಲೋಭ, ಅಸೂಯೆ, ಭಯ ಮೊದಲಾದ ರಾಗಾವೇಶಗಳು ಮನುಷ್ಯನ ಸುಖವನ್ನು ಹಾಳುಮಾಡುತ್ತವೆ. ಈ ಜೀವನದಲ್ಲಿ ಶಾಂತಿ ಪ್ರೇಮಗಳೇ ನಿಜಸುಖದ ಮೂಲಾಧಾರಗಳು. ಶಾಂತಿ ತೃಪ್ತಿಗಳಿಲ್ಲದವನೇ ಭಿಕ್ಷುಕನು. ಸದಾ ತೃಪ್ತಿ, ಶಾಂತಿ, ಸರ್ವ ಜೀವಿಗಳ ವಿಷಯದಲ್ಲಿ ಪ್ರೇಮ ಎಂಬ ಕಿರೀಟವನ್ನು ಧರಿಸುವವನೇ ನಿಜವಾದ ರಾಜಾಧಿರಾಜನು. ಏಕೆಂದರೆ, ಅವನೇ ಜೀವನದಲ್ಲಿ ನಿಜವಾದ ಸುಖವನ್ನು ಕಂಡುಕೊಂಡಿರುತ್ತಾನೆ.” ರಾಜನು ಕೃತಜ್ಞತೆಯಿಂದ ಬುದ್ಧನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು.
ಪ್ರಶ್ನೆಗಳು:
- ರಾಜನು ಗೌತಮ ಬುದ್ಧನ ಮೇಲೆ ಏಕೆ ಕೋಪಗೊಂಡನು? ಅವನು ಗೌತಮ ಬುದ್ಧನನ್ನು ಬಯ್ದದ್ದು ಸರಿಯೇ? ಅಥವಾ ತಪ್ಪೇ? ನಿಮ್ಮ ಉತ್ತರಗಳಿಗೆ ಕಾರಣ ಕೊಡಿ.
- ರಾಜನು ಬಯ್ಗುಳಗಳ ಮಳೆ ಸುರಿಸುತ್ತಿದ್ದರೂ ಬುದ್ಧನಿಗೆ ಶಾಂತನಾಗಿರುವುದು ಹೇಗೆ ಸಾಧ್ಯವಾಯಿತು?
- ಬುದ್ಧನು ರಾಜನಿಗೆ ಯಾವ ಸಲಹೆ ನೀಡಿದನು?