ಗರ್ವ ಕಲಿಸಿದ ಪಾಠ
ಒಂದು ಬಾರಿ ಇಂಗ್ಲೆಂಡ್ ನಲ್ಲಿ ನಡೆಯಲಿದ್ದ ಸಮ್ಮೇಳನದಲ್ಲಿ ಭಾಗವಹಿಸಲು ಗಾಂಧೀಜಿ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಒಂದು ದಿನ ಹಡಗಿನ ಮೇಲಂತಸ್ತಿನಲ್ಲಿ ಅವರು ಡೆಸ್ಕ್ ಮೇಲೆ ಕಾಗದವನ್ನು ಇಟ್ಟುಕೊಂಡು ಬರೆಯುತ್ತಾ ಕುಳಿತಿದ್ದರು. ಅಚ್ಚು ಕಟ್ಟಾಗಿ ಬಟ್ಟೆ ಧರಿಸಿದ್ದ ಒಬ್ಬ ಯುರೋಪಿಯನ್ ತರುಣ ಇದನ್ನು ನೋಡಿದನು. ಹಡಗಿನ ಇತರ ಎಲ್ಲ ಪ್ರಯಾಣಿಕರಿಗಿಂತ ಭಿನ್ನವಾಗಿ ಕಾಣುವ ಈ ವ್ಯಕ್ತಿಯ ಬಗ್ಗೆ ಅವನಿಗೆ ಮೋಜೆನಿಸಿತು.
ಗರ್ವದಿಂದ ಸೊಕ್ಕಿದ್ದ ಆ ತರುಣನು ತುಂಡು ಕಾಗದಗಳನ್ನು ಆರಿಸಿಕೊಂಡು ಅವುಗಳ ಮೇಲೆ ಅಪಮಾನಕರವಾದ ವಾಕ್ಯಗಳನ್ನು, ವ್ಯಂಗ್ಯಚಿತ್ರಗಳನ್ನು ಬರೆದು ಕೊಡಬೇಕೆಂದು ಹೊರಟನು. ಈ ಅರೆಬೆತ್ತಲೆಯ, ಬೋಳುತಲೆಯ, ಹಲ್ಲಿಲ್ಲದ ಮುದುಕನು ಇಂಗ್ಲೆಂಡ್ ಗೇಕೆ ಹೋಗಬೇಕು? ಈ ‘ಹುಚ್ಚುತನವನ್ನು ಒಡನೆಯೇ ಕೈಬಿಡಬೇಕೆಂದೂ ಬರೆದನು. ಆ ತುಂಡುಗಳನ್ನು ಒಟ್ಟುಗೂಡಿಸಿ ಗುಂಡುಸೂಜಿ ಚುಚ್ಚಿ ಹಿಡಿದುಕೊಂಡು ತನ್ನ ಕೋಣೆಯಿಂದ ಹೊರ ಬಂದನು.
ಹಡಗಿನ ಮೇಲಂತಸ್ತಿನಲ್ಲಿ ತಲೆಯನ್ನು ಮೇಲಕ್ಕೆತ್ತಿ ಗರ್ವದಿಂದ ನಡೆಯುತ್ತಾ ಗಾಂಧೀಜಿಯವರ ಡೆಸ್ಕ್ ಬಳಿ ಬಂದು ನಿಂತನು. ಪತ್ರ ಬರೆಯುತ್ತಿದ್ದ ಗಾಂಧೀಜಿ ತಲೆಯೆತ್ತಿ ನೋಡಿದರು. ಜಂಭದ ಆ ಯುರೋಪಿಯನ್ “ಕರಿಯ ಭಾರತೀಯನ” ಬಗೆಗೆ ತನ್ನ ತಿರಸ್ಕಾರವನ್ನು ತೋರಿಸುತ್ತಾ ವ್ಯಂಗ್ಯವಾಗಿ, “ಇದು ನಿಮಗೆ ಸ್ವಾರಸ್ಯಕರವೂ ಉಪಯುಕ್ತವೂ ಆಗಬಹುದು, ಇಟ್ಟುಕೊಳ್ಳಿ,” ಎಂದು ಹೇಳಿ ಆ ಕಟ್ಟನ್ನು ಗಾಂಧೀಜಿಗೆ ಕೊಟ್ಟನು.
ಸ್ವಲ್ಪ ದೂರ ಹೋಗಿ ಗಾಂಧೀಜಿ ಏನು ಮಾಡುವರು ನೋಡೋಣವೆಂದು ಕಾಯುತ್ತಾ ನಿಂತನು. ಗಾಂಧೀಜಿ ಶಾಂತ ಚಿತ್ತದಿಂದ ಅವನು ಬರೆದಿದ್ದ ಪ್ರತಿಯೊಂದು ಶಬ್ದವನ್ನೂ ಓದಿದರು. ತಲೆಯೆತ್ತಿ ಆ ತರುಣನ ಕಡೆಗೊಮ್ಮೆ ನೋಡಿದರು. ಆಮೇಲೆ ಆ ಕಾಗದದ ತುಂಡುಗಳಿಗೆ ಸಿಕ್ಕಿಸಿದ್ದ ಗುಂಡು ಸೂಜಿಯನ್ನು ಸಾವಕಾಶವಾಗಿ ತೆಗೆದು, ಕಾಗದದ ತುಂಡುಗಳನ್ನು ಕಸದ ಬುಟ್ಟಿಗೆ ಎಸೆದರು. ಮುಗುಳ್ನಗೆ ನಗುತ್ತಾ, “ನೀನು ಹೇಳಿದಂತೆಯೇ ಮಾಡಿದ್ದೇನೆ, ಧನ್ಯವಾದಗಳು,” ಎಂದು ಹೇಳಿ ಸುಮ್ಮನಾದರು.
ತರುಣ ಯುರೋಪಿಯನ್ ಗೆ ತನ್ನ ತಪ್ಪಿನ ಅರಿವಾಯಿತು. ತಾನು ಬರೆದುದನ್ನು ಓದಿ ಗಾಂಧೀಜಿ ಕೋಪದಿಂದ ಕೂಗಾಡುವರೆಂದು ಆತನು ಭಾವಿಸಿದ್ದನು. ಇದರಿಂದ ಹಡಗಿನಲ್ಲಿದ್ದ ಬಿಳಿಯ ಪ್ರಯಾಣಿಕರಿಗೆ ಒಳ್ಳೆಯ ಮನರಂಜನೆ ಆಗುವುದೆಂದು ಭಾವಿಸಿದ್ದನು. ಆದರೆ ಅದೆಲ್ಲ ತಲೆಕೆಳಗಾಗಿ ಹೋಯಿತು. ಗಾಂಧೀಜಿ ಕೊಟ್ಟ ಚಿಕ್ಕದಾದರೂ ಮಧುರವಾದ ಉತ್ತರ ಅವನ ಅಂತಃಕರಣಕ್ಕೆ ನೇರವಾಗಿ ತಗುಲಿತು. ಅವರು ಎಷ್ಟು ಬುದ್ಧಿವಂತರೂ, ನಮ್ರರೂ, ಸುಸಂಸ್ಕೃತರೂ ಆಗಿದ್ದಾರೆ ಎಂಬುದನ್ನು ಈಗ ಅವನು ಅರಿತುಕೊಂಡನು. ನಾಚಿಕೆಯಿಂದ ಅವನ ತಲೆ ಬಾಗಿತು. ಸುಮ್ಮನೆ ಅಲ್ಲಿಂದ ಹೊರಟುಹೋದನು. ಗರ್ವವು ಅಂದು ಅವನಿಗೆ ಒಳ್ಳೆಯ ಪಾಠವನ್ನು ಕಲಿಸಿಕೊಟ್ಟಿತ್ತು.
ಪ್ರಶ್ನೆಗಳು:
- ಯುರೋಪಿಯನ್ ತರುಣ ಮಾಡಿದ ತಪ್ಪೇನು?
- ಗಾಂಧೀಜಿ ಅವನಿಗೆ ಯಾವ ಪಾಠ ಕಲಿಸಿದರು?
- ನಿಮ್ಮ ಸಹಪಾಠಿಯಬ್ಬ ನಿಮ್ಮನ್ನು ಮೂಖ ಎಂದು ಕರೆದರೆ, ನೀವು ಏನು ಮಾಡುವಿರಿ?