ಎಂತು ತಿನಿಸೋ ಅಂತು ಮನಸ್ಸು
ಮಹಾಭಾರತ ಯುದ್ಧದ ಹತ್ತನೆಯ ದಿವಸ ಭೀಷ್ಮರು ಸೋಲನ್ನಪ್ಪಿದರು. ಅಂದಿನಿಂದ ಕಾಳಗದ ಹದಿನೆಂಟನೆಯ ದಿನದವರೆಗೆ ಕೃಷ್ಣನು ಅನೇಕ ಸನ್ನಿವೇಶಗಳನ್ನು ರೂಪಿಸುತ್ತಿದ್ದನು. ಆದರೆ ಭೀಷ್ಮರು ಮಾತ್ರ ಅರ್ಜುನನ ಬಾಣಗಳ ಅಘಾತದಿಂದ ತಾವೇ ರಚಿಸಿಕೊಂಡ ಶರಶಯ್ಯೆಯಲ್ಲಿ ಪವಡಿಸಿದರು. ಕಾಳಗದ ಕೊನೆಯ ದಿವಸ ಪಾಂಡವರು ವಿಜಯಿಗಳಾದ ಮೇಲೆ ದ್ರೌಪದಿ ಸಮೇತರಾಗಿ ಭೀಷ್ಮರ ದರ್ಶನಕ್ಕಾಗಿ ಬಂದರು. ಶರಶಯ್ಯೆಯಲ್ಲಿ ಬಿದ್ದ ಭೀಷ್ಮರು ಪಾಂಡವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ಧರ್ಮಬೋಧನೆಯನ್ನು ಮಾಡಿದರು. ಆ ಭಾಗವು ಶಾಂತಿಪರ್ವವೆಂಬ ಹೆಸರಿನಿಂದ ಖ್ಯಾತವಾಗಿದೆ. ಅದಕ್ಕೆ ಸಂಬಂಧಪಟ್ಟಂತೆ, ಶಾಂತಿಪರ್ವದಲ್ಲಿ ಶಾಂತಿಗೆ ಸಂಬಂಧಪಟ್ಟ ಧರ್ಮಬೋಧನೆಯನ್ನು ಭೀಷ್ಮರು ಮಾಡುತ್ತಿರುವಾಗ ಯಾವುದೋ ಒಂದು ಯೋಚನೆ ದ್ರೌಪದಿಯ ಮನದಲ್ಲಿ ಮೂಡಿ ಬಂದು, ಒಮ್ಮೆಲೇ ಗಟ್ಟಿಯಾಗಿ ನಕ್ಕಳು. ಇದರಿಂದ ಎಲ್ಲರ ಗಮನ ಅವಳ ಕಡೆ ಹೋಯಿತು. ಹಿರಿಯರ ಎದುರಿನಲ್ಲಿ ದ್ರೌಪದಿ ಹೀಗೆ ಗಟ್ಟಿಯಾಗಿ ನಕ್ಕದ್ದು ತಕ್ಕದ್ದಲ್ಲವೆಂದು ಪಾಂಡವರಿಗೆ ಅನಿಸಿತು.
ಎಲ್ಲವನ್ನು ಬಲ್ಲ ಭೀಷ್ಮರು ಪಾಂಡವರ ಮನದ ಗೊಂದಲವನ್ನರಿತು, ಅದಕ್ಕೆ ಯೋಗ್ಯವಾದ ವಿವರಣೆಯನ್ನು ಕೊಡ ಬಯಸಿ, ದ್ರೌಪದಿಯನ್ನು ಹತ್ತಿರ ಬರಲು ಹೇಳಿದರು. ಅವರು ಅವಳಿಗೆ ದೀರ್ಘ ಸುಮಂಗಲಿಯಾಗುವಂತೆ ಆಶೀರ್ವದಿಸಿದರು. ಸರಿಯಾದ ಕಾರಣವಿಲ್ಲದೆ ದ್ರೌಪದಿಯು ಯಾವ ಕಾಯವನ್ನೂ ಮಾಡುವವಳಲ್ಲವೆಂದೂ ಅವಳು ಗಟ್ಟಿಯಾಗಿ ನಕ್ಕ ಕಾರಣವನ್ನು ವಿವರಿಸಿ, ಅವಳ ಗಂಡಂದಿರ ಸಂದೇಹವನ್ನು ನಿವಾರಿಸಬೇಕೆಂದು ಕೇಳಿಕೊಂಡರು. ಅತ್ಯಂತ ಗೌರವ ಪೂರ್ವಕವಾಗಿ ವಿನಯದಿಂದ ದ್ರೌಪದಿಯು ಭೀಷ್ಮರನ್ನು ಸಂಬೋಧಿಸಿ ಹೇಳಿದಳು, “ದುಯೋಧನನ ಆಸ್ಥಾನದಲ್ಲಿ ನಾನು ಅವಮಾನಿತಳಾಗುತ್ತಿರುವ ಸಂದರ್ಭದಲ್ಲಿ ನೀತಿಧರ್ಮಗಳ ಬಗೆಗೆ ಒಂದು ಶಬ್ದವನ್ನೂ ಆಡಲಿಲ್ಲ ಮತ್ತು ನನ್ನ ಗಂಡಂದಿರು ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡುವಾಗ ಈ ನೀತಿ ಬೋಧನೆಯನ್ನು ನೀವು ಮಾಡಲಿಲ್ಲ. ಇಂದು ಪಾಂಡವರು ಧರ್ಮದ ಪ್ರತಿಮೂರ್ತಿಗಳೇ ಆಗಿ ನಿಂತಿರುವಾಗ, ನೀವು ಅವರಿಗೆ, ಶಾಂತಿಯ ಬೆಲೆಯನ್ನು ಈಗ ಬೋಧಿಸುತ್ತಿರುವಿರಿ. ಯಾರಿಗೆ ಅದನ್ನು ಕಲಿಯುವ ಅಗತ್ಯ ಈಗ ಇಲ್ಲವೋ ಅಂಥವರಿಗೆ ನೀವು ಯಾಕೆ ಕಲಿಸುತ್ತಿರುವಿರಿ? ಇದನ್ನು ನೀವು ದುರ್ಯೋಧನ ಮತ್ತು ಅವನ ಸಂಗಡಿಗರಿಗೆ ಕಲಿಸಬೇಕಾಗಿತ್ತು. ಇಂಥ ವಿಚಾರ ನನ್ನ ಮನದಲ್ಲಿ ಬಂದಾಗ ನನಗೆ ನಗು ಬಂತು. ಅದೊಂದೇ ಅಲ್ಲ.
ಅಂದು ಧರ್ಮರಾಜನು ಜೂಜಾಟದಲ್ಲಿ ತನ್ನ ಸರ್ವಸ್ವವನ್ನೂ ಕಳೆದುಕೊಂಡು ತಾನೇ ಪಣಕ್ಕಿಟ್ಟುಕೊಂಡು ಸೋತ ನಂತರ ನನ್ನನ್ನು ಪಣಕ್ಕಿಟ್ಟ. ಆ ಸಮಯದಲ್ಲಿ ಪಾಂಡವರು ವನವಾಸಕ್ಕೆ ಹೊರಡಬೇಕೆಂದು ನಿರ್ಣಯವಾಗಿ ನನ್ನನ್ನು ಅವಮಾನಿತಳನ್ನಾಗಿ ಮಾಡಿದಾಗ ಅದು ಧರ್ಮವೇ? ಉತ್ತಮ ನಡತೆ ಮತ್ತು ಧರ್ಮದ ಪ್ರತಿಮೂರ್ತಿ ನೀವು. ಪಂದ್ಯದಲ್ಲಿ ತನ್ನನ್ನು ಪಣಕ್ಕಿಟ್ಟು ಸೋತ ಬಳಿಕ ನನ್ನನ್ನು ಪಣಕ್ಕಿಡುವ ಹಕ್ಕು ಅವನಿಗಿತ್ತೆಂದು ನೀವು ಭಾವಿಸುವಿರಾ? ಆ ಸಂದರ್ಭದಲ್ಲಿ ನಿಮ್ಮ ಆ ಹೆಗ್ಗಳಿಕೆಯ ಧರ್ಮನೀತಿ ಎಲ್ಲಾ ಎಲ್ಲಿ ಹೋಗಿತ್ತು? ಎರಡನೆಯದಾಗಿ ತಾನೇ ಪಂದ್ಯದಲ್ಲಿ ಸೋತರೂ ನನ್ನನ್ನು ಪಣಕ್ಕೆ ಇಟ್ಟನು. ಇದನ್ನು ಮಾಡಲು ಅವನಿಗೆ ಯಾವ ಅರ್ಹತೆಯೂ ಇರಲಿಲ್ಲ. ಆ ದಿನವೇ ನಿಮ್ಮನ್ನು ನಾನು ಕೇಳಿದೆ. ಧರ್ಮರಾಜನು ತಾನು ಮೊದಲು ಪಂಥವನ್ನು ಸೋತು ನನ್ನನ್ನು ಪಣಕ್ಕಿಟ್ಟನೋ ಮೊದಲು ನನ್ನನ್ನು ಪಣಕ್ಕಿಟ್ಟ ನಂತರ ತಾನು ಪಣದಲ್ಲಿ ಸೋತನೋ ಎಂದು.
ಆಗ ನೀವು ನನಗೆ ಯಾವ ಉತ್ತರವನ್ನು ನೀಡಲಿಲ್ಲ. ಅಂದು ನಿಮ್ಮ ಧರ್ಮಪ್ರಜ್ಞೆ ಎಲ್ಲಿ ಹೋಗಿತ್ತು? ಇಂದು ಅದರ ಅವಶ್ಯಕತೆಯೇ ಇಲ್ಲದಿರುವ ಈ ಸಂದರ್ಭದಲ್ಲಿ ಅದೆಲ್ಲವನ್ನೂ ಪಾಂಡವರಿಗೆ ಬೋಧಿಸುತ್ತಿರುವಿರಿ ನೀವು. ಇದು ನಿಜವಾಗಿಯೂ ಹಾಸ್ಯಾಸ್ಪದವಾದ ವಿಷಯವಾದ್ದರಿಂದ ನನಗೆ ನಗೆಯನ್ನು ಬರಿಸಿತು.” ಬದುಕು ಸಾವುಗಳ ಮಧ್ಯೆ ಡೋಲಾಯಮಾನ ಸ್ಥಿತಿಯಲ್ಲಿ ಭೀಷ್ಮರಿರುವಾಗ, ದ್ರೌಪದಿಯು ಅಷ್ಟು ಉಗ್ರವಾಗಿ ವಾದಿಸುವುದು ಮತ್ತು ಅಸಂದರ್ಭೋಚಿತವಾದ ಪ್ರಶ್ನೆಗಳನ್ನು ಕೇಳುವುದು ಧರ್ಮರಾಜನನ್ನು ವ್ಯಗ್ರನನ್ನಾಗಿ ಮಾಡಿತು. ಹಾಗಿದ್ದರೂ ಭೀಷ್ಮರು ಜೋರಾಗಿ ನಕ್ಕು ದ್ರೌಪದಿಯನ್ನು, ಅಂಥ ಪ್ರಶ್ನೆಗಳನ್ನು ಕೇಳಿದ್ದಕ್ಕೆ ತುಂಬಾ ಹೊಗಳಿದರು. ಮತ್ತು ಪ್ರಶ್ನೆಗಳಿಗೆ ಉತ್ತರ ನೀಡಬೇಕಾದದ್ದು ಮುಂಬರುವ ಕಲಿಯುಗಕ್ಕೆ ಹೆಚ್ಚು ಅಗತ್ಯವೆಂದು ಹೇಳಿ ಪಾಂಡವರಿಗೆ ಸಮಾಧಾನವನ್ನು ತಾಳಲು ತಿಳಿಸಿದರು. ಅವರು ಹೇಳಿದರು: “ಎಷ್ಟೋ ವರ್ಷಗಳ ಕಾಲ ನಾನು ದುಷ್ಟ ಹಾಗೂ ಪಾಪಿಗಳಾದ ರಾಜರ ಸೇವೆಯನ್ನು ಮಾಡುತ್ತಲಿದ್ದೆ ಮತ್ತು ಅವರ ಅನ್ನವನ್ನುಂಡು ಜೀವಿಸುತ್ತಲಿದ್ದೆ. ಆದ್ದರಿಂದ ನನ್ನಲ್ಲಿರುವ ನೀತಿ ಧರ್ಮಗಳು ಮುಳುಗಿಹೋಗಿದ್ದವು. ನಿನ್ನ ಪತಿ ಅರ್ಜುನನ ಕೈಯಿಂದ ನನ್ನ ದೇಹದಲ್ಲಿ ಚುಚ್ಚಲ್ಪಟ್ಟ ಬಾಣಗಳ ಆಘಾತದ ಪರಿಣಾಮವಾಗಿ ನನ್ನಲ್ಲಿರುವ ಎಲ್ಲ ಕೆಟ್ಟ ರಕ್ತವು ಸೋರಿ ಹೋಗಿವೆ. ಮತ್ತು ಮುಳುಗಿಹೋಗಿದ್ದ ಧರ್ಮವು ಮೇಲೆ ಬಂದದ್ದರಿಂದ ನಾನು ಯೋಗ್ಯ ನಡತೆಯ ಅವಶ್ಯಕತೆಯ ಬಗ್ಗೆ ಉಪದೇಶವನ್ನು ನೀಡುತ್ತಿರುವೆನು.” ಭೀಷ್ಮೋಪದೇಶದ ಈ ಶಾಂತಿಪರ್ವದಿಂದ ನಾವು ಒಂದು ಪಾಠವನ್ನು ಕಲಿಯುತ್ತೇವೆ. ದುರ್ನಡತೆ ಮತ್ತು ದುಷ್ಟಮಾರ್ಗದಿಂದ ಸಂಗ್ರಹಿಸಿದ ಹಣದಿಂದ ಉನ್ನತ ಸ್ಥಿತಿಗೇರಿದವನಲ್ಲಿರುವ ಉತ್ತಮ ಗುಣಗಳು ಕೆಟ್ಟು ರಕ್ತದ ಹೆಚ್ಚಳದಲ್ಲಿ ಮುಳುಗಿಹೋಗುತ್ತವೆ. ಈ ಸಂದರ್ಭವನ್ನು ಅನುಸರಿಸಿಯೇ ಕೃಷ್ಣನು ಬೋಧಿಸಿದ್ದು ಪಾತ್ರ ಶುದ್ಧಿಯಾದಾಗ ಪಾಕಶುದ್ಧಿ ತಾನಾಗಿ ಆಗುವುದು.
ಈ ಸಂಭಾಷಣೆಯಲ್ಲಿ ಭೀಷ್ಮರು ಜಗತ್ತಿಗೆ ಒಂದು ಆದರ್ಶವನ್ನು ನೀಡಿದ್ದಾರೆ. ಅದೆಂದರೆ ನೀವು ತೆಗೆದುಕೊಳ್ಳುವ ಆಹಾರದಲ್ಲಿಯೂ ಕೆಲವು ದುಷ್ಟಗುಣಗಳು ಸೇರುವ ಸಾಧ್ಯತೆ ಉಂಟು. ನಾವು ತೆಗೆದುಕೊಳ್ಳುವ ಆಹಾರದಿಂದ ನಮ್ಮಲ್ಲಿ ವಿಚಾರಗಳು ಬರುತ್ತವೆ. ನಮ್ಮಲ್ಲಿ ಉದ್ಭವಿಸುವ ವಿಚಾರಗಳಿಂದ ನಮ್ಮ ನಡತೆ ರೂಪಗೊಳ್ಳುತ್ತದೆ. ನಮ್ಮ ನಡತೆಯಿಂದ ನಮ್ಮಲ್ಲಿ ಒಳ್ಳೆಯ ಮತ್ತು ಕೆಟ್ಟಗುಣಗಳು ಹೊರಬೀಳುತ್ತವೆ. ಹೀಗೆ ಯೋಗ್ಯವಾದ ಉಪದೇಶವನ್ನು ಪಾಂಡವರಿಗೆ ನೀಡಿದ್ದಾದ ಮೇಲೆ ಭೀಷ್ಮರು ಸಕಾಲವೆಂದು ತಮ್ಮ ಪ್ರಾಣವನ್ನು ತೊರೆದರು.