ಧರ್ಮರಾಜನ ಬುದ್ಧಿ ಮತ್ತೆ



ಧರ್ಮರಾಜ ಅಥವಾ ಯುಧಿಷ್ಠಿರನು ಪಾಂಡವರ ಹಿರಿಯಣ್ಣನು. ಧರ್ಮವೇ ರೂಪವೆತ್ತಿ ಬಂದಂತೆ ಧಾರ್ಮಿಕ ನಡತೆಯನ್ನೇ ಆಶ್ರಯಿಸಿಕೊಂಡಿರುವವನು. ಇದನ್ನು ನಿದರ್ಶಿಸುವ ಅನೇಕ ಸನ್ನಿವೇಶಗಳು ಮಹಾಭಾರತದಲ್ಲಿ ಇವೆ. ಅವುಗಳಲ್ಲಿ ಒಂದು ಉಪಾಖ್ಯಾನ ಸಾಕ್ಷಾತ್ ಯಮಧರ್ಮರಾಜನು ಅಸಾಧಾರಣ ಪರಿಸ್ಥಿತಿಯಲ್ಲಿ ಅವನೆದುರು ಬಂದು ಪರೀಕ್ಷಿಸಿದ್ದು.
ಒಮ್ಮೆ ಪಾಂಡವರು ಅರಣ್ಯದಲ್ಲಿ ಅಡ್ಡಾಡುತ್ತಿರುವಾಗ ಅವರಿಗೆ ಅತೀವ ಬಾಯಾರಿಕೆಯಾಯಿತು. ಅನತಿ ದೂರದಲ್ಲಿ ಒಂದು ನೀರಿನ ಕೊಳ ಇದೆ ಎಂಬುದನ್ನು ಕಿರಿಯವನಾದ ಸಹದೇವನು ಮರದ ಮೇಲೇರಿ ನೋಡಿದನು. ತನ್ನ ಸೋದರರಿಗೆಲ್ಲಾ ಅಲ್ಲಿಯೇ ಕಾಯಲು ಹೇಳಿ ತಾನು ನೋಡಿದ ದಿಕ್ಕಿನ ಕಡೆಗೆ ಧಾವಿಸಿ ಹೋದನು. ಕೊಳವನ್ನು ಕಂಡಾಕ್ಷಣ ಮೊದಲು ತನ್ನ ತೃಷೆಯನ್ನು ಹೋಗಲಾಡಿಸಿ, ಅನಂತರ ಕೊಡದಲ್ಲಿ ನೀರು ತುಂಬಿಕೊಳ್ಳಲು ನಿಶ್ಚಯಿಸಿದನು.
ಆದರೆ ಅವನು ಕೊಳದಲ್ಲಿ ಇಳಿಯುವಷ್ಟರಲ್ಲಿ ಒಂದು ಧ್ವನಿ ಕೇಳಿಸಿತು. “ನಿಲ್ಲು, ಈ ಕೊಳವನ್ನು ಕಾಯುತ್ತಿರುವ ಯಕ್ಷ ನಾನು. ನನ್ನ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಲ್ಲದೆ ನೀನು ನೀರು ಕುಡಿಯಲು ಸಾಧ್ಯವಿಲ್ಲ.” ಸಹದೇವನು ಆ ಅಧಿಕಾರವಾಣಿಯನ್ನು ನಿರ್ಲಕ್ಷಿಸಿ ಸ್ವಲ್ಪ ನೀರನ್ನು ಗುಟುಕರಿಸಿದನು. ತಕ್ಷಣ ಮತ್ತೇರಿದವನಾಗಿ ಆ ಕೊಳದ ದಂಡೆಯ ಮೇಲೆ ಬಿದ್ದು ಮೃತನಾದನು.
ಸ್ವಲ್ಪ ಹೊತ್ತಿನ ತರುವಾಯ ತನ್ನ ತಮ್ಮನನ್ನು ಹುಡುಕುತ್ತಾ ಬಂದು ನಕುಲನು ಅದೇ ಗತಿಯನ್ನು ಪಡೆದನು. ಅದರಂತೆ ಅರ್ಜುನ ಭೀಮರು ಸಹ ಮೃತರಾದರು.
ಕಟ್ಟಕಡೆಗೆ ಯುಧಿಷ್ಠಿರನು ಕೊಳದ ಬಳಿ ಬಂದನು. ತನ್ನ ನಾಲ್ವರು ಸೋದರರು ಮೃತರಾಗಿ ಬಿದ್ದುದನ್ನು ಕಂಡು ಬೆರಗಾದನು. ಸಾವಕಾಶವಾಗಿ ಕೊಳದ ಬಳಿ ಹೊರಟಾಗ ಯಕ್ಷನ ಧ್ವನಿ ಅವನಿಗೆ ಕೇಳಿಸಿತು. ಧರ್ಮರಾಜನು ಅಲ್ಲಿಯೇ ತಡೆದು ಯಕ್ಷ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಾಗಿ ನಿಂತನು. ಯಕ್ಷನು ಅನೇಕ ಪ್ರಶ್ನೆಗಳನ್ನು ಕೇಳಿದನು. ಕೆಲವು ಪ್ರಶ್ನೆಗಳಿಗೆ ಧರ್ಮರಾಜನು ನೀಡಿದ ಉತ್ತರಗಳು ಹೀಗಿದ್ದವು:
ಯಕ್ಷನು ಈ ಉತ್ತರಗಳಿಂದ ಸುಪ್ರೀತನಾಗಿ ವರವನ್ನು ದಯಪಾಲಿಸಿದನು. ಅವನು ಒಬ್ಬ ಸೋದರನಿಗೆ ಜೀವದಾನ ಕೊಡುವುದಾಗಿಯೂ ಅವರಲ್ಲಿ ಒಬ್ಬನನ್ನು ಆರಿಸಿಕೊಳ್ಳೆಂದು ಧರ್ಮರಾಜನನ್ನು ಕೇಳಿದನು.
ಯುಧಿಷ್ಠಿರನು ನಕುಲನನ್ನು ಆರಿಸಿಕೊಂಡನು. ನಕುಲನನ್ನೇ ಯಾತಕ್ಕೆ ಆರಿಸಿದೆಯೆಂದು ಕೇಳಲಾಗಿ ಅವನು ಹೀಗೆ ವಿವರಿಸಿ ಹೇಳಿದನು. ನನ್ನ ತಂದೆಗೆ ಇಬ್ಬರು ಪತ್ನಿಯರು, ಕುಂತಿಯ ಮಕ್ಕಳಲ್ಲಿ ತಾನು ಒಬ್ಬನಾದರೂ ಜೀವಿಸಿದ್ದೇನೆ. ಆದರೆ ಮಾದ್ರಿಯ ಇಬ್ಬರು ಮಕ್ಕಳೂ ಮರಣಿಸಿದ್ದಾರೆ. ಮಾತೆಯರಿಬ್ಬರಿಗೂ ಸಮಾನವಾದ ನ್ಯಾಯವನ್ನು ದೊರಕಿಸಿ ಕೊಡುವ ಕಾರಣದಿಂದ ನಾನು ನಕುಲನನ್ನು ಆರಿಸಿಕೊಂಡೆ.”
ತಕ್ಷಣ ಯಕ್ಷನು ನ್ಯಾಯದೇವತೆಯಾದ ಯಮಧರ್ಮನಾಗಿ ರೂಪ ತಾಳಿದನು. ಅವನು ಧರ್ಮರಾಜನ ಬುದ್ಧಿಮತ್ತೆ ಮತ್ತು ಉದಾರ ಚಾರಿತ್ರ್ಯವನ್ನು ಪ್ರಶಂಸಿಸಿದನು. ಪಾಂಡವರೆಲ್ಲರಿಗೂ ಜೀವದಾನ ನೀಡಿ ಯಶಸ್ಸು ಹಾಗೂ ಸುಖ ಪ್ರಾಪ್ತಿಯಾಗಲೆಂದು ಹರಸಿದನು.