ಮಾತೆ ದ್ರೌಪದಿ
ಉನ್ನತ ಆದರ್ಶಗಳಿಂದೊಡಗೂಡಿದ ದಿವ್ಯ ಜೀವನವನ್ನು ಪಾಂಡು ರಾಜಕುಮಾರರಾದ ಪಾಂಡವರು ನಡೆಸಿದರು. ಸನಾತನ ಧರ್ಮ ಸಿದ್ಧಾಂತವನ್ನು ಸಂಪೂರ್ಣವಾಗಿ ಪ್ರೀತಿಸುವ ಅವರು ದಾನ, ಧರ್ಮ ಮತ್ತು ಧೈಯಗಳ ಪ್ರತಿಮೂರ್ತಿಗಳಾಗಿದ್ದರು. ಜೀವನದ ಪ್ರತಿಯೊಂದು ಸನ್ನಿವೇಶದಲ್ಲಿಯೂ ಕೃಷ್ಣನ ಮಾರ್ಗದರ್ಶನವನ್ನೇ ಪಡೆಯುವ ಅವರು ಕೃಷ್ಣನ ಪರಮಭಕ್ತರಾಗಿದ್ದರು. ಸಹನೆ, ಶಾಂತಿ ಮತ್ತು ಸ್ಥಿರಬುದ್ಧಿ-ಇವು ಆ ಸಹೋದರರಲ್ಲಿ ಎದ್ದು ಕಾಣುವ ಮುಖ್ಯ ಲಕ್ಷಣಗಳಾಗಿದ್ದವು. ಪಾಂಡವರ ಪತ್ನಿಯಾದ ದ್ರೌಪದಿಯು ಧರ್ಮಾಚರಣೆಯಲ್ಲಿ ಕಡಿಮೆಯವಳೇನೂ ಆಗಿರಲಿಲ್ಲ.
ಮಹಾಭಾರತ ಯುದ್ಧದ ಪ್ರಸಂಗದಲ್ಲಿ ಮಧ್ಯರಾತ್ರಿಯ ಸಮಯದಲ್ಲಿ ತಮ್ಮ ಶಿಬಿರದಲ್ಲಿ ಮಲಗಿ ನಿದ್ರಿಸುತ್ತಿದ್ದ ಪಾಂಡವರ ಮಕ್ಕಳಾದ ಉಪಪಾಂಡವರೆಲ್ಲರನ್ನು ಕೌರವ ಶಿಬಿರದಲ್ಲಿದ್ದ ಶೂರಸೇನಾನಿ ಅಶ್ವತ್ಥಾಮನು ಕೊಂದು ಹಾಕಿದನು. ಪಾಂಡವರಿಗೆ ಧನುರ್ವಿದ್ಯೆಯನ್ನು ಕಲಿಸಿದ, ಗುರುವಾಗಿ ಅರ್ಜುನನ್ನು ಯೋಗ್ಯ ಧನುರ್ಧಾರಿಯಾಗಿಸಿದ ದ್ರೋಣಾಚಾಯರ ಮಗನೇ ಅಶ್ವತ್ಥಾಮನು. ಆದರೆ ನಿದ್ರಿಸಿರುವ ಶತ್ರುಗಳ ಮಕ್ಕಳನ್ನು ಸಂಹರಿಸಿದ್ದು ಕ್ರೂರ ಮತ್ತು ನಿರ್ದಯವಾದ ಕೃತ್ಯವಾಗಿತ್ತು.
ದುಃಖಾತಿರೇಕದಿಂದ ಕುಗ್ಗಿದ ಪಾಂಡವ ಸಹೋದರರೆಲ್ಲರೂ ಈ ಭೀಕರವಾದ ಆಕಸ್ಮಿಕ ಸನ್ನಿವೇಶವನ್ನು ದ್ರೌಪದಿಗೆ ಹೇಗೆ ತಿಳಿಸುವುದೆಂಬ ಸಮಸ್ಯೆಯಲ್ಲಿ ಮುಳುಗಿದ್ದರು. ಅಶ್ವತ್ಥಾಮನನ್ನೇ ಅವಳೆದುರು ನಿಲ್ಲಿಸಿ ಬಿಡುವುದು, ಆಗ ಅವನನ್ನು ಶಿಕ್ಷಿಸುವ ಸ್ವಾತಂತ್ರ್ಯವನ್ನು ಅವಳೇ ಸ್ವತಃ ನಿರ್ಣಯಿಸಲಿ. ಅದೇ ಸರಿಯಾದ ಮಾರ್ಗ ಎಂದು ಯೋಚಿಸಿದರು. ಭೀಮನು ಅತ್ಯಂತ ಕೋಪೋದ್ರಿಕ್ತನಾಗಿ ಮತ್ಸರದಿಂದ ಸೇಡು ತೀರಿಸಿಕೊಳ್ಳಲು ಆವೇಶದಿಂದ ಕಂಪಿಸುತ್ತಾ ಅವನನ್ನು ಎಳೆದುಕೊಂಡು ಹೋಗಿ ದ್ರೌಪದಿಯೆದುರಿಗೆ ನಿಲ್ಲಿಸಿ ಗರ್ಜಿಸಿದನು. “ಓ ಉಪಪಾಂಡವರ ಮಾತೆಯೇ, ನಿನ್ನ ಮಕ್ಕಳನ್ನು ಸಂಹರಿಸಿದ ಕ್ರೂರ ಕೊಲೆಪಾತಕಿ ಈ ಅಶ್ವತ್ಥಾಮ. ಇವನನ್ನು ನಿನ್ನೆದುರು ತಂದಿದ್ದೇನೆ. ನಿನಗಿಷ್ಟವಾದ ರೀತಿಯಲ್ಲಿ ನೀನು ಅವನನ್ನು ಶಿಕ್ಷಿಸಬಹುದು,” ಎಂದನು.
ತನ್ನ ಮಕ್ಕಳ ಮರಣದ ದಾರುಣವಾರ್ತೆಯನ್ನು ಆಗ ತಾನೇ ದ್ರೌಪದಿಯು ಕೇಳಿದ್ದು ಅವಳ ಶೋಕ ಮೇರೆ ಮೀರಿತ್ತು. ಅವಳಿಂದ ತಡೆದುಕೊಳ್ಳಲು ಅಸಾಧ್ಯವಾಯಿತು. ಆಕೆಯ ಆಕ್ರೋಶ -ವಿಲಾಪಗಳು ಅಲ್ಲಿದ್ದ ಪ್ರತಿಯೊಬ್ಬರ ಹೃದಯವನ್ನು ಕಲಕಿದವು. ಈ ಯಾತನೆಯಿಂದ ಅವಳನ್ನು ಸಾಂತ್ವನಗೊಳಿಸಲು ಯಾರಿಗೂ ಧೈರ್ಯ ಉಂಟಾಗಲಿಲ್ಲ.
ಆದರೆ ಅಶ್ವತ್ಥಾಮನನ್ನು ಅವಳ ಎದುರು ತಂದು ನಿಲ್ಲಿಸಿದಾಗ ದ್ರೌಪದಿಯು ತಾನೇ ಸಮಾಧಾನ ತಂದುಕೊಂಡು ದೈನ್ಯಳಾಗಿ ಅವನನ್ನು ಕೆಲಕಾಲ ದಿಟ್ಟಿಸಿ ನೋಡಿ ಆಡಿದ ಆ ದುಃಖತಪ್ತ ಮಾತುಗಳು ಕೊಲೆಗಡುಕನ ಹೃದಯವನ್ನು ಸಹ ಕಲಕಿದವಂಥವುಗಳಾಗಿದ್ದವು. ನಿಧಾನವಾಗಿ ಮತ್ತು ತುಂಬ ಕಷ್ಟಪಟ್ಟು ಅವಳು ಹೇಳಿದಳು, “ನನ್ನ ಮಕ್ಕಳು ನಿನಗೇನು ತೊಂದರೆ ಮಾಡಿದ್ದವು? ಗಾಢನಿದ್ರೆಯಲ್ಲಿ ಅವರಿರುವಾಗ ನೀನವರನ್ನು ಕೊಂದೆ ನೀನು ಪಾಂಡವರ ಗುರುವಿನ ಮಗ, ಆ ಉಪಪಾಂಡವರಿಗೆ ನೀನು ಗುರುವಿನ ಸ್ಥಾನದಲ್ಲಿ ಇರಬೇಕಾದವನು, ಇಂಥ ಚಿಕ್ಕ ಪ್ರಾಯದಲ್ಲಿ ಮುಗ್ಧರಾದ ಆ ನನ್ನ ಮಕ್ಕಳನ್ನು ಕೊಲ್ಲುವ ಈ ಕ್ರೂರ ಮತ್ತು ನೀಚ ಕೃತ್ಯದಿಂದ ನಿನಗೇನು ಪ್ರಯೋಜನವಾಯಿತು? ನಿನಗೆ ಕೆಡಕಾಗುವಂತಹ ಯಾವ ಕಾಯವನ್ನೂ ಅವರು ಮಾಡಿರಲಿಲ್ಲ. ಇದು ನಿನ್ನ ಯೋಗ್ಯತೆಗೆ ಸರಿಯಾದ ಕಾಯವೇ?”
ದ್ರೌಪದಿಯು ಅಶ್ವತ್ಥಾಮನೊಂದಿಗೆ ಇಷ್ಟು ಸಮಾಧಾನಕರವಾಗಿ ಮಾತನಾಡುತ್ತಿರುವುದನ್ನು ಕೇಳಿ ಭೀಮಾರ್ಜುನರಿಗೆ ಸಹನೆ ಮೀರಿತು.
ದ್ರೌಪದಿಯ ಈ ಶಾಂತ ಮನೋಭಾವವನ್ನು ಕಂಡು ಭೀಮನಿಗೆ ಅತ್ಯಂತ ಆಶ್ಚಯವಾಯಿತು. ಮಕ್ಕಳನ್ನು ಕಳೆದುಕೊಂಡು ಅವಳ ದುಃಖವು ಅವಳನ್ನು ಹುಚ್ಚಳನ್ನಾಗಿಸಬಹುದೆಂದು ಅವನು ಭಾವಿಸಿದ್ದನು. ಇಲ್ಲದಿದ್ದರೆ ತನ್ನ ಎಲ್ಲ ಮಕ್ಕಳನ್ನು ಕೊಂದಂಥ ಕೊಲೆಪಾತಕಿಯನ್ನು ಎದುರಿಗೆ ತಂದು ನಿಲ್ಲಿಸಿದರೂ ನಿಜವಾದ ತಾಯಿಯಾದವಳು ಇಂಥ ಸಹನಶೀಲತೆಯನ್ನು ತೋರುವುದನ್ನು ನೋಡಿ ಅವನಿಗೆ ನಂಬಲು ಸಾಧ್ಯವಾಗಲಿಲ್ಲ.
ಉಗ್ರಕೋಪ ಮತ್ತು ವ್ಯಸನದಿಂದ ತಪ್ತನಾದ ಅವನು ಹೆಚ್ಚು ಸಹಿಸಲು ಶಕ್ತನಾಗದೆ ಅವನನ್ನು ತಕ್ಷಣ ಅಲ್ಲೇ ಕೊಲ್ಲಲು ಬಯಸಿದನು. ಆದರೆ ದ್ರೌಪದಿಯು ಅವನನ್ನು ತಡೆದಳು. ಅಶ್ವತ್ಥಾಮನನ್ನು ಸಮೀಪಿಸಲು ಭೀಮನು ಹೊರಟಾಗ ದ್ರೌಪದಿಯು ಅವನನ್ನು ಅಡ್ಡಗಟ್ಟಿದಳು. ಆಗ ಅವಳು ಆಡಿದ ಮಾತುಗಳು ಹೃದಯವಿದ್ರಾವಕ ಮತ್ತು ಇಡೀ ವಿಶ್ವವನ್ನೇ ಮೂಕವಿಸ್ಮಿತವಾಗುವಂತೆ ಮಾಡಿದವು. ಅಲ್ಲದೆ ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಶತ್ರುವನ್ನು ಕೊಲೆಗಡುಕನಾದ ಅಶ್ವತ್ಥಾಮನನ್ನು ಕೊಂದವು. ಅವಳಲ್ಲಿರುವ ಮಾತೃತ್ವವು ಎಚ್ಚರಗೊಂಡು ಕೊಲೆಗಡುಕನ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳಬೇಕೆಂಬ ಬಗ್ಗೆ ಮಾರ್ಗದರ್ಶನವನ್ನಿತ್ತು ನಿರ್ಣಯವನ್ನು ಕೈಗೊಳ್ಳುವಂತೆ ಮಾಡಿತು. ದ್ರೌಪದಿಯ ವಿವೇಕವೇ ಗೆದ್ದಿತು.
ಇನ್ನೊಬ್ಬ ತಾಯಿಯು ಮಗನನ್ನು ಕಳೆದುಕೊಂಡು ದುಃಖಿಸುವ ಯೋಚನೆಯನ್ನು ಕೂಡ ದ್ರೌಪದಿ ಕೇಳಲು ಸಿದ್ಧಳಿರಲಿಲ್ಲ.
“ಓ ಭೀಮನೇ, ದಯವಿಟ್ಟು ಅವನನ್ನು ಕೊಲ್ಲಬೇಡ. ಅವನ ತಾಯಿ ಕೃಷಿಯು ಈಗಾಗಲೇ ತನ್ನ ಗಂಡ ದ್ರೋಣಾಚಾಯರ ಮರಣ ದುಃಖವನ್ನು ಅನುಭವಿಸುತ್ತಿದ್ದಾಳೆ. ಈಗ ಅಶ್ವತ್ಥಾಮನನ್ನು ಕೊಲ್ಲುವುದರಿಂದ ನೀನು ಕೊಡುವ ಶಿಕ್ಷೆ ಆ ನಿರಪರಾಧಿಯಾದ ತಾಯಿಗಷ್ಟೇ ಹೊರತು ಅವನಿಗಲ್ಲ. ನನ್ನ ಮುಗ್ಧ ಮಕ್ಕಳಿಗಾಗಿ ನನ್ನ ಹೃದಯ ಕರಗುವಂತೆ ನೀನು ಒಂದು ಮಾತೃ ಹೃದಯವನ್ನು ವಿದ್ರವಿಸುವಂತೆ ಮಾಡುವೆ. ಮುಗ್ಧ ಮಾತೆಯ ದುಃಖವನ್ನು ಹೆಚ್ಚಾಗುವಂತೆ ಮಾಡುವ ಎಂಥ ಕಾಯವೇ ಆಗಲಿ ಅದು ಯೋಗ್ಯವಲ್ಲ. ತನ್ನ ಪಾಪಕರ್ಮಗಳ ಫಲವನ್ನು ಅನುಭವಿಸಿ, ತನ್ನ ಘೋರ ಪಾಪಗಳ ಬಗ್ಗೆ ಪಶ್ಚಾತ್ತಾಪ ಪಡಲು ಅರಣ್ಯದಲ್ಲಿ ಅವನನ್ನು ಒಂಟಿಯಾಗಿ ಬಿಟ್ಟುಬಿಡು.”
“ನಿನ್ನ ಗುರುಗಳ ಮಗನನ್ನು, ಭಯಭೀತನಾಗಿರುವವನನ್ನು, ನಿನ್ನ ಆಶ್ರಯ ಬಯಸಿ ಬಂದವನನ್ನು, ಕುಡಿದು ಮತ್ತನಾಗಿ ತನ್ನನ್ನೇ ತಾನು ಮರೆತವನನ್ನು ಕೊಲ್ಲುವುದು ನಿನಗೆ ಸರಿಯಲ್ಲ,” ಎಂದು ಅವಳು ಮತ್ತೆ ಭೀಮನಿಗೆ ಹೇಳಿದಳು. ಧರ್ಮನೀತಿಯ ರಕ್ಷಣೆಗೋಸುಗ ತನ್ನ ಗಂಡಂದಿರನ್ನು ಸಹ ವಿರೋಧಿಸುವಂಥ ಮಹಾಸತಿಯಾಗಿದ್ದವಳು ದ್ರೌಪದಿ. ತನ್ನ ನಡತೆಯಿಂದ ಯಾರಿಗೂ ನೋವು ಉಂಟಾಗಬಾರದೆಂಬುದೇ ಅವಳ ಇಚ್ಛೆಯಾಗಿತ್ತು.
ಪೈಶಾಚಿಕ ರೀತಿಯಲ್ಲಿ ಕ್ರೂರತನದಿಂದ ಉಪ-ಪಾಂಡವರನ್ನು ಸಂಹರಿಸಿದಂಥ ಅಶ್ವತ್ಥಾಮನನ್ನು ಕ್ಷಮಿಸಿದ್ದು ದ್ರೌಪದಿಯಲ್ಲಿ ಅಡಗಿದ್ದ ಮಾತೃ ಹೃದಯವೇ.