ಕರ್ಣನ ಅಚಲ ಮನೋಭಾವ
ಪವಿತ್ರ ಗ್ರಂಥವಾದ ಮಹಾಭಾರತದಲ್ಲಿ ಅನೇಕ ಪ್ರಸಿದ್ಧರಾದ ವ್ಯಕ್ತಿಗಳಿದ್ದಾರೆ. ಆದರೆ ಅವುಗಳಲ್ಲಿ ಕರ್ಣನ ವ್ಯಕ್ತಿತ್ವ ಅತ್ಯಂತ ಮೇಲ್ಮಟ್ಟದಲ್ಲಿ ನಿಲ್ಲುತ್ತದೆ. ಅವನಲ್ಲಿ ಅನೇಕ ಉದಾತ್ತ ಗುಣಗಳಿವೆ. ಅವು ಅನುಕರಿಸಲು ಯೋಗ್ಯವಾದವುಗಳು.
ಅಂಗದೇಶದ ಯುವರಾಜನಾದ ಕರ್ಣನು ತನ್ನ ದಾನಶೂರತೆಗೆ ಖ್ಯಾತನಾದವನು. ಯಾರು ಏನನ್ನೇ ಕೇಳಿದರೂ ಅವನು ಅವರಿಗೆ ಇಲ್ಲವೆಂದು ಹೇಳುತ್ತಿರಲಿಲ್ಲ. ಅವನು ಅರ್ಜುನನಿಗೆ ಭೀಕರ ಸ್ಪರ್ಧಾಳುವಾಗುವನೆಂಬ ವಿಷಯ ಇಂದ್ರನ ದೂರದೃಷ್ಟಿಗೆ ಅರಿವಾಗಿತ್ತು. ಆದ್ದರಿಂದ ಅವನೊಂದು ಯೋಜನೆಯನ್ನು ಹಾಕಿದನು. ಒಂದು ದಿನ ಅವನು ಒಬ್ಬ ಬ್ರಾಹ್ಮಣನ ವೇಷಧರಿಸಿ ಕರ್ಣನಲ್ಲಿಗೆ ಹೋದನು.
ಬ್ರಾಹ್ಮಣನನ್ನು ಕಂಡಾಕ್ಷಣ ಕರ್ಣನು ತನ್ನ ಆಸನದಿಂದೆದ್ದು ಅವನಿಗೆ ಯೋಗ್ಯಾಸನವನ್ನು ನೀಡಿದನು. ಈ ಬ್ರಾಹ್ಮಣ ಇಂದ್ರನಲ್ಲದೆ ಬೇರೆ ಯಾರೂ ಅಲ್ಲ ಎಂಬುದು ಆತನಿಗೆ ತಿಳಿದಿತ್ತು. “ಆಹಾ! ಪೂಜ್ಯ ಬ್ರಾಹ್ಮಣರೇ, ತಮಗಾಗಿ ನಾನೇನು ಮಾಡಲಿ?” ಎಂದು ಕರ್ಣನು ಕೇಳಿದನು. ಆಗ ಇಂದ್ರನು “ಅಂಗರಾಜ, ನನ್ನ ಆಶೀರ್ವಾದ ನಿನಗಿದೆ. ನಾನು ನಿನ್ನ ದಾನಶೂರತ್ವದ ಬಗ್ಗೆ ಕೇಳಿದ್ದೇನೆ. ನಾನೊಬ್ಬ ಬಡ ಬ್ರಾಹ್ಮಣ. ನಿನ್ನ ಅನುಗ್ರಹವನ್ನು ಪಡೆಯಲು ಬಂದಿದ್ದೇನೆ,” ಎಂದನು.
ಹಿಂದಿನ ರಾತ್ರಿ ಕರ್ಣನು ಒಂದು ಕನಸು ಕಂಡಿದ್ದ. ಅದರಲ್ಲಿ ಸೂರ್ಯದೇವನು ಬಂದು, ಸನ್ನಿಹಿತವಾಗಿರುವ ಇಂದ್ರನ ಆಗಮನವನ್ನೂ ಮತ್ತು ಅದರ ಉದ್ದೇಶವನ್ನು ತಿಳಿಸಿ ಎಚ್ಚರಿಕೆ ನೀಡಿದ್ದನು. ಆದರೆ ದಾನಪ್ರಸಂಗದಲ್ಲಿ ಕರ್ಣನು ಅವುಗಳನ್ನೆಲ್ಲಾ ಲೆಕ್ಕಿಸುತ್ತಿರಲಿಲ್ಲ. ಆದ್ದರಿಂದ ಅವನು ವಿಪ್ರನಿಗೆ ಹೇಳಿದನು: “ಪೂಜ್ಯರೇ, ನೀವು ದೇವರಾಜ ಇಂದ್ರರೆಂದು ನನಗೆ ಗೊತ್ತು. ನನ್ನಿಂದ ಏನನ್ನೋ ಅಪಹರಿಸಿಕೊಂಡು ಹೋಗಲು ನೀವು ಬಂದಿದ್ದೀರಿ. ಅದರಿಂದ ಅರ್ಜುನನಿಗೆ ಲಾಭವಿದೆ. ಆದರೆ ನೀವು ಅಪೇಕ್ಷಿಸಿದ ಯಾವ ವಸ್ತುವೇ ಆಗಲೀ ನಾನು ಕೊಡದೆ ನನ್ನ ಮಾತನ್ನು ಹಿಂತೆಗೆದುಕೊಳ್ಳಲಾರೆ.”
ಇಂದ್ರನು ಯಾವ ತರ್ಕಗಳಿಗೂ ಆಸ್ಪದವೀಯದೇ ಕರ್ಣನ ಕವಚ ಕುಂಡಲಗಳನ್ನು ಬೇಡಿದನು. ಆ ಕವಚ ಕುಂಡಲಗಳಿಲ್ಲದಿದ್ದರೆ ತನ್ನ ಅರ್ಧಶಕ್ತಿ ಸಾಮರ್ಥ್ಯಗಳು ನಶಿಸಿ ಹೋಗುವುದೆಂದು ತಿಳಿದಾಗ್ಯೂ ಕರ್ಣನು ಇಂದ್ರನ ಬೇಡಿಕೆಗೆ ಸ್ವಲ್ಪವೂ ಹಿಂದೆ ಮುಂದೆ ನೋಡದೆ ಕೂಡಲೇ ಅವುಗಳನ್ನು ಕಳಚಿಕೊಟ್ಟು ಬಿಟ್ಟನು. ದೇವೇಂದ್ರನು ಸಂತುಷ್ಟನಾಗಿ ಬಲಾಢ್ಯವಾದ ಶಕ್ತ್ಯಾಯುಧವನ್ನು ವರವಾಗಿ ಅನುಗ್ರಹಿಸಿದನು. ಆದರೆ ಒಂದು ಶರತ್ತಿನ ಮೇಲೆ, ಅದೇನೆಂದರೆ ಅಸ್ತ್ರವನ್ನು ಕೇವಲ ಒಬ್ಬನ ಮೇಲೆ ಒಮ್ಮೆ ಮಾತ್ರ ಪ್ರಯೋಗಿಸತಕ್ಕದ್ದು.
ಕರ್ಣನಿಗೆ ತನ್ನ ಆಪ್ತಮಿತ್ರನಾದ ದುರ್ಯೋಧನನ ಬಗ್ಗೆ ಹೆಚ್ಚಿನ ಪ್ರೀತಿ ಇತ್ತು. ಕಾರಣ ಅವನು ಈತನಿಗೆ ಅಂಗದೇಶದ ಸರ್ವಾಧಿಕಾರವನ್ನು ನೀಡಿ ಅಂಗರಾಜನೆಂಬ ಬಿರುದನ್ನು ಕೊಟ್ಟಿದ್ದನು. ಆದ್ದರಿಂದ ಎಂಥ ಪರಿಸ್ಥಿತಿಯಲ್ಲಿಯೂ ತನ್ನ ಸರ್ವಸ್ವವನ್ನೂ ಅವನಿಗಾಗಿ ತ್ಯಾಗಮಾಡಲು ಕರ್ಣನು ನಿರ್ಧರಿಸಿದ್ದನು.
ಧೃತರಾಷ್ಟ್ರ ಓಲಗದಲ್ಲಿ ಸಂಧಿಕಾರವು ವಿಫಲವಾದಾಗ ಕೃಷ್ಣನು ಕೌರವರ ಪಕ್ಷದಿಂದ ಕರ್ಣನನ್ನು ವಿಮುಖನನ್ನಾಗಿಸುವ ತಂತ್ರವನ್ನು ಯೋಚಿಸಿದನು. ಹಸ್ತಿನಾಪುರವನ್ನು ಬಿಟ್ಟು ಹೋಗುವ ಪೂರ್ವದಲ್ಲಿ ಕೌರವರ ಅರಮನೆಗೆ ಹೋಗಿ ಅವನೊಬ್ಬನನ್ನೇ ಪ್ರತ್ಯೇಕವಾಗಿ ಕರೆದು ಮಾತನಾಡಿದನು.
ಕರ್ಣನು ಅವನನ್ನು ತುಂಬು ಗೌರವದಿಂದ ಬರಮಾಡಿಕೊಂಡು ಗೌರವಿಸಿ ಯೋಗ್ಯ ಆಸನವನ್ನು ಕೊಟ್ಟು ಸತ್ಕರಿಸಿದನು. ಕೃಷ್ಣನು ತನ್ನ ಸಂತೋಷವನ್ನು ವ್ಯಕ್ತಪಡಿಸಿ ಅವನನ್ನುದ್ದೇಶಿಸಿ ಮಾತನಾಡಿದನು: “ಓ ನನ್ನ ಪ್ರೀತಿಯ ಭಾವ.” ಈ ಪ್ರಕಾರದ ಪ್ರೀತಿಯ ಸಂಭೋದನೆಯನ್ನು ಕೇಳಿದಾಕ್ಷಣ ಕರ್ಣನಿಗೆ ಏಕೋ ಒಂದು ಬಗೆಯ ವಿಲಕ್ಷಣವೆನಿಸಿತು. ಆದರೂ ತನ್ನ ಭಾವನೆಗಳನ್ನು ಬದಿಗೊತ್ತಿ ಕೃಷ್ಣನ ಆತ್ಮೀಯ ಸಲ್ಲಾಪಗಳಿಗೆ ಕಿವಿಕೊಟ್ಟು ಕೇಳುತ್ತಾ ಅವನು ಆಗಮನದ ಕಾರಣವೇನೆಂದು ವಿಚಾರಿಸಿದನು. “ಪ್ರಿಯ ಕೃಷ್ಣ ನಾನೇನಾದರೂ ನಿನ್ನ ಸೇವೆ ಮಾಡಲು ಸಾಧ್ಯವೇ?” ಎಂದು ಕೇಳಿದನು.
“ಓ ಪ್ರೀತಿಯ ಭಾವ, ನಿನ್ನ ಉದಾತ್ತ ಗುಣಗಳನ್ನು ನಾನು ಬಲ್ಲೆ. ಆದ್ದರಿಂದಲೇ ನಿನ್ನೊಡನೆ ವೈಯಕ್ತಿಕ ಕೆಲವು ವಿಷಯಗಳನ್ನು ಮಾತನಾಡಲು ಬಂದೆ” ಎಂದು ಹೇಳಿ ಕೃಷ್ಣನು ಮಾತನ್ನು ಮುಂದುವರಿಸಿದನು. “ನನ್ನ ಪ್ರೀತಿಯ ಕರ್ಣನೆ, ಬಹುಶಃ ನೀನು ಅರಿಯದೆ ಇರುವ ನಿನ್ನ ಕರ್ತವ್ಯವನ್ನು ನಿನಗೆ ನೆನಪು ಮಾಡಿಕೊಡಲು ನಾನು ಬಂದೆ.”
ಅದೇನೆಂದು ಕರ್ಣ ಕೇಳಿದನು.
ಅತ್ಯಂತ ಗೋಪ್ಯವಾಗಿರಿಸಿದ ಒಂದು ಸಂಗತಿಯನ್ನು ನಿನಗೆ ಬಹಿರಂಗಪಡಿಸುತ್ತೇನೆ. ಸೂಯದೇವನ ಅನುಗ್ರಹದಿಂದ ಕುಂತಿಗೆ ಜನಿಸಿದ ಪುತ್ರ ನೀನು. ಆದರೆ ನಿಂದೆಗೆ ಗುರಿಯಾದೇನೆಂಬ ಭಯದಿಂದ ನೀನು ಮಗುವಿದ್ದಾಗಲೇ ನಿನ್ನನ್ನು ಗಂಗಾ ನದಿಯಲ್ಲಿ ತೇಲಿಬಿಟ್ಟು ನಿನ್ನ ತಾಯಿ ನಿನ್ನಿಂದ ಬೇರೆಯಾದಳು. ರಥದ ಸಾರಥಿಯೋವನು ತನ್ನ ಹೆಂಡತಿ ರಾಧೆಯೊಡಗೂಡಿ ನಿನ್ನನ್ನು ಎತ್ತಿಕೊಂಡು ಬಂದು ಸಾಕಿದರು. ಆ ಸತ್ಯವನ್ನು ಅರಿತು ನಿನ್ನ ನಿಜವಾದ ತಮ್ಮಂದಿರಾದ ಪಾಂಡವರೊಡನೆ ಕೂಡುವ ಕಾಲ ನಿನಗೀಗ ಬಂದಿದೆ. ಪಾಂಡವರು ನೀತಿವಂತರು, ಪುಣ್ಯಶೀಲರು, ಮತ್ತು ಕೌರವರು. ತಮ್ಮ ಕಾಯಗಳಲ್ಲಿ ಅನೀತಿಯುಳ್ಳವರು. ಎಂಬುದು ನಿನಗೆ ಗೊತ್ತಿದೆ. ನೀನು ಪ್ರಾಮಾಣಿಕ ವ್ಯಕ್ತಿ ನನಗಿದು ಪೂರ್ಣಗೊತ್ತಿದೆ. ಆದ್ದರಿಂದ ನೀನು ಅಧರ್ಮವನ್ನು ಬಿಡು ಮತ್ತು ಧರ್ಮದ ಕಡೆಗೆ ಸೇರು. ಈ ಕರ್ತವ್ಯ ನಿಷ್ಠೆಯಿಂದ ನೀನು ನಿನ್ನ ತಾಯಿ ಕುಂತಿಯನ್ನು ಕೂಡ ಸಂತೋಷಪಡಿಸಬಲ್ಲೆ.”
ಆದರೆ ಕರ್ಣನಲ್ಲಿ ತನ್ನದೇ ಆದ ಪ್ರತ್ಯೇಕ ನಡತೆ, ನಿಷ್ಠೆ ಇತ್ತು. ಅವನು ಹೇಳಿದನು. “ಹೇ ಕೃಷ್ಣಾ, ನೀನು ಸ್ವಯಂ ಭಗವಂತನೇ ಆಗಿರುವೆ. ನಿನಗೆ ತಿಳಿಯದೇ ಇರುವ ಧರ್ಮವಾವುದೂ ಇಲ್ಲ. ನನ್ನ ಈಗಿನ ಈ ಸ್ಥಿತಿಗತಿಗಳಿಗಾಗಿ ನಾನು ದುರ್ಯೋಧನನಿಗೆ ತುಂಬ ಋಣಬದ್ಧನಾಗಿದ್ದೇನೆ. ಅದಕ್ಕಿಂತ ಮೇಲಾಗಿ ನಾವಿಬ್ಬರೂ ಪರಮಮಿತ್ರರು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಅವನ ಸಹವಾಸದಿಂದ ನಾನು ಬೇರೆಯಾದರೆ ಅವನು ತುಂಬಾ ನೊಂದುಕೊಳ್ಳುವನು.”
ಅನಂತರ ಕೃಷ್ಣನು ಕರ್ಣನನ್ನು ಪ್ರಲೋಭನೆಗೆ ಗುರಿಮಾಡಲು ಪ್ರಯತ್ನಿಸಿದನು. “ಕರ್ಣ, ಧರ್ಮಜ ಮತ್ತು ಅವನ ನಾಲ್ವರು ತಮ್ಮಂದಿರು ನಿನ್ನನ್ನು ತಮ್ಮ ಹಿರಿಯಣ್ಣನೆಂದು ಸ್ವೀಕರಿಸಲು ಅತ್ಯಂತ ಸಂತೋಷಪಡುವರು ಮತ್ತು ನಿನ್ನನ್ನು ಸಾಮ್ರಾಟನೆಂದು ಪಟ್ಟಾಭಿಷಿಕ್ತನನ್ನಾಗಿಸುವರು.”
ಆದರೆ ಕರ್ಣನು ಈ ವಿಲೋಭನೆಗೆ ಒಳಗಾಗಲಿಲ್ಲ. “ಕೃಷ್ಣಾ, ನನಗೆ ಉಪಕಾರ ಮಾಡಿದವನ ಪಾಲಿಗೆ ನಾನು ಕರ್ತವ್ಯಚ್ಯುತನಾಗಲಾರ ಮತ್ತು ಸನ್ನಿಹಿತವಾಗಿರುವ ಯುದ್ಧ ಪ್ರಸಂಗದಲ್ಲಿ ನನ್ನ ಅವಶ್ಯಕತೆ ದುರ್ಯೋಧನನಿಗೆ ಅಗತ್ಯವಾಗಿರುವಾಗ ಅವನ ಪಕ್ಷವನ್ನು ಬಿಟ್ಟು ನಾನು ಬರಲಾರೆ. ನನ್ನನ್ನು ಕ್ಷಮಿಸು. ನಾನು ಸಫಲನಾದೇನು ಅಥವಾ ಸತ್ತೇನು. ಆದರೆ ನನ್ನ ವೈಯಕ್ತಿಕ ಘನತೆ, ಕೀರ್ತಿ, ಸುಖಗಳಿಗಾಗಿ ನಾನು ಕೌರವರ ಪಕ್ಷವನ್ನು ಬಿಡುವುದಿಲ್ಲ. ಕೊನೆಯಲ್ಲಿ ಪಾಂಡವರೇ ಗೆಲ್ಲುವರೆಂದು ನಾನು ಬಲ್ಲೆ. ಆದರೆ ಅದು ನನ್ನ ದೃಢನಿರ್ಧಾರವನ್ನು ಮಾತ್ರ ಬದಲಿಸಲು ಸಾಧ್ಯವಿಲ್ಲ.”
ಇನ್ನು ಹೆಚ್ಚು ಮೋಹಕ್ಕೀಡು ಮಾಡಲು ಸಾಧ್ಯವಿಲ್ಲವೆಂದು ಮನಗಂಡ ಕೃಷ್ಣನು ಕರ್ಣನಿಂದ ಬೀಳ್ಕೊಂಡನು.
ಕೆಲವು ದಿನಗಳ ತರವಾಯ ಕುಂತಿಯೇ ಸ್ವಯಂ ಕರ್ಣನಲ್ಲಿ ಬಂದು ಕೌರವರ ಪಕ್ಷವನ್ನು ಬಿಟ್ಟು ಪಾಂಡವರನ್ನು ಸೇರಿಕೊಳ್ಳಲು ಅವನನ್ನು ಒತ್ತಾಯ ಪಡಿಸಿದಳು. ಆದರೆ ಕರ್ಣನ ದೃಢನಿಶ್ಚಯವು ಅಚಲವಾಗಿತ್ತು. ಹಾಗಿದ್ದರೂ ಅವನು ತನ್ನ ತಾಯಿಗೆ ಮುಂಬರುವ ಯುದ್ಧದಲ್ಲಿ ಪಾಂಡವರಲ್ಲಿ ಕೇವಲ ಒಬ್ಬನನ್ನು ಮಾತ್ರ ಕೊಲ್ಲುವೆನೆಂದೂ ಕುಂತಿಗೆ ಹೇಗೂ ಐವರು ಮಕ್ಕಳು ಜೀವಂತವಾಗಿರುತ್ತಾರೆಂದೂ ಅಭಯವನ್ನಿತ್ತನು.
ಪ್ರಶ್ನೆಗಳು:
- ತನ್ನ ಮಗನಿಗೆ ಲಾಭವಾಗುವಂಥ ಯಾವ ಉಪಾಯವನ್ನು ಇಂದ್ರನು ಯೋಚಿಸಿದನು?
- ಕೃಷ್ಣನು ಕರ್ಣನನ್ನು ಹೇಗೆ ಪರೀಕ್ಷಿಸಿದನು?
- ಕರ್ಣನಲ್ಲಿ ಇದ್ದ ಶ್ರೇಷ್ಠ ಗುಣಗಳು ಯಾವುವು?