ಮಯೂರಧ್ವಜನ ಭಕ್ತಿ – ಅರ್ಜುನನ ಗರ್ವಭಂಗ
ಒಮ್ಮೆ ಧರ್ಮರಾಜನು ಅಶ್ವಮೇಧಯಾಗವನ್ನು ಕೈಕೊಂಡು ಯಜ್ಞಾಶ್ವವನ್ನು ದೇಶ ಸಂಚಾರಕ್ಕಾಗಿ ಬಿಟ್ಟಿದ್ದನು. ಅಶ್ವಮೇಧಯಾಗದ ನಿಯಮದ ಪ್ರಕಾರ ಹೀಗೆ ಬಿಟ್ಟ ಯಜ್ಞಾಶ್ವವನ್ನು ಯಾರಾದರೂ ಬಂಧಿಸಿದರೆ ಅದರ ವಾರಸುದಾರನು ಅವರ ಮೇಲೆ ಯುದ್ಧಕ್ಕೆ ಹೋಗಬೇಕು. ಈ ಯುದ್ಧದಲ್ಲಿ ಸೋತವನು ತನ್ನ ರಾಜ್ಯವನ್ನು ಗೆದ್ದವನಿಗೆ ಒಪ್ಪಿಸಬೇಕು. ಈ ಕಡ್ಡಾಯವನ್ನು ಅರಿತ ಮಯೂರಧ್ವಜನೆಂಬ ರಾಜನು ಅರ್ಜುನನ ಯಜ್ಞಾಶ್ವವನ್ನು ಕಟ್ಟಿಹಾಕಿದನು. ಕೃಷ್ಣಾರ್ಜುನರು ಅಶ್ವವನ್ನು ಹುಡುಕುತ್ತಾ ಹೊರಟವರು. ಮಯೂರಧ್ವಜ ರಾಜನು ಅದನ್ನು ಕಟ್ಟಿ ಹಾಕಿರುವುದನ್ನು ಪತ್ತೆ ಮಾಡಿದರು.
ಈಗ ಅವರಿಬ್ಬರೂ ಮಯೂರಧ್ವಜನೊಂದಿಗೆ ಯುದ್ಧ ಹೂಡುವುದೋ ಬೇಡವೋ ಎಂಬ ಬಗ್ಗೆ ಯೋಚಿಸತೊಡಗಿದರು. ಮಯೂರಧ್ವಜನು ಸಾಮಾನ್ಯ ವ್ಯಕ್ತಿಯಲ್ಲವೆಂದೂ ತನ್ನ ಪರಮಭಕ್ತನೆಂದೂ ಕೃಷ್ಣನು ಅರ್ಜುನನಿಗೆ ತಿಳಿಸಿ, ಆತನೊಡನೆ ಅರ್ಜುನನು ಯುದ್ಧ ಮಾಡುವುದು ಅಷ್ಟು ಸುಲಭವಲ್ಲವೆಂದು ಹೇಳಿದನು. ಯಜ್ಞದ ಕುದುರೆಯನ್ನು ಆತನು ಕಟ್ಟಿಹಾಕಿದ್ದರಿಂದ ಅಶ್ವಮೇಧಯಾಗದ ನಿಯಮದ ಪ್ರಕಾರ ತಾನು ಅವನೊಂದಿಗೆ ಯುದ್ಧ ಮಾಡಲೇಬೇಕೆಂದು ಅರ್ಜುನನು ವಾದಿಸಿದನು. ಆಗ ಕೃಷ್ಣನು ಅರ್ಜುನನಿಗೆ ಯುದ್ಧಕ್ಕೆ ಅಪ್ಪಣೆಯನ್ನು ಕೊಟ್ಟನು.
ಅರ್ಜುನನು ಮಯೂರಧ್ವಜನೊಂದಿಗೆ ಘನ ಘೋರ ಯುದ್ಧವನ್ನು ಮಾಡಿದನು. ಆದರೆ ತನ್ನ ವಿರೋಧಿಯನ್ನು ಸೋಲಿಸಲು ಅವನಿಂದ ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ. ಆ ಸಂದರ್ಭದಲ್ಲಿ ಅವನ ತೀಕ್ಷ್ಣವಾದ ಗಾಂಡೀವ ಧನುಸ್ಸು ಕೂಡ ಮುರಿದು ಹೋಯಿತು. ಅರ್ಜುನನು ಕೃಷ್ಣನ ಸಹಾಯವನ್ನು ಕೋರಲಾಗಿ ಅವನೂ ಯುದ್ಧಕ್ಕೆ ಸಿದ್ಧನಾದನು. ಮಯೂರಧ್ವಜನಿಗೆ ಕೃಷ್ಣನ ಮಹಿಮೆ ಗೊತ್ತಿತ್ತೆಂಬುದರಲ್ಲಿ ಸಂದೇಹವೇ ಇಲ್ಲ. ಆದರೂ ನಿಯಮಗಳ ಪ್ರಕಾರ ಮಯೂರಧ್ವಜನು ಅದರಲ್ಲಿ ನಿಮಗ್ನವಾಗಬೇಕಿತ್ತು. ಆದ್ದರಿಂದ ಅವನು ತನ್ನ ಬತ್ತಳಿಕೆಯಿಂದ ಪ್ರತಿಯೊಂದು ಅಸ್ತ್ರವನ್ನೂ ತೆಗೆದು ಪವಿತ್ರವಾದ ಕೃಷ್ಣನಾಮವನ್ನು ಜಪಿಸುತ್ತಾ ಕೃಷ್ಣನ ಮೇಲೆ ಪ್ರಯೋಗಿಸುತ್ತಿದ್ದನು. ಆ ಬಾಣಗಳು ಅತ್ಯಂತ ಬಲಿಷ್ಠ ಹಾಗೂ ಪ್ರಭಾವಶಾಲಿಗಳಾಗಿದ್ದವು. ಆದ್ದರಿಂದ ಅವುಗಳನ್ನು ಎದುರಿಸಲಾಗದೆ ಕೃಷ್ಣನು ಅತ್ತಿಂದಿತ್ತ, ಇತ್ತಿಂದತ್ತ ಓಡಲು ಪ್ರಾರಂಭಿಸಿದನು.
ಅರ್ಜುನನು ಕೃಷ್ಣನನ್ನು ಕೂಗಿ ಕರೆದು ತನ್ನ ದಿವ್ಯವಾದ ಸುದರ್ಶನ ಚಕ್ರವನ್ನು ಮಯೂರಧ್ವಜನ ಮೇಲೆ ಪ್ರಯೋಗಿಸಲು ಸೂಚಿಸುತ್ತಿದ್ದನು. ಆದರೆ ಅರ್ಜುನನ ಗಾಂಡೀವವಾಗಲಿ ಕೃಷ್ಣನ ಚಕ್ರವಾಗಲಿ ಮಯೂರಧ್ವಜನ ವಿರುದ್ಧ ಯಾವ ಪರಿಣಾಮವನ್ನೂ ಮಾಡುವುದಿಲ್ಲವೆಂದು ಕೃಷ್ಣನು ಪ್ರತ್ಯುತ್ತರವನ್ನು ಕೊಟ್ಟನು. ಕೃಷ್ಣನ ಮಾತನ್ನು ಅರ್ಜುನನು ಹೆಚ್ಚು ಮುಖ್ಯವಾದುದೆಂದು ಭಾವಿಸದೆ ಕೃಷ್ಣನು ತಮಾಷೆಗಾಗಿ ಈ ಮಾತುಗಳನ್ನು ಆಡುತ್ತಿರುವನೆಂದೂ ಆತನಿಗೆ ಯುದ್ಧ ಮಾಡುವ ಮನಸ್ಸಿಲ್ಲವೆಂದೂ ಅಂದುಕೊಂಡನು. ಮಯೂರಧ್ವಜನು ನಿಜವಾಗಿಯೂ ಕೃಷ್ಣನ ಭಕ್ತನಾಗಿದ್ದರೆ ಕೃಷ್ಣನೊಂದಿಗೆ ಯುದ್ಧ ಮಾಡುತ್ತಿದ್ದನೆ? ಎಂದು ಅರ್ಜುನನು ಯೋಚಿಸಿ ಮಯೂರಧ್ವಜನು ನಿಜವಾದ ಭಕ್ತನಲ್ಲವೆಂದುಕೊಂಡನು. ಆದರೆ ಅವನು ಶ್ರೇಷ್ಠ ಭಕ್ತನೆಂಬುದನ್ನು ಪ್ರಾಯೋಗಿಕವಾಗಿ ಅರ್ಜುನನಿಗೆ ತೋರಿಸಬೇಕೆಂಬ ಇಚ್ಛೆ ಕೃಷ್ಣನದಾಗಿತ್ತು.
ಆದ್ದರಿಂದ ಕೃಷ್ಣಾರ್ಜುನರು ಬ್ರಾಹ್ಮಣ ವೇಷವನ್ನು ಧರಿಸಿ ಮಯೂರಧ್ವಜನ ಅರಮನೆಗೆ ಬಂದರು. ಸಂಪ್ರದಾಯದಂತೆ ಮನೆ ಯಜಮಾನನು ಅತಿಥಿಗಳನ್ನು ಸತ್ಕರಿಸುವುದು ಧರ್ಮ. ಈ ಧರ್ಮವನ್ನು ಪಾಲಿಸುವುದರಲ್ಲಿ ಮಯೂರಧ್ವಜನನ್ನು ಮೀರಿಸುವವರಾರೂ ಇರಲಿಲ್ಲ. ಬ್ರಾಹ್ಮಣದ್ವಯರು ಬರುತ್ತಿರುವುದನ್ನು ನೋಡಿದ ತಕ್ಷಣವೇ ಮಯೂರಧ್ವಜನು ತನ್ನ ರಾಜವೇಷವನ್ನು ತ್ಯಜಿಸಿ ಬ್ರಾಹ್ಮಣರಿಗೆ ತಕ್ಕುದಾದ ಉಡುಪನ್ನು ಧರಿಸಿದನು. ಅವನು ಜಲವನ್ನು ತಂದು ಅವರ ಪಾದಗಳನ್ನು ತೊಳೆದು ಅತಿಥಿಗಳಿಗೆ ಮಾಡಬೇಕಾದ ಯೋಗ್ಯ ಸನ್ಮಾನಗಳನ್ನು ಮಾಡಿದನು. ಅವರನ್ನು ತನ್ನ ಅತಿಥಿಗಳಾಗಿ ಇರಬೇಕೆಂದು ಪ್ರಾರ್ಥಿಸಿದನು. ಎಷ್ಟೋ ದಿನಗಳಿಂದ ಮಯೂರಧ್ವಜನ ಭಕ್ತಿಯ ಆಳವನ್ನು ಅರ್ಜುನನಿಗೆ ಮನವರಿಕೆ ಮಾಡಿಕೊಡಲು ಯೋಗ್ಯ ಸಮಯವನ್ನು ಕಾಯುತ್ತಿದ್ದ ಕೃಷ್ಣನಿಗೆ ಈಗ ಎಲ್ಲರೂ ಒಟ್ಟಿಗೆ ಸೇರುವ ಅವಕಾಶ ಸಿಕ್ಕಿತು. ಯಾವಾಗ ಮಯೂರಧ್ವಜನು ಕೃಷ್ಣನನ್ನೂ ಅರ್ಜುನನನ್ನೂ ಅತಿಥ್ಯವನ್ನು ಸ್ವೀಕರಿಸಿ ತನ್ನೊಂದಿಗೆ ಕೃಪೆ ಮಾಡಿ ಭುಜಿಸಬೇಕೆಂದು ಪ್ರಾರ್ಥಿಸಿಕೊಂಡನೋ ಆಗ ಕೃಷ್ಣನು ಹೇಳಿದನು – “ನಿನ್ನ ಅತಿಥ್ಯವನ್ನು ಸ್ವೀಕರಿಸಲು ನಮಗೆ ಈಗ ವೇಳೆ ಇಲ್ಲ.
ಒಂದು ಗಹನವಾದ ಸಮಸ್ಯೆಯಲ್ಲಿ ಸಿಕ್ಕಿಕೊಂಡು ನಿನ್ನಲ್ಲಿ ಸಹಾಯ ಬೇಡಲು ನಾವಿಲ್ಲಿ ಬಂದಿದ್ದೇವೆ. ನಿನ್ನ ಅರಮನೆಗೆ ಬರುವಾಗ ನನ್ನ ಮಗನನ್ನು ಒಂದು ಹುಲಿಯು ನುಂಗಿತು. ಈಗ ಅರ್ಧಭಾಗ ಮಾತ್ರ ಹೊರಗೆ ಉಳಿದಿದೆ. ಅದನ್ನು ಉಳಿಸಬೇಕಾದರೆ ಮಯೂರಧ್ವಜ ಮಹಾರಾಜನ ದೇಹದ ಅರ್ಧಭಾಗವನ್ನು ಆ ಹುಲಿಗೆ ಆಹಾರವಾಗಿ ಕೊಡಬೇಕೆಂದು ಒಂದು ಅಶರೀರವಾಣಿ ಹೇಳಿತು.” ಮಯೂರಧ್ವಜನು ಇದನ್ನು ಕೇಳಿದ ತಕ್ಷಣ ತನ್ನ ಅತಿಥಿಗಳಿಗೆ ಸೇವೆಯನ್ನು ಸಲ್ಲಿಸಲು ಇದೊಂದು ಉತ್ತಮ ಅವಕಾಶ ದೊರೆತಿದೆಯೆಂದು ಭಾವಿಸಿದನು. ‘ತ್ಯಾಗದಿಂದಲೇ ಅಮೃತ ಪ್ರಾಪ್ತಿ’ (ತ್ಯಾಗೇನೈಕೇ ಅಮೃತ್ವ) ಎಂದು ಅವನು ಚೆನ್ನಾಗಿ ತಿಳಿದಿದ್ದನು. ಆದ್ದರಿಂದ ತನ್ನ ದೇಹವನ್ನು ತ್ಯಜಿಸಲು ಅವನು ಸಿದ್ಧನಾದನು.
‘ಮಾನವ ಶರೀರವು ಪರರಿಗೆ ಉಪಕಾರ ಮಾಡುವುದಕ್ಕಾಗಿಯೇ ದೊರೆತಿದೆ’ ಎಂದು ಅವನಿಗೆ ತಿಳಿದಿತ್ತು. ಮತ್ತೆ ಒಂದಲ್ಲ ಒಂದು ದಿನ ದೇಹವು ಬಿದ್ದು ಹೋಗುವುದೆಂದೂ ಆತ ತಿಳಿದಿದ್ದೆ. ಆದ್ದರಿಂದ ಇನ್ನೊಬ್ಬರನ್ನು ಸಂತುಷ್ಟಪಡಿಸಲೋಸುಗ ಅವನು ತನ್ನ ದೇಹವನ್ನು ತ್ಯಜಿಸಲು ಸಿದ್ಧನಾದನು. ಆತನು ತನ್ನ ಹೆಂಡತಿ ಮತ್ತು ಮಗನನ್ನು ಕರೆದು ಖಡ್ಗದಿಂದ ತನ್ನ ದೇಹವನ್ನು ಎರಡು ಭಾಗವಾಗಿ ಕತ್ತರಿಸಲು ಹೇಳಿದನು. ಅವನ ಹೆಂಡತಿ ಮತ್ತು ಮಗ, ಮಯೂರಧ್ವಜನು ಪವಿತ್ರ ಕಾರ್ಯವನ್ನು ಪೂರ್ಣಗೊಳಿಸಲು ಸಿದ್ಧನಾದನೆಂದು ಭಾವಿಸಿಕೊಂಡು, ಅವನ ದೇಹವನ್ನು ಎರಡು ಭಾಗಗಳಾಗಿ ಸೀಳಲು ಸಿದ್ಧರಾದರು. ಇದನ್ನು ಕಣ್ಣು ಪಿಳುಕಿಸದೇ ನೆಟ್ಟ ನೋಟದಿಂದ ಕೃಷ್ಣಾರ್ಜುನರು ನಿರೀಕ್ಷಿಸುತ್ತಿದ್ದರು. ಅತ್ಯಂತ ಸೂಕ್ಷ್ಮವಾಗಿ ನೋಡುತ್ತಿರುವಾಗ ಮಯೂರಧ್ವಜನ ಎಡದ ಕಣ್ಣಿನಿಂದ ನೀರು ಸುರಿಯುತ್ತಿರುವುದು ಕಂಡಿತು.
ಈ ಸನ್ನಿವೇಶ ಮುಂದುವರಿದಿರುವುದನ್ನು ಕಂಡ ಕೃಷ್ಣನು ಅವನನ್ನು ಇನ್ನೂ ಹೆಚ್ಚು ಪರೀಕ್ಷೆ ಮಾಡಬೇಕೆಂದು ಇಚ್ಛಿಸಿ ಹೀಗೆಂದನು. “ದುಃಖದಿಂದ ಕಣ್ಣೀರು ಸುರಿಸುತ್ತಾ ಕೊಡುವ ಕಾಣಿಕೆಗೆ ಏನು ಬೆಲೆ ಇದೆ? ಇಂಥ ಕಾಣಿಕೆ ನನಗೆ ಬೇಡ; ಮತ್ತು ಒಮ್ಮನಸ್ಸಿನಿಂದ ಕಾಣಿಕೆಯನ್ನು ಕೊಡಬೇಕು.” ವಿಚಲಿತನಾಗದೆ ಶಾಂತಭಾವದಿಂದ ಕಣ್ಣು ಮುಚ್ಚಿಕೊಂಡು ಕುಳಿತಿದ್ದ ಮಯೂರಧ್ವಜನು ಕಣ್ಣುಗಳನ್ನು ತೆರೆದು, “ಈ ದೇಹವನ್ನು ಕೊಡುವುದಕ್ಕೋಸ್ಕರ ತನಗೆ ದುಃಖವುಂಟಾಗಿಲ್ಲ,” ಎಂದು ಹೇಳಿದನು. ಒಂದು ವೇಳೆ ದುಃಖವೇ ಆಗಿದ್ದರೆ ಎರಡೂ ಕಣ್ಣುಗಳಿಂದ ಅಶ್ರುಬೀಳಬೇಕಿತ್ತು. ಒಂದೇ ಕಣ್ಣಿನಿಂದ ಯಾಕೆ ದುಃಖಾಶ್ರು ಹೊರ ಹೊಮ್ಮಬೇಕಾಗಿತ್ತು? ಇದರ ಹಿಂದೆ ಅಡಗಿದ ಸತ್ಯಾಂಶವನ್ನು ಕೃಷ್ಣನು ಅರಿತಿರಲಿಲ್ಲವೆಂದಲ್ಲ.
ಮಯೂರಧ್ವಜನ ಭಕ್ತಿಯ ಆಳವನ್ನು ಅರ್ಜುನನಿಗೆ ತೋರಿಸಿಕೊಡುವುದೊಂದೇ ಕೃಷ್ಣನ ಉದ್ದೇಶವಾಗಿತ್ತು. ಮಯೂರಧ್ವಜನು ಪ್ರತ್ಯುತ್ತರ ಕೊಡುತ್ತಾ ಹೇಳಿದನು. “ಹೇ ದೇವಾ, ಈ ದೇಹವು ಎರಡು ಭಾಗಗಳಾಗಿ ಬಿದ್ದು ಹೋಗುತ್ತಿದೆ. ಬಲ ಭಾಗವು ಪವಿತ್ರವಾದ ಕಾರಣಕ್ಕಾಗಿ ನಿನಗೆ ಅರ್ಪಿತವಾಗುತ್ತಿದೆ. ಆದರೆ ಉಳಿದ ಈ ಎಡ ಭಾಗವು ಕಾಗೆಗಳಿಗೆ ಆಹಾರವಾಗಿ ವ್ಯರ್ಥವಾಗಿ ಅಪವಿತ್ರ ರೀತಿಯಲ್ಲಿ ತ್ಯಜಿಸಲ್ಪಡುತ್ತಿದೆಯಲ್ಲಾ ಎಂದು ಅದು ರೋದಿಸುತ್ತಿದೆ.” ಈ ಮಾತುಗಳನ್ನು ಕೇಳಿದ ತಕ್ಷಣ ಅರ್ಜುನನಿಗೆ ಪಶ್ಚಾತ್ತಾಪವಾಗಿ ತನಗಿಂತಲೂ ಶ್ರೇಷ್ಠರಾದ ಕೃಷ್ಣ ಭಕ್ತರು ಇದ್ದಾರೆ ಎಂಬುದರ ಅರಿವಾಯಿತು.
ಈ ಪ್ರಪಂಚ ವಿವಿಧ ಪ್ರಕಾರದ ಭಕ್ತರಿಂದ ತುಂಬಿದೆ; ಭಕ್ತಿ ಕಂಗಳಿಂದ ಅವಲೋಕಿಸಿದರೆ ಮಯೂರಧ್ವಜನು ತನ್ನ ಸರ್ವಸ್ವವನ್ನೂ ಭಗವಂತನ ಚರಣಾರವಿಂದಗಳಲ್ಲಿ ಸಮರ್ಪಿಸಿರುವುದನ್ನು ಕಾಣುತ್ತೇವೆ. ಲೌಕಿಕ ದೃಷ್ಟಿಯಿಂದವಲೋಕಿಸಿದರೆ ಮಯೂರಧ್ವಜನು ತನ್ನ ರಾಜಧರ್ಮವನ್ನು ಸಂಪೂರ್ಣವಾಗಿ ಪರಿಪಾಲಿಸಿರುವುದನ್ನು ಕಾಣುತ್ತೇವೆ. ಯುದ್ಧಕ್ಕೆ ಸಿದ್ಧನಾಗಿ ತನ್ನ ರಾಜಧರ್ಮವನ್ನು ಸ್ಥಾಪಿಸಲು ಅವನು ಪೂರ್ಣಸಿದ್ಧನಾಗಿದ್ದನು. ಈ ರೀತಿ ಅವನು ಲೌಕಿಕ ಮತ್ತು ಆಧ್ಯಾತ್ಮಿಕ ರಂಗಗಳಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಲು ಸದಾ ಸಿದ್ಧನಾಗಿದ್ದನು. ಹೀಗೆ ಕೃಷ್ಣನು ಈ ಆದರ್ಶವನ್ನು ಜಗತ್ತಿನ ಮುಂದೆ ಮತ್ತು ಅರ್ಜನನ ಮುಂದೆ ಇಟ್ಟನು.