ಸದ್ಗುಣವತಿ ಗಾಂಧಾರಿ
ಕುರುಕ್ಷೇತ್ರ ಯುದ್ಧವು ಕೊನೆಗೊಂಡಿತು. ಧೃತರಾಷ್ಟ್ರನ ಎಲ್ಲ ಮಕ್ಕಳೂ ಯುದ್ಧದಲ್ಲಿ ಮರಣ ಹೊಂದಿದ್ದರು. ಅಂದು ರಾತ್ರಿ ಜಯಶೀಲರಾದ ಪಾಂಡವರ ಶಿಬಿರದಲ್ಲಿ ಮಲಗಿದ್ದ ಅವರ ಮಕ್ಕಳೂ ಮತ್ತು ಸ್ನೇಹಿತರೆಲ್ಲರೂ ಖಡ್ಗಾಘಾತಕ್ಕೆ ಬಲಿಯಾಗಿದ್ದರು. ಮರುದಿನ ಬೆಳಗಾಯಿತು. ರಣಭೂಮಿ ನಿರ್ಜನವಾಗಿದ್ದು, ಎಲ್ಲೆಲ್ಲೂ ಅಸ್ತವ್ಯಸ್ತವಾಗಿ ಬಿದ್ದ ಹೆಣಗಳ ರಾಶಿ. ನಿಜವಾಗಿಯೂ ಪಾಂಡವ ವೀರರು ಮತ್ತು ಕೃಷ್ಣಮಾತ್ರ ಯಾವ ಆಘಾತಕ್ಕೂ ಒಳಗಾಗದೆ ವಿಜೇತರಾಗಿದ್ದರು. ಆದರೆ ಅವರಾಸೆಗಳೆಲ್ಲಾ ಸತ್ತು ಬಿದ್ದಿದ್ದವು. ಇನ್ನು ಮೇಲಿಂದ ಸಾಮ್ರಾಜ್ಯವೆಲ್ಲವೂ ಅವರದೇ ಆದರೂ ವಾರಸುದಾರರಿಲ್ಲದೆ ಅದನ್ನು ಯಾರಿಗೆ ಬಿಟ್ಟುಕೊಡಲು ಸಾಧ್ಯ? ಸಿಂಹಾಸನವೇನೊ ಪ್ರಾಪ್ತವಾಯಿತು. ಆದರೆ ಮನೆ ಬರಿದಾಯಿತು!
ಇನ್ನೊಂದು ಕಡೆ ಕುರುವಂಶ ನಾಶವಾಗಿ ಸ್ತ್ರೀಯರೆಲ್ಲಾ ದುಃಖತಪ್ತರಾಗಿದ್ದದ್ದು ಕಾಣುತ್ತಿತ್ತು. ಅದನ್ನು ವೀಕ್ಷಿಸಿದ ಪಾಂಡವರು ತತ್ತರಿಸಿಹೋದರು. ಧೃತರಾಷ್ಟ್ರನ ನೂರು ಜನ ಮಕ್ಕಳೂ ಆ ರಣಭೂಮಿಯಲ್ಲಿ ಸತ್ತು ಬಿದ್ದಿದ್ದರು.
ದುಃಖತಪ್ತರಾದ ಮಹಾರಾಣಿ ಗಾಂಧಾರಿ ಹಾಗೂ ಧೃತರಾಷ್ಟ್ರ ಮಹಾರಾಜರು ಆ ಪಕ್ಷದ ಉಳಿದವರಲ್ಲಿ ವಯೋವೃದ್ಧರು. ಜನ್ಮತಃ ಅಂಧನಾದ ನೃಪನೊಡಗೂಡಿ ಗಾಂಧಾರಿಯೂ ಅಂಧತೆಯನ್ನು ಸ್ವೀಕರಿಸಿದಳು. ರಾಜರಥದಲ್ಲಿ ಕುಳಿತು ರಣಭೂಮಿಯ ಭೀಕರ ದೃಶ್ಯವನ್ನು ಕಾಣಲು ಬರುತ್ತಿದ್ದಳು. ಅವರು ಸೋಲನ್ನಪ್ಪಿದ ಮುಖಂಡರು ಮಾತ್ರವಲ್ಲ, ರಕ್ತಸಂಬಂಧದಿಂದ ಗೆದ್ದವರಿಗೂ ಅವರೇ ಮುಖಂಡರು. ಯುಧಿಷ್ಠಿರನ ವಿಜಯೋತ್ಸವಕ್ಕಿಂತ ಆತನಲ್ಲಿರುವ ವಿನಯವೇ ಪಾಂಡವರನ್ನು ಸಂದರ್ಶಿಸುವಂತೆ ಮಾಡಿತು. ಆದ್ದರಿಂದ ಅವರನ್ನು ಗೌರವಿಸಿ ತಮ್ಮ ಹಿರಿತನವನ್ನು ತೋರ್ಪಡಿಸಲು ಅವರು ಬಂದರು. ಧರ್ಮಕ್ಕೆ ದೊರೆ ಎಂದು ತನ್ನ ಪ್ರಜೆಗಳಿಂದ ಸಂಬೋಧಿಸಲ್ಪಟ್ಟು ಯುವರಾಜನಾದ ಧರ್ಮರಾಜನು ತನ್ನ ಸೋದರ ಸಮೇತನಾಗಿ ದ್ರೌಪದಿ ಕೃಷ್ಣರೊಂದಿಗೆ ಬಂದು ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಮೌನವಾಗಿ ಅವರೆದುರಿಗೆ ನಿಂತನು.
ವೃದ್ಧಳಾದ ಗಾಂಧಾರಿಯು ಶೋಕತಪ್ತಳಾಗಿದ್ದಳು. ಹುಟ್ಟು ಕುರುಡನಾದ ತನ್ನ ಪತಿ ಧೃತರಾಷ್ಟ್ರನನ್ನು ಕೈಹಿಡಿದಾಗಿನಿಂದ ತನ್ನ ಸತೀಧರ್ಮವನ್ನು ಪಾಲಿಸುತ್ತಾ ಸ್ವಇಚ್ಛೆಯಿಂದಲೇ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ಅಂಧತ್ವವನ್ನು ಸ್ವೀಕರಿಸಿದಳು. ಇದರ ಪರಿಣಾಮವಾಗಿ ಅವಳಲ್ಲಿ ಆಳವಾದ ಆಧ್ಯಾತ್ಮಿಕ ಅಂತಃಚಕ್ಷು ಜಾಗೃತಗೊಂಡಿತ್ತು. ಅವಳ ವಾಣಿ ದೈವವಾಣಿಯನ್ನು ಹೋಲುತ್ತಿತ್ತು. ಅವಳು ನುಡಿದ ನುಡಿ ಫಲಿಸುತ್ತಿತ್ತೇ ಹೊರತು ವಿಫಲವಾಗುತ್ತಿರಲಿಲ್ಲ. ಯುದ್ಧದ ವೇಳೆಯಲ್ಲಿ ದುರ್ಯೋಧನನು ಪ್ರತಿದಿನ ಬೆಳಿಗ್ಗೆ ತಾಯಿಯನ್ನು ನಮಸ್ಕರಿಸಿ ಆ ದಿನದ ಯುದ್ಧದಲ್ಲಿ ಜಯಶೀಲನಾಗಿ ಬರಲು ಆಶೀರ್ವದಿಸಬೇಕೆಂದು ಪ್ರಾರ್ಥಿಸಿದಾಗ ಅವಳು, ಜಯವು ಧರ್ಮವನ್ನು ಅನುಸರಿಸುತ್ತದೆ ಎಂದೇ ಹೇಳಿದ್ದಳು.
ತನ್ನ ವಂಶದ ನಾಶಕ್ಕೆ ತನ್ನ ಮಕ್ಕಳೇ ಕಾರಣರಾಗುವರೆಂಬುದನ್ನು ಅವಳು ಹಿಂದೆಯೇ ಅರಿತಿದ್ದರೂ, ಮಕ್ಕಳನ್ನು ಕಳೆದುಕೊಂಡ ಅವಳ ಕಠೋರ ಹೃದಯವು ಈಗ ಪತಿಯ ಪುತ್ರಶೋಕದಲ್ಲಿ ಭಾಗಿಯಾಗಿ ಏಕಾಂತದಲ್ಲಿ ವಿಲಪಿಸುತ್ತಿತ್ತು. ಧೃತರಾಷ್ಟ್ರನ ಬಲಹೀನತೆ ಮತ್ತು ದುರಾಶೆಯ ಕಾರಣದಿಂದಲೇ ಇಂದು ಅವರು ಸರ್ವನಾಶವನ್ನು ಎದುರಿಸಬೇಕಾಗುತ್ತದೆ ಎಂದು ಅವಳು ಮೊದಲೇ ಮನಗಂಡಿದ್ದಳು. ಅದೇ ಸತ್ಯವಾಗಿ ಪರಿಣಮಿಸಿತು. ಅವಳ ದೃಢಸಂಕಲ್ಪವೆಂದಿಗೂ ಹೊಯ್ದಾಡುತ್ತಿರಲಿಲ್ಲ. ರಾಜ್ಯದ ಮೋಹಕ್ಕಾಗಿ ಅವಳೆಂದೂ ತವಕ ಪಟ್ಟಿರಲಿಲ್ಲ. ಅದಕ್ಕೆ ಬದಲಾಗಿ ಧರ್ಮಕ್ಕಾಗಿ ಅವಳ ಹೃದಯಾಂತರಾಳವು ಹಂಬಲಿಸುತಿತ್ತು. ಆದರೆ ತನ್ನ ಪತಿಯು ತಾನೇ ತಂದುಕೊಂಡ ಈ ವಿನಾಶಕ್ಕಾಗಿ ಅವಳ ಮನಸ್ಸು ಕುಗ್ಗಿ ಹೋಗಿತ್ತು. ಅವಳ ಕೋಮಲ ಅಂತಃಕರಣವು ಇಂಥ ದುಃಖದ ಸಮಯದಲ್ಲಿ ಅವನಿಗಾಗಿ ಮೊರೆ ಇಡುತ್ತಿತ್ತು. ಅಹಂಕಾರಿಯೂ ಕಠೋರಿಯೂ ಆದವನೆಂದು ಸಮಸ್ತ ವಿಶ್ವಕ್ಕೂ ಕಾಣುವ ಆ ಧೃತರಾಷ್ಟ್ರನ ಪತ್ನಿ ಗಾಂಧಾರಿ ಆತನ ಈ ದುಃಖದ ಸಮಯದಲ್ಲಿ ನಮ್ರಳೂ, ವಾತ್ಸಲ್ಯ ಪೂರ್ಣಳೂ ಮತ್ತು ಸಮಾಧಾನ ಚಿತ್ತಳೂ ಆಗಿದ್ದಳು. ಇಂಥ ಭೀಕರ ಸನ್ನಿವೇಶವೊದಗಿ ಬಂದು ತನ್ನ ಸದ್ಗುಣಗಳ ಪ್ರಭಾವದಿಂದ ಕ್ರಮೇಣ ಆರ್ಜಿಸಿದ ವೈಭವವೆಲ್ಲವೂ ತನ್ನ ಎದುರಿನಲ್ಲಿಯೇ ಒಮ್ಮೆಲೇ ನಾಶ ಹೊಂದುವುದೆಂಬುದನ್ನು ಅವಳು ಚೆನ್ನಾಗಿ ಮನಗಂಡಿದ್ದಳು. ನಮಸ್ಕರಿಸಲು ಹತ್ತಿರಕ್ಕೆ ಬರುತ್ತಿರುವ ಯುಧಿಷ್ಠಿರನ ಮೇಲೆ ಇದರ ಕೆಟ್ಟ ಪರಿಣಾಮವಾದೀತೆಂದು ಭಾವಿಸಿ ಅವಳು ತನ್ನ ದೃಷ್ಟಿಯನ್ನು ಅವನ ಮುಗಿದ ಕೈಗಳತ್ತಣಿಂದ ಪಾದಗಳವರೆಗೆ ಒಯ್ದು ಅನ್ಯತ್ರ ತಿರುಗಿಸಿದಳು. ಅವಳ ಆ ದೃಷ್ಟಿಯಲ್ಲಿ ಎಷ್ಟು ಪ್ರಭಾವವಿತ್ತೆಂದರೆ ಅವಳು ನೋಡುತ್ತಿರುವ ಆ ಸ್ಥಳದಲ್ಲಿ ಬೆಂಕಿಯೇ ಕಾಣಿಸಿಕೊಂಡಿತಂತೆ!
ಆದರೆ ದ್ರೌಪದಿಯೊಂದಿಗೂ ಪಾಂಡವರ ರಾಜಮಾತೆ ಕುಂತಿ ಅವಳೊಂದಿಗೂ ಕನಿಕರದಿಂದ ಮಾತನಾಡಿದ ನಂತರ ಗಾಂಧಾರಿಯು ಎಲ್ಲರ ಕಡೆಗೆ ಬೆನ್ನು ತಿರುಗಿಸಿ ಕೃಷ್ಣನನ್ನು ಸಂಭೋಧಿಸಿ ಮಾತಾನಾಡಿದಳು. ಅವನೊಂದಿಗೆ ಮಾತನಾಡುವಾಗ ಮಾತ್ರ ಅವಳಿಗೆ ಆತ್ಮಸಂಯಮದ ಅಗತ್ಯವೆನಿಸಲಿಲ್ಲ. ಭಗವಂತನ ಸಮಕ್ಷಮದಲ್ಲಿ ನಿಂತು ಅವನನ್ನು ನೆಟ್ಟ ದೃಷ್ಟಿಯಿಂದ ನೋಡುತ್ತಾ ತನ್ನ ಹೃದಯದಲ್ಲಿ ತುಂಬಿದ್ದ ಎಲ್ಲ ಅಳಲನ್ನು ತೋಡಿಕೊಂಡಳು.
“ಇಗೋ ನೋಡು ಎಲೈ ನಳಿನದಳಾಕ್ಷಾ” ಎಂದು ರೋದಿಸುತ್ತಾ ಗಾಂಧಾರಿ ಹೇಳಿದಳು. “ಈ ನನ್ನ ಮನೆಯ ಹೆಣ್ಣು ಮಕ್ಕಳನ್ನು ನೋಡು. ತಮ್ಮ ಪತಿಯರನ್ನು ಕಳೆದುಕೊಂಡು ಮುಡಿ ಕಳಚಿದ ಈ ವಿಧವೆಯರ ದುಃಖದ ಆಕ್ರಂದನವನ್ನು ಕೇಳು. ಭಾರತದ ಮಹಾನ್ ಸೇನಾನಾಯಕರೆಂದು ಖ್ಯಾತರಾಗಿ, ಮೃತ್ಯುವಶರಾದ ಅವರ ದೇಹದ ಮೇಲೆ ಬಿದ್ದು ದುಃಖಿಸುವವರನ್ನು ನೋಡು. ತಮ್ಮ ಗಂಡಂದಿರನ್ನು, ಮಕ್ಕಳನ್ನು, ಸೋದರರನ್ನು ಹುಡುಕುತ್ತಿರುವ ಆ ಅಬಲೆಯರನ್ನು ನೋಡು. ಈ ಸಮಸ್ತ ಕುರುಕ್ಷೇತ್ರವು ಮಕ್ಕಳನ್ನು ಕಳೆದುಕೊಂಡ ಮಾತೆಯರಿಂದ, ವೀರಪತಿಯರನ್ನು ಕಳೆದುಕೊಂಡ ವಿಧವೆಯರಿಂದ ಆವೃತವಾಗಿರುವ ತಮ್ಮ ಜೀವಮಾನದಲ್ಲಿಯೇ ಬೆಂಕಿಯಂತೆ ಉರಿಯುತ್ತಿರುವ ಅತಿರಥ ಮಹಾರಥರ ದೇಹಗಳು ಇಲ್ಲಿ ಬಿದ್ದಿವೆ. ಆದರೆ ಈಗ ಅವರ ಮಧ್ಯದಲ್ಲಿ ದುಷ್ಟ ಮೃಗಗಳು ಸ್ವೇಚ್ಛೆಯಿಂದ ಇತ್ತಿಂದತ್ತ ಅತ್ತಿಂದಿತ್ತ ಸಂಚರಿಸುತ್ತಿವೆ. ಓ ಕೃಷ್ಣಾ, ಎಷ್ಟು ಭೀಕರವಾಗಿದೆ ಈ ಯುದ್ಧಭೂಮಿ? ಓ ಸರ್ವಶಕ್ತನೇ, ಇದೆಲ್ಲವನ್ನು ನೋಡುತ್ತ ನಾನು ವಿರಹದ ಅಗ್ನಿಯೇ ಆಗಿದ್ದೇನೆ. ವಿಶ್ವವೆಲ್ಲವೂ ಈಗ ಹೇಗೆ ಶೂನ್ಯವಾಗಿಬಿಟ್ಟಿದೆ. ಎರಡೂ ಸೈನ್ಯಗಳೂ ಇಲ್ಲಿ ನಾಶವಾದವು. ಎಲೈ ಕೃಷ್ಣಾ, ಹೀಗೆ ಅವರು ಒಬ್ಬರನ್ನೊಬ್ಬರು ನಾಶಮಾಡುತ್ತಿರುವಾಗ ನಿನ್ನ ಕಣ್ಣುಗಳೇಕೆ ಮುಚ್ಚಿಕೊಂಡಿದ್ದವು? ಈ ದುರಂತವು ಎಲ್ಲರ ಮೇಲೆ ಬರದಂತೆ ನೀನೇಕೆ ತಡೆಯಲಿಲ್ಲ?” ಎಂದು ದುಃಖಿಸಿದಳು.
ಹೀಗೆ ಗಾಂಧಾರಿಯು ದುಃಖವನ್ನು ತೋಡಿಕೊಂಡು ಶರಣಾದಾಗ ಭಗವಂತ ಪ್ರೀತಿಯ ನಸುನಗೆಯಿಂದ ಅವಳನ್ನೇ ನೋಡಿದನು. ಅನಂತರ ಆ ದೇವಬಂಟ ಶ್ರೀಕೃಷ್ಣನು ವೃದ್ಧ ಮಹಾರಾಣಿಯೆಡೆಗೆ ಬಾಗಿ ಹೇಳಿದನು. ಅನಂತರ “ಏಳು, ಏಳು ಎಲೌ ಗಾಂಧಾರಿ, ದುಃಖದಿಂದ, ನೀನು ಎದೆಗುಂದಬೇಡ. ಮನುಷ್ಯನು ಶೋಕದಲ್ಲೇ ಮುಳುಗಿದ್ದರೆ ಅದು ಎರಡರಷ್ಟು ಹೆಚ್ಚಾಗುತ್ತದೆ. ಎಲೌ ಮಗಳೆ, ವಿಚಾರ ಮಾಡು, ಬ್ರಾಹ್ಮಣ ಸ್ತ್ರೀಯು ಮಕ್ಕಳನ್ನು ಪಡೆಯುವುದು ತಪಃಸಿದ್ಧಿಗೋಸುಗ, ಹಸು ತಾನು ಸಂತಾನವನ್ನು ಪಡೆಯುವುದು ಭಾರವನ್ನು ಹೊರುವುದಕ್ಕಾಗಿ, ಕೂಲಿ ಮಾಡುವ ಮಹಿಳೆ ಮಕ್ಕಳನ್ನು ಪಡೆಯುವುದು ಮೇಲ್ತರಗತಿಯ ಕೆಲಸಗಾರರಿಗೆ ಸಹಾಯ ಮಾಡುವುದಕ್ಕಾಗಿ, ಆದರೆ ರಾಜವಂಶದಲ್ಲಿ ಜನಿಸಿದವರು ಹುಟ್ಟಿದಾಕ್ಷಣ ಅವರ ಸಾವು ಯುದ್ಧ ಭೂಮಿಯಲ್ಲಿ ಎಂಬುದು ಮೊದಲೇ ನಿಶ್ಚಿತವಾಗಿರುತ್ತದೆ.”
ಮಹಾರಾಣಿ ಮೌನವಾಗಿ ಕೃಷ್ಣನ ಮಾತುಗಳನ್ನೆಲ್ಲಾ ಕೇಳಿದಳು. ಆ ನಿತ್ಯಸತ್ಯವನ್ನು ಅವಳು ತಿಳಿಯುವ ಸ್ಥಿತಿಯಲ್ಲಿರಲಿಲ್ಲ. ಆ ಹಾಳುಬಿದ್ದ ಸ್ಥಳ, ಆ ನಿರಾಶೆ, ಅವಳ ಹೊರಗೂ ಒಳಗೂ ಆವರಿಸಿಕೊಂಡಿತ್ತು. ತನ್ನ ಕಠೋರ ಜೀವನದ ಶೇಷಭಾಗವನ್ನು ಕಾಡಿನಲ್ಲಿ ಕಳೆಯುವುದು ವ್ಯರ್ಥವೆಂದು ಅವಳಿಗೆ ತೋರಿತು. ದಿವ್ಯ ಘಟನೆಗಳ ಮೂಲಕ ಪರಿಶುದ್ಧವಾದ ನೋಟದಿಂದ ಹೊರಪ್ರಪಂಚವನ್ನೆಲ್ಲಾ ಅವಲೋಕಿಸಿದಳು. ಅದೆಲ್ಲವೂ ಮಿಥ್ಯವೆಂದು ತೋರಿಸಿತವಳಿಗೆ. ಮುಂದೆ ಮಾತನಾಡುವುದೇನೂ ಉಳಿದಿಲ್ಲವೆಂದು ಬಗೆದು ಅವಳು ಮೌನವನ್ನು ತಳೆದಳು. ಅನಂತರ ಹುಚ್ಚು ಹೊಳೆಯಾಗಿ ಉಕ್ಕಿಬರುತ್ತಿರುವ ದುಃಖವನ್ನು ತಡೆದುಕೊಂಡು ಅವಳು ಮತ್ತು ಧೃತರಾಷ್ಟ್ರರಿಬ್ಬರೂ ಯುಧಿಷ್ಠಿರ ಮತ್ತು ಇತರ ವೀರರೊಡನೆ ಮೃತರ ಅಂತಿಮ ಸಂಸ್ಕಾರವನ್ನು ಮಾಡಲು ಗಂಗಾನದೀ ತೀರದೆಡೆಗೆ ಸಾಗಿದರು.