ನಾಗ ಮಹಾಶಯ
‘ಅಹಿಂಸೆ’ ಎಂಬ ತತ್ವಕ್ಕೆ ಜೀವಂತ ಉದಾಹರಣೆಯಾದವರು ನಾಗ ಮಹಾಶಯ. “ಅಹಿಂಸಾ ಪರಮೋಧರ್ಮಹ” ಎಂಬುದನ್ನು ತನ್ನ ಜೀವನದಲ್ಲಿ ಅಕ್ಷರಶಃ ಪಾಲಿಸಿದವರು.
ಯಾವುದೇ ಜೀವಿಯು ನರಳುವುದನ್ನು ನೋಡಿ ಸಹಿಸಲು ನಾಗಮಹಾಶಯನಿಗೆ ಸಾಧ್ಯವಾಗುತ್ತಿರಲಿಲ್ಲ. ಪ್ರತಿವರ್ಷವೂ ಪ್ರವಾಹದ ಸಮಯದಲ್ಲಿ, ಅತಿ ಹೆಚ್ಚು ಮೀನುಗಳು ಒಳನೀರಿಗೆ ಬಂದು ಸಂಗ್ರಹವಾಗುತ್ತಿದ್ದವು. ಒಂದು ದಿನ, ಒಬ್ಬ ಮೀನುಗಾರನು ಕೆರೆಯಲ್ಲಿ ಮೀನುಗಳನ್ನು ಹಿಡಿಯುತ್ತಿದ್ದಾಗ, ನಾಗಮಹಾಶಯ ಅಲ್ಲಿಗೆ ಬಂದರು. ಅಂದಿನ ಪ್ರಚಲಿತ ಪದ್ಧತಿಯಂತೆ, ಮೀನುಗಾರನು ಅವರ ಭಾಗದ ಮೀನುಗಳನ್ನು ಕೊಡಲು ಮುಂದಾದ. ಬುಟ್ಟಿಯಲ್ಲಿದ್ದ ಮೀನುಗಳು ಬದುಕಲು ಒದ್ದಾಡುತ್ತಿದ್ದುದನ್ನು ನೋಡಿದ ನಾಗಮಹಾಶಯನ ಮನಸ್ಸು ತುಂಬಾ ಮರುಗಿತು. ಕೂಡಲೇ ಮೀನುಗಾರನು ಕೇಳಿದಷ್ಟು ಬೆಳೆಯನ್ನು ಕೊಟ್ಟು, ಆ ಬುಟ್ಟಿಯಲ್ಲಿದ್ದ ಮೀನುಗಳನ್ನು ಕೊಂಡುಕೊಂಡು, ತಕ್ಷಣವೇ ಅವುಗಳನ್ನು ನೀರಿನೊಳಗೆ ಸುರಿದರು.
ಮತ್ತೊಂದು ದಿನ, ಇನ್ನೊಬ್ಬ ಮೀನುಗಾರನು, ನಾಗಮಹಾಶಯನ ಮನೆಯ ಸಮೀಪದಲ್ಲಿದ್ದ ಕೊಳದಲ್ಲಿ ಮೀನು ಹಿಡಿದು, ಅವನ್ನು ಮಾರಲು, ಅವರ ಮನೆಗೆ ತಂದ. ಆಗ ನಾಗಮಹಾಶಯ, ಆ ಎಲ್ಲಾ ಮೀನುಗಳನ್ನೂ ಕೊಂಡು, ಪುನಃ ಅವುಗಳನ್ನು ನೀರಿನೊಳಗೆ ಬಿಟ್ಟುಬಿಟ್ಟರು. ಈ ವಿಚಿತ್ರ ವರ್ತನೆಯಿಂದ ಆ ಮೀನುಗಾರನಿಗೆ ಬಹಳ ಆಶ್ಚರ್ಯವಾಯಿತು. ನಾಗಮಹಾಶಯ ಹುಚ್ಚನಿರಬಹುದೆಂದು ಭಯಪಟ್ಟು, ಹಣ ದೊರೆತೊಡನೆಯೇ ಅಲ್ಲಿಂದ ನಾಗಾಲೋಟದಲ್ಲಿ ಓಡಿಹೋದ. ಮತ್ತೆಂದೂ ಅವರ ಮನೆಯ ಬಾಗಿಲು ದಾಟಿ ಒಳಗೆ ಬರುವ ಧೈರ್ಯವನ್ನು ಮಾಡಲಿಲ್ಲ.
ನಾಗಮಹಾಶಯ ‘ಅಹಿಂಸೆ’ ತತ್ವದಲ್ಲಿ ಅದೆಷ್ಟು ನಂಬಿಕೆಯಿಟ್ಟಿದ್ದರೆಂದರೆ, ವಿಷಪೂರಿತ ಹಾವುಗಳನ್ನು ಕೂಡ ಹೊಡೆದು ಸಾಯಿಸುವುದನ್ನು ಅವರು ಇಷ್ಟ ಪಡುತ್ತಿರಲಿಲ್ಲ.
ಒಮ್ಮೆ, ಒಂದು ವಿಷಪೂರಿತ ನಾಗರಹಾವು ಅವರ ಮನೆಯ ಅಂಗಳದಲ್ಲಿ ಕಾಣಿಸಿಕೊಂಡಿತು. ಅದನ್ನು ಕಂಡು ಅಲ್ಲಿದ್ದವರೆಲ್ಲಾ ಬಹಳ ಹೆದರಿದರು. ಅದನ್ನು ಸಾಯಿಸಬೇಕೆಂದು ನಾಗಮಹಾಶಯನ ಹೆಂಡತಿಯೂ ಸಹ ಸೂಚಿಸಿದರು. ಅದನ್ನು ವಿರೋಧಿಸುತ್ತ, ನಾಗಮಹಾಶಯರು ಹೇಳಿದರು, “ಕಾಡಿನಿಂದ ಬರುವ ಹಾವಿನಿಂದ ಆಗುವ ಅಪಾಯಕ್ಕಿಂತಲೂ, ಮಾನವನ ಮನಸ್ಸಿನಲ್ಲಿ ಅಡಗಿರುವ ಹಾವೇ ಅವನ ಮರಣಕ್ಕೆ ಕಾರಣವಾಗುತ್ತದೆ,” ಎಂದು ನಂತರ ಅವರು ತಮ್ಮ ಕೈಜೋಡಿಸಿ ಹಾವಿಗೆ ವಂದಿಸುತ್ತಾ, “ನೀನು ಮಾನಸ ದೇವಿಯ ವ್ಯಕ್ತ ರೂಪ. ನಿನ್ನ ನಿವಾಸವು ಕಾಡಿನಲ್ಲಿ. ದಯವಿಟ್ಟು, ಈ ದೀನನ ಮನೆಯನ್ನು ಬಿಟ್ಟು, ನಿನ್ನ ನಿವಾಸಕ್ಕೆ ಹಿಂದಿರುಗು,” ಎಂದು ವಿನಂತಿಸಿದರು. ವಿಚಿತ್ರವೆಂಬಂತೆ, ಆ ಹಾವು ತನ್ನ ಹೆಡೆಯನ್ನು ಬಗ್ಗಿಸಿಕೊಂಡು, ನಾಗಮಹಾಶಯನನ್ನು ಹಿಂಬಾಲಿಸುತ್ತಾ, ಅರಣ್ಯದೊಳಗೆ ಹೊರಟುಹೋಯಿತು. ನಾಗಮಹಾಶಯ ಆಗಾಗ್ಗೆ ಹೀಗೆ ಹೇಳುತ್ತಿದ್ದುದುಂಟು. “ಹೊರಗಿನ ಪ್ರಪಂಚವು ನಮ್ಮ ಮನಸ್ಸಿನ ಒಂದು ವ್ಯಕ್ತ ರೂಪ. ನೀನು ಈ ಪ್ರಪಂಚಕ್ಕೆ ಏನನ್ನು ಕೊಡುವೆಯೋ, ಅದನ್ನೇ ಪುನಃ ನೀನು ಅದರಿಂದ ಪಡೆಯುವೆ. ಇದು ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಂಡಂತೆ. ನಮ್ಮ ಮುಖವು ಹೇಗಿದೆಯೋ, ಅದನ್ನೇ ಕನ್ನಡಿಯು ಪ್ರತಿಬಿಂಬಿಸುತ್ತದೆ,” ಎಂದು.
ಪ್ರಶ್ನೆಗಳು:
- ಎಲ್ಲ ಜೀವಿಗಳ ಬಗ್ಗೆ ನಾಗಮಹಾಶಯ ತೋರಿಸುತ್ತಿದ್ದ ಕನಿಕರದ ಬಗ್ಗೆ ವಿವರಿಸಿ
[ಕೃಪೆ: ಸ್ಟೋರೀಸ್ ಫಾರ್ ಚಿಲ್ಡ್ರನ್– 2
ಶ್ರೀ ಸತ್ಯಸಾಯಿ ಬುಕ್ಸ್ ಅಂಡ್ ಪಬ್ಲಿಕೇಶನ್ಸ್ ಟ್ರಸ್ಟ್, ಪ್ರಶಾಂತಿ ನಿಲಯಂ]