ಸರಳತೆ
ಎಲ್ಲ ಮಹಾನ್ ವ್ಯಕ್ತಿಗಳು ತಮ್ಮ ಉಡುಪು,ಮಾತು ಮತ್ತು ಜೀವನವಿಧಾನದಲ್ಲಿ ಬಹಳ ಸರಳತೆಯನ್ನು ಅನುಸರಿಸಿದವರು. ನಮ್ಮ ಸನಾತನ ಧರ್ಮವು ಸಾರುವುದು ಇದನ್ನೇ, – “ಸರಳ ಜೀವನ ಮತ್ತು ಉನ್ನತ ಆಲೋಚನೆಗಳು”.
ಮಹಾತ್ಮಾ ಗಾಂಧೀಜಿಯವರ ಉಡುಪು ಹೇಗಿರುತ್ತಿತ್ತು? ಆದರೆ, ಅವರು ಅದೇ ಉಡುಗೆಯಲ್ಲೇ, ಅನೇಕ ದೊರೆಗಳು, ಗವರ್ನರ್ ಗಳು, ಡ್ಯೂಕ್ ಗಳು ಮತ್ತು ಡಚೆಸ್ಸ್ ಗಳನ್ನು, ಹಾಗೂ ಅನೇಕ ಉನ್ನತ ಅಧಿಕಾರಿಗಳನ್ನೂ ಭೇಟಿ ಮಾಡುತ್ತಿದ್ದುದು.
ಈಶ್ವರಚಂದ್ರ ವಿದ್ಯಾಸಾಗರ್ ಒಬ್ಬ ಪ್ರಸಿದ್ಧ ಶಿಕ್ಷಣ ತಜ್ಞರು ಮತ್ತು ಸಮಾಜ ಸುಧಾರಕರು. ಅವರೂ ಸಹ ಸರಳ ಜೀವನವನ್ನೇ ಮೆಚ್ಚಿ, ಹಾಗೆಯೇ ಜೀವಿಸುತ್ತಿದ್ದವರು. ಒಮ್ಮೆ, ಒಂದು ಔತಣ ಕೂಟಕ್ಕೆ ಅವರನ್ನು ಗೌರವಾನ್ವಿತ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದ್ದರು. ತಮ್ಮ ಸಂಪ್ರದಾಯದ ಉಡುಗೆಯ ಬಗ್ಗೆ ಅವರಿಗೆ ಬಹು ಹೆಮ್ಮೆ. ಅದನ್ನೇ ಧರಿಸಿ, ಅವರು ಅಲ್ಲಿಗೆ ಹೊರಟರು. ಆ ಬಂಗಲೆಯ ಬಾಗಿಲಲ್ಲಿದ್ದ ಕಾವಲುಗಾರನು, ಅವರ ಆ ಉಡುಪು ಸಮಾರಂಭಕ್ಕೆ ತಕ್ಕಹಾಗಿಲ್ಲವೆಂದು ಹೇಳುತ್ತಾ, ಅವರನ್ನು ಒಳಗೆ ಹೋಗಲು ಅನುಮತಿಸಲಿಲ್ಲ.
ಮನೆಗೆ ಹಿಂತಿರುಗಿಬಂದ ವಿದ್ಯಾಸಾಗರ್, ಸ್ವಲ್ಪ ಸಮಯದ ನಂತರ ಪುನಃ ಅಲ್ಲಿಗೆ ಹೋದರು. ಈ ಬಾರಿ ಅವರು ಆಂಗ್ಲ ಶೈಲಿಯ ‘ಸೂಟ್’ನ್ನು ಧರಿಸಿದ್ದು, ಒಬ್ಬ ನಾಗರೀಕ, ಗಣ್ಯವ್ಯಕ್ತಿಯಂತೆ ಕಾಣುತ್ತಿದ್ದರು. ಕಾವಲುಗಾರನಿಗೆ ಅವರನ್ನು ಗುರುತು ಹಿಡಿಯಲಾಗಲಿಲ್ಲ. ಬಹು ಮರ್ಯಾದೆಯಿಂದ, “ದಯವಿಟ್ಟು ಒಳಗೆ ಹೋಗಿ”, ಎಂದು ದಾರಿ ತೋರಿಸಿದ.
ಅಲ್ಲಿ, ಬಂದಿದ್ದ ಎಲ್ಲಾ ಅತಿಥಿಗಳೂ ಭೋಜನಕ್ಕೆ ಕುಳಿತರು. ಮುಖ್ಯ ಅತಿಥಿಯಾಗಿ ಬಂದಿದ್ದ ವಿದ್ಯಾಸಾಗರ್ ಮೇಲೆಯೇ ಅವರೆಲ್ಲರ ಗಮನವೂ ಇತ್ತು. ವಿದ್ಯಾಸಾಗರ್ ಮಾಡುತ್ತಿದ್ದುದೇನು? ತಾನೇನೂ ತಿನ್ನದೇ, ಬಡಿಸಿದ್ದ ಎಲ್ಲಾ ಪದಾರ್ಥಗಳನ್ನೂ ಒಂದೊಂದಾಗಿ ಚಮಚದಲ್ಲಿ ತೆಗೆದುಕೊಂಡು, ತಮ್ಮ ಶರ್ಟ್ ಮತ್ತು ಕೋಟ್ ಗೆ ಸೋಕಿಸುತ್ತಿದ್ದರು. ಈ ವರ್ತನೆಯಿಂದ ಬಹುವಾಗಿ ಆಶ್ಚರ್ಯಗೊಂಡ ಅತಿಥಿಗಳು ‘ಇದೇಕೆ ಇಂತಹ ವಿಚಿತ್ರ ವರ್ತನೆ?’ ಎಂದು ಯೋಚಿಸತೊಡಗಿದರು.
ಆ ವೇಳೆಗೆ ಅಲ್ಲಿಗೆ ಬಂದ ಆತಿಥೇಯ, ಅದನ್ನು ಗಮನಿಸಿ ಕೇಳಿದ , “ಸರ್! ತಾವೇಕೆ ಏನೂ ಊಟ ಮಾಡುತ್ತಿಲ್ಲ? ಇದೇಕೆ ಇಂತಹ ವಿಚಿತ್ರ ವರ್ತನೆ?” ಎಂದು.
ಅದಕ್ಕೆ ಉತ್ತರವಾಗಿ ವಿದ್ಯಾಸಾಗರ್ ನುಡಿದರು, “ನಾನಿಲ್ಲಿಗೆ ಧೋತಿ ಧರಿಸಿ ಬಂದಾಗ, ನನ್ನನ್ನು ಒಳಗೆ ಬರಲು ಬಿಡಲಿಲ್ಲ. ಆದರೆ, ಈ ಯುರೋಪಿಯನ್ ಉಡುಪನ್ನು ಧರಿಸಿ ಮತ್ತೆ ಬಂದಾಗ, ನನಗೆ ಸ್ವಾಗತ ದೊರೆಯಿತು. ಹಾಗಾಗಿ, ನನಗಿಂತಲೂ ಈ ಬಟ್ಟೆಗಳೇ ಔತಣವನ್ನು ಸವಿಯಲು ಯೋಗ್ಯವಾದವು, ಎಂದು ನನ್ನ ಅಭಿಪ್ರಾಯ,” ಎಂದು.
ಅತಿಥೇಯನಿಗೂ ಮತ್ತು ಎಲ್ಲ ಆಹ್ವಾನಿತರಿಗೂ ಆ ವಿಚಿತ್ರ ವರ್ತನೆಗೆ ಕಾರಣವೇನೆಂದು ತಿಳಿಯಿತು. ಅತಿಥೇಯನು ಬಂದು, ವಿದ್ಯಾಸಾಗರ್ ರವರ ಎರಡೂ ಕೈಗಳನ್ನೂ ಹಿಡಿದುಕೊಂಡು, “ನನ್ನನ್ನು ಕ್ಷಮಿಸಿ,” ಎಂದು ಕಳಕಳಿಯಿಂದ ಕೇಳಿಕೊಂಡನು.
ಪ್ರಶ್ನೆಗಳು
- ಬಾಗಿಲ ಬಳಿ ಇದ್ದ ಕಾವಲುಗಾರನು ವಿದ್ಯಾಸಾಗರ್ ಅವರನ್ನು ಒಳಗೆ ಏಕೆ ಬಿಡಲಿಲ್ಲ?
- ಆಗ ಅವರೇನು ಮಾಡಿದರು?
- ಬಂದಿದ್ದ ಇತರ ಅತಿಥಿಗಳು ಏಕೆ ಆಶ್ಚರ್ಯ ಚಕಿತರಾದರು?
- ತಮ್ಮ ವರ್ತನೆಯ ಬಗ್ಗೆ ವಿದ್ಯಾಸಾಗರ್ ಅವರು ಕೊಟ್ಟ ವಿವರಣೆ ಏನು?