ರಾಜನು ಯಾರು?
ಅಲೆಕ್ಸಾಂಡರ್ ನು, ತನ್ನ ದಂಡಯಾತ್ರೆಯ ಸಮಯದಲ್ಲಿ, ಒಮ್ಮೆ ಆಫ್ರಿಕಾ ಖಂಡವನ್ನು ಪ್ರವೇಶಿಸಿದ. ಅಲ್ಲಿ ವಿಪರೀತ ಉಷ್ಣತೆಯಿದ್ದು, ಅವನು ಮತ್ತು ಅವನ ಸೈನಿಕರು ತಂಗಿ, ದಣಿವಾರಿಸಿಕೊಳ್ಳಲು ಮರಗಳ ನೆರಳಿರುವಂತಹ ಸೂಕ್ತವಾದ ಪ್ರದೇಶವನ್ನು ಹುಡುಕುತ್ತಿದ್ದರು. ಅಷ್ಟರಲ್ಲಿ, ತಮ್ಮ ಕಡೆಗೆ ಒಬ್ಬ ಸ್ಥಳೀಯ ಸೈನಿಕನು ವೇಗವಾಗಿ ಬರುತ್ತಿದ್ದುದನ್ನು ಗಮನಿಸಿದರು. ಆ ಸೈನಿಕನು ಅವರಿಗೆ, ತನ್ನನ್ನು ಅನುಸರಿಸಿ ಬರಬೇಕೆಂದು ಸೂಚಿಸಿ, ಅವರನ್ನು ತನ್ನ ತಂಡದ ಮುಖ್ಯಸ್ಥನ ಬಳಿಗೆ ಕರೆದುಕೊಂಡು ಹೋದ. ಆ ಮುಖಂಡ ಮತ್ತು ಅವನ ತಂಡದವರು ಅತೀವ ಕಪ್ಪು ಮೈ ಬಣ್ಣ ಹೊಂದಿದ್ದು, ನೋಡಲು ಕುರೂಪಿಗಳೆನಿಸುತ್ತಿದ್ದರು.
ಅಲೆಕ್ಸಾಂಡರ್ ನನ್ನು ಸ್ವಾಗತಿಸುತ್ತಾ ಆ ಮುಖಂಡ ಹೇಳಿದ, “ಸಮೀಪದಲ್ಲೇ ಒಂದು ದೊಡ್ಡ ಬಾಳೆಯ ತೋಟವಿದೆ, ಅಲ್ಲಿ ನೆರಳೂ ಇದೆ. ನೀವು ಮತ್ತು ನಿಮ್ಮ ಪರಿವಾರದವರು ಅಲ್ಲಿ ವಿಶ್ರಮಿಸಿಕೊಳ್ಳಬಹುದು. ನಮ್ಮ ಜನರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ,” ಎಂದು.
ಮಾರನೆಯ ದಿನ, ಆ ಮುಖಂಡನು, ಅಲೆಕ್ಸಾಂಡರ್ ನ ಗೌರವಾರ್ಥವಾಗಿ ಒಂದು ಔತಣ ಕೂಟವನ್ನು ಏರ್ಪಡಿಸಿದ. ಅಲೆಕ್ಸಾಂಡರ್ ನ ಮುಂದೆ, ಚಿನ್ನದ ಹಣ್ಣುಗಳಿಂದ ತುಂಬಿದ್ದ ಒಂದು ಚಿನ್ನದ ತಟ್ಟೆಯನ್ನು ಇಟ್ಟು, “ಓ, ದೊರೆಯೇ! ಇವುಗಳ ರುಚಿ ನೋಡಿ,” ಎಂದು ನುಡಿದ. ಆಶ್ಚರ್ಯಗೊಂಡ ಅಲೆಕ್ಸಾಂಡರ್ ಕೇಳಿದ,” ಏನು? ನೀವು ಚಿನ್ನದ ಹಣ್ಣುಗಳನ್ನು ತಿನ್ನುವಿರಾ?” ಎಂದು.
“ಇಲ್ಲ, ಇಲ್ಲ! ನಾವು ಮರಗಳಿಂದ ದೊರೆಯುವ ತಾಜಾ ಹಣ್ಣುಗಳನ್ನೂ, ಹಾಲು, ಜೇನುತುಪ್ಪ ಮತ್ತು ದವಸ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಸೇವಿಸುವೆವು. ಆದರೆ, ತಾವಾದರೋ ಮಹಾನ್ ವಿಜೇತರು ಮತ್ತು ಬಂಗಾರವನ್ನು ಸಂಗ್ರಹಿಸುವುದರಲ್ಲೇ ಆಸಕ್ತಿ ಹೊಂದಿರುವವರು. ಹಾಗಾಗಿ, ನೀವು ಬಂಗಾರವನ್ನು ಮಾತ್ರ ತಿನ್ನುವರೆಂಬ ಭಾವನೆಯಿಂದ, ನಾವು ಇದನ್ನು ನಿಮಗೆ ಅರ್ಪಿಸುತ್ತಿದ್ದೇವೆ,” ಎಂದು ಆಫ್ರಿಕನ್ ಮುಖಂಡನು ಉತ್ತರಿಸಿದ. ಅವನ ಹೇಳಿಕೆಯು ಎಷ್ಟು ಅರ್ಥಪೂರ್ಣವಾಗಿದೆಯೆಂದು ಅಲೆಕ್ಸಾಂಡರ್ ಗೆ ಅರಿವಾಯಿತು.
ಆಗ ಅಲೆಕ್ಸಾಂಡರ್ ಹೇಳಿದ,” ಇಲ್ಲ ಮುಖಂಡರೇ! ಬಂಗಾರವನ್ನು ಸಂಗ್ರಹಿಸುವ ಉದ್ದೇಶದಿಂದ ನಾನು ಇಲ್ಲಿಗೆ ಬಂದಿಲ್ಲ. ಇಲ್ಲಿಯ ಜನರು, ಅವರ ಜೀವನ ವಿಧಾನದ ಬಗ್ಗೆ ತಿಳಿಯಲೆಂದೇ ನಾನು ಇಲ್ಲಿಗೆ ಬಂದಿರುವುದು.” ಎಂದು.
“ಓ! ಹಾಗೇನು? ಒಳ್ಳೆಯದು. ನೀವು ಇಲ್ಲಿ ಸುರಕ್ಷಿತವಾಗಿ ಇರಬಹುದು. ನಮಗೂ ಸಹ ಸಂತೋಷವಾಗುತ್ತದೆ,” ಎಂದು ಆ ಮುಖಂಡನು ನುಡಿದನು.
ಆ ವೇಳೆಗೆ, ಅಲ್ಲಿಯ ಸೈನಿಕರು ಇಬ್ಬರು ವ್ಯಕ್ತಿಗಳನ್ನು ಕರೆತಂದು, ಮುಖಂಡನ ಮುಂದೆ ನಿಲ್ಲಿಸಿದರು. ಆ ಇಬ್ಬರೂ ತೀವ್ರವಾದ ವಾದದಲ್ಲಿ ತೊಡಗಿದ್ದರು. ಮುಖಂಡನು ವಿಷಯವೇನೆಂದು ಅವರನ್ನು ಕೇಳಿದ.
ಅವರಲ್ಲಿ ಒಬ್ಬ ವ್ಯಕ್ತಿ ಹೀಗೆ ವಿನಂತಿಸಿದ,” ಸ್ವಾಮಿ! ಇತ್ತೀಚೆಗೆ ನಾನು ನನ್ನ ಜಮೀನನ್ನು ಈತನಿಗೆ ಮಾರಿದೆ. ನಿನ್ನೆ ಈತನು ಭೂಮಿಯನ್ನು ಉಳುತ್ತಿದ್ದಾಗ, ಅದರೊಳಗೆ ಅಮೂಲ್ಯ ನಿಧಿ ಇರುವ ಒಂದು ಪೆಟ್ಟಿಗೆ ದೊರೆಯಿತಂತೆ. ಈಗ ಅದನ್ನು ನನ್ನ ಬಳಿ ತಂದು, ತಾನು ನನ್ನ ಜಮೀನನ್ನು ಮಾತ್ರ ಕೊಂಡುಕೊಂಡನೇ ಹೊರತು, ಈ ನಿಧಿಯನ್ನಲ್ಲ, ಆದುದರಿಂದ ಅದು ನನಗೆ ಸೇರಬೇಕೆಂದು, ನನಗೆ ಕೊಡಲು ಬಂದಿದ್ದಾನೆ. ನಾನು ಮಾರಿಬಿಟ್ಟ ಜಮೀನಿನಲ್ಲಿ ದೊರೆತ ಆ ನಿಧಿಯು ಈತನಿಗೇ ಸೇರಬೇಕೆಂದು ನಾನು ಹೇಳುತ್ತಿದ್ದೇನೆ. ದಯವಿಟ್ಟು ನಮಗೆ ನ್ಯಾಯ ದೊರೆಯುವಂತೆ ಮಾಡಿ,” ಎಂದು.
ಇನ್ನೊಬ್ಬ ವ್ಯಕ್ತಿಯು ಅದಕ್ಕೆ ಒಪ್ಪದೇ,” ಅದು ಸಾಧ್ಯವಿಲ್ಲ. ನನಗೆ ಸೇರದೇ ಇರುವ ವಸ್ತುವನ್ನು ನಾನು ಹೇಗೆ ತೆಗೆದುಕೊಳ್ಳಲಿ? ದಯವಿಟ್ಟು ಆತನಿಗೆ ಆ ನಿಧಿ ಸೇರುವಂತೆ ಮಾಡಿ,” ಎಂದು ಕೇಳಿಕೊಂಡ.
ಈ ಸಮಸ್ಯೆಗೆ, ತಂಡದ ಮುಖಂಡನು ಯಾವ ರೀತಿ ನ್ಯಾಯತೀರ್ಮಾನ ಮಾಡುವನೋ, ಎಂದು ತಿಳಿಯಲು, ಅಲೆಕ್ಸಾಂಡರ್ ನು ಕುತೂಹಲದಿಂದ ಕಾಯುತ್ತಿದ್ದ.
ಮುಖಂಡನು ಹೇಳಿದ, “ಸ್ನೇಹಿತರೇ, ಕೇಳಿ! ನಿಮಗೆ ಒಬ್ಬ ಮಗಳು ಮತ್ತು ಆತನಿಗೆ ಒಬ್ಬ ಮಗನಿರುವ ವಿಷಯವು ನನಗೆ ತಿಳಿದಿದೆ. ನೀವೇಕೆ ಅವರಿಬ್ಬರಿಗೂ ವಿವಾಹ ಮಾಡಬಾರದು? ಆಗ, ಆ ನಿಧಿಯನ್ನು ಮಗಳಿಗೆ ವರದಕ್ಷಿಣೆಯಾಗಿ ಕೊಡಬಹುದಲ್ಲವೇ?”
ಈ ತೀರ್ಮಾನದಿಂದ, ಅವರಿಬ್ಬರಿಗೂ ಅತೀವ ಸಂತೋಷವಾಯಿತು. ಅದರ ಪ್ರಕಾರವೇ ನಡೆಯುವುದಾಗಿ, ವಾಗ್ದಾನಮಾಡಿ, ಅವರು ಅಲ್ಲಿಂದ ಹೊರಟರು.
ನಂತರ, ಆ ಮುಖಂಡನು ಅಲೆಕ್ಸಾಂಡರ್ ನನ್ನು ಕೇಳಿದ,” ರಾಜರಾದ ತಾವು, ತಮ್ಮ ದೇಶದಲ್ಲಿ ಇಂತಹ ಸಮಸ್ಯೆಗೆ ಯಾವ ತೀರ್ಮಾನಕೊಡುವಿರಿ?”
ಅಲೆಕ್ಸಾಂಡರ್ ನು ಹೇಳಿದ, “ನಮ್ಮ ದೇಶದಲ್ಲಾದರೋ, ಆ ನಿಧಿಯನ್ನು ರಾಜನೇ ತೆಗೆದುಕೊಂಡು, ಅವರಿಬ್ಬರನ್ನೂ ಸೆರೆಯಲ್ಲಿ ಹಾಕಿ, ಸುಮ್ಮನಿರಿಸುತ್ತಾನೆ.
ಅದನ್ನು ಕೇಳಿದ ಮುಖಂಡನು ಚಿಂತಿಸತೊಡಗಿದ,” ಎಂತಹ ಕ್ರೌರ್ಯ! ಎಂತಹ ದುಷ್ಟತನ! ತನ್ನ ಪ್ರಜೆಗಳ ಆಸ್ತಿಯ ಮೇಲೆ ರಾಜನಿಗೆ ಯಾವ ಹಕ್ಕಿದೆ? ಎಂದಮೇಲೆ, ಆತ ದರೋಡೆಕೋರನಾಗುತ್ತಾನೆಯೇ ಹೊರತು, ರಾಜನಾಗುವುದಿಲ್ಲ. ತನ್ನ ಪ್ರಜೆಗಳನ್ನು ಪೀಡಿಸದೇ, ಅವರನ್ನು ಸಂತೋಷವಾಗಿಡುವುದೇ ರಾಜನ ಕರ್ತವ್ಯವಲ್ಲವೇ?”
ಪ್ರಶ್ನೆಗಳು
- ಆಫ್ರಿಕನ್ ಮುಖಂಡನು ಅಲೆಕ್ಸಾಂಡರ್ ಗೆ ಚಿನ್ನದ ಹಣ್ಣುಗಳನ್ನು ಏಕೆ ನೀಡಿದನು?
- ಮುಖಂಡನ ಮುಂದೆ ತರಲ್ಪಟ್ಟ ವಿವಾದ ಯಾವುದು ?
- ಅದಕ್ಕೆ ಮುಖಂಡನು ಕೊಟ್ಟ ತೀರ್ಮಾನವೇನು?
- ಅದರ ಬಗ್ಗೆ ಅಲೆಕ್ಸಾಂಡರ್ ನು ಮುಖಂಡನಿಗೆ ಯಾವ ಅಭಿಪ್ರಾಯವನ್ನು ಕೊಟ್ಟನು?
- ನಿಜ ಅರ್ಥದಲ್ಲಿ ‘ರಾಜ’ ಎಂದರೆ ಯಾರು?