ಆಸೆಯನ್ನು ನಿಯಂತ್ರಿಸು
ಆಸೆ ವಿನಾಶಕ್ಕೆ ಕಾರಣ. ತೃಪ್ತಿಪಡಿಸಿ ಆಸೆಯನ್ನು ಪೂರೈಸಲು ಅಸಾಧ್ಯ. ಸಂತೃಪ್ತಿಪಡಿಸುತ್ತಾ ಹೋದಂತೆ ಹೊಸ ಹೊಸ ಆಸೆಗಳು ಹುಟ್ಟಿಕೊಳ್ಳುತ್ತವೆ. ಆಸೆ ದೈತ್ಯಾಕಾರದಲ್ಲಿ ಬೆಳೆದು, ಆಸೆ ಪಟ್ಟವನನ್ನೇ ಕಬಳಿಸಿ ಬಿಡುತ್ತದೆ. ಬೆಂಕಿಗೆ ತುಪ್ಪ ಸುರಿದಂತೆ, ಆಸೆ ತೃಪ್ತಿಪಡಿಸುತ್ತ ಹೋದಂತೆ ಅದು ಬೆಳೆಯುತ್ತ ಹೋಗುತ್ತದೆ. ಆದ್ದರಿಂದ ಆಸೆಗೆ ಮಿತಿ ಇರಲಿ.
ಆಸೆಯನ್ನು ನಿಯಂತ್ರಿಸಿ. ಆಸೆಗೆ ಕಡಿವಾಣ ಹಾಕಿ. ನಿರಂತರ ಪ್ರಯತ್ನದಿಂದ ಮಾತ್ರ ಆಸೆಗಳ ನಿಯಂತ್ರಣ ಸಾಧ್ಯ. ಆಸೆಗಳಿಗೆ ಕಡಿವಾಣ ಹಾಕಲು ಸತತ ಸಾಧನೆ ಬೇಕು. ಇದಕ್ಕೊಂದು ನಿದರ್ಶನ ದಾರಿಹೋಕನೊಬ್ಬನ ಕಥೆ.
ಒಮ್ಮೆ ಆಯಾಸದಿಂದ ಬಳಲಿದ ಪ್ರಯಾಣಿಕ (ದಾರಿಹೋಕ) ಒಂದು ಮರದಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ. ಆ ಮರ ಬಯಸಿದ್ದನ್ನು ದಯಪಾಲಿಸುವ ‘ಕಲ್ಪವೃಕ್ಷ’ ಆಗಿತ್ತು. ತುಂಬಾ ಬಾಯಾರಿದ್ದ ಆತ, ”ಈಗ ತುಂಬ ರುಚಿಕರವಾದ, ತಣ್ಣನೆಯ ಸಿಹಿನೀರು (ಪಾನಕ) ಇದ್ದರೆ ಎಷ್ಟು ಚೆನ್ನಾಗಿತ್ತು“ ಎಂದು ಮನದಲ್ಲಿ ಎಣಿಸಿದ. ಮರುಕ್ಷಣದಲ್ಲಿ ಅವನೆದುರು ಒಂದು ಲೋಟ ತಣ್ಣನೆಯ, ರುಚಿಕರವಾದ ಸಿಹಿನೀರು ಇರಿಸಲ್ಪಟ್ಟಿತು. ಆಶ್ಚರ್ಯ ಹಾಗೂ ಸಂತೋಷದಿಂದ ನೀರನ್ನು ಕುಡಿದ. ಅನಂತರ ಆತ ಮೃಷ್ಟಾನ್ನ ಭೋಜನವನ್ನು ಬಯಸಿದ. ಅದು ಕೂಡ ಆತನಿಗೆ ಲಭ್ಯವಾಯಿತು. ಪುಷ್ಕಳ ಭೋಜನ ಸವಿದ ಆ ಯಾತ್ರಿಕನಿಗೆ ನಿದ್ರಿಸಬೇಕೆಂದೆನಿಸಿತು. ಮಂಚ ಮತ್ತು ಹಾಸಿಗೆ ಇದ್ದರೆ ಎಷ್ಟು ಒಳ್ಳೆಯದಿತ್ತು ಎಂದು ಎಣಿಸಿದ. ತಕ್ಷಣ ಮಂಚ ಮತ್ತು ಹಾಸಿಗೆ ಅವನೆದುರು ಪ್ರತ್ಯಕ್ಷ. ಅಪಾರ ಆನಂದ, ಆಶ್ಚರ್ಯಗಳಿಂದ ಮೈಮರೆತ ಆ ಪ್ರಯಾಣಿಕ, ”ಈ ಅದ್ಭುತ ನೋಡಿ ಸಂಭ್ರಮಿಸಲು ನನ್ನ ಮಡದಿ ಈಗ ನನ್ನ ಜೊತೆಗಿರಬೇಕಿತ್ತು“ ಎಂದು ಎಣಿಸಿದ. ತಕ್ಷಣ ಆತನ ಮಡದಿ ಪ್ರತ್ಯಕ್ಷಳಾದಳು. ಈಗ ಅವನಿಗೆ ಸಂಶಯ ಬರಲು ಪ್ರಾರಂಭವಾಯಿತು.
ಈಕೆ ನನ್ನ ಮಡದಿಯೋ ಅಥವಾ ರಕ್ಕಸಿಯೋ” ಎಂದು ಭಯಪಟ್ಟು ‘ನರಭಕ್ಷಕಿ’ ಎಂದು ಕಿರುಚಿದ. ಬೊಬ್ಬೆ ಹಾಕಿದ. ಮರುಕ್ಷಣದಲ್ಲಿ ಆ ಯಾತ್ರಿಕನನ್ನು ಆ ರಕ್ಕಸಿ ಭಕ್ಷಿಸಿದಳು. ಯಾತ್ರಿಕನ ಅತಿ ಆಸೆ ಅವನ ಅವಸಾನಕ್ಕೆ ಕಾರಣವಾಯಿತು. ಆಸೆಗಳ ಸಂಕೋಲೆ ಮನುಜನನ್ನು ಬಂಧಿಸಿ, ಉಸಿರುಗಟ್ಟಿಸುತ್ತದೆ. ಆದ್ದರಿಂದ ಆಸೆಗೆ ನಿಯಂತ್ರಣ ಹಾಕಿ. ಆಸೆಗೆ ಮಿತಿ ಇರಲಿ. ಅದು ಬೇಕು, ಇದು ಬೇಕು, ಎಲ್ಲ ಬೇಕು ಎಂಬ ಅತಿ ಆಸೆಗೆ ಕಡಿವಾಣ ಹಾಕಿ. ದೇವರಲ್ಲಿ “ನನಗೆ ನೀನೇ ಬೇಕು, ನೀನೇ ಸಾಕು, ನಿನ್ನ ಇಚ್ಛೆಯೇ ಗೆಲ್ಲಲಿ, ನನ್ನ ಇಚ್ಛೆ ಗೌಣ” ಎಂದು ಪ್ರಾರ್ಥಿಸಿ. ನಶ್ವರ ಸ್ವರ್ಣಾಭರಣಕ್ಕೆ ಆಸೆಪಡದೆ, ಭಗವಂತನಿಗಾಗಿ ಹಂಬಲಿಸಿ. ಭಗವದ್ಗೀತೆ ಶರಣಾಗತಿಯ ಪಾಠವನ್ನು ಕಲಿಸುತ್ತದೆ. ಎಲ್ಲವೂ ಭಗವಂತನ ಇಚ್ಛೆ ಇದ್ದಂತಾಗಲಿ ಎಂದು ಆಶಿಸಿ. ನಮ್ಮ ಇಚ್ಛೆಯೆದುರು ದೇವರ ಸಂಕಲ್ಪ ನೆರವೇರಲಿ ಎಂದು ಪ್ರಾರ್ಥಿಸಿ.
ಪ್ರಶ್ನೆಗಳು:
- ಯಾತ್ರಿಕ ಎಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ?
- ಯಾವ ಯಾವ ವಸ್ತುಗಳನ್ನು ಆತ ಬಯಸಿದ?
- ನೀವು ಈ ಸಣ್ಣ ಕಥೆಯಿಂದ ಏನು ಪಾಠ ಕಲಿಯುವಿರಿ?
[ಮೂಲ:- ಮಕ್ಕಳಿಗಾಗಿ ಕಥೆಗಳು-೨
ಶ್ರೀ ಸತ್ಯಸಾಯಿ ಪುಸ್ತಕ ಪ್ರಕಾಶನ, ಪ್ರಶಾಂತಿ ನಿಲಯಂ]